ಆ ಲಯ ಈ ಲಯ

ಆ ಲಯ ಈ ಲಯ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ನೂಯಿ ಲಕೋಸಿ, ಕನ್ನಡಕ್ಕೆ : ನಟರಾಜ್ ಹೊನ್ನವಳ್ಳಿ
ಪ್ರಕಾಶಕರು
ಮಿಸ್ ರೀಡ್ ಬುಕ್ಸ್, (MIS READ BOOKS) ತುಮಕೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ, ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ ಹಿಂಸೆ, ಅದರ ವಿರುದ್ಧ ಹೋರಾಟದ ಇಕ್ಕಟ್ಟು-ಬಿಕ್ಕಟ್ಟುಗಳು, ಪರಿಣಾಮವಶಾತ್ ತನಗೊದಗಿಬಂದ ದೇಶಭ್ರಷ್ಟತೆ, ಗಡಿಪಾರು ಇತ್ಯಾದಿ ತಲ್ಲಣಗಳ ಕುದಿಯಲ್ಲಿ, ಕುಂದಣದಲ್ಲಿ ಮೂಡಿಬಂದ ಅಪರೂಪದ ಪ್ರತಿಭೆಯ ಫಲ ಲೂಯಿ ನಕೋಸಿಯ ಭರ್ಜರಿ ನಾಟಕ. ಇದನ್ನು ಕನ್ನಡದ ಖ್ಯಾತ ನಿರ್ದೇಶಕ, ರಂಗಕರ್ಮಿ, ಗೆಳೆಯ ನಟರಾಜ್ ಹೊನ್ನವಳ್ಳಿ ಅವರು ಯಶಸ್ವಿಯಾಗಿ ಕನ್ನಡಕ್ಕೆ ತಂದು ನಾಟಕ ರಚನೆ ಮತ್ತು ರಂಗಭೂಮಿಗೆ ಹೊಸಪ್ರೇರಣೆ ನೀಡಬಲ್ಲ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ನಾಟಕಗಳೆಂದರೆ ಬರೀ ನಾಟಕಗಳು. ಲೂಯಿ ನಕೋಸಿಯ ನಾಟಕಗಳು ಹಾಗಲ್ಲ, ಅದು ಏಕಕಾಲದಲ್ಲಿ ಕಲಾಕೃತಿ ಮಾತ್ರವಲ್ಲದೆ ನೈತಿಕ, ರಾಜಕೀಯ ಮತ್ತು ದಾರ್ಶನಿಕ ಒಡಂಬಡಿಕೆಯೂ ಆಗಿದೆ. ದೊಡ್ಡ ದೊಡ್ಡ ಪ್ರಶಸ್ತಿ ಬಂದ ಕಾರಣದಿಂದಲೇ ಆಡಂಬರದ ಅತಿ ಪ್ರಶಂಸೆಯನ್ನು ನಿರೀಕ್ಷಿಸುವ ಜಾಣ ಜಾಣೆಯರ ಕೃತಿಯಲ್ಲ. ಒಂದು ಚೂರಾದರೂ ನಮ್ಮ ಸಂದರ್ಭದಲ್ಲಿ ಮಾರ್ಗಪಲ್ಲಟವನ್ನು ಮಾಡಬಲ್ಲದು ಈ ಅಪರೂಪದ ನಾಟಕ.”

ಈ ನಾಟಕವನ್ನು ಅನುವಾದ ಮಾಡಿದ ನಟರಾಜ್ ಹೊನ್ನವಳ್ಳಿ ಇವರು ತಮ್ಮ ಅನುವಾದದ ಬಗ್ಗೆ, ಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…

“ಆ ಲಯ ಈ ಲಯ' ನಾಟಕವು ದಕ್ಷಿಣ ಆಫ್ರಿಕಾದ ನಾಟಕಕಾರ ಲೂಯಿ ನಕೋಸಿಯ 'ದ ರಿದಮ್ ಆಫ್ ವಾಯಲೆನ್ಸ್' ನಾಟಕದ ಕನ್ನಡ ಅನುವಾದ. ಈ ನಾಟಕ 1963ರಲ್ಲಿ ಲಂಡನ್ನಿನಲ್ಲಿ ಮೊದಲ ಬಾರಿ ರಂಗ ಪ್ರದರ್ಶನ ಕಂಡು, ನಂತರ 1964ರಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿತು. ಪ್ರಪಂಚದ ನಾಟಕ ಸಾಹಿತ್ಯದ ಜೊತೆಯಲ್ಲಿ ಈ ನಾಟಕವನ್ನು ವಿಶ್ಲೇಷಿಸಿಕೊಳ್ಳುವ ಅವಶ್ಯಕತೆಯಿದೆ. ತುಂಬಾ ವಿಶೇಷವಾದ 'ರಾಜಕೀಯ ವಾಸ್ತವವಾದಿ ನಾಟಕ' ಎಂದು ಕರೆಯಬಹುದಾದ ಈ ನಾಟಕದ ವಸ್ತು ತನ್ನ ಕಾಲಕ್ಕಿಂತ ಆಚೆಗೂ ವಿಸ್ತರಿಸಿಕೊಂಡಿದೆ. ಮೇಲ್ನೋಟಕ್ಕೆ ವಾಸ್ತವವಾದಿ ನಾಟಕದಂತೆ ಕಂಡರೂ, ಇಲ್ಲಿನ ನಾಟಕೀಯ ಕ್ರಿಯೆಗಳ ಮೂಲಕ ಸೃಷ್ಟಿಯಾಗುವ ರೂಪಕಗಳನ್ನು ಗಮನಿಸಿದರೆ ಸಂಕೇತವಾದಿ ನಾಟಕಗಳಿಗಿಂತ ಆಚೆಗೂ ಈ ನಾಟಕವನ್ನು ವಿವರಿಸಬಹುದು. ರಾಚನಿಕ ರೂಪ ಮತ್ತು ವಸ್ತು-ವಿಷಯದ ದೃಷ್ಟಿಯಿಂದ ಕೂಡ ಈ ನಾಟಕ ತುಂಬಾ ಸಂಕೀರ್ಣವಾಗಿದೆ. ಅಭಿನಯಿಸಲು ಸವಾಲಾಗಬಲ್ಲ ಸಂಕೀರ್ಣ ಪಾತ್ರಗಳಿವೆ. ರಾಜಕೀಯ ನಾಟಕಗಳಿಗೆ ಒಂದು ಮಾದರಿ ಎನ್ನುವಂತೆ ಇರುವ ಈ ನಾಟಕ ಮೂರು ಅಂಕಗಳ, ಎಂಟು ದೃಶ್ಯಗಳಲ್ಲಿ ಹರಡಿಕೊಂಡಿದೆ. ಈ ನಾಟಕ ಹುಸಿ ಮತ್ತು ತೆಳುವಾದ ವಾಸ್ತವವಾದಿ ನಾಟಕಗಳಿಗಿಂತ ತುಂಬಾ ಭಿನ್ನವಾದ ನಾಟಕ. ಸುಮಾರಾಗಿ ಸಂಜೆ ಐದರ ಹೊತ್ತಿಗೆ ಪ್ರಾರಂಭವಾಗುವ ನಾಟಕದ ಕ್ರಿಯೆಗಳು ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಉತ್ತುಂಗಕ್ಕೆ ತಲುಪಿ ಮುಗಿಯುವ ಹಾಗೆ ಈ ನಾಟಕವನ್ನು ವಿನ್ಯಾಸಗೊಳಿಸಲಾಗಿದೆ.

ಯೂರೋಪಿಯನ್ನರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ದಮನಕಾರಿ ವಸಾಹುತುಶಾಹಿ ಆಡಳಿತದ ಸಂದರ್ಭವನ್ನು; ಅದರಲ್ಲೂ ಕ್ರೂರ ವರ್ಣಭೇದ ನೀತಿಯನ್ನು ಹಿನ್ನೆಲೆಯಾಗಿರಿಸಿಕೊಂಡಿರುವ ಈ ನಾಟಕ, ಪ್ರಸ್ತುತ ಪ್ರಪಂಚದ ಹಲವು ರಾಷ್ಟ್ರ ಪ್ರಭುತ್ವಗಳು ನಡೆಸಿರುವ ಮತ್ತು ನಡೆಸುತ್ತಿರುವ ಹಿಂಸೆಗಳನ್ನೂ ಮತ್ತು ಪ್ರತಿಹಿಂಸೆಗಳನ್ನೂ ನೆನಪಿಸುತ್ತದೆ. ಜೊತೆಗೆ ಅದನ್ನು ಎದುರಿಸುವ ಪ್ರತಿಭಟನಾತ್ಮಕ ಮಾರ್ಗಗಳನ್ನು ಕೂಡ ಸೂಚಿಸುತ್ತದೆ. ಶತಮಾನಗಳ ಕಾಲ ಆಫ್ರಿಕಾ, ದುರಾಸೆಯ ಯೂರೋಪಿಯನ್ನರ ವಸಾಹತುಶಾಹಿ ಆಡಳಿತಕ್ಕೆ ಒಳಗಾಗಿ ಹೆಚ್ಚು ಜರ್ಜರಿತವಾಗಿದ್ದು ವರ್ಣಭೇದ ನೀತಿಯಿಂದಾಗಿ. ಈ ನೀತಿ ಸ್ಥಳೀಯರನ್ನೇ ಅಪರಿಚಿತರನ್ನಾಗಿಸಿ, ಜನಾಂಗಗಳನ್ನು ಕರಿಯರು ಮತ್ತು ಬಿಳಿಯರು ಎಂದು ಇಬ್ಬಾಗ ಮಾಡಿ, ಮೂಲನಿವಾಸಿಗಳನ್ನು ತಮ್ಮ ನೆಲದಿಂದ ಒಕ್ಕಲೆಬ್ಬಿಸಿ, ಅವರನ್ನು ಅನಾಗರಿಕರು ಎಂದು ಕರೆದು, ಅವರ ಸಂಪತ್ತನ್ನೇ ಕಸಿದು, ಅವರ ಅತ್ಯಂತ ಖಾಸಗಿ ವಿಷಯಗಳನ್ನು- ವಿವಾಹ, ಲೈಂಗಿಕತೆ ನಿರ್ಬಂಧಿಸಿದಂತಹ ಹಲವಾರು ಕಾರಣಗಳು ಪ್ರತಿಭಟನೆಗೆ, ಸ್ವಾತಂತ್ರ್ಯದ ಹೋರಾಟಕ್ಕೆ ದಾರಿಮಾಡಿಕೊಟ್ಟಿತು. ಪ್ರಮುಖವಾಗಿ ಯುವ ಜನರು ಪ್ರಭುತ್ವದ ವಿರುದ್ಧ ತೀವ್ರವಾದ ಪ್ರತಿರೋಧವನ್ನು ಒಡ್ಡಿದರು. ಹಿಂಸೆ, ಅಹಿಂಸೆಯ ಎರಡೂ ಮಾರ್ಗಗಳಲ್ಲಿ ಹೋರಾಟ, ಪ್ರತಿಭಟನೆ ನಡೆಯಿತು. ಈ ವಸ್ತುಸ್ಥಿತಿಯನ್ನೇ ನಾಟಕದಲ್ಲಿ ಎಲ್ಲ ಆಯಾಮಗಳಿಂದಲೂ ಚರ್ಚಿಸಲಾಗಿದೆ. ಆಫ್ರಿಕಾದ ವಸಾಹತುಶಾಹಿಯ ಇತಿಹಾಸದ ಉದ್ದಕ್ಕೂ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅನುಭವಿಸಿದ ಹಿಂಸೆಯ ದಾರಿಯನ್ನು ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ಈ ನಾಟಕ ಚಿತ್ರಿಸುತ್ತದೆ. ಪ್ರಭುತ್ವದ ಹಿಂಸೆಗೆ, ಹಿಂಸೆಯಿಂದಲೇ ಉತ್ತರಿಸಬೇಕು ಎಂದು ಪ್ರತಿಪಾದಿಸುವ ಗುಂಪು ಹಿಂಸಾಮಾರ್ಗಕ್ಕೆ ತನ್ನನ್ನು ಪೂರ್ಣ ಒಪ್ಪಿಸಿಕೊಳ್ಳಲಾಗದ ಮಾನಸಿಕ ಒದ್ದಾಟ ಮತ್ತು ಹಿಂಸೆಯ ಪಾಪಪ್ರಜ್ಞೆಯಿಂದ ನರಳುವ ಚಿತ್ರ ನಾಟಕದ ಉದ್ದಕ್ಕೂ ಚಿತ್ರಿತವಾಗಿದೆ. ಹಿಂಸೆ ಹಾಗೂ ಪ್ರತಿಹಿಂಸೆಯಿಂದ ಶೋಷಕ ಮತ್ತು ಶೋಷಿತರ ಮಾನಸಿಕ ಒದ್ದಾಟಗಳ ಚಿತ್ರಣ ನಾಟಕವನ್ನು ಊಹಿಸಲಾರದ ಎತ್ತರಕ್ಕೆ ಮುಟ್ಟಿಸುತ್ತದೆ. ಈ ಎಲ್ಲದರ ನಡುವೆ ಮುಗ್ಧ ಪ್ರೇಮ ಕಥಾನಕದ ದುರಂತ ಕೂಡ ಈ ನಾಟಕದ ಚೌಕಟ್ಟಿನಲ್ಲಿದೆ.

ವ್ಯಕ್ತಿ ಮತ್ತು ಸಿದ್ಧಾಂತಗಳ ನಡುವೆ ನಡೆಯುವ ಸಂಘರ್ಷ ಪ್ರಧಾನವಾಗಿ ಕಾಣುವ ಈ ನಾಟಕ ಪ್ರಾರಂಭವಾಗುವುದು ಪ್ರತಿಭಟನಾ ಗುಂಪನ್ನು ಹತ್ತಿಕ್ಕಲು ಜೋಹಾನ್ಸ್‌ ಬರ್ಗ್‌ನ ಪುರಭವನದ ನಿರೀಕ್ಷಣಾ ಕೊಠಡಿಯಲ್ಲಿ ಕಾಯುತ್ತಿರುವ ಇಬ್ಬರು ಗನ್‌ಧಾರೀ ಪೊಲೀಸರಿಂದ. ಅಲ್ಲಿನ ದೊಡ್ಡ ಕಿಟಕಿಯಿಂದಾಚೆಗೆ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಪ್ರತಿಭಟನೆಕಾರರು ಕೂಗುವ ಘೋಷಣೆಳಿಂದ ಅಧೀರರಾಗಿರುವ ಈ ಇಬ್ಬರು ಪೊಲೀಸರಿಗೆ, ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿದಷ್ಟೂ ಅವರೊಳಗಿನ ಹಿಂಸಾ ಪ್ರವೃತ್ತಿ ಜಾಸ್ತಿಯಾಗುತ್ತಾ ಹೋಗುತ್ತದೆ. ತಮ್ಮ ಗನ್‌ಗಳಿಂದ ಕರಿಯ ಜನರನ್ನು ಬೇಟೆಯಾಡಲು ಹಪಹಪಿಸುವ ಈ ಪೊಲೀಸರನ್ನು ಮುಂದುವರಿಯದ ಹಾಗೆ ತಡೆದಿರುವುದೇ ಈ ಶಾಂತಿಯುತ ಪ್ರತಿಭಟನೆ. ಈ ಎರಡೂ ಪಾತ್ರಗಳ ವರ್ತನೆಗಳನ್ನು ವಿಶೇಷವಾಗಿ ಗಮನಿಸಬೇಕು. ಕನಸು ಮತ್ತು ಎಚ್ಚರದ ಮಧ್ಯದ ಸ್ಥಿತಿಯಲ್ಲಿ ವರ್ತಿಸುವ ಬಿಳಿಯ ಜನಾಂಗದ ಈ ಪೊಲೀಸರು ತಮ್ಮ ಏಕತಾನತೆಯ ಕೆಲಸದಿಂದ ಬಳಲಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆಯತ್ತಿರುವ ಹೋರಾಟಗಳನ್ನು ನೋಡಿ, ಆ ಮುಖಂಡರ ಭಾಷಣಗಳನ್ನು ಕೇಳಿ ಅವರ ಪರವಾದ ನಿಲುವುಗಳಿಗೆ ಅವರಿಗೇ ಅರಿವಿಲ್ಲದೇ ಕೊಟ್ಟುಕೊಂಡಿದ್ದಾರೆ. ಪ್ರತಿಭಟನಾಕಾರರ ಅಹವಾಲುಗಳನ್ನು ಮೇಯರ್‌ಗೆ ಸಲ್ಲಿಸಲು ಬರುವ ವಿದ್ಯಾರ್ಥಿ ಪ್ರತಿನಿಧಿ ತುಲಾನ ಜೊತೆ ಪೊಲೀಸರು ವರ್ತಿಸುವ ರೀತಿ ಅವರ ಒಳಗಿನ ಹಿಂಸೆಯ ಭಯಾನಕ ಸ್ವರೂಪವನ್ನು ಅನಾವರಣ ಮಾಡುತ್ತದೆ. ಜೊತೆಗೆ ಸೂರ್ಯ ಮುಳುಗದ ವಸಾಹತುಶಾಹಿ ದೇಶದಲ್ಲಿ 'ಸೂರ್ಯ ಮುಳುಗಲಿ' ಎಂದು ಒಬ್ಬ ಪೊಲೀಸ್ ಆಶಿಸಿದರೆ; ಇನ್ನೊಬ್ಬ 'ಸೂರ್ಯ ಮುಳುಗದೆ' ಇರಲಿ ಎಂದು ಚರ್ಚಿಸುವ ಮೂಲಕ ಅಪ್ರಜ್ಞಾಪೂರ್ವಕವಾಗಿ ಅವರಲ್ಲೂ ಕೂಡ ಆಫ್ರಿಕಾ ವಿಮೋಚನೆಯಾಗಬೇಕು ಎಂಬ ಸೂಚನೆಗಳು ಸಿಗುತ್ತವೆ.

ಈ ನಾಟಕದ ಓದಿಗೆ ಸಹಾಯಕವಾಗುವ ಕೆಲವು ಟಪ್ಪಣಿಗಳನ್ನು ಪುಸ್ತಕದ ಕಡೆಯಲ್ಲಿ ಕೊಟ್ಟಿದ್ದೇನೆ. ಅದಕ್ಕೆ ಬೇಕಾದ ಮಾಹಿತಿಗಳನ್ನು ಅಂತರ್ಜಾಲದ ಕೆಲವು ಲೇಖನಗಳಿಂದ ನೆರವು ಪಡೆದಿರುವೆ. ಅನುಬಂಧ 2ರಲ್ಲಿ ಕೊಟ್ಟಿರುವ 'ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪ್ರಣಾಳಿಕೆ' ರಂಜಾನ್ ದರ್ಗಾ ಅವರ ಅನುವಾದವನ್ನು 'ಆಫ್ರಿಕಾ ಸಾಹಿತ್ಯ ವಾಚಿಕೆ' (ಪ್ರಕಾಶಕರು: ಕುವೆಂಪು ಭಾಷಾಭಾರತಿ) ಸಂಕಲನದಿಂದ ಪಡೆದಿರುವೆ. ಈ ನಾಟಕದ ಮೊದಲ ಪ್ರರ್ದಶನ ಮತ್ತು ನೀನಾಸಮ್ ತಿರುಗಾಟದ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ನಟ-ನಟಿಯರ, ತಂತ್ರಜ್ಞರ ವಿವರಗಳನ್ನೂ ಕೂಡ ಪುಸ್ತಕದ ಕಡೆಯಲ್ಲಿ ಮುದ್ರಿಸಿರುವೆ.

ಈ ನಾಟಕ ಅನುವಾದ ಪೂರ್ಣಗೊಂಡ ಕೂಡಲೇ ಎರಡು ವಿಭಿನ್ನ ರೀತಿಯ ರಂಗ ಪ್ರದರ್ಶನಗಳಾದವು. ಒಂದು: ಸಾಣೇಹಳ್ಳಿಯ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕಾ ನಾಟಕವಾಗಿ ಪ್ರದರ್ಶನವಾಗಿದ್ದು, ಎರಡು: ನೀನಾಸಮ್ ತಿರುಗಾಟಕ್ಕೆ ಈ ನಾಟಕವನ್ನು ಆಯ್ಕೆ ಮಾಡಿ ರಾಜ್ಯದಾದ್ಯಂತ ಐವತ್ತಕ್ಕೂ ಹೆಚ್ಚು ಪ್ರದರ್ಶನ ಕೊಡುತ್ತಿರುವುದು.” ೧೯೬ ಪುಟಗಳ ಈ ಕೃತಿಯು ನಾಟಕ ರೂಪದಲ್ಲಿದ್ದರೂ ಓದಲು ಹಿತಕಾರಿಯಾಗಿದೆ.