ಆಹಾರದಿಂದ ಆರೋಗ್ಯ - ಕೆಲವೊಂದು ಟಿಪ್ಸ್ ಗಳು
ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದೆ, ಕೆಲವರಿಗೆ ಮಾಂಸಹಾರ ಸೇವಿಸಿದ ಕೂಡಲೇ ಹೊಟ್ಟೆ ಕೆಡುತ್ತದೆ. ಕೆಲವರಿಗೆ ಯಾವುದೋ ಆಹಾರದ ಅಲರ್ಜಿ. ಬಹುತೇಕ ಸಮಸ್ಯೆಗಳಿಗೆ ನಾವು ಮನೆಯಲ್ಲೇ ಮದ್ದು ಮಾಡಿಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ಕೆಲವು ಪುಟ್ಟ ಪುಟ್ಟ ಟಿಪ್ಸ್ ನಿಮಗಾಗಿ ನೀಡಿದ್ದೇವೆ. ಬಳಸುವ ಮುನ್ನ ದಯವಿಟ್ಟು ನಿಮ್ಮ ದೇಹಕ್ಕೆ ಯಾವ ವಸ್ತು ಒಗ್ಗುತ್ತದೆ? ಯಾವುದರಿಂದ ತೊಂದರೆಯಾಗಬಹುದು ಎಂಬುವುದನ್ನು ಅರಿತು ಬಳಸಿ.
ಬೆಳ್ಳುಳ್ಳಿ: ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ(ಬಿಪಿ) ಇದ್ದಲ್ಲಿ ನೀವು ಬೆಳ್ಳುಳ್ಳಿಯನ್ನು ಬಳಸಿದರೆ ಅನುಕೂಲವಾಗಬಹುದು. ಬೆಳ್ಳುಳ್ಳಿ ಬಿಪಿ, ಕೊಲೆಸ್ಟ್ರಾಲ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿ ವಸ್ತುವಾಗಿ ಕೆಲಸ ಮಾಡುತ್ತದೆ. ನಿಮ್ಮ ಸಲಾಡ್ ಅಥವಾ ಸೂಪ್ ನಲ್ಲಿ ಬೆಳ್ಳುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಬಳಸಿ. ನೀವು ಮಾಡುವ ಚಹಾಗೂ ಬೆಳ್ಳುಳ್ಳಿಯನ್ನು ಸೇರಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಬೊಜ್ಜು ಕರಗುತ್ತದೆ ಎಂದು ಹೇಳುತ್ತಾರೆ. ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕುಂಬಳಕಾಯಿ: ಕುಂಬಳ ಕಾಯಿಯ ಬಳಕೆಯಿಂದ ನೀವು ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು. ನಿಯಮಿತವಾಗಿ ಕುಂಬಳಕಾಯಿಯನ್ನು ಬಳಸುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುತ್ತದೆ. ಮಲಬದ್ಧತೆಯ ಸಮಸ್ಯೆಯ ನಿವಾರಣೆಯಾಗುತ್ತದೆ. ನಿಮ್ಮ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ದೇಹದ ಆಲಸ್ಯವನ್ನು ನಿವಾರಿಸಿ, ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳಿಂದ ಬರುವ ಸೋಂಕಿನಿಂದ ನಿಮ್ಮನ್ನು ದೂರ ಮಾಡುತ್ತದೆ. ಆದುದರಿಂದ ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಕುಂಬಳಕಾಯಿ ಬಳಕೆ ಅಗತ್ಯ.
ಟೊಮ್ಯಾಟೋ: ಇದೊಂದು ಬಗೆಯಲ್ಲಿ ತರಕಾರಿಯೂ ಹೌದು, ಹಣ್ಣೂ ಹೌದು. ಕ್ಯಾನ್ಸರ್ ತಡೆಯುವಲ್ಲಿ ಇದು ಬಹಳ ಉಪಯುಕ್ತ. ಜೀರ್ಣಕ್ರಿಯೆಗೆ ಸಹಕಾರಿ. ಹೃದಯ ಸಂಬಂಧಿ ರೋಗ, ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ. ತ್ವಚೆಯ ಆರೋಗ್ಯ ಹಾಗೂ ಕಣ್ಣಿನ ದೃಷ್ಟಿಗೆ ಉತ್ತಮ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಟೊಮ್ಯಾಟೋ ಬಳಕೆಯನ್ನು ಮಿತವಾಗಿ ಮಾಡಿದರೆ ಉತ್ತಮ. ಏಕೆಂದರೆ ಇದರ ಅಧಿಕ ಉಪಯೋಗದಿಂದ ಕಿಡ್ನಿಯಲ್ಲಿ ಕಲ್ಲಾಗುವ ಸಂಭವ ಇರುತ್ತದೆ. ಈಗಾಗಲೇ ಕಿಡ್ನಿಯಲ್ಲಿ ಕಲ್ಲು ಇರುವ ಸಮಸ್ಯೆ ಇರುವವರು ಇದರ ಬಳಕೆಯನ್ನು ಆದಷ್ಟು ಕಮ್ಮಿ ಮಾಡಿಕೊಳ್ಳುವುದು ಒಳ್ಳೆಯದು.
ಬಾರ್ಲಿ: ಬಾರ್ಲಿ ಒಂದು ಉತ್ತಮ ದಿನಸಿ ಪದಾರ್ಥ. ಇದು ನಿಮ್ಮ ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಬಹು ಸಹಕಾರಿ. ದೇಹದಲ್ಲಿನ ಕೊಬ್ಬನ್ನು ನಿಯಂತ್ರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಉತ್ತಮ. ರಕ್ತಹೀನತೆಯನ್ನು ಸರಿಪಡಿಸಿ, ಮೂಳೆಯನ್ನು ಬಲಪಡಿಸುತ್ತದೆ. ಬಾರ್ಲಿಯ ನಿಯಮಿತ ಬಳಕೆಯಿಂದ ನಿಮ್ಮ ತಲೆ ಕೂದಲು ಹೊಳಪನ್ನು ಪಡೆದುಕೊಳ್ಳುತ್ತದೆ.
ಕೇಸರಿ: ಬಹು ದುಬಾರಿಯಾದ ಕೇಸರಿಯ ಪ್ರಯೋಜನಗಳೂ ಅಧಿಕವಿದೆ. ಕೇಸರಿ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ನಿಮ್ಮ ನೆನಪಿನ ಶಕ್ತಿ ಮತ್ತು ಏಕಾಗ್ರತೆಯನ್ನು ಅಧಿಕಗೊಳಿಸುತ್ತದೆ. ಒತ್ತಡ ಹಾಗೂ ಆತಂಕಗಳಿಂದ ನಿವಾರಣೆ. ಕ್ಯಾನ್ಸರ್ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಖಿನ್ನತೆ, ನಿದ್ರಾಹೀನತೆಯನ್ನು ಕಮ್ಮಿ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ ಹಾಗೂ ಚರ್ಮದ ಕಾಯಿಲೆಗಳಿಗೆ ಉತ್ತಮ. ಕೇಸರಿ ಯಾವಾಗಲೂ ಶುದ್ಧವಾಗಿರಬೇಕು. ಬಹಳಷ್ಟು ನಕಲಿ ಕೇಸರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ದಯವಿಟ್ಟು ಪರಿಶೀಲಿಸಿ, ಖರೀದಿಸಿ.
ಜಾಯಿಕಾಯಿ: ಜಾಯಿಕಾಯಿಯು ಒಂದು ಅದ್ಭುತ ಸಾಂಬಾರ ಪದಾರ್ಥ. ಇದರಲ್ಲಿ ನಮಗೆ ಜಾಯಿ ಪತ್ರೆಯೂ ಸಿಗುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿಸುತ್ತದೆ. ಹಲ್ಲುನೋವನ್ನು ಕಮ್ಮಿ ಮಾಡುತ್ತದೆ. ವಾಂತಿ ಬರುವುದನ್ನು ತಡೆಗಟ್ಟುತ್ತದೆ. ರಕ್ತದೊತ್ತಡ, ಅಜೀರ್ಣ ಸಮಸ್ಯೆಗೆ ಉತ್ತಮ. ಖಿನ್ನತೆಯನ್ನು ಕಮ್ಮಿ ಮಾಡುತ್ತದೆ. ಮಾಂಸಹಾರಿ ಪದಾರ್ಥಗಳಿಗೆ ಬಳಕೆ ಮಾಡುವುದರಿಂದ ಉತ್ತಮ ರುಚಿ ಹಾಗೂ ಸುವಾಸನೆ ದೊರೆಯುತ್ತದೆ.
ನಿಂಬೆ ಹಣ್ಣು: ನಿಂಬೆ ಹಣ್ಣಿನ ಶರಬತ್ತು ಎಲ್ಲರಿಗೂ ಪ್ರಿಯವಾದದ್ದು. ಬೇಸಿಗೆಯ ಸಮಯದಲ್ಲಿ ನಿಂಬೆ ಶರಬತ್ತು ಕುಡಿದರೆ ಬಳಲಿಕೆ ಕಮ್ಮಿಯಾಗುತ್ತದೆ. ನಿಂಬೆ ಬಳಕೆಯಿಂದ ನೆಗಡಿ ಕಡಿಮೆಯಾಗುತ್ತದೆ. ದೊಡ್ಡ ಕರುಳನ್ನು ಸ್ವಚ್ಚಗೊಳಿಸುತ್ತದೆ. ಕ್ಯಾನ್ಸರ್ ದೂರ ಮಾಡುವ ಶಕ್ತಿ ನಿಂಬೆಕಾಯಿಗೆ ಇದೆ. ಲಿವರ್ ಸಮಸ್ಯೆಯನ್ನು ದೂರ ಮಾಡುತ್ತದೆ. ಕೆಲವು ಅಲರ್ಜಿಗಳು ಹಾಗೂ ನರಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ. ಡಯಾಬಿಟಿಸ್ ನಿಯಂತ್ರಣದಲ್ಲಿಡುತ್ತದೆ.
(ಮಾಹಿತಿ ಸಂಗ್ರಹ)