ಆಸೀಸ್ ಶ್ರೇಷ್ಟತೆಯ ವ್ಯಸನಕ್ಕೆ ಮರ್ಮಾಘಾತ
![](https://saaranga-aws.s3.ap-south-1.amazonaws.com/s3fs-public/styles/article-landing/public/bumra.jpeg?itok=Cp03r8kS)
ಪ್ರತಿಷ್ಟಿತ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ ೨೯೫ರನ್ ಗಳ ದೊಡ್ಡ ಅಂತರದ ಗೆಲುವು ದಾಖಲಿಸಿರುವುದು ಕೇವಲ ಸಾಮಾನ್ಯ ವಿಜಯವಲ್ಲ. ಇದು ಆಸ್ಟ್ರೇಲಿಯಾದಲ್ಲಿಯೇ ಭಾರತದ ಅತೀ ದೊಡ್ಡ ಟೆಸ್ಟ್ ಗೆಲುವು ಎಂಬುದು ವಿಶೇಷ. ಇದಕ್ಕೂ ಮುನ್ನ ೧೯೭೭ರ ಮೆಲ್ಬೋರ್ನ್ ಟೆಸ್ಟ್ ನಲ್ಲಿ ಭಾರತ ತಂಡ ೨೨೨ ರನ್ ಗಳ ಗೆಲುವು ದಾಖಲಿಸಿದ್ದು ಇದುವರೆಗಿನ ಶ್ರೇಷ್ಟ ಗೆಲುವಾಗಿತ್ತು. ಆ ಹಳೆಯ ದಾಖಲೆಯನ್ನು ಅಳಿಸಿ ಈಗ ೪೭ ವರ್ಷಗಳ ಬಳಿಕ ಹೊಸ ಇತಿಹಾಸ ರಚಿಸುವಲ್ಲಿ ಟೀಂ ಇಂಡಿಯಾ ಸಫಲವಾಗಿದೆ.
ಈ ಮಹಾನ್ ಗೆಲುವನ್ನು ಬಹುಷಃ ಕ್ರಿಕೆಟ್ ಜಗತ್ತು ಊಹಿಸಿಯೇ ಇರಲಿಲ್ಲ. ಟೀಂ ಇಂಡಿಯಾವು ಆಸ್ಟ್ರೇಲಿಯಾವನ್ನು ತಲುಪಿದಾಗ, ಎಂದಿನಂತೆ ಅಲ್ಲಿನ ಮಾಜಿ ಕ್ರಿಕೆಟಿಗರು, ಮಾಧ್ಯಮಗಳು ತಮ್ಮದೇ ಮೂಗಿನ ನೇರಕ್ಕೆ ಭಾರತೀಯ ಆಟಗಾರರನ್ನು ವ್ಯಾಪಕವಾಗಿ ಅಂದಾಜಿಸಿದ್ದರು. ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮ ಇಲ್ಲದ ತಂಡವನ್ನು ಆಸ್ಟ್ರೇಲಿಯಾ ಬಹಳ ಹಗುರವಾಗಿ ಕಂಡಿತಲ್ಲದೆ, ನಾಯಕತ್ವದಲ್ಲಿ ಕಡಿಮೆ ಅನುಭವ ಹೊಂದಿದ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾರನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಅಲ್ಲದೆ, ಪ್ರತಿ ಸಲದಂತೆ ಒಂದಿಬ್ಬರು ಆಟಗಾರರನ್ನು ಹೊಗಳಿ, ಹಲವರನ್ನು ಟಾರ್ಗೆಟ್ ಮಾಡುವ ಚಾಳಿಯನ್ನೂ ಅಲ್ಲಿನ ಮಾಧ್ಯಮಗಳು ಮುಂದುವರೆಸಿದವು. ‘ವಿರಾಟ್ ಕೊಹ್ಲಿ ಅದ್ಭುತ ಆಟಗಾರ. ಆದರೆ, ಅವರೂ ಈಗ ಫಾರ್ಮ್ ನಲ್ಲಿಲ್ಲ’ ಎಂದೂ ತಾವೇ ತೀರ್ಮಾನಿಸಿಬಿಟ್ಟವು. ‘ಇದು ಕ್ರಿಕೆಟ್ ಪಂದ್ಯವಲ್ಲ. ಯುದ್ಧ.’ ಎಂದು ವ್ಯಾಖ್ಯಾನಿಸಿದ ಜತೆ ಜತೆಗೆ, ಸತತ ಸೋಲಿನಿಂದ ಟೀಕೆಗೆ ಗುರಿಯಾಗಿದ್ದ ನೂತನ ಕೋಚ್ ಗೌತಮ್ ಗಂಭೀರ್ ಅವರನ್ನೂ ಅಲ್ಲಿನ ಮಾಧ್ಯಮಗಳು, ಕ್ರಿಕೆಟ್ ಪಂಡಿತರು ಟಾರ್ಗೆಟ್ ಮಾಡಿದ್ದು ಶ್ರೇಷ್ಟತೆಯ ವ್ಯಸನದಂತೆಯೇ ತೋರಿತ್ತು.
ಆದರೆ, ಈ ಯಾವ ಊಹೆ, ಲೆಕ್ಕಾಚಾರಗಳೂ ಪರ್ತ್ ನ ಮೈದಾನದಲ್ಲಿ ವಾಸ್ತವ ರೂಪ ತಾಳಲೇ ಇಲ್ಲ. ೨೦೨೨ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಶರ್ಮಾ ಅಲಭ್ಯರಾಗಿದ್ದಾಗ, ಮೊದಲ ಬಾರಿ ಟೆಸ್ಟ್ ನಾಯಕತ್ವವನ್ನು ಹೆಗಲಿಗೇರಿಸಿಕೊಂಡಿದ್ದ ಬುಮ್ರಾ ವೈಫಲ್ಯ ಕಂಡಿದ್ದರು. ಈ ಬಾರಿ ಬುಮ್ರಾ ಕೈಯಲ್ಲಿರುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಅನುಭವಿ ನಾಯಕನಂತೆಯೇ ಬುಮ್ರಾ ಎಲ್ಲರನ್ನೂ ಚಕಿತಗೊಳಿಸಿದರು. ಬ್ಯಾಟಿಂಗ್ ವಿಭಾಗದಲ್ಲಾಗಲೀ, ಬೌಲಿಂಗ್ ವಿಭಾಗದಲ್ಲಾಗಲೀ, ತಂತ್ರಗಾರಿಕೆಯಲ್ಲಿ ಟೀಂ ಇಂಡಿಯಾ ಹಿಂದೆ ಬೀಳಲಿಲ್ಲ. ಮೊದಲ ಇನ್ನಿಂಗ್ಸ್ ನಲ್ಲಿ ಬುಮ್ರಾ ೧೧ನೇ ಬಾರಿಗೆ ಐದು ವಿಕೆಟ್ ಉರುಳಿಸಿದರು. ಯುವ ಆರಂಭಿಕ ಜೈಸ್ವಾಲ್ ಶತಕ ಮಿಂಚಿನಾಟ, ಕನ್ನಡಿಗ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟದ ಜತೆಗೆ ತಮ್ಮ ಹಳೆಯ ಪ್ರದರ್ಶನವನ್ನು ನೆನಪಿಸುವಂತೆ ಆಡಿದ ವಿರಾಟ್ ಕೊಹ್ಲಿ ಶತಕ - ಒಟ್ಟಾರೆ ಟೀಂ ಇಂಡಿಯಾದ ಸಂಘಟನಾತ್ಮಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ೨ ನೇ ಇನ್ನಿಂಗ್ಸ್ ನಲ್ಲಿ ಎದ್ದು ಕೂರಲೇ ಇಲ್ಲ. ಇದು ಅತಿಥೇಯ ತಂಡಕ್ಕೆ ಐತಿಹಾಸಿಕ ಮುಜುಗರವೇ ಸರಿ.
ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಟಿ ಮೂಲಕ ಸದಾ ‘ಮೈಂಡ್ ಗೇಮ್’ ಗೆ ಇಳಿಯುವ ಆಸ್ಟ್ರೇಲಿಯಾ ಚಾಳಿಗೆ ಭಾರತ ಕಲಿಸಿದ ಬಹುದೊಡ್ದ ಪಾಠವಿದು. ತಾವೇ ಶ್ರೇಷ್ಟ, ಇನ್ನೊಬ್ಬರು ಕನಿಷ್ಟ ಎನ್ನುವ ಬುದ್ಧಿಯನ್ನು ಆಸೀಸ್ ಇನ್ನಾದರೂ ನಿಲ್ಲಿಸಲಿ. ಹಾಗೆಯೇ, ಪರ್ತ್ ನ ಅದ್ಭುತ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಈ ಗೆಲುವಿನ ಅಮಲಿನಲ್ಲಿ ತೇಲದೆ, ಎಚ್ಚರದಿಂದ ಆಡುವುದನ್ನು ಮುಂದುವರೆಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೧೧-೨೦೨೪
ಚಿತ್ರ ಕೃಪೆ: ಇಂಟರ್ನೆಟ್ ತಾಣ