ಆಸ್ತಾನ ವಿದ್ವಾನ್ ಶ್ರೀ ಹೆಚ್.ಕೆ. ಕೃಷ್ಣಮೂರ್ತಿ

ಆಸ್ತಾನ ವಿದ್ವಾನ್ ಶ್ರೀ ಹೆಚ್.ಕೆ. ಕೃಷ್ಣಮೂರ್ತಿ

ಬರಹ

ಶ್ರೀಯುತ ಹೆಚ್.ಕೆ. ಕೃಷ್ಣಮೂರ್ತಿಯವರು ೧೯೨೭ನೇ ಇಸವಿಯಲ್ಲಿ ಹಾಸನ ತಾಲ್ಲೂಕು ಹಂದನಕೆರೆ ಜೋಡಿ ಗ್ರಾಮದಲ್ಲಿ ನಿಷ್ಠಾವಂತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶ್ರೀ ಕೇಶವಯ್ಯ, ತಾಯಿ ಶ್ರೀಮತಿ ನಂಜಮ್ಮ. ಇವರು ಆ ದಂಪತಿಗಳ ಮೂರನೆಯ ಪುತ್ರ.

ಬಾಲ್ಯದಲ್ಲಿ ಮಾಧ್ಯಮಿಕ ಶಾಲೆಯವರೆಗೆ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ೧೩ನೇ ವಯಸ್ಸಿನಲ್ಲಿ ಉಪನಯನ. ನಂತರ ಕಾಲೋಚಿತವಾದ ವೇದ ಮತ್ತು ಸಂಸ್ಕೃತಾಭ್ಯಾಸ. ೧೬ನೇ ವಯಸ್ಸಿನಲ್ಲಿ ಮೈಸೂರು ಶ್ರೀಮನ್ ಮಹಾರಾಜಾ ಸಂಸ್ಕ್ರುತ ಮಹಾ ಪಾಠಶಾಲೆಗೆ ಪ್ರವೇಶ. ಮೈಸೂರಿಗೆ ಬಂದಾಗ ಅವರ ದೊಡ್ಡಪ್ಪ ಆಸ್ತಾನ ವಿದ್ವಾನ್ ವಿಣೆ ವೆಂಕಟಗಿರಿಯಪ್ಪನವರ ಮನೆಯಲ್ಲಿ ಆಶ್ರಯ ಮತ್ತು ಪೋಷಣೆ. ಪ್ರಥಮದಿಂದ ೧೩ ವರ್ಷಗಳ ವಿದ್ಯಾಭ್ಯಾಸದ ಅವಧಿಯಲ್ಲಿ ಪ್ರತಿ ಪರೀಕ್ಷೆಯಲ್ಲಿಯೂ ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣತೆ.

೧೯೫೪ರಲ್ಲಿ ಜ್ಯೋತಿಷ್ಯ ವಿದ್ವತ್ ಪರೀಕ್ಷೆಯಲ್ಲಿ ಪ್ರಪ್ರಥಮ ದರ್ಜೆಯಲ್ಲಿ ಉತ್ತೀರ್ಣತೆ. ಅಂದಿನ ಮೈಸೂರು ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರಿಂದ ನವರಾತ್ರಿ ದರ್ಭಾರಿನಲ್ಲಿ ವಿದ್ವತ್ ಪ್ರಶಸ್ತಿ ಸ್ವೀಕಾರ. ಜೋಡಿ ಶಾಲು ಮತ್ತು ಸಂಭಾವನೆಯಿಂದಲೂ ಪುರಸ್ಕೃತರು. ವಿದ್ಯಾಭ್ಯಾಸವನ್ನು ಮುಂದುವರೆಸಿ ಅಲಂಕಾರ ಮತ್ತು ಧರ್ಮಶಾಸ್ತ್ರಗಳಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ.

೧೯೫೪ ರಿಂದ ೧೯೬೭ರ ವರೆಗೆ ಶ್ರೀಮನ್ ಮಹಾರಾಜಾ ಸಂಸ್ಕೃತ ಪಾಠಶಾಲೆಯಲ್ಲಿ ಜ್ಯೋತಿಶ್ಯಾಸ್ತ್ರ ವಿಷಯದ ಅಧ್ಯಾಪಕರಾಗಿ ಮತ್ತು ೧೯೬೭ರಿಂದ ೧೯೮೭ರ ವರೆಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ನಿವೃತ್ತಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ೬೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪರಿಪೂರ್ಣ ವಿದ್ವಾಂಸರನ್ನಾಗಿ ತಯಾರು ಮಾಡಿದ ಸಾಧೆನೆ ಇವರದು.

ನಿವೃತ್ತಿಯ ನಂತರ ಸತತವಾಗಿ ಜ್ಯೋತಿಷ್ಯ ವಿದ್ವತ್ ಪರೀಕ್ಷೆಗಳ ಪರೀಕ್ಷಕರು, ಪ್ರಶ್ನೆ ಪತ್ರಿಕೆ ತಯಾರಕರು ಮತ್ತು ವಾಕ್ ಪರೀಕ್ಷೆಯ ಪರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

೨೦೦೦ನೇ ಇಸವಿಯಿಂದ ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಖಾಯಂ ಸದಸ್ಯರಾಗಿ ಅಲ್ಲಿನ ಶಾಸ್ತ್ರೀಯ, ಆಚಾರ್ಯ ಮತ್ತು ವಿದ್ಯಾವಾರಿಧಿ ಪರಿಕ್ಷೆಗಳಲ್ಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಣೆ ನಡೆಸುತ್ತಾ ಬಂದಿರುತ್ತಾರೆ.

ಮಂತ್ರಾಲಯ ಮುಂತಾದ ಕಡೆಗಳಲ್ಲಿ ಅನೇಕ ವಿದ್ವತ್ ಸಭೆಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿರುತ್ತಾರೆ. ಶೃಂಗೇರಿ ಹಾಗು ಇನ್ನಿತರ ಅನೇಕ ಮಠದ ಅಧಿಪತಿಗಳಿಂದಲೂ ಸನ್ಮಾನಿತರಾಗಿರುವ ಹೆಗ್ಗಳಿಗೆ ಇವರದು. ಮೈಸೂರು ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳಿಂದಲೂ ಸನ್ಮಾನ ಪಡೆದಿರುವ ಪ್ರತಿಭಾವಂತರು ಶ್ರೀ ಕೃಷ್ಣಮೂರ್ತಿಗಳು.

ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳಿಂದ ನಿವೃತ್ತಿಯ ಸಮಯದಲ್ಲಿ ಅದ್ಭುತವಾಗಿ ಗೌರವಿಸಲ್ಪಟ್ಟಿರುತ್ತಾರೆ. ಮೈಸೂರು "ವೇದ ಶಾಸ್ತ್ರ ಪೋಷಿಣಿ ಸಭೆ"ಯಿಂದ ಸನ್ಮಾನ ಪತ್ರ ಮತ್ತು ಜೋಡಿ ಶಾಲುಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ.

೨೦೦೧ನೇ ಇಸವಿ ಡಿಸೆಂಬರಿನಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭರತ ಜ್ಯೋತಿಷ್ಯ ಶಾಸ್ತ್ರ ಸಮ್ಮೇಳನದಲ್ಲಿ ಪೂಜ್ಯ ಪೇಜಾವರ ಸ್ವಾಮಿಗಳಿಂದ ಸನ್ಮಾನ ಪತ್ರ ಹಾಗು "ಜ್ಯೋತಿಷ್ಯ ವಿದ್ಯಾ ಪ್ರವೀಣ" ಬಿರುದು ಮತ್ತು ಜೋಡಿ ಶಾಲು, ಸಂಭಾವನೆಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಪ್ರಸ್ತುತ ಮೈಸೂರು ರಾಜ ವಂಶಸ್ಥ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅರಮನೆ ಜೋಯಿಸರು ಮತ್ತು ಧರ್ಮಾಧಿಕಾರಿಗಳೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

೨೦೦೭ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀ ಶ್ರೀ ಶ್ರೀ ಕಂಚಿ ಮಠದ ಮಹಾಸ್ವಾಮಿಗಳಿಂದ ವಿಶೇಷವಾಗಿ ಸನ್ಮಾನಿಸಲ್ಪಟ್ಟಿದ್ದಾರೆ.

ತ್ರಿಸ್ಕಂದ ಜ್ಯೋತಿಸ್ಷ್ಯ ಶಾಸ್ತ್ರದಲ್ಲಿ ಆಸಕ್ತರಿಗೆ ಪಾಠ ಪ್ರವಚನ ನಡೆಸುತ್ತಿದ್ದಾರೆ. ಶಾಸ್ತ್ರ ವಿಚಾರದಲ್ಲಿ ಸಾರ್ವಜನಿಕರಿಗೆ ಬೇಕಾದ ವಿಷಯಗಳನ್ನು ತಿಳಿಸಿಕೊಡುತ್ತಾ, ಶಾಸ್ತ್ರ ಸೇವೆ, ಜನಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇಹಕ್ಕೆ ಮುಪ್ಪಾದರೂ (ಈಗ ಅವರಿಗೆ ೮೦ ವರ್ಷ ವಯಸ್ಸು) ಮನಸ್ಸಿಗೆ ಮುಪ್ಪಿಲ್ಲವೆಂಬುದಕ್ಕೊಂದು ಅದ್ಭುತ ಉದಾಹರಣೆ ಶ್ರೀ ಹೆಚ್.ಕೆ ಕೃಷ್ಣ ಮೂರ್ತಿಯವರು.

ದುರದೃಷ್ಟವಶಾತ್ ಶ್ರೀ ಕೃಷ್ಣಮೂರ್ತಿಯವರು ಕಂಪ್ಯೂಟರನ್ನು ಕಲಿತಿಲ್ಲದಿರುವುದರಿಂದ ’ನೆಟ್’ನಲ್ಲಿ ಅವರ ಸಂಪರ್ಕ ಸಾಧ್ಯವಿಲ್ಲ.

ಅವರನ್ನು ಬೇಟಿ ಮಾಡಲಿಚ್ಚಿಸುವವರಿಗೆ, ಹೆಚ್ಚಿನ ಮಾಹಿತಿ ಪಡೆಯ ಬಯಸುವವರಿಗೆ ಇಲ್ಲಿದೆ ಅವರ ವಿಳಾಸ:
No. 117/3, Adithya Nilaya, 1st Cross, Ramanuja Road, Mysore 570 004