ಆಸರೆ

ಆಸರೆ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ. ಮ. ಸತೀಶ್, ಗೂಡಿನಬಳಿ
ಪ್ರಕಾಶಕರು
ಮಂಗಳ ಕಲಾ ಸಾಹಿತ್ಯ ವೇದಿಕೆ, ಗೂಡಿನಬಳಿ, ಬಂಟ್ವಾಳ
ಪುಸ್ತಕದ ಬೆಲೆ
ರೂ.35.00. ಮುದ್ರಣ: 1997

*ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*

 "ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ. ಅಮೃತ ಸೋಮೇಶ್ವರರ ಮುನ್ನುಡಿ ಮತ್ತು ಕವಿ, ಗಮಕಿ ಬೆಳ್ತಂಗಡಿಯ ಟಿ. ಸುಬ್ರಹ್ಮಣ್ಯ ಭಟ್ ಅವರ ಬೆನ್ನುಡಿ ಇದೆ.

"ಆಸರೆ" ಯಲ್ಲಿರುವ ಕವನಗಳು, "ಛಂದೋಬದ್ಧವಾದ ಗೇಯ ರಚನೆಗಳು" ಎನ್ನುವುದನ್ನು ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಅಮೃತ ಸೋಮೇಶ್ವರರು, "ತಾರುಣ್ಯ ಸಹಜವಾದ ಕನಸುಗಾರಿಕೆ, ಜೀವನೋತ್ಸಾಹ, ಕುತೂಹಲ, ಅಭೀಷ್ಟೆಗಳು ಸಾಕಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡರೂ, ಅತಿಯಾದ ಭಾವೋದ್ರೇಕ, ಆಕ್ರೋಶ, ಬಾಲಿಶ ಕಲ್ಪನಾ ವಿಲಾಸ, ವಿಕ್ಷಿಪ್ತತೆ ಇವುಗಳು ಮೊಗ ತೋರಿಸಿಲ್ಲ" ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ,  "ಬದುಕಿನಲ್ಲಿ ಕಾಡುವ ಹಲವಾರು ಪ್ರಶ್ನೆಗಳಿಗೆ ಕವಿ ಮುಖಾಮುಖಿಯಾಗಿದ್ದಾರೆ. ಸಮಕಾಲೀನ ಲೋಕ ಜೀವನದ ವಿವಿಧ ತಲ್ಲಣ, ಕಂಪನಗಳು, ಕಾವ್ಯದ ಒಡಲನ್ನು ತಟ್ಟಿದರೂ ಅನಗತ್ಯ ಚೀರಾಟ, ತತ್ತರಗಳು ಇಲ್ಲಿಲ್ಲ. ಅನೇಕ ಕವನಗಳಲ್ಲಿ ಬಾಳಿನ ಹೊಸತನ, ಶಿಶು ಸಹಜ ಮುಗ್ದತೆ, ಪ್ರೇಮ ವಿಶ್ವಾಸ, ಮಾನವತಾ ಭಾವನೆ, ಸುಕುಮಾರತೆ ಇತ್ಯಾದಿಗಳು ಕವಿಯ ಆರೋಗ್ಯಪೂರ್ಣ ದೃಷ್ಟಿಯನ್ನು ನಿಚ್ಚಳವಾಗಿ ಎತ್ತಿ ತೋರಿಸುತ್ತವೆ" ಎಂದು ಕೊಂಡಾಡಿದ್ದಾರೆ.

"ಲೋಕ ಪರಿಸ್ಥಿತಿಯನ್ನು ಸಾಕಷ್ಟು ಎಚ್ಚರದಿಂದ ಗಮನಿಸುವ ಕವಿಯ ರಚನೆಗಳಲ್ಲಿ ಬಾಳಿನ ನಿಗೂಢತೆಯ ಬಗೆಗೆ ವಿಸ್ಮಯದ ಜೊತೆಗೆ ವಿಶಿಷ್ಟ ಚಿಂತನ ಪರತೆಯನ್ನು ಗುರುತಿಸಬಹುದು. ಸತ್ಯ - ಶಿವ - ಸೌಂದರ್ಯಗಳ ಭಿನ್ನ ಭಿನ್ನ ಆಯಾಮಗಳನ್ನು ಇಲ್ಲಿನ ಕೆಲವೊಂದು ಕವನಗಳು ಸಾಕಾರಪಡಿಸುತ್ತವೆ. ಎಲ್ಲ ಕವಿಗಳಂತೆ ಇವರೂ ಪ್ರಕೃತಿಯ ಮಹಿಮೆಯ ಕುರಿತು ಹಾಡಿದ್ದಾರೆ. ಲೋಕ ಶೋಧನೆಯ ಜೊತೆಗೆ ಆತ್ಮ ಶೋಧನೆಯ ಕವನಗಳೂ ಇಲ್ಲಿವೆ. ಕವಿಯ ಭಾಷಾ ಶೈಲಿ ಚೆನ್ನಾಗಿ ಪಳಗಿದ್ದು ಹೃದ್ಯವಾಗಿದೆ. ಶಬ್ದಗಳಿಗಾಗಿ ಇವರು ಪರದಾಡಿದಂತೆ ಕಂಡುಬರುವುದಿಲ್ಲ. ಕವಿಯನ್ನು ಕಾಡಿದ ಭಿನ್ನ ಭಿನ್ನ ಭಾವಗಳು, ವಿಚಾರಗಳು ರೋಚಕವಾಗಿ ಹರಳುಗಟ್ಟಿದ ಸುಕುಮಾರ ವಿಲಾಸವನ್ನು ಇಲ್ಲಿ ಉದ್ದಕ್ಕೂ ಕಾಣಬಹುದು" ಎಂಬುದನ್ನು ಅಮೃತರು ಗುರುತಿಸಿರುವುದು ಕವಿ ಹಾ. ಮ. ಸತೀಶರ ಕಾವ್ಯ ರಚನಾ ಕೌಶಲ್ಯಕ್ಕೆ ಮತ್ತು ಕವಿ ಪ್ರತಿಭೆಗೆ ಸಾಕ್ಷಿಯಾಗಿದೆ.

ಅಸರೆಯಲ್ಲಿ ಒಟ್ಟು 32 ಕವನಗಳಿವೆ. 50 + 14 ಪುಟಗಳ ಈ ಕವನ ಸಂಕಲನದಲ್ಲಿ, ಕವನಗಳಿಗೆ ಪೂರಕವಾಗಿ ಮಲ್ಯಾ ಬಂಟ್ವಾಳ ಇವರು ರಚಿಸಿದ ಕಲಾತ್ಮಕ, ಅಮೂರ್ತ 17 ಚಿತ್ರಗಳಿವೆ. ಮುಖಪುಟದಲ್ಲಿ ಬಿ. ಶಂಕರನಾರಾಯಣ ಹೊಳ್ಳರ ಆಕರ್ಷಕ ಚಿತ್ರವಿದೆ.

ಆಸರೆಯಲ್ಲಿ ಪ್ರಕಟವಾದ ಹೆಚ್ಚಿನ ಕವನಗಳು ಮುಂಗಾರು, ಹೊಸದಿಗಂತ, ಯುಗಪುರುಷ, ಕನ್ನಡ ಜನ ಅಂತರಂಗ, ಮಂಗಳೂರು ಮಿತ್ರ, ಹೊಸಸಂಜೆ, ಸುಮ ಸೌರಭ, ಮಂಗಳ, ಗಾಂಧಿ ಬಜಾರ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಜೋಡುಮಾರ್ಗ ಸಾಹಿತ್ಯ ವೇದಿಕೆ "ಅಭಿರುಚಿ"ಯ ಆಶ್ರಯದಲ್ಲಿ ಬಿಡುಗಡೆಯಾದ ಸಂಕಲನದಲ್ಲಿರುವ ಕೆಲವು ಕವನಗಳನ್ನು ಸಮಾರಂಭದಲ್ಲಿ ಆಕಾಶವಾಣಿ ಕಲಾವಿದೆ ಪೂರ್ಣ ಭಕ್ತವತ್ಸಲ ಅವರು ರಾಗ ಸಂಯೋಜಿಸಿ ಹಾಡಿದ್ದಾರೆ.

ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಹಾಲುಮಜಲು ಮನೆಯಲ್ಲಿ ಜನಿಸಿದ (1965) ಹಾ. ಮ. ಸತೀಶರು, ಗೂಡಿನಬಳಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದು, ಬೆಂಗಳೂರಿನ ಪ್ರತಿಷ್ಟಿತ ಖಾಸಗೀ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ. ತಮ್ಮ ಹದಿನಾಲ್ಕನೇ ಹರೆಯದಲ್ಲಿ ಸಾಹಿತ್ಯ ರಚನೆ ಆರಂಭಿಸಿರುವ ಹಾ. ಮ. ಸತೀಶರು ಲೇಖಕರು, ವ್ಯಂಗ್ಯಚಿತ್ರಕಾರರು, ಗಾಯಕರು ಹೌದು. ಎಪ್ಪತ್ತಕ್ಕೂ ಅಧಿಕ ಸಾಹಿತ್ಯಿಕ, ಸಾಂಸ್ಕೃತಿಕ ಪುರಸ್ಕಾರಗಳನ್ನು ಪಡೆದಿರುವ ಇವರು, ಪಾಣೆಮಂಗಳೂರಿನಲ್ಲಿ ನಡೆದ ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು.

"ಕಾಲಗಳು ಉರುಳುತ್ತಾ

ಸಾಗಿವೆ ಇಂದಿಲ್ಲಿ

ಅರೆತೆರೆದ ಬಾಗಿಲೊಳು ಧ್ವೇಷವೇ ಎಲ್ಲಾ

ಪುಟ್ಟ ಕಂದಮ್ಮಗಳ

ಬಾಳ್ವೆಗಳು ಇಂದಿಲ್ಲಿ

ಕಟ್ಟಿ ಹಾಕಿದ ಪುಟ್ಟ ಕರುಗಳಂತೆ ಎಲ್ಲಾ

ಅರ್ಥವಾಗದ ಜನಕೆ ಬೋಧನೆ ಇಂದಿಲ್ಲಿ

ಆರಿರುವ ಬದುಕಿನ ತಾಣಗಳು ಎಲ್ಲಾ

ಈ ಒಂಟಿ ದಾರಿಯಲಿ

ನೀನೇಕೆ ಬಂದೆಯೋ?

ಇರುಳು ತುಂಬಿದ ಬಾಳು ಇಲ್ಲಿ ಎಲ್ಲಾ"

(ಇರುಳು ತುಂಬಿದ ಬಾಳು) ಬದುಕಿನ ಸ್ಥಿತಿ ಗತಿಗೆ ಕವಿ ಹಿಡಿದ ಕನ್ನಡಿ. ವಾಸ್ತವವಾದಿ ನೆಲೆಯ ಕವಿಯಾದ ಹಾ. ಮ. ಸತೀಶರ ಒಂದೊಂದು ಕವನಗಳೂ ಸಹ ಅರ್ಥಪೂರ್ಣವಾಗಿದ್ದು ಆಪ್ತವಾಗುತ್ತವೆ, ಚಿಂತನೆಗೆ ಹಚ್ಚುತ್ತವೆ.

~ ಶ್ರೀರಾಮ ದಿವಾಣ