ಆಹ್ಲಾದಕರ ಗಝಲ್ ಲೋಕ
೧.
ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ ಗೆಳತಿ
ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ
ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ
ನಿನ್ನೊಳಗಿನ ನಿನ್ನಂತೆ ಬದುಕುವ ಬದುಕಲ್ಲಿ ಮುತ್ತುಗದ ಮಂದಾರದಂತೆ ಹಾಡಿರುವೆ ಗೆಳತಿ
ನನ್ನೂರಿನ ಕಡಲಿನ ತೀರದಲ್ಲಿ ಅಲೆಮಾರಿಯಂತೆ ಸಂಚರಿಸುತ್ತಿರುವೆ ಗೊತ್ತು ಗುರಿಯಿಲ್ಲದಂತೆ
ನಿನ್ನೂರಿನ ವನಝರಿಗಳ ನಡುವೆ ಮನಕ್ಕೊಪ್ಪವ ರೀತಿಯೇ ಮಿಂದಿರುವೆ ಗೆಳತಿ
ನನ್ನವನೊಳಗಿನ ನೋವುಗಳೆಲ್ಲ ತೀರದ ಬಯಕೆಯೊಳಗಿಂದ ಚೆಲ್ಲಿದವುಗಳೆಂದು ಹೇಳುತ್ತಿರುವೆಯಂತೆ
ನಾನಾದರೂ ಬಕುತಿಯ ತೋರ್ಪಡಿಕೆಯಲ್ಲಿ ಸಾಗದೆ ಹುಸಿ ರಾಗವನು ಮರೆತಿರುವೆ ಗೆಳತಿ
ನಾನಿಲ್ಲದೆಯೇ ಈಶನ ಜೊತೆಯೇ ಇನ್ನುಳಿದ ದಾರಿಯ ಸವೆಸಬಹುದೆಂದಿದ್ದರೆ ನನ್ನಡ್ಡಿಯಿಲ್ಲವಂತೆ
ನೀನಿಲ್ಲದೆಯೇ ವರ್ಣನೆಯ ಮಾತುಗಳು ಬರಬಹುದೆಂದರೂ ನಿನಗಾಗಿಯೇ ಬಂದಿರುವೆ ಗೆಳತಿ
***
೨.
ಮನದ ಕಿಟಿಕಿಯದೂ ಮುಚ್ಚಿಹುದು ಗೆಳತಿ
ತನುವ ಬಾಗಿಲೊಳೂ ರೊಚ್ಚಿಹುದು ಗೆಳತಿ
ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆ ಏಕೆ
ಸುಡದಿರುವ ಬಿಸಿಲೂ ಚುಚ್ಚಿಹುದು ಗೆಳತಿ
ರಾತ್ರಿಯ ಕನಸುಗಳಲ್ಲಿ ನನಸೆಲ್ಲವು ಕಾಣಲೇಯಿಲ್ಲ
ಮಲಗಿರುವ ಹಾಸಿಗೆಯೂ ಕಚ್ಚಿಹುದು ಗೆಳತಿ
ತಂಪಾದ ಕೋಣೆಯೊಳೂ ಮೈಮನಗಳು ಬೆವರುತಿದೆ
ಬಯಕೆಯಿರದ ಬಂಧನವೂ ಬಿಚ್ಚಿಹುದು ಗೆಳತಿ
ಈಶನ ಹೃದಯದಾಳವೂ ಒಲವಿಲ್ಲದೆ ಚಂಚಲವಾಗಿದೆ
ರೂಪವಿಲ್ಲದ ಆತ್ಮವಿಂದೂ ಬೆಚ್ಚಿಹುದು ಗೆಳತಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ