ಆಹಾರದ ರುಚಿ ತಿಳಿಯಲು ಮೂಗು ಅವಶ್ಯವೇ?

ಆಹಾರದ ರುಚಿ ತಿಳಿಯಲು ಮೂಗು ಅವಶ್ಯವೇ?

ಮೇಲಿನ ವಾಕ್ಯವನ್ನು ಕಂಡು ಆಶ್ಚರ್ಯವಾಗುತ್ತಿದೆಯೇ? ನಾವು ತಿನ್ನುವ ಆಹಾರದ ರುಚಿ ನೋಡಲು ನಾಲಗೆ ಸಾಕಲ್ಲವೇ? ಮೂಗು ಯಾಕೆ? ಇಲ್ಲಿದೆ ನೋಡಿ ಸ್ವಾರಸ್ಯ. ನಿಮಗೆ ಶೀತ ಅಥವಾ ಜ್ವರ ಬಂದು ಮೂಗು ಕಟ್ಟಿಕೊಂಡಾಗ ನಿಮಗೆ ಬಾಯಿ ರುಚಿ ಇರುವುದಿಲ್ಲ. ಈ ವಿಷಯವನ್ನು ನೀವು ಗಮನಿಸಿರಬಹುದು. ಶೀತದಿಂದ ನನಗೆ ಆಹಾರವೇ ಸೇರುತ್ತಿಲ್ಲ, ಯಾವುದೂ ರುಚಿ ಇಲ್ಲ ಅನಿಸುತ್ತೆ, ಉಪ್ಪಿನಕಾಯಿಯಲ್ಲಿ ಊಟ ಮಾಡಬೇಕು ಎಂಬೆಲ್ಲಾ ಮಾತುಗಳು ನಿಮ್ಮ ಗೆಳೆಯರ ಅಥವಾ ಸಂಬಂಧಿಕರ ಬಾಯಿಯಿಂದ ಕೇಳಿರುತ್ತೀರಿ. ಇದನ್ನು ಹೇಗೆ ಪ್ರಮಾಣೀಕರಿಸಬಹುದು? ನಿಮಗೊಂದು ಸರಳ ಪ್ರಯೋಗ ಹೇಳುತ್ತೇನೆ. ಹಾಗೆ ಮಾಡಿ ನೋಡಿ. ಆಗ ನಿಮಗೆ ರುಚಿ ತಿಳಿಯಲು ನಾಲಗೆಯ ಜೊತೆ ಮೂಗು ಅಗತ್ಯ ಎಂದು ತಿಳಿಯುತ್ತದೆ.

ಒಂದು ಆಲೂಗಡ್ಡೆ, ಒಂದು ಸೇಬು ತೆಗೆದುಕೊಂಡು ಸಣ್ಣದಾಗಿ ಕತ್ತರಿಸಿಕೊಂಡಿರಿ. ಆ ಸಣ್ಣ ಸಣ್ಣ ತುಂಡುಗಳನ್ನು ಒಂದೇ ತಟ್ಟೆಯಲ್ಲಿ ಹಾಕಿ. ನಿಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಥವಾ ಕಣ್ಣು ಮುಚ್ಚಿಕೊಂಡು ಆ ತಟ್ಟೆಯಿಂದ ಒಂದು ತುಂಡು (ಯಾವುದೂ ಆಗುತ್ತದೆ) ತೆಗೆದುಕೊಡಲು ನಿಮ್ಮ ಸ್ನೇಹಿತರಿಗೆ ಅಥವಾ ಮನೆಯವರಿಗೆ ಹೇಳಿ. ಹಾಂ, ತಿನ್ನುವ ಮೊದಲು ನಿಮ್ಮ ಮೂಗನ್ನು ಗಟ್ಟಿಯಾಗಿ ಒತ್ತಿ ಹಿಡಿಯಿರಿ. ಮೂಗಿನ ಮೂಲಕ ಗಾಳಿ ಒಳಗೆ ಹೋಗಬಾರದು. ಈಗ ಆ ತುಂಡನ್ನು ತಿನ್ನಿ. ತಿಂದ ಬಳಿಕ ನಾಲಗೆಯ ಮೇಲೆ ರುಚಿ ಉಳಿಯದಿರಲು ಒಂದು ಲೋಟ ನೀರು ಕುಡಿಯಿರಿ. ಇಲ್ಲವಾದರೆ ನೀವು ಮೂಗು ಸಡಿಲಗೊಳಿಸಿದಾಗ ನಿಮಗೆ ರುಚಿ ತಿಳಿಯುತ್ತದೆ. ಮತ್ತೆ ಮೂಗನ್ನು ಬಿಗಿಯಾಗಿ ಒತ್ತಿ ಹಿಡಿದು ಮತ್ತೊಂದು ತುಂಡು (ಮೊದಲು ಕೊಟ್ಟದ್ದಕ್ಕಿಂತ ಭಿನ್ನ) ಕೊಡಲು ಹೇಳಿ. ಎರಡೂ ಸಲ ತುಂಡುಗಳನ್ನು ಕೊಡುವಾಗ ನಿಮ್ಮ ಸ್ನೇಹಿತರು ಯಾವುದರ ತುಂಡು ಎಂದು ಹೇಳಬಾರದು. ಮತ್ತೆ ನೀರು ಕುಡಿಯಿರಿ. 

ಎರಡೂ ತುಂಡುಗಳನ್ನು ತಿಂದ ಬಳಿಕ ನಿಮಗೆ ಮೊದಲು ತಿಂದ ತುಂಡಿಗೂ ಮತ್ತೆ ತಿಂದ ತುಂಡಿಗೂ ಯಾವುದೇ ರುಚಿಯ ವ್ಯತ್ಯಾಸ ತಿಳಿಯುವುದಿಲ್ಲ. ಎರಡರ ರುಚಿ (ನಿಮಗೆ ಅನಿಸಿದಂತೆ) ಒಂದೇ ರೀತಿಯಾಗಿರುತ್ತದೆ. ಮೂಗು ಹಿಡಿದುಕೊಂಡು ತಿಂದರೆ ಬಟಾಟೆ ಯಾವುದು ಆಪಲ್ ಯಾವುದು ತಿಳಿಯುವುದೇ ಇಲ್ಲ. ಏನಿದರ ಕಾರಣ? ಬನ್ನಿ ತಿಳಿದುಕೊಳ್ಳುವ.

ನಮ್ಮ ದೇಹದಲ್ಲಿ ರುಚಿ ತಿಳಿಯುವ ಹಾಗೂ ವಾಸನೆ ಗ್ರಹಿಸುವ ಇಂದ್ರಿಯಗಳು ಬಹಳ ಪಕ್ಕ ಪಕ್ಕವೇ ಇರುತ್ತದೆ. ನಾವು ಇದಕ್ಕಾಗಿ ನಮ್ಮ ನಾಲಗೆ ಹಾಗೂ ಮೂಗನ್ನು ಬಳಸಿಕೊಳ್ಳುತ್ತೇವೆ. ನಮ್ಮ ನಾಲಗೆಯಲ್ಲಿ ರುಚಿಯನ್ನು ಗ್ರಹಿಸುವ ಸಾವಿರಾರು ರಂಧ್ರಗಳಿವೆ. ಇವನ್ನು ನಾವು ಸ್ವಾದ ಕೇಂದ್ರ (ಟೇಸ್ಟ್ ಬಡ್ಸ್) ಎಂದು ಕರೆಯುತ್ತೇವೆ. ಇದರ ಕೆಲಸವೇ ನಾವು ತಿನ್ನುವ ಆಹಾರದ ರುಚಿಯನ್ನು ಗ್ರಹಿಸುವುದು. ನಾವು ಆಹಾರವನ್ನು ಬಾಯಿಯೊಳಗೆ ಹಾಕಿದಾಗ ಅದು ಸಣ್ಣ ಸಣ್ಣ ತುಂಡುಗಳಾಗಿ ಬಾಯಿಯಲ್ಲಿರುವ ಲಾಲಾರಸದೊಡನೆ ಮಿಶ್ರವಾಗುತ್ತದೆ. ಆ ಸಮಯದಲ್ಲಿ ಈ ಸ್ವಾದ ಕೇಂದ್ರಗಳು ನಾವು ತಿನ್ನುತ್ತಿರುವ ಆಹಾರದ ರುಚಿಯನ್ನು ಗ್ರಹಿಸುತ್ತವೆ. ತಕ್ಷಣ ಅದು ಮೆದುಳಿಗೆ ಸಂದೇಶ ರವಾನಿಸುತ್ತದೆ. ಟೇಸ್ಟ್ ಬಡ್ ಗಳು ಐದು ಬಗೆಯ ರುಚಿಯನ್ನು ಗ್ರಹಿಸುತ್ತವೆ. ಸಿಹಿ, ಖಾರ, ಉಪ್ಪು, ಹುಳಿ ಮತ್ತು ಕಹಿ. 

ನಮ್ಮ ಮೂಗಿನಲ್ಲೂ ಇದೇ ಬಗೆಯ ತಾಂತ್ರಿಕತೆ ಅಡಗಿದ್ದು, ಅದು ನಾವು ತಿನ್ನುವ ವಸ್ತುವಿನ ಸುವಾಸನೆ ಅಥವಾ ದುರ್ವಾಸನೆಯನ್ನು ಗುರುತಿಸುತ್ತದೆ. ನಾವು ಆಹಾರವನ್ನು ಮೂಸಿ ನೋಡಿದಾಗ, ಆಹಾರದ ಕೆಲವು ಅಣುಗಳು ನಮ್ಮ ಮೂಗಿನ ಒಳಗೆ ಹೋದಾಗ ಆಘ್ರಾಣಿಸುವ ಇಂದ್ರಿಯಗಳು ಆ ವಾಸನೆಯನ್ನು ಗ್ರಹಿಸಿಕೊಳ್ಳುತ್ತವೆ. ಆ ಸಂದೇಶವನ್ನು ತಕ್ಷಣ ಮೆದುಳಿಗೆ ರವಾನಿಸುತ್ತದೆ. ಮೂಗು ಹಾಗೂ ನಾಲಿಗೆಯ ಇಂದ್ರಿಯಗಳು ನೀಡಿದ ಸಂದೇಶಗಳ ಮೇರೆಗೆ ನಮ್ಮ ಮೆದುಳು ವಾಸನೆ ಹಾಗೂ ರುಚಿಯನ್ನು ಗುರುತಿಸುತ್ತದೆ. ಇದು ಸಹಜವಾಗಿ ಏಕಕಾಲದಲ್ಲಿ ನಡೆಯುವ ಪ್ರಕ್ರಿಯೆ.

ನಾವು ಮೇಲಿನ ಪ್ರಯೋಗ ಮಾಡಿದಾಗ ಮೂಗು ಬಂದ್ ಆಗಿರುವಾಗ ನಮಗೆ ತಿನ್ನುವ ವಸ್ತುವಿನ ವಾಸನೆ ತಿಳಿಯುವುದಿಲ್ಲ. ಆ ಕಾರಣದಿಂದ ರುಚಿಯನ್ನು ಗ್ರಹಿಸಲು ನಮ್ಮ ಮೆದುಳು ವಿಫಲವಾಗುತ್ತದೆ. ಆ ಕಾರಣದಿಂದಲೇ ನಮಗೆ ಆಲೂಗಡ್ಡೆ ಹಾಗೂ ಸೇಬು ಇದರ ರುಚಿಯಲ್ಲಿನ ವಿವಿಧತೆ ತಿಳಿಯುವುದಿಲ್ಲ. ಕೇವಲ ರುಚಿಯ ಸಂದೇಶ ದೊರೆತು ವಾಸನೆಯ ಸಂದೇಶ ದೊರೆಯದೇ ಹೋದರೆ ನಮ್ಮ ಮೆದುಳು ರುಚಿಯನ್ನು ಗ್ರಹಿಸಲಾರದು. ರುಚಿ ಒಂದೇ ರೀತಿಯಾಗಿದ್ದರೂ ವಾಸನೆ ಬೇರೆ ಬೇರೆ ಆಗಿರುತ್ತದೆ. ವಾಸನೆಯನ್ನು ಮೂಗು ಗ್ರಹಿಸಿ ಮೆದುಳಿಗೆ ಸಂದೇಶ ರವಾನಿಸದ ಕಾರಣ ನಾವು ಏನು ತಿನ್ನುತ್ತಿದ್ದೇವೆ ನಮಗೆ ತಿಳಿಯುವುದಿಲ್ಲ.

ರುಚಿ ಹಾಗೂ ವಾಸನೆಯನ್ನು ನಾವು ಗ್ರಹಿಸುವುದರಿಂದ ನಮ್ಮ ಆಹಾರ ಸ್ವಾದಿಷ್ಟವೆನಿಸುತ್ತದೆ. ಆಹಾರವನ್ನು ಸರಿಯಾಗಿ ಪಚನವಾಗುವಂತೆ ಲಾಲಾರಸವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ನಾವು ತಿಂದ ಆಹಾರವು ಸರಿಯಾಗಿ ಜೀರ್ಣವಾಗುತ್ತದೆ. ನಾವು ತಿನ್ನುವ ಆಹಾರ ಚೆನ್ನಾಗಿದೆಯೇ ಅಥವಾ ಹಾಳಾಗಿದೆಯೇ ಎಂದು ತಿಳಿದುಕೊಳ್ಳಬಹುದು. ನಮಗೆ ಶೀತವಾದಾಗ ನಮ್ಮ ಮೂಗು ಕಟ್ಟಿಕೊಂಡು ನಮಗೆ ರುಚಿಯನ್ನು ಗುರುತಿಸಲು ಆಗುವುದಿಲ್ಲ. ಈ ಕಾರಣದಿಂದಲೇ ನಮಗೆ ತಿಂದ ತಿಂಡಿ ರಸಹೀನ ಅನಿಸುವುದು. ಈಗ ಗೊತ್ತಾಯಿತಲ್ಲ, ರುಚಿಯನ್ನು ಗ್ರಹಿಸಲು ನಾಲಗೆಯ ಜೊತೆ ಮೂಗೂ ಅವಶ್ಯಕವೆಂದು !

ಚಿತ್ರ: ಇಂಟರ್ನೆಟ್ ತಾಣ