ಕವನ
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.
ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.
ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.
ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......