ಆಶಾ ಕಾರ್ಯಕರ್ತೆಯರಲ್ಲಿ ಆಶಾವಾದ
ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. ಹತ್ತು ಸಾವಿರ ರೂಪಾಯಿ ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಆಶಾ ಸಂಘಟನೆಯ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಈ ನಿಟ್ಟಿನಲ್ಲಿ ಆಶಾ ಸಂಘಟನೆ ಮುಖಂಡರ ಜತೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಆಶಾ ಕಾರ್ಯಕರ್ತೆಯರು ಕಳೆದ ಆರು ದಿನಗಳಿಂದ ಕೊರೆಯುವ ಚಳಿ ನಡುವೆಯೂ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದರು. ಆರೋಗ್ಯ ಇಲಾಖೆಯ ಆಯುಕ್ತರಾದ ಶಿವಕುಮಾರ್ ಮತ್ತು ಹಿರಿಯ ಅಧಿಕಾರಿ ಡಾ. ಪ್ರಭುದೇವ್ ಗೌಡ ಮುಷ್ಕರ ನಡೆಸುತ್ತಿದ್ದ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ಸರ್ಕಾರದ ನಿರ್ಧಾರವನ್ನು ತಿಳಿಸುವುದರೊಂದಿಗೆ ಮುಷ್ಕರಕ್ಕೆ ತೆರೆ ಎಳೆದಿದ್ದಾರೆ.
ಇಲಾಖೆಯ ಪ್ರಧಾನ ಕೊಂಡಿಯಾದ ಆಶಾ ಕಾರ್ಯಕರ್ತೆಯರನ್ನು ಆರಂಭದಲ್ಲಿ ೨ ಗಂಟೆ ಕೆಲಸಕ್ಕೆಂದು ನೇಮಿಸಿಕೊಳ್ಳಲಾಗಿತ್ತು. ನಂತರ ಒಂದೊಂದೇ ಹೆಚ್ಚುವರಿ ಕೆಲಸಗಳೊಂದಿಗೆ ೧೪ ಗಂಟೆಗಳ ದುಡಿಮೆ ನೀಡಲಾಗಿತ್ತು. ಆರಂಭದಲ್ಲಿ ಬಾಣಂತಿ ಮಹಿಳೆಯರನ್ನು ಆಸ್ಪತ್ರೆಗೆ ತಲುಪಿಸುವ ಕೆಲಸಕ್ಕೆಂದು ನೇಮಿಸಿಕೊಂಡು ಈಗ ಅವರಿಂದ ೩೨ ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಕೆಲಸದ ಅವಧಿ ಆರು ಪಟ್ಟು ಹೆಚ್ಚಾದರೂ, ಗೌರವಧನ ಮಾತ್ರ ಹೆಚ್ಚಾಗಿಲ್ಲ ಎನ್ನುವುದು ಕಾರ್ಯಕರ್ತರ ಆರೋಪವಾಗಿತ್ತು. ಬೆಲೆ ಏರಿಕೆಗಳ ಹೊಡೆತದ ನಡುವೆಯೂ ಅತೀ ಕಡಿಮೆ ಕೂಲಿಗೆ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದರು. ತಮಗೆ ನೀಡಲಾಗುತ್ತಿರುವ ಗೌರವ ಧನವನ್ನು ೧೪ ಸಾವಿರ ರೂ. ಗಳಿಗೆ ಹೆಚ್ಚಿಸಬೇಕೆನ್ನುವುದು ಅವರ ಪ್ರಧಾನ ಬೇಡಿಕೆಯಾಗಿತ್ತು. ಇದೀಗ ಮಾಸಿಕ ೧೦,೦೦೦ ನಿಶ್ಚಿತ ಗೌರವ ಧನದ ಜೊತೆಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಪ್ರೋತ್ಸಾಹ ಧನ, ನಿವೃತ್ತಿ ಪರಿಹಾರ ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಮೂರು ತಿಂಗಳ ವೇತನ ಸಹಿತ ರಜೆ ಕುರಿತು ಪರಿಶೀಲನೆ ಬಗ್ಗೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆರೋಗ್ಯ ಮೂಲಭೂತ ಹಕ್ಕು, ಈ ಹಕ್ಕು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರಕಿಸುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಹಿರಿದು. ಈ ನಿಟ್ಟಿನಲ್ಲಿ ಇವರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸರಕಾರ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೧-೦೧-೨೦೨೫
ಚಿತ್ರ ಕೃಪೆ; ಅಂತರ್ಜಾಲ ತಾಣ