ಆಹಾ ಇದು ಎಂಥಾ ಮದುವೆಯಯ್ಯಾ !
ದಿನ ಪೂರ ದುಡಿದ ಮೈಗೆ ಸ್ವಲ್ಪವಾದರೂ ವಿಶ್ರಾಂತಿ ದೊರಕಲೆಂದು ಮತ್ತು ನಾಳೆಗೆ ಮತ್ತೆ ಶ್ರಮದ ದುಡಿಮೆಗೆ ತಯಾರಾಗಲೆಂದು ಕೊಂಚ ಹಾಗೇ ಕಣ್ಣು ಮುಚ್ಚಿದೆ. ಜೋಂಪು ಹತ್ತಲು ಅವಕಾಶವೇ ಆಗಲಿಲ್ಲ. ಕಾರಣ ನನ್ನ ಯಜಮಾನ ಮಾರನೆಯದಿನ ನಡೆಸುವ ಯಾವುದೋ ಹಬ್ಬಕ್ಕೆ ಜೋರಿಯ ತಯಾರಿ ನಡೆಸಿದ್ದ. ನಾನು ಅವನ ಮನೆಯ ಹಿಂದೆಯೇ ವಾಸಿಸುತ್ತಿದ್ದರಿಂದ ಅವರ ಮನೆಯಲ್ಲಿ ನಡೆಯುತ್ತಿರುವ ಗಲಾಟೆ, ದಡಾ ಬಡಾ ಸದ್ದು ಎಲ್ಲಾ ಕೇಳುತ್ತಿತ್ತು. ಇನ್ನು ನಿದ್ದೆಯ ಮಾತೆಲ್ಲಿ? ಅಲ್ಲಿ ನಡೆಯುತ್ತಿದ್ದ ತಯಾರಿಯಿಂದ, ಕೇಳಿಸುತ್ತಿದ್ದ ಮಾತುಗಳಿಂದ ಅವನ ಮನೆಯಲ್ಲಿ ಯಾರದೋ ಮದುವೆ ನಡೆಯಲಿದೆ ಎಂದು ನನಗೆ ಗುಮಾನಿಯಾಯಿತು. ಆದರೆ ನನಗೆ ಉತ್ತರ ದೊರಕದಿದ್ದ ಒಂದು ಪ್ರಶ್ನೆ ಎಂದರೆ, ಯಾರದ್ದು ಮದುವೆ ಎಂದು. ಏಕೆಂದರೆ ನನ್ನ ಯಜಮಾನನಿಗೆ ಮಕ್ಕಳೇ ಇಲ್ಲ. ನೂರಕ್ಕೆ ನೂರು ಜುಗ್ಗನಾದ ಅವನು ಬೇರೊಬ್ಬರ ಮದುವೆಯಲ್ಲಿ ಒಂದೈದು ರೂಪಾಯಿಯನ್ನೂ ಉಡುಗೊರೆ ಕೊಡದೆ ಕೇವಲ ಕೊಟ್ಟಿದ್ದನ್ನು ಬುಟ್ಟಿ ಬುಟ್ಟಿ ತುಂಬಿಕೊಂಡು ತರುತ್ತಿದ್ದನೇ ಹೊರತು, ಬೇರೆಯವರ ಮದುವೆಯನ್ನು ತಾನು ನಿಂತು ಮಾಡುವುದು ಕನಸಿನಲ್ಲೂ ಸಾಧ್ಯವಿಲ್ಲ. ಅವನದೇ ಮದುವೆಯೂ ಸಾಧ್ಯವಿಲ್ಲದ ಮಾತು. ಕಾರಣ ಅವನದಾಗಲೇ ಮದುವೆಯಾಗಿದೆ, ಅಲ್ಲದೆ ಅವನ ಹೆಂಡತಿಯಂತೂ ದೊಡ್ಡ ಘಟವಾಣಿ. ಹೀಗಿರುವಾಗ ಅವನಿಗೆ ಎರಡನೇ ಸಂಬಂಧಕ್ಕೆ ಹೆಣ್ಣು ಕೊಡಲು ಬರುವವರಾದರೂ ಯಾರು? ಅಲ್ಲದೆ ಕೊಂಚವಾದರೂ ಬುದ್ದಿ ಇರುವ ಯಾವ ಹೆಂಗಸೂ (ಹುಡುಗಿಯಲ್ಲ) ಅವನನ್ನು ಮದುವೆಯಾಗಲು ಸಿದ್ದವಾಗುವುದಿಲ್ಲ ಎಂಬುದು ಶತಸ್ಸಿದ್ದ. ಹಾಗೇನಾದರೂ ಒತ್ತಾಯಿಸಿದರೆ ಅವಳು ಖಂಡಿತಾ ನೇಣು ಹಾಕಿಕೊಂಡು ಸಾಯುವುದರಲ್ಲಿ ಅನುಮಾನವೇ ಇಲ್ಲ. ಪರಿಸ್ಥಿತಿ ಹೀಗಿರುವಾಗ, ಅವನ ಮನೆಯಲ್ಲಿ ಯಾರಿಗೆ ಮದುವೆ? ಈ ಯಕ್ಷ ಪ್ರಶ್ನೆ ನನ್ನ ಮುಂದೆ ಕುಣಿಯುತ್ತಾ ನಿದ್ದೆಯನ್ನು ಮತ್ತಷ್ಟು ಕೆಡಿಸಿತ್ತು.
ನಮ್ಮ ಸಮಾಜದಲ್ಲಿ (ಯಜಮಾನನದ್ದಲ್ಲ) ಮದುವೆಯು ಬಹಳ ಚಿಕ್ಕ ವಯಸ್ಸಿನಲ್ಲಿಯೇ ನಡೆದು ಹೋಗುತ್ತದೆ. ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ವರ ವಧುವಿನ ಅನ್ವೇಷಣೆ ಶುರು ಹಚ್ಚಿದನೆಂದೇ ಹೇಳಬೇಕು. ವಧುವೂ ವರನ ನಿರೀಕ್ಷೆಯಲ್ಲಿ ಕುಣಿಯುತ್ತಲೇ (ಕಾಲುಗಳನ್ನು ಬಡಿಯುತ್ತಲೇ) ಇರುತ್ತಾಳೆ. ಆದರೆ ಮದುವೆಯು ಯಾವ ಆಡಂಬರ, ಕುಣಿತ ಮೆರೆತಗಳಿಲ್ಲದೆ ನಿಶ್ಯಬ್ಧವಾಗಿಯೇ ನಡೆದುಹೋಗುತ್ತದೆ. ಅದೊಂದು ಕೇವಲ ಗಂಡು-ಹೆಣ್ಣಿನ ಸ್ವಂತ ವಿಚಾರವಷ್ಟೆ. ಈ ಗಲಾಟೆ ಗದ್ದಲ ಇವು ಯಾವುದರಲ್ಲೂ ನಮಗೆ ನಂಬಿಕೆಯೇ ಇಲ್ಲ. ಅಷ್ಟೇ ಅಲ್ಲ, ಈ ತಾಳಿ ಕಟ್ಟುವುದು, ಹೆಣ್ಣನ್ನು ಗಂಡಿಗೆ ಜೀವನ ಪೂರ್ತಿ ಗಂಟು ಹಾಕುವುದು, ಗಂಡನ್ನು ಹೆಣ್ಣಿನ ರಕ್ಷಕ (?)ನನ್ನಾಗಿಸುವುದು ಇವು ಯಾವುದೂ ನಮ್ಮ ಪದ್ದತಿಯಲ್ಲಿಲ್ಲ. ಇದನ್ನು ನೀವು ಐರೋಪ್ಯ ಪದ್ದತಿಯೆಂದೂ ನೀವು ಕರೆಯಬಹುದು. ಆದರೆ ತಲ ತಲಾಂತರದಿಂದ ಭಾರತದಲ್ಲಿ ನಾವು ನಡೆಸುತ್ತಿರುವುದು ಇದೇ ವಿಧಿ ವಿಧಾನ. ನೀವು ನಮ್ಮನ್ನು ಮೂರ್ಖರೆಂದು ಕರೆಯಲ್ಲಿ ನನ್ನ ಯಾವ ಅಡ್ಡಿಯೂ ಇಲ್ಲ. ಹೀಗಿರುವಾಗ, ಯಾವುದಾದರೂ ಮದುವೆಯ ಪ್ರಸ್ತಾಪ ಬಂದರೆ "ಇಲ್ಲ" ಎಂದು ನಾನು ಎಂದೂ ಹೇಳುವುದಿಲ್ಲ. ಈಗಾಗಲೇ ನಾನು ಬಹಳಷ್ಟು ಹುಡುಗಿಯರನ್ನು ನೋಡಿದ್ದೆನೆ. ಆದರೆ ಯಾವುದೂ ನನ್ನ ಮನಸ್ಸಿಗೆ ಹಿಡಿಸಿಲ್ಲ. ಈಗ ಸಧ್ಯಕ್ಕೆ ಒಂದು ತಾಸು ನಿದ್ರೆ ಹೋಗುವುದೇ ಸರಿ ಎನ್ನಿಸಿ, ಪ್ರಯತ್ನಪೂರ್ವಕವಾಗಿ ಕಣ್ಣು ಮುಚ್ಚಿದೆ.
ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲೋ "ದಡ್" ಎಂಬ ಸದ್ದು ಕೇಳಿಸಿ, ನನಗೆ ಎಚ್ಚರವಾಗತೊಡಗಿತು. ಯಾರೋ ಯಾರನ್ನೋ ಹೊಡೆಯುತ್ತಿರುವುದು ನನ್ನ ಅರಿವಿಗೆ ಬರತೊಡಗಿತು. ಆದರೆ ಇಂತಹ ಪ್ರಸಂಗಗಳು ನಮ್ಮ ಕಾಲನಿಯಲ್ಲಿ ಸರ್ವೇಸಾಧಾರಣವಾದ್ದರಿಂದ ನಾನು ಹೆಚ್ಚು ಯೋಚಿಸದೆ ಮತ್ತೆ ನಿದ್ರಿಸಲು ಪ್ರಯತ್ನಿಸಿದೆ. ಆದರೆ ಉಹುಂ, ಆ ಶಬ್ಧ ಇನ್ನೂ ಹತ್ತಿರವಾಗತೊಡಗಿತು. ನನ್ನ ಕಣ್ಣು ಬಲವಂತವಾಗಿ ಬಿಡತೊಡಗಿತು. ನನ್ನ ಪಕ್ಕದಲ್ಲೇ ಮಲಗಿ ನಿದ್ರಿಸುತ್ತಿರುವ ನನ್ನ ಬಂಧುಗಳನ್ನೇನಾದರೂ ಯಾರಾದರೂ ಹೊಡೆಯುತ್ತಿರುವರೋ ಎನ್ನಿಸಿ, ನಿದ್ರೆ ಬಂದ ದಾರಿಯಲ್ಲೇ ಹಿಂದಕ್ಕೆ ಸರಿಯತೊಡಗಿತು. ಏಕೋ ಬೆನ್ನಮೇಲೆ ನೋವು ಕಾಣಿಸಿಕೊಂಡು ಪೂರ್ಣ ಎಚ್ಚರವಾದಮೇಲೆ ತಿಳಿದದ್ದು ನನ್ನ ಯಜಮಾನ ನನ್ನನ್ನು ಬಾರುಕೋಲಿನಿಂದ ಹೊಡೆಯುತ್ತಾ ಎಚ್ಚರಗೊಳಿಸಲು ಪ್ರಯತ್ನಿಸುತ್ತಿದ್ದ. ದಡಕ್ಕೆಂದು ಎದ್ದು ನಿಂತೆ. ಆಹಾ, ಎಂತಹ ಸುಪ್ರಭಾತ! ಯಜಮಾನನ ಮುಖವನ್ನು ನೋಡಿದೆ. ಅವನ ಮುಖದಲ್ಲಿ ಮಂದಹಾಸ ಹಾಗು ನನ್ನ ನಿದ್ರೆಯ ಬಗ್ಗೆ ಕೋಪ ಎರಡೂ ಡೂಯೆಟ್ ಆಡುತ್ತಿದ್ದವು. ಒಂದು ವಿಶೇಷವೆಂದರೆ, ಅವನು ನನ್ನ ಮೇಲೆ ಕೆಲಸದ ಹೊರೆ ಹೊರಿಸಲಿಲ್ಲ. ಬದಲಾಗಿ ಹತ್ತಿರದಲ್ಲೇ ಇದ್ದ ಬೀದಿ ನಲ್ಲಿಯ ಬಳಿಗೆ ನನ್ನನ್ನು ಬಲವಂತದಿಂದ ಎಳೆದುಕೊಂಡು ಹೋದ. ಬಟ್ಟೆ ಸೋಪನ್ನು ಉಜ್ಜಿ ನನ್ನ ಮೈಯನ್ನು ತೊಳೆಯತೊಡಗಿದ. ತೆಂಗಿನ ನಾರು ನನ್ನ ಮೈಮೇಲಿನ ಕೊಳೆಯನ್ನು ತೆಗೆ (ಹೆರೆ)ಯಲು ತೊಡಗಿತು. ಸ್ನಾನ ಮುಗಿದಮೇಲೆ ನನ್ನನ್ನು ದರದರನೆ ಅವನ ಮನೆಯ ಮುಂಭಾಗಕ್ಕೆ ಎಳೆದುಕೊಂಡು ಹೋಗಿ ಒಂದಾನೊಂದು ಕಾಲದಲ್ಲಿ ಬೆಳಿಯಾಗಿದ್ದ ಮಾಸಲು ಬಟ್ಟೆಯಿಂದ ನನ್ನ ಮೈಯನ್ನು ಚೆನ್ನಾಗಿ ಒರೆಸಿದ. ಹೊಸ ಬಟ್ಟೆಯ ತುಂಡೊಂದನ್ನು ತಂದು ನನ್ನ ಕೊರಳಿಗೆ ಮಾಲೆಯಂತೆ ಕಟ್ಟಿದ. ಚೆಂಡು ಹೂವಿನ ಹಾರವನ್ನು ತಂದು ನನ್ನ ಕೊರಳಿಗೆ, ಹೊಟ್ಟೆಗೆ ಮತ್ತು ಕಾಲುಗಳಿಗೆ ಸುತ್ತಿ ಅಲಂಕರಿಸಿದ. ಏನೋ ಹಾಡನ್ನು ಗುಣುಗುಣಿಸುತ್ತಲೇ ಇದ್ದ. ಅವನ ಹೆಂಡತಿಯನ್ನು ಕರೆದು ನನ್ನ ಹಣೆಗೆ ಕುಂಕುಮ ಅರಿಶಿನದ ತಿಲಕಗಳನ್ನು ಇಟ್ಟು ಕೈಮುಗಿದ. ಕಣ್ಣು ಮುಚ್ಚಿ ಏನೋ ಪ್ರಾರ್ಥನೆ ಮಾಡಿದ. ನನಗೆ ಸಖೇದಾಶ್ಚರ್ಯವಾಗತೊಡಗಿತು. ಅಂದು ನಾನು ಆವರ ಮನೆಯ ವಿ.ಐ.ಪಿ.ಯಾಗಿ ಕಾಣಿಸತೊಡಗಿದೆ.
ನಂತರ ಸ್ವಲ್ಪ ಹೊತ್ತಿನಲ್ಲಿಯೇ ಒಬ್ಬ ಪೂಜಾರಿ ಕಾಲಿರಿಸಿದ. ಬ್ಯಾಂಡ್ ಸೆಟ್ಟಿನವರ ನಾದವೂ ಕೇಳಿಬಂತು. ನನ್ನ ಬಳಿಯಲ್ಲಿ ಬಂದು ನಿಂತಿದ್ದ ಎರಡು ಹದಿ ಹರೆಯದ ಪಡ್ಡೆ ಹುಡುಗರು ನನ್ನ ಕಿವಿಯಲ್ಲಿ "ಲೇಯ್, ನೀನೇ ಲಕ್ಕಿ ಕಣೋ, ನಮಗೆ ಇನ್ನೂ ಹುಡುಗಿಯರಕಡೆ ಕಣ್ಣು ಹಾಯಿಸಲೂ ಅವಕಾಶವಾಗಿಲ್ಲ, ನಿನಗಾಗಲೇ ಮದುವೆ. ವಿಶ್ ಯೂ ಆಲ್ ದಿ ಬೆಸ್ಟ್ ಎಂಡ್ ಹ್ಯಾಪಿ ಮ್ಯಾರಿಯೇಜ್" ಎಂದರು. ಅರೆ! ಇದೆಲ್ಲಾ ಏನು, ನನ್ನ ಯಜಮಾನ ನನಗೆ ಒಂದು ಮಾತನ್ನೂ ಹೇಳದೆ ನನ್ನ ಮದುವೆ ನಡೆಸುತ್ತಿದ್ದಾನೆ! ಇದಲ್ಲವೇ ಪ್ರಕೃತಿ ವಿಚಿತ್ರ. ಆಗಲಿ, ಆದದ್ದೆಲ್ಲಾ ಒಳಿತೇ ಆಯಿತು ಎಂದು ದಾಸರು ಎಂದೋ ಹೇಳಿದ್ದಾರೆ. ದೇವರಿದ್ದಾನೆ, ಮದುವೆಯೂ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದಲ್ಲವೇ. ಆದರೆ ನನಗೆ ಈಗ ಈ ಭೂಮಿಯೇ ಸ್ವರ್ಗವಾಗಿ ಕಾಣತೊಡಗಿತು.
ಅಷ್ಟರಲ್ಲಿಯೇ ಅಲ್ಲಿಗೆ ಒಬ್ಬ ಲೋಕಲ್ ಪುಡಾರಿಯ ಆಗಮನವಾಯಿತು. ನನ್ನ ಯಜಮಾನ ಓಡಿಹೋಗಿ ಬಗ್ಗಿ ಬಗ್ಗಿ ಸಲಾಮು ಹೊಡೆಯುತ್ತಾ ಅವನನ್ನು ಬರಮಾಡಿಕೊಂಡ. "ಸಾರ್, ಮದುವೆ ವರ ಸಿದ್ದವಾಗಿದ್ದಾರೆ (ನನಗೆ ಬಹುವಚನ ಪ್ರಯೋಗ?), ವಧುವಿನ ಕಡೆಯವರು ವಧುವನ್ನು ಆಗಲೇ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುವುದಾಗಿ ಸಮಾಚಾರ ಬಂತು, ನಾವಿನ್ನು ಹೊರಡೋಣವೇ? " ಎಂದ. ಆ ಪುಡಾರಿ, ಅವನ ಸಹಚರರುಗಳೆಲ್ಲಾ ನನ್ನ ಮುಂದೆ ಬಂದು ಅಡ್ಡಬಿದ್ದು ನಮಸ್ಕರಿಸಿ ನನ್ನ ಯಜಮಾನನಿಗೆ ಹೊರಡಲು ಹೇಳಿದರು. ಈ ದಿಬ್ಬಣದೊಂದಿಗೆ ನನ್ನ "ಭರಾತ್" ಸಾಗತೊಡಗಿತು. ಓಲಗ ಮೊಳಗಿಸುತ್ತಾ, ತಮಟೆ ಬಾರಿಸುತ್ತಾ, ಪಡ್ಡೆ ಹುಡುಗರು ಕುಣಿಯುತ್ತಾ, ಕೂಗುತ್ತಾ, ಸಿನಿಮಾದ ಹಾಡನ್ನು ಮೈಕಿನಲ್ಲಿ ಹಾಡಿಸುತ್ತಾ ದಿಬ್ಬಣ ಮುಂದುವರೆದಂತೆಲ್ಲಾ ನನ್ನ ಮೈ ನವಿರೇಳುತ್ತಿತ್ತು. ಒಂದು ಕೊರತೆಯೆಂದರೆ, ನನ್ನ ನೆಂಟರಿಷ್ಟರು ಯಾರೂ ಇಲ್ಲ. ನಾನು ಗಂಭೀರತೆಯಿಂದ ಮನೆಯಿಂದ ಯಜಮಾನನೊಡನೆ ಹೊರಟಾಗ, ನನ್ನ ಬಳಗದವರ ಕುಡಿನೋಟ, ಅದರಲ್ಲಿದ್ದ ಈರ್ಷೆ, ಮೆಚ್ಚುಗೆ ಇತ್ಯಾದಿಗಳೆಲ್ಲಾ ನೆನಪಿಗೆ ಬಂದಿತು. ನನ್ನ ಅದೃಷ್ಟವನ್ನು ಹೊಗಳಿಕೊಳ್ಳುತ್ತಾ ಹೆಜ್ಜೆ ಹಾಕುತ್ತಿದ್ದೆ. ಅರ್ಧ ಗಂಟೆಯ ನಂತರ ನಾವು ವಿವಾಹ ಸ್ಥಳವನ್ನು ತಲಪಿದೆವು. ವಧುವಿನ ಕಡೆಯವರು ಆಗಲೇ ಅಲ್ಲಿ ಜಮಾಯಿಸಿದ್ದರು. ಅವರ ಕಡೆಯ ಪುಡಾರಿ, ನಮ್ಮ ಕಡೆಯ ಪುಡಾರಿ ಇಬ್ಬರೂ ಸೇರಿಕೊಂಡು ಇನ್ನೂ ದೊಡ್ಡ ಪುಡಾರಿಯನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದರು. ಇಂತಹ ವೈಭವೋಪೇತ ವಿವಾಹ ಮಹೋತ್ಸವವನ್ನು ನಾನು ಕನಸಿನಲ್ಲಿಯೂ ನೆನೆಸಿರಲಿಲ್ಲ. ನನ್ನ ಯಜಮಾನನ ಬಗೆಗೆ ನನ್ನಲ್ಲಿ ಅತೀವ ಗೌರವ ಮೂಡತೊಡಗಿತು. ಇಷ್ಟು ದಿನ ಅವನ ಬಗೆಗೆ ನಾನು ಇಟ್ಟುಕೊಂಡಿದ್ದ ತಿರಸ್ಕಾರ ಭಾವನೆಯೆಲ್ಲಾ ನೀರಾಗಿ ಕರಗಿ ಕೊಚ್ಚಿಕೊಂಡು ಹೋಯಿತು. ಪಶ್ಚಾತ್ತಾಪದಿಂದ ನಾನೂ ಕರಗಿಹೋದೆ. ಆ ದೊಡ್ಡ ಪುಡಾರಿಯೂ ನನ್ನನ್ನು ವಧುವಿನೊಂದಿಗೆ ಜೊತೆಯಾಗಿ ನಿಲ್ಲಿಸಿ, ನಮಸ್ಕಾರ ಮಾಡಿದ. ಬಾಳೆ ಹಣ್ಣುಗಳನ್ನು ತಿನ್ನಲು ಕೊಟ್ಟ. ಸಿಪ್ಪೆಯೊಂದಿಗೆ ತಿಂದು ನನಗೆ ಅಭ್ಯಾಸವಾಗಿತ್ತಾದರೂ, ಈ ಸಂದರ್ಭದಲ್ಲಿ ಸಭಾ ಮರ್ಯಾದೆಯನ್ನು ನೆನೆದು, ಹಾಗೆಯೇ ತಿಂದೆ. ಅಲ್ಲದೆ, ಅರಿಶಿನ ಹಚ್ಚಿದ ಅನ್ನ, ಅರಿಶಿನ ಕುಂಕುಮಗಳಿಂದ ನಮ್ಮಿಬ್ಬರ ಸೇವೆ ನಡೆಯಿತು. ಅನ್ನ, ಕುಂಬಳಕಾಯಿ, ನಿಂಬೆ ಹಣ್ಣುಗಳನ್ನು ನಮ್ಮ ಭೋಜನಕ್ಕೆ ಇಟ್ಟರು. ಎಷ್ಟೊಂದು ರಾಜ ಮರ್ಯಾದೆ. ಗರ್ವದಿಂದ ವಧುವಿನ ಕಡೆಗೊಮ್ಮೆ ಕಣ್ಣು ಹಾಯಿಸಿದೆ. ಅವಳೂ ನನ್ನ ಕಡೆಗೆ ತಿರುಗಿದಾಗ ಕಣ್ಣು ಕಣ್ಣು ಬೆಸೆಯಿತು. ಪ್ರೀತಿ ಉಕ್ಕಿ ಬರತೊಡಗಿತು. ತಡೆಯಲಾಗದೆ ಪ್ರೀತಿಯಿಂದ ಅವಳ ಕೊರಳಿನ ಮೇಲೆ ನನ್ನ ಕೊರಳನ್ನಿಟ್ಟು ಶಾರೂಖ್ ಖಾನ್ ಮಾಧುರಿ ದೀಕ್ಷಿತ್ ಗೆ ಮಾಡುವಂತೆ ನಾನು ನೇವರಿಸಿದೆ. (ಆ ಚಿತ್ರವನ್ನು ನಾನು ಕೇವಲ ಪೋಸ್ಟರ್ ನಲ್ಲಿ ನೋಡಿದ್ದೆನೆನ್ನಿ!) ಖುಶಿಯಿಂದ ವಧು ಹಾಡು ಹೇಳಲು ಗಂಟಲು ಸರಿಮಾಡಿಕೊಂಡಳೋ ಇಲ್ಲವೋ, ಅವಳ ಯಜಮಾನ ಹಿಂದಿನಿಂದ ಅವಳಿಗೊಂದು ಲಾತಾ ಕೊಟ್ಟು, ಸುಮ್ಮನಿರಲು ಹೇಳಿದ. ನನಗೂ ಇವಳದ್ದು ಸ್ವಲ್ಪ ಅತಿ ಎನ್ನಿಸಿತೆನ್ನಿ. ಸರಿ, ಆಮೇಲೆ ಬುದ್ಧಿ ಹೇಳೋಣವೆಂದುಕೊಂಡೆ. ಆದರೂ ಅಷ್ಟು ಜನರೆದುರಿಗೆ ನನ್ನವಳನ್ನು ಅವಮಾನ ಪಡಿಸಿದ ಮಾವನಿಗೆ ತಕ್ಕ ಸಮಯ ನೋಡಿ ಮರ್ಯಾದೆ ಮಾಡುವ ನಿರ್ಧಾರ ಮಾಡಿದೆ.
ಪುರೋಹಿತರು ಮಂತ್ರ ಘೋಶಣೆಯೊಂದಿಗೆ ನಮ್ಮಿಬ್ಬ್ರ ಕೊರಳಿಗೆ ಹಾರ ಹಾಕಿದರು. ಅವರು ವಧುವಿಗೆ ತಾಳಿ ಕಟ್ಟಲು ಹೇಳಬಹುದೆಂದು ನಾನು ಯೋಚಿಸುವಷ್ಟರಲ್ಲಿಯೇ ತಾವೇ ತಾಳಿಯನ್ನು ನನಗೆ ಸೋಕಿಸಿದಂತೆ ಮಾಡಿ ತಾವೇ ಕಟ್ಟಿಬಿಟ್ಟರು ಮತ್ತು ನನ್ನನ್ನು ಸಮಾಧಾನ ಪಡಿಸಲೋ ಏನೋ ನನ್ನ ಬೆನ್ನಮೇಲೆ ಮೆಲ್ಲಗೆ ಸವರಿದರು. ನನಗೆ ಇದು ಒಂದು ಕೆಟ್ಟ ಶಕುನವೆನ್ನಿಸಿತು. ಗಂಡು ಹೆಣ್ಣಿಗೆ ತಾಳಿ ಕಟ್ಟುವ ಬದಲು ಪುರೋಹಿತರೇ ಕುಟ್ಟಿಬಿಡುವುದೆಂದರೇನು! ಇದರಿಂದಾಗಿ ಮಳೆ ಬೆಳೆ ಹಾನಿ ಗ್ಯಾರಂಟಿಯಲ್ಲವೇ? ಆ ವರುಣದೇವನೇ ಉತ್ತರ ಕೊಡಬೆಕು. ಆದರೂ ಮುಮ್ದೆ ಹೆಣ್ಣನ್ನು ನನ್ನ ಜೊತೆ ಕಳುಹಿಸುವ ಬದಲು ತಾನೇ ಕರೆದುಕೊಂಡು ಹೋಗುವ ಇಂತಹ ಅಸಂಬದ್ದ ಸಂಗತಿ ನಡೆಯಲಾರದೆಂದುಕೊಂಡು ಸಹಿಸಿಕೊಂಡೆ.
ಅಲ್ಲಿಗೆ ವಿವಾಹ ಮಹೋತ್ಸವದ ಕಾರ್ಯಕ್ರಮಗಳು ಮುಗಿದಿರಬೆಕು. ಬಂದವರೆಲ್ಲರಿಗೂ ಊಟ, ಉಪಚಾರ ನಡೆಯಿತು. ನಮ್ಮಿಬ್ಬರ ಫೋಟೋ ಕೂಡ ತೆಗೆಯಲಾಯಿತು. ಪುಡಾರಿಗಳು, ದೊಡ್ಡ ಪುಡಾರಿ ಮತ್ತಿತರ ಮರಿ ಪುಡಾರಿಗಳೆಲ್ಲಾ ನಮ್ಮ ಸುತ್ತಾ ನಿಂತು ಫೋಟೊ ತೆಗೆಸಿಕೊಂಡರು. ಪೇಪರಿನವರು, ಟಿವಿಯವರೂ ನಮ್ಮ ಮದುವೆಯನ್ನು ದಾಖಲಿಸಿಕೊಂಡರು. ಬಂದವರಲ್ಲಿ ಕೆಲವರಿತ್ತ ಉಡುಗೊರೆ, ಬಂದ ಹಣ ಎಲ್ಲವನ್ನೂ ನನ್ನ ಯಜಮಾನ ಬಾಚಿ ಬಾಚಿ ಗೋಣಿಚೀಲಕ್ಕೆ ತುಂಬಿಕೊಂಡ. ಎಲ್ಲರೂ ಹೊರಟಮೇಲೆ ಉಳಿದವರು ನಾವು ನವೆ. ಗಂಡು, ಹೆಣ್ಣು, ಅವಲ ಮತ್ತು ನನ್ನ ಯಜಮಾನರುಗಳು. ನಾನು ಅತೀವ ಸಂತೋಷದಿಂದ ನನ್ನವಳಿಗೆ ಕಿವಿ ಮಾತು ಹೇಳಬೇಕೆಂದಿರುವಷ್ಟರಲ್ಲಿಯೇ ನನ್ನ ಬೆನ್ನ ಮೇಲೆ ಯಜಮಾನನ ಚಾಟಿ ಏಟು ದಡಾರನೆ ಬಿತ್ತು. ನಡೆಯೋ ಲೇ ನಡಿ ಎಂದು ದರ ದರ ನನ್ನನ್ನು ಎಳೆದುಕೊಂಡು ಮನೆಯ ಕಡೆಗೆ ಹೊರಟ. ಇದೇ ಗತಿ ನನ್ನವಳದ್ದೂ ಆಯಿತು. ಮದುಚಂದ್ರದ ಮೋಹಕ ಕನಸಿನ ಅರಮನೆ ನಾನು ನೋಡನೋಡುತ್ತಿದ್ದಂತೆ ಇಸ್ಪೀಟ್ ಕಾರ್ಡಿನ ಅರಮನೆಯಂತೆ ಪತಪತನೆ ಉದುರಿ ಹೋಯಿತು.
ಮರುದಿನ ಪೇಪರಿನಲ್ಲಿ ನನ್ನ ವಿವಾಹದ ಬಗ್ಗೆ ಬಂದ ವರದಿಗಳು ನನ್ನಲ್ಲಿ ಅತ್ಯಂತ ರೋಷವನ್ನು ತಂದುಬಿಟ್ತಿತು. ಅಷ್ಟೂ ಪೇಪರುಗಳನ್ನು ಒಂದೇ ಗುಕ್ಕಿನಲ್ಲಿ ತಿಂದುಹಾಕಿಬಿಡೋಣ ಎನ್ನಿಸಿತು.
ಈಗ ನನ್ನ ಮುಂದೆ ನಿಂತು ನಗುತ್ತಿರುವ ಒಂದೇ ಪ್ರಶ್ನೆ "ಆಹಾ, ಎಂಥಾ ಮದುವೆಯಯ್ಯಾ, ಇದು ಎಂಥಾ ಮದುವೆಯಯ್ಯಾ"
ನಿಮಗೇನೆನ್ನಿಸುತ್ತದೆ?