ಆಹಾರದ ಸ್ಥಳಾಂತರ

ಆಹಾರದ ಸ್ಥಳಾಂತರ

ಸಸ್ಯಗಳು ನೀರನ್ನು ಹೇಗೆ ಅಷ್ಟೊಂದು ಎತ್ತರಕ್ಕೆ ಸಾಗಿಸುತ್ತವೆ ಎಂಬುದು ಒಂದು ವಿಸ್ಮಯ. ಇದು ವಿಜ್ಞಾನವಲ್ಲ ವಿಸ್ಮಯ ಎಂಬುದು ನಿಮಗೆ ತಿಳಿದಿರಬಹುದು ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಸಸ್ಯ ಯಾವುದೇ ಯಂತ್ರೋಪಕರಣಗಳ ಸಹಾಯವಿಲ್ಲದೇ ಯಾವುದೇ ವೆಚ್ಚ ವಿಲ್ಲದೇ ನೀರನ್ನು ಅಷ್ಟು ಎತ್ತರಕ್ಕೆ ಎತ್ತುವುದು ವಿಜ್ಞಾನವೇ ಆಗಿದ್ದರೆ ನಮ್ಮ ವಿಜ್ಞಾನಿಗಳಿಗೆ ಏಕೆ ಇನ್ನೂ ಇಂತಹ ವೆಚ್ಚ ರಹಿತ ಪಂಪುಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎನ್ನುವುದು ಪ್ರಶ್ನೆಯೇ. ಇನ್ನೂ ಒಂದು ವಿಷಯ ಹೇಳಬೇಕೆಂದರೆ ಕ್ಸೈಲಮ್ ಪ್ಯಾರೆಂಕೈಮಾ ಒಂದನ್ನು ಹೊರತುಪಡಿಸಿ ಉಳಿದವು ಅಂದರೆ ಟ್ರೆಕೀಡ್ಸ್, ನೀರ್ಗೊಳವೆಗಳು ಮತ್ತು ಕ್ಸೈಲಮ್ ಸ್ಲೀರೆಂಕೈಮಾಗಳು ಸತ್ತ ಕೋಶಗಳು. ನಾವು ನೀರು ಸಾಗಾಟಕ್ಕೆ ಬಳಸುವ ಪೈಪುಗಳು ಆಧಾರಕ್ಕೆ ಕೊಡುವ ದಬ್ಬೆಗಳು ನಿರ್ಜೀವ ವಸ್ತುಗಳಾಗಿರುತ್ತವಲ್ಲ ಹಾಗೆ. ಸತ್ತ ಅಂಗಾಂಶಗಳನ್ನಿಟ್ಟುಕೊಂಡು ಅವುಗಳ ಕಾರುಬಾರು ನೋಡಿ.

ಇವತ್ತು ಆಹಾರ ಸಾಗಾಟ ಹೇಗಾಗುತ್ತದೆ ನೋಡೋಣ. ಸಸ್ಯಗಳು ಸೂರ್ಯನ ಬೆಳಕಿನಲ್ಲಿ ಆಹಾರವನ್ನು ತಯಾರಿಸುತ್ತವೆ. ಎಲೆ ತನ್ನ ಉಸಿರಾಟಕ್ಕೆ ಬೇಕಾದ ಗ್ಲುಕೋಸ್ ಅನ್ನು ಬಳಸಿಕೊಳ್ಳುತ್ತದೆ. ಹೆಚ್ಚುವರಿ ಆಹಾರವನ್ನು ಸಂಗ್ರಹಿಸಬೇಕು. ಸಸ್ಯಗಳಲ್ಲಿ ಗ್ಲುಕೋಸ್ ಪಿಷ್ಟದ ರೂಪದಲ್ಲಿ ಬೇರು, ಎಲೆ, ಬೀಜ ಮತ್ತು ಕಾಂಡಗಳಲ್ಲಿ ಸಂಗ್ರಹಿಸುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಎಲೆಗಳಲ್ಲಿ, ಕಬ್ಬು, ಶುಂಠಿ ಮತ್ತು ಆಲೂಗಡ್ಡೆ ಕಾಂಡಗಳಲ್ಲಿ, ಕ್ಯಾರಟ್, ಮೂಲಂಗಿ ಮತ್ತು ಗೆಣಸು ಬೇರುಗಳಲ್ಲಿ ಹಾಗೂ ನೆಲಗಡಲೆ, ಹೆಸರು ಮತ್ತು ಉದ್ದು ತಮ್ಮ ಬೀಜಗಳಲ್ಲಿ ಆಹಾರ ಸಂಗ್ರಹಿಸುತ್ತವೆ. ಇವುಗಳೆಲ್ಲ ಎಲೆಯಿಂದ ಕೆಳಗಡೆ ಇರುವುದರಿಂದ ಆಹಾರ ಮೇಲಿನಿಂದ ಕೆಳಗಡೆ ಸಾಗಿಸಲ್ಪಡುತ್ತವೆ ಅಂದರೆ ಗುರುತ್ವ ಬಲದ ನೇರದಲ್ಲಿ. ಗಡ್ಡೆಗಳು, ಬೀಜಗಳು ಮೊಳಕೆಯೊಡೆಯುವಾಗ ಎಳೆಯ ಎಲೆ ಮತ್ತು ಕಾಂಡಗಳಿಗೆ ಅಂದರೆ ಗುರುತ್ವ ಬಲದ ವಿರುದ್ಧ ನೇರದಲ್ಲಿ. ಅಂದರೆ ಇವು ಕ್ಸೈಲಮ್ ಗಳಿಗಿಂತ ಭಿನ್ನವಾಗಿ ಗುರುತ್ವ ಬಲದ ನೇರದಲ್ಲಿ ಹಾಗೂ ವಿರುದ್ಧ ನೇರದಲ್ಲಿ ಆಹಾರವನ್ನು ಸಾಗಿಸಬೇಕು. ಆದ್ದರಿಂದ ಸಸ್ಯಗಳಲ್ಲಿ ಆಹಾರದ ಸಾಗಾಣಿಕೆ (transportation) ಎಂದು ಕರೆಯುವುದಿಲ್ಲ ಬದಲಾಗಿ ಆಹಾರದ ಸ್ಥಳಾಂತರ (translocation) ಎನ್ನುತ್ತೇವೆ. 

ಆಹಾರ ಸಾಗಿಸುವ ಅಂಗಾಶ ಫ್ಲೋಯಂ. ಈ ಅಂಗಾಂಶ ಜರಡಿ ನಳಿಕೆ (sieve tube), ಜರಡಿ ತಟ್ಟೆ (sieve plate), ಸಂಗಾತಿ ಕೋಶಗಳು (companion cells) ಮತ್ತು ಫ್ಲೋಯಂ ಪ್ಯಾರೆಂಕೈಮಾಗಳನ್ನು ಹೊಂದಿವೆ. ಕ್ಸೈಲಮ್ ನಲ್ಲಿ ನೀರ್ಗೊಳವೆಗಳು ಸತ್ತು ಖಾಲಿಯಾಗಿರುವ ಹಾಗೆ ಜರಡಿ ಕೋಶಗಳಲ್ಲ. ಇವುಗಳ ನಡುವಿನ ಗೋಡೆ ತೂತಾಗಿ ಜರಡಿಯಾಗಿದ್ದರೂ ಕೂಡಾ ಅದರೊಳಗಿನ ಕೋಶದ್ರವ (cytoplasm) ಸೋರಿ ಹೋಗಿರುವುದಿಲ್ಲ. ಅಂದರೆ ಫ್ಲೋಯಂ ಜೀವಂತ ಅಂಗಾಂಶ. ಗ್ಲುಕೋಸ್ ಇದೇ ದ್ರವದಲ್ಲಿ ಕರಗಿ ದ್ರಾವಣ ರೂಪದಲ್ಲಿ ಸಾಗಿಸಲ್ಪಡುತ್ತದೆ. ಆದರೆ ಒಂದರ ಮೇಲೊಂದರಂತೆ ಇಟ್ಟ ತಳ ತೂತಾದ ಮಡಿಕೆಗಳಲ್ಲಿ ಮೇಲಿನ ಮಡಿಕೆಗಳು ಖಾಲಿಯಾಗುತ್ತಾ ಬರುತ್ತವೆ. ಆದರೆ ಫ್ಲೋಯಂ ವಿಷಯದಲ್ಲಿ ಹಾಗಲ್ಲ. ಎಲ್ಲ ಮಡಿಕೆಗಳ ತಳ ಬಾಯಿ ತೂತೇ ಆದರೆ ಎಲ್ಲಾ ಮಡಿಕೆಗಳಲ್ಲಿ ತುಂಬಾ ನೀರಿರುತ್ತದೆ.

ಇರಲಿ ಬಿಡಿ ಸ್ಥಳಾಂತರದ ಬಗ್ಗೆ ವಿಜ್ಞಾನ ಹೇಗೆ ಹೇಳುತ್ತದೆ ನೋಡೋಣ. ಈ ಜರಡಿ ನಾಳಗಳಿಗೆ ಹೆಚ್ಚುಳಿದ ಗ್ಲುಕೋಸ್ ದ್ರಾವಣ ರೂಪದಲ್ಲಿ (aqueous solution) ವರ್ಗಾವಣೆಯಾಗುತ್ತದೆ. ಇಲ್ಲಿ ಪ್ರಬಲವಾದ ಸಕ್ಕರೆಯ ದ್ರಾವಣವಿದ್ದರೆ ಸಂಗಾತಿ ಕೋಶಗಳಲ್ಲಿ ತಿಳಿಯಾದ ನೀರಿರುತ್ತದೆ. ಈ ನೀರು ಈಗ ಜರಡಿ ಕೋಶಗಳೊಳಗೆ ಹರಿಯುತ್ತದೆ. ಇದು ಮಾವಿನ ಮಿಡಿ ಭರಣಿಗೆ ಹಾಕಿ ಉಪ್ಪು ಹಾಕಿದಾಗ ಮಾವಿನ ಮಿಡಿಯೊಳಗಿನ ನೀರು ಹೊರ ಬರುತ್ತದಲ್ಲ ಹಾಗೆ. ಸಂಗಾತಿ ಕೋಶ ತನ್ನಲ್ಲಿ ಕಡಿಮೆಯಾದ ನೀರನ್ನು ಪಕ್ಕದ ಕೋಶಗಳಿಂದ ಪಡೆಯುತ್ತದೆ. ಈ ಜರಡಿ ಕೋಶ ತುಂಬುವುದರಿಂದ ಅದರೊಳಗಿನ ಒತ್ತಡ ಹೆಚ್ಚಿ ಅದು ನಿಧಾನವಾಗಿ ಕೆಳಗಿನ ಜರಡಿ ಕೋಶದೊಳಗೆ ಜಿನುಗುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತದೆ ಎನ್ನುತ್ತದೆ ವಿಜ್ಞಾನಿಗಳ ವಾದ. ಅದರೆ ಇದು ಮುಂದುವರಿಯುತ್ತಾ ಹೋದಂತೆ ದ್ರಾವಣ ದುರ್ಬಲವಾಗುತ್ತಾ ಸಾಗಿ ಅಭಿಸರಣ ಕ್ರಿಯೆ (osmosis) ನಿಂತು ಹೋಗಬೇಕಲ್ಲ. ಇದು ನಿಲ್ಲದಿರಬೇಕಾದರೆ ನೀರು ಪುನಃ ಹೀರಲ್ಪಡಬೇಕು. ಆದರೆ ಹೇಗೆ, ಯಾರಿಂದ ಮತ್ತು ಯಾವಾಗ ಹೀರಲ್ಪಡುತ್ತದೆ ಎಂದು ಗೊತ್ತಿಲ್ಲ. ಮೊಳಕೆಯೊಡೆಯುವಾಗ ನೀರು ಹೀರಲ್ಪಟ್ಟು ಅದರಲ್ಲಿ ಗ್ಲುಕೋಸ್ ಕರಗುತ್ತದೆ. ಇದು ಕೆಳಗಡೆ ಉಂಟು ಮಾಡುವ ಒತ್ತಡ ಆಹಾರದ ದ್ರಾವಣವನ್ನು ಮೇಲಕ್ಕೆತ್ತುತ್ತದೆ ಎಂದು ಹಿಂದಿನಂತೆ ವಾದ ಮಂಡಿಸಬೇಕಾಗುತ್ತದೆ ಅಷ್ಟೇ. ಅಂದರೆ ಸಂಗಾತಿ ಕೋಶಗಳು ಆಹಾರ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಸ್ಪಷ್ಟ. ಆದರೆ ಆ ನಿಖರ ವಿವರಣೆ ನಮ್ಮ ಬಳಿ ಇಲ್ಲ. ಇವುಗಳ ಕಾರ್ಯ ವೈಖರಿಯನ್ನು ನೀವು ವಿವರಿಸುವುದಾದರೆ ಸಾಗಾಣಿಕೆಯ ಚಿದಂಬರ ರಹಸ್ಯ ಬೇಧಿಸಿದ ಹಾಗೆ. ನೀವು ಇದನ್ನು ಸವಾಲಾಗಿ ಸ್ವೀಕರಿಸುತ್ತೀರಿ ತಾನೆ?

-ದಿವಾಕರ ಶೆಟ್ಟಿ ಎಚ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ