ಆ ವಿಜಯನಗರ
ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ ಕಾದಂಬರಿ ಎನ್ನುತ್ತಾರೆ ಲೇಖಕರು. ಯಾರು ವಿಜಯನಗರದ ವೀರಪುತ್ರ? ಎಂಬ ಕುತೂಹಲವೇ? ತಿಳಿಯಲು ಈ ಐತಿಹಾಸಿಕ ಕಾದಂಬರಿಯನ್ನು ಓದಿ.
ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ "ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು ಆಡಳಿತದಲ್ಲಿ ದಕ್ಷತೆಯಿಂದ ಮತ್ತು ಹಿಂದೆ ಎಂದೂ ಕಾಣದ ಮಹಾವೈಭವವನ್ನು ದೇಶ-ವಿದೇಶಗಳಲ್ಲಿ ಪ್ರಖ್ಯಾತಗೊಳ್ಳುವಂತೆ ಮಾಡಿದ್ದ ಏಕೈಕ ಸಾಮ್ರಾಜ್ಯವೇ ವಿಜಯನಗರ. ಎಲ್ಲವೂ ಎಲ್ಲಾ ಕಾಲದಲ್ಲಿ ಒಂದೇ ರೀತಿ ಇರುವುದಿಲ್ಲ. ಇದು ಪ್ರಾಯೋಗಿಕ ಸತ್ಯ. ಕ್ರಿ.ಶ.೧೫೬೫ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದ ನಂತರ, ಈ ಮಹಾ ಸಾಮ್ರಾಜ್ಯ ಸರ್ವನಾಶದತ್ತ ಸಾಗಿತು. ಇದರೊಂದಿಗೆ, ಸಿಂಹಾಸನದ ಅಧಿಕಾರಕ್ಕಾಗಿ ಸ್ವಾರ್ಥಿಗಳು ಮಹಾನ್ ದುಷ್ಟರು ವಂಚನೆಯ ಸಂಚಿನ ಆಟವಾಡಿದರು. ಸಿಂಹಾಸನದ ನಿಜವಾದ ಹಕ್ಕುದಾರನಿಗೆ ಪ್ರಾಣಾಪಾಯ ಆಗಾಗ ಎದುರಾಗುತ್ತಿತ್ತು. ಶೀತಲ ಕ್ರೌರ್ಯದ ಅಪಾಯಗಳೇನು? ಆ ದುಷ್ಟ ದುರಂಧರರು ಯಾರು? ಸಿಂಹಾಸನಕ್ಕೆ ಮತ್ತು ರಾಜ ಮನೆತನಕ್ಕೆ ನಿಷ್ಟರಾಗಿದ್ದ ವೀರಕಲಿ ಎಚ್ಚಮನಾಯಕ, ರಾಜ ಕುಟುಂಬದವರನ್ನು ಯಾವ ರೀತಿ ರಕ್ಷಣೆ ಮಾಡಿದ? ಯಾವ ಕುತಂತ್ರಕ್ಕೆ-ಪ್ರತಿ ತಂತ್ರ ಹೂಡಿ ಆ ರಾಜದ್ರೋಹಿಗಳನ್ನು ಪರಾಭವಗೊಳಿಸಿದ? ಇದು ಸ್ವಾಮಿನಿಷ್ಟನಾಗಿದ್ದ ಎಚ್ಚಮ ನಾಯಕನ ಸಾಹಸದ ಯಶೋಗಾಥೆಯಾಗಿದೆ."