ಆಸೆ ನೆರವೇರಿಸುವ ಮರ

ಆಸೆ ನೆರವೇರಿಸುವ ಮರ

ಕಾಡಿನ ನಡುವೆ ಯೋಗಿಯೊಬ್ಬರು ಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರ ಕುಟೀರದ ಬಳಿಯೇ ಒಂದು ದಾರಿ ಹಾದು ಹೋಗಿತ್ತು. ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಹೋಗುವ ಜನರು ಆಗಾಗ ಆ ದಾರಿಯಲ್ಲಿ ಬಂದು, ಸಂಜೆಯಾದರೆ, ಯೋಗಿಯವರ ಆಶ್ರಮದಲ್ಲಿ ತಂಗುತ್ತಿದ್ದರು.

ಒಂದು ದಿನ ಒಬ್ಬ ಪ್ರಯಾಣಿಕ ಬಂದ. ಆತನಿಗೆ ಎಲ್ಲದರಲ್ಲೂ ಅತಿಯಾದ ಕುತೂಹಲ. ಆ ದಾರಿಗುಂಟ ಹೋಗುತ್ತಿದ್ದಾಗ, ಸಂಜೆಯಾಗಿದ್ದರಿಂದ ಯೋಗಿಯವರ ಕುಟೀರ ಕಂಡು ಅವನಿಗೆ ಬಹಳ ಖುಷಿಯಾಯಿತು. ಆಗ ಯೋಗಿ ಧ್ಯಾನ ಮಾಡುತ್ತಿದ್ದರು. ಇವರು ಬಂದ ತಕ್ಷಣ ಕಣ್ತೆರೆದರು.

ಪ್ರಯಾಣಿಕನು ಯೋಗಿಗಳಿಗೆ ನಮಸ್ಕರಿಸಿ, ಆ ರಾತ್ರಿ ಅಲ್ಲಿಯೇ ತಂಗಲು ಅವಕಾಶ ನೀಡುವಂತೆ ಕೇಳಿಕೊಂಡ. ‘ಖಂಡಿತವಾಗಿಯೂ ಈ ರಾತ್ರಿ ನೀನು ಇರಬಹುದು. ನಿನ್ನ ರೀತಿಯೇ ಆಗಾಗ ಪ್ರಯಾಣಿಕರು ಇಲ್ಲಿ ಬಂದು ತಂಗುತ್ತಾರೆ. ಅವರಿಗಾಗಿ ಕುಟೀರದ ಒಂದು ಭಾಗವನ್ನು ಮೀಸಲಿರಿಸಿದ್ದೇನೆ.’ ಎಂದ ಯೋಗಿಯು, ಅವನಿಗೆ ಕುಟೀರದ ಮುಂಭಾಗವನ್ನು ತೋರಿಸಿದರು.

ಆತನಿಗಾಗಿ ಗಂಜಿಯನ್ನು ಯೋಗಿಯವರು ತಯಾರಿಸಿಕೊಟ್ಟರು. ಪ್ರಯಾಣಿಕನಿಗೆ ವಿಪರೀತ ಮಾತನಾಡುವ ಕುತೂಹಲ. ತಾವು ಏನು ಮಾಡುತ್ತೀರಿ, ಧ್ಯಾನ ಎಂದರೇನು ಎಂದೆಲ್ಲಾ ಕೇಳತೊಡಗಿದ. 

“ಸಾಧನೆ ಮಾಡುವ ಉದ್ದೇಶದಿಂದ ಈ ಕಾಡಿನಲ್ಲಿ ಕುಟೀರ ಕಟ್ಟಿಕೊಂಡಿದ್ದೇನೆ. ಹಲವು ವರ್ಷಗಳಿಂದ ಇಲ್ಲೇ ಇದ್ದೇನೆ. ಇಲ್ಲಿನ ಕ್ರಿಮಿ, ಕೀಟಗಳು, ಪ್ರಾಣಿಗಳು, ಪಕ್ಷಿಗಳು ನನ್ನ ಗೆಳೆಯರಾಗಿದ್ದಾರೆ.” ಎಂದರು ಯೋಗಿ.

“ಪ್ರಾಣಿಗಳು ನಿಮ್ಮ ಗೆಳೆಯರೇ? ಅದು ಹೇಗೆ ಗುರುಗಳೇ?” ಎಂದು ಕೇಳಿದ ಆ ಪ್ರಯಾಣಿಕ.

“ಬಹಳ ದಿನಗಳಿಂದ ಅವುಗಳ ಬಳಿ ಮಾತನಾಡುತ್ತಿದ್ದೇನೆ. ಆನೆ, ಹುಲಿಗಳು ಸಹ ಈಗ ನನ್ನ ಗೆಳೆಯರಾಗಿದ್ದಾರೆ. ಕಾಡಾನೆಗಳು ಆಗಾಗ ಬಂದು ಕುಟೀರದ ಮುಂದೆ ರಾತ್ರಿ ಮಲಗುತ್ತವೆ. ನಾನು ಅವುಗಳ ಮೈದಡವುತ್ತೇನೆ. ಹುಲಿಯೂ ಒಮ್ಮೊಮ್ಮೆ ಬಂದು ದೂರದಿಂದ ನೋಡಿಕೊಂಡು ಹೋಗುತ್ತದೆ. ನಾನು ಮಾತನಾಡಿಸಿದಾಗ ಬಾಲ ಅಲ್ಲಾಡಿಸುತ್ತದೆ. ಪಕ್ಷಿಗಳಂತೂ ಆತ್ಮೀಯ ಗೆಳೆಯರಾಗಿದ್ದಾರೆ. ಅಷ್ಟು ಮಾತ್ರವಲ್ಲ, ಈ ಕಾಡಿನಲ್ಲಿ ಇನ್ನೂ ಅದ್ಭುತಗಳಿವೆ.” ಎಂದರು ಗುರುಗಳು.

“ಇನ್ನೂ ಏನೇನು ಅದ್ಭುತಗಳಿವೆ?” ಎಂದ ಆ ಪ್ರಯಾಣಿಕ.

“ ಈ ಕಾಡಿನಲ್ಲಿ ನಮ್ಮ ಮನಸ್ಸಿನ ಆಸೆಗಳನ್ನು ನೆರವೇರಿಸುವ ಮರವೂ ಇದೆ!” ಎಂದರು ಯೋಗಿ.

“ಹೌದೇ, ಹಾಗಾದರೆ ಅದನ್ನು ನನಗೆ ತೋರಿಸಿ" ಎಂದು ಆ ಪ್ರಯಾಣಿಕ ದುಂಬಾಲು ಬಿದ್ದ.

“ಅದು ಸಾಧ್ಯವಿಲ್ಲ. ಇಷ್ಟು ಸಾಧನೆ ಮಾಡಿದರೂ, ನಾನೇ ಅದನ್ನು ಹತ್ತಿರದಿಂದ ನೋಡಲು ಹೋಗಿಲ್ಲ. ಏಕೆಂದರೆ, ನಮ್ಮ ಮನಸ್ಸಿನ ಚಂಚಲತೆಯು ಯಾವ ಕ್ಷಣದಲ್ಲಿ ಯಾವ ಸನ್ನಿವೇಶವನ್ನು ಸೃಷ್ಟಿಸುತ್ತದೋ ತಿಳಿಯದು. ನಾವು ಅಂತಹ ವಿಶೇಷ ಶಕ್ತಿಯ ಮರದ ಬಳಿ ಹೋಗಬಾರದು.” ಎಂದರು ಯೋಗಿ.

ಮರುದಿನ ಆ ಪ್ರಯಾಣಿಕ ಬೆಳಿಗ್ಗೆ ಬೇಗನೆ ಹೊರಟು, ಆ ಕುಟೀರದ ಸುತ್ತ ಮುತ್ತಲಿನ ಕಾಡಿನಲ್ಲಿ, ಆ ಮರವನ್ನು ಹುಡುಕಲು ಆರಂಭಿಸಿ, ಮನಸ್ಸಿನ ಆಸೆ ನೆರವೇರುವ ಮರ ಎಲ್ಲಿದೆ ಎಂಬ ಕುತೂಹಲ ಅವನಿಗೆ.

ತುಂಬಾ ಹೊತ್ತಿನ ನಂತರ, ಕುಟೀರದಿಂದ ಸಾಕಷ್ಟು  ದೂರದಲ್ಲಿ ಒಂದು ವಿಚಿತ್ರವಾದ ಮರ ಕಾಣಿಸಿತು. “ಓಹ್, ಇದೇ ಆ ಮರ ಇರಬಹುದು" ಎಂದು ಊಹಿಸಿದ ಆತನು, “ನನಗೀಗ ಸುಸ್ತಾಗಿದೆ, ಒಂದು ಮಂಚ ಇದ್ದರೆ ಚೆನ್ನಾಗಿ ನಿದ್ರೆ ಮಾಡಬಹುದಿತ್ತು" ಎಂದುಕೊಂಡ.

ತಕ್ಷಣ ಆ ಮರದ ನೆರಳಿನಲ್ಲಿ ಒಂದು ಮಂಚ ಕಾಣಿಸಿತು. ಪ್ರಯಾಣಿಕನಿಗೆ ಖುಷಿಯಾಯಿತು. ಅದರ ಮೇಲೆ ಮಲಗಿದ. “ ನಡೆದು ಕಾಲು ನೋವಾಗಿದೆ. ಅದನ್ನು ಕಡಿಮೆ ಮಾಡಲು ಸೇವಕಿಯು ಎಣ್ಣೆ ಸವರಿ ಕಾಲು ತಿಕ್ಕಿದ್ದರೆ ಚೆನ್ನಾಗಿತ್ತು" ಅಂದುಕೊಂಡ.

ತಕ್ಷಣ ಒಬ್ಬ ಸೇವಕಿ ಬಂದು, ಆತನ ಕಾಲಿಗೆ ಎಣ್ಣೆ ಹಚ್ಚಿ, ನೀವ ತೊಡಗಿದಳು. ಪ್ರಯಾಣಿಕನಿಗೆ ಹಾಯೆನಿಸಿತು. ಹಾಗೇ ನಿದ್ರೆ ಮಾಡಿದ. ತುಂಬಾ ಹೊತ್ತಾದ ನಂತರ ಎಚ್ಚರವಾಯಿತು. ಆದಾಗಲೇ ಸಂಜೆಯಾಗಿತ್ತು. ಕತ್ತಲು ಕವಿಯುತ್ತಿತ್ತು. “ಓಹ್ ಕತ್ತಲಾಗಿದೆ. ಈಗ ಹುಲಿ ಬಂದು ನನ್ನನ್ನು ಕಚ್ಚಿಕೊಂಡು ಹೋಗುವುದೋ ಹೇಗೆ?” ಎಂದು ಆತ ಯೋಚಿಸಿದ. ತಕ್ಷಣ ಹುಲಿ ಬಂದು ಆತನನ್ನು ಕಚ್ಚಿಕೊಂಡು ಹೋಯಿತು. (ಮನಸ್ಸಿನ ಚಂಚಲತೆಯನ್ನು ಈ ಕಥೆ ಸೂಚಿಸುತ್ತದೆ.)

-ಶಶಾಂಕ್ ಮುದೂರಿ

(ಕೃಪೆ: ವೇದಾಂತಿ ಹೇಳಿದ ಕಥೆ. ವಿಶ್ವವಾಣಿ ಪತ್ರಿಕೆ)

ಚಿತ್ರ ಕೃಪೆ ಅಂತರ್ಜಾಲ ತಾಣ.

Comments

Submitted by ಬರಹಗಾರರ ಬಳಗ Wed, 04/13/2022 - 12:37

ಅರ್ಥಪೂರ್ಣ ಬರಹ

ಅರ್ಥ ಪೂರ್ಣ ಈ ಬರಹಕ್ಕೆ ಪೂರಕವಾಗಿರುವ ಒಂದು ದೃಶ್ಯವನ್ನು ಈ ಹಿಂದೆ ಒಂದು ಹಳೆಯ ಚಲನಚಿತ್ರದಲ್ಲಿ ವೀಕ್ಷಿಸಿದ್ದೆ. 

-ಆಕಾಶ್ ಪೂಜಾರಿ ಗೇರುಕಟ್ಟೆ