ಇಂಗುಗುಂಡಿಗಳ ಇಂದ್ರಜಾಲ, ಅಂತರ್ಜಲದ ಅಂತರ್ಜಾಲ
ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದಲ್ಲಿರುವ ಹಲಸುಲಿಗೆ ಬಸ್ಸ್ಟಾಪ್ ತೋರಿಸುತ್ತಾ ಪ್ರಸನ್ನ ಹೇಳಿದರು, "ಇಲ್ಲಿಂದ ಸಕಲೇಶಪುರ ಬಹಳ ಹತ್ತಿರ, ಐದೇ ಕಿಲೋಮೀಟರ್". ಬೇಲೂರು ರಸ್ತೆ ಹಾದು, ಅದರಾಚೆಗಿನ ಪ್ರಸನ್ನರ ಐದೆಕ್ರೆ ರೊಬಸ್ಟ ಕಾಫಿ ತೋಟ ತಲಪಿದೆವು.
ಅಲ್ಲಿ ಇಳಿಜಾರಿಗೆ ಅಡ್ಡವಾಗಿ ಸಾಲುಸಾಲಾಗಿ ೧೦ ಅಡಿಗಳ ಅಂತರದಲ್ಲಿ ತೋಡಿದ್ದ ಇಂಗುಗುಂಡಿಗಳನ್ನು ತೋರಿಸಿದರು ಪ್ರಸನ್ನ. ಹೊಸದಾಗಿ ತೋಟ ಮಾಡಿದ ಆರಂಭದ ವರುಷಗಳಲ್ಲಿ ಮಳೆ ಬಂದಾಗ ಅವರ ತೋಟದಿಂದ ಮಳೆನೀರು ರಭಸದಿಂದ ತೊರೆಯಾಗಿ ಹೊರಕ್ಕೆ ಹರಿಯುತ್ತಿತ್ತು. ಈಗ ಮಳೆ ಬಂದರೆ ಒಂದು ಹನಿ ನೀರೂ ಹೊರಕ್ಕೆ ಹರಿದು ಹೋಗುತ್ತಿಲ್ಲ. "ಇದು ಇಂಗುಗುಂಡಿಗಳ ಇಂದ್ರಜಾಲ" ಎನ್ನುತ್ತಲೇ ಪ್ರಸನ್ನ ಅದರ ಗುಟ್ಟು ರಟ್ಟು ಮಾಡಿದರು. ಜೂನ್ನಲ್ಲಿ ಮಳೆ ಶುರು ಆಗುವಾಗ, ಇಂಗುಗುಂಡಿಗಳ ಕಸಕಡ್ಡಿ ತೆಗೆದು, ಅವನ್ನು ನೀರಿಂಗಿಸಲು ತಯಾರು ಮಾಡಬೇಕು. ನವಂಬರ್ನಲ್ಲಿ ಇಂಗುಗುಂಡಿಗಳಿಗೆ ಪುನಹ ಕಸಕಡ್ಡಿ ತುಂಬಿ ಅವುಗಳಿಂದ ನೀರು ಆವಿಯಾಗದಂತೆ ಮಾಡಬೇಕು. ಇದರ ಪೇಟೆಂಟ್ ತಮ್ಮ ಹಳೆಯ ತಲೆಮಾರುಗಳ ಹಿರಿಯರದ್ದು ಎನ್ನಲು ಮರೆಯಲಿಲ್ಲ ಪ್ರಸನ್ನ.
ರೊಬಸ್ಟ ಕಾಫಿ ತೋಟದ ಗುಡ್ಡವಿಳಿದಾಗ ಕಂಡದ್ದು ವಿಸ್ತಾರವಾದ ಹತ್ತೆಕ್ರೆ ಸಮತಟ್ಟು ಪ್ರದೇಶ. ಪ್ರಸನ್ನ ಅದನ್ನು ಖರೀದಿಸುವಾಗ ಅದು ಭತ್ತದ ಗದ್ದೆಯಾಗಿತ್ತು. ಈಗ ಅಲ್ಲಿ ಅಡಿಕೆ ಗಿಡಗಳು.
ನಡೆಯುತ್ತ ಮುಂದೆ ಸಾಗಿ ನಾವು ತೋಟದ ಅಂಚಿಗೆ ಬಂದೆವು. ಅಲ್ಲಿ ದೊಡ್ಡ ಕೆರೆ. ಅದರಲ್ಲಿ ಹತ್ತಡಿ ನೀರು. ಹಳೆಯ ದಿನಗಳನ್ನು ನೆನೆಯುತ್ತಾ ಕೇವಲ ಇಪ್ಪತ್ತು ದಿನಗಳಲ್ಲಿ ಆ ಕೆರೆ ತೋಡಿಸಿದ್ದನ್ನು ಪ್ರಸನ್ನ ನೆನಪು ಮಾಡಿಕೊಂಡರು. "ಇಲ್ಲಿ ಮನೆ ಕಟ್ಟುವ ಮುಂಚೆನೇ ಕೆರೆ ತೋಡಿಸಿದೆ. ನೋಡಿದ್ರಲ್ಲ, ನನ್ನ ತೋಟದ ನಡುವೆ ಬೇಲೂರು ರಸ್ತೆ ಹಾದು ಹೋಗ್ತದೆ. ಅದರ ಎರಡೂ ಬದಿ ನನ್ನ ಈ ಗುಡ್ಡದ ಜಮೀನು. ಇದ್ರಲ್ಲಿ ಕಾಫಿ ಗಿಡ ಬೆಳೆಸೋದಕ್ಕೆ ನೀರು ಬೇಕೇ ಬೇಕು. ಎಲ್ಲಿಂದ ತರೋದು ನೀರು? ಮಳೆನೀರನ್ನೇ ಸಂಗ್ರಹಿಸಬೇಕಾಗಿತ್ತು. ಅದಕ್ಕಾಗಿ ಕೆರೆ ತೋಡಿಸಿದ್ದು. ಪ್ರೋಕ್ಲೈನ್ ಮೆಷೀನ್ ತರಿಸಿ, ಇಪ್ಪತ್ತೇ ದಿನದಲ್ಲಿ ಈ ಕೆರೆ ಮಾಡಿಸಿದೆ. ನನಗೆ ಖರ್ಚಾದದ್ದು ೨ ಲಕ್ಷ ೮೦ ಸಾವಿರ ರೂಪಾಯಿ. ಒಂದು ಮಾತಂತೂ ನಿಜ, ಕೆರೆ ತೋಡಿಸಿದ್ದರಿಂದ ಈ ತೋಟ ಆಯ್ತು" ಎಂದು ವಿವರಿಸಿದರು ಪ್ರಸನ್ನ.
ಆ ಕೆರೆಯ ಉದ್ದ ೧೫೦ ಅಡಿ, ಅಗಲ ೧೫೦ ಅಡಿ, ಆಳ ೨೦ ಅಡಿ. ಅದರಿಂದ ನೀರೆತ್ತಲು ೧೦ ಹೆಚ್ಪಿ ಡೀಸಿಲ್ ಪಂಪಿದೆ. ಮೇ ತಿಂಗಳ ತನಕ ಅದರಿಂದ ಹೇಗೋ ನಿಭಾಯಿಸುತ್ತಾರೆ. ಮಳೆಗಾಲದಲ್ಲಿ ತನ್ನ ಜಮೀನಿನಿಂದ ಹರಿದು ಬರುವ ನೀರನ್ನೆಲ್ಲ ಆ ಕೆರೆಗೇ ತಿರುಗಿಸಿ ಬಿಡುತ್ತಾರೆ ಪ್ರಸನ್ನ. ಕೆರೆಯಿಂದ ನೀರು ಹಾಯಿಸಲು ತೋಟದ ಉದ್ದಗಲದಲ್ಲಿ ನೆಲದಡಿ ಪೈಪ್ ಹಾಯಿಸಿದ್ದಾರೆ. ಆ ಪೈಪ್ ಜಾಲದಲ್ಲಿ ಅಲ್ಲಲ್ಲಿ ಔಟ್ಲೆಟ್ ಇರಿಸಿದ್ದಾರೆ. ಅವಕ್ಕೆ ಸ್ಪ್ರಿಂಕ್ಲರ್ ಜೋಡಿಸಿ ತೋಟಕ್ಕೆ ನೀರು ಹಾಯಿಸುತ್ತಾರೆ.
ನೆಲದಡಿಯ ಪೈಪಿನ ಜಾಲಕ್ಕೆ ಒಂದು ಕೊಳವೆಬಾವಿಯಿಂದ ಮತ್ತು ಒಂದು ತೆರೆದ ಬಾವಿಯಿಂದ ನೀರು ಪಂಪ್ ಮಾಡುವ ವ್ಯವಸ್ಥೆ ಇದೆ. ಕೊಳವೆಬಾವಿಯಿಂದ ನೀರೆತ್ತಲು ಸಬ್ಮರ್ಸಿಬಲ್ ಪಂಪ್. ಆರಂಭದ ೩ ವರುಷಗಳಲ್ಲಿ ದಿನವೂ ಕೊಳವೆಬಾವಿಯಿಂದ ನೀರೆತ್ತಿ ಕೆರೆಗೆ ಬಿಡುತ್ತಿದ್ದರು ಪ್ರಸನ್ನ. ಆದರೆ ಕಳೆದ ೩ ವರುಷಗಳಿಂದ ಹಾಗೆ ಮಾಡಿಲ್ಲ. ಯಾಕೆಂದು ಕಾರಣ ಕೇಳುವ ಮುನ್ನ ಪ್ರಸನ್ನ ಹೇಳಿದ್ದು, "ಯಾಕೆಂದರೆ ನೆಲದಾಳದ ನೀರು ದೋಚಬಾರದು. ಅದು ನಮ್ಮ ಆಪತ್ಧನ"
ಮಣಿಪಾಲದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಬೆಂಗಳೂರಿನಲ್ಲಿ ಇಪ್ಪತ್ತು ವರುಷ ಪ್ರಿಂಟಿಂಗ್ ಪ್ರೆಸ್ ನಡೆಸಿದವರು ಪ್ರಸನ್ನ ಎಮ್. ಬಿಟ್ಟೇಶ್ವರ. ಕೊನೆಗೆ ಅದೆಲ್ಲ ಸಾಕೆಂದು ಸಕಲೇಶಪುರದ ಹತ್ತಿರ ೨೦ ಎಕ್ರೆ ಜಮೀನು ಖರೀದಿಸಿ, ಹಳ್ಳಿಗೆ ಬಂದು ನೆಲೆಸಿದವರು. ಹಾಗಾಗಿ ಅವರಿಗೆ ಗೊತ್ತು ನೀರಿನ ಬೆಲೆ, ಅಂತರ್ಜಲದ ಬೆಲೆ. ನಮಗೆಲ್ಲ ಅದು ಎಂದು ಗೊತ್ತಾದೀತು?