ಆ ಹೆಜ್ಜೆ ಈ ಹೆಜ್ಜೆ

ಆ ಹೆಜ್ಜೆ ಈ ಹೆಜ್ಜೆ

ಕವನ

 

ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ

ಇಲ್ಲದ ಬೀಗದ ಕೈ ಹುಡುಕುವ

ಮೊದಲು ಸೆರೆಮನೆಯಾಗಿತ್ತೆಂದು

ಬಳಲುವದೇಕೆ

ಅಳುವದೇಕೆ

 

ಮುಂದೆ ತಲೆ ಎತ್ತಿ ನೋಡಿದಂತೆಲ್ಲ

ಇರುವಷ್ಟು ದಿನ ಈ ಕಡೆಯಿಂದ

ಆ ಕಡೆಯವರೆಗೆ

ನಾವಿಬ್ಬರೂ

ಇದ್ದ ಮೇಲೆ ಹರಟುವದೆಷ್ಟು 

ನೀ

ಬಳಿ ಇಲ್ಲವಾದ ಮೇಲೆ

 

ಎಲ್ಲರ ಪಾಡಂತೆ ನನ್ನದಾಗಿರಲಿಲ್ಲ

ನಿನ್ನಯವೇ ಎಲ್ಲ ಕಟ್ಟುಪಾಡುಗಳು

ಅಲ್ಲಲ್ಲಿ ಹೂತು ಹೋಗಿದ್ದರೂ

ನನ್ನನ್ನೇ ನಿರುಕಿಸುತ್ತ ನಿಟ್ಟುಸಿರಿನಲ್ಲೇ

ಅಳಿದುಳಿದ ಕನಸುಗಳನು

ಎಣಿಸುತ್ತ,

ಅಣಕಿಸುತ್ತ ಅತ್ತಿತ್ತ ಹರಡಿಕೊಂಡವು

 

ನಿನ್ನನ್ನೇ ತಿಳಿದುಕೊಳ್ಳಲು ಸಕಲ

ಪ್ರಯತ್ನಗಳೂ ಸಾಕಷ್ಟು ಇಷ್ಟಪಟ್ಟರೂ 

ನನ್ನನ್ನು ಕ್ಷಮಿಸುತ್ತೀ ಎಂಬ

ನಂಬಿಯೊಳಗಣ ಸಂಕಟವಿಲ್ಲದೇ

ನಾ ದೇಹ ತೊರೆಯಲು ಹಾತೊರೆಯುತ್ತಿದ್ದರೂ

ಕನಿಕರಿಸಿ ತೆರೆದುಕೊಳ್ಳುವ ಆ

ವೀರಗಲ್ಲುಗಳು ಸ್ಮರಣಾರ್ಥವನ್ನರ್ಥೈಸಿವುದಕ್ಕಾಗಿಯೇ

ಘಾಸಿಗೊಂಡ ಜೀವನದ

ಆ ಮತ್ತು ಈ ಹೆಜ್ಜೆಗಳು.....