ಇಂಗ್ಲೀಷ್-ಕನ್ನಡ ನಿಘಂಟು
ಗೂಗಲ್ ಡೂಡಲ್ ಬಹುಮಾನ ಪುರುಪ್ರತಾಪನಿಗೆ
ಮಕ್ಕಳ ದಿನದಂದು ಗೂಗಲ್ ಅಂತರ್ಜಾಲ ತಾಣದಲ್ಲಿ ಕಾಣಿಸಿಕೊಳ್ಳುವ ಲೋಗೋವನ್ನು ನಿರ್ಧರಿಸಲು ಗೂಗಲ್ ಭಾರತದ ಮಕ್ಕಳಿಗಾಗಿ ಸ್ಪರ್ಧೆ ನಡೆಸಿತ್ತು.ನವಂಬರ್ ಹದಿನಾಲ್ಕರಂದು ಗೂಗಲ್ ತಾಣದಲ್ಲಿ ಪ್ರದರ್ಶಿತವಾದ ಚಿತ್ರ ಗುರ್ಗಾಂವಿನ ಪುರು ಪ್ರತಾಪ್ ಸಿಂಗ್ ಎಂಬ ಬಾಲಕನದ್ದು. ಈ ಚಿತ್ರದಲ್ಲಿ ಭಾರತದ ಸೊಗಸನ್ನು ಚಿತ್ರಿಸಲಾಗಿದೆ.ಜಿ ಅಕ್ಷರವನ್ನು ನವಿಲಾಗಿಸಿ,ಒ ಅಕ್ಷರವನ್ನು ಒಮ್ಮೆ ಜ್ಞಾನದ ಪ್ರತೀಕವಾಗಿಸಿ,ಇನ್ನೊಂದು ’ಒ’ವನ್ನು ವೈಜ್ಞಾನಿಕ ಪ್ರಗತಿಯ ಪ್ರತೀಕವನ್ನಾಗಿಸಿ,’ಜಿ’ಯನ್ನು ಕಾಶ್ಮೀರ ಭಾರತದ ಹೆಮ್ಮೆ ಎನ್ನುವುದನ್ನು ತೋರಿಸಲು,ಎಲ್ ಅಕ್ಷರವನ್ನು ದೇಶಕ್ಕೆ ಪ್ರಾಣವನ್ನು ಮುಡಿಪಾಗಿರುವ ಸೈನಿಕರ ಸೈನಿಕರ ಬಗ್ಗೆ ಗೌರವ ತೋರಿಸಲು ಮತ್ತು ಕೊನೆಯ ಇ ಅಕ್ಷರವನ್ನು ಗಾಂಧೀಜಿಯವರ ಮೌಲ್ಯಗಳ ಬಗ್ಗೆ ಗೌರವ ವ್ಯಕ್ತ ಪಡಿಸಲು ಬಳಸಿದ್ದಾಗಿ ಪುರು ಪ್ರತಾಪ್ ಸಿಂಗ್ ಹೇಳಿದ್ದಾರೆ.ಈ ಸ್ಪರ್ಧೆಗೆ ನಾಲ್ಕು ಸಾವಿರ ಮಕ್ಕಳು ತಮ್ಮ ರಚನೆಗಳನ್ನು ಕಳಿಸಿದ್ದರು.
----------------------------------------
ಇಂಗ್ಲೀಷ್-ಕನ್ನಡ ನಿಘಂಟು
ಡಿಕ್ಟ್ಡಿ ಎನ್ನುವುದು ಒಂದು ಅಂತರ್ಜಾಲ ಶಿಷ್ಟಾಚಾರ.ಅದನ್ನು ಬಳಸಿ,ಅಂತರ್ಜಾಲದಲ್ಲಿ ನಿಘಂಟು ಸೇವೆ ಪಡೆಯಬಹುದು.ಅಂತರ್ಜಾಲದಲ್ಲಿರುವ ಸಣ್ಣ ಸಣ್ಣ ನಿಘಂಟುಗಳನ್ನೆಲ್ಲಾ ಒಗ್ಗೂಡಿಸಿ,ಅದರ ಬಳಕೆ ಮಾಡಲು ಜನರಿಗೆ ಸಾಧ್ಯವಾಗಿಸುವುದು ಈ ಶಿಷ್ಟಾಚಾರದ ಹೆಗ್ಗಳಿಕೆ.ಇಂತಹ ಆನ್ಲೈನ್ ನಿಘಂಟುಗಳು ಇತರ ಭಾರತೀಯ ಭಾಷೆಗಳಲ್ಲಿದ್ದರೂ ಕನ್ನಡದಲ್ಲಿಲ್ಲ.ಕಾರ್ಕಳದ ವಾಸುದೇವ್ ಕಾಮತ್,ಕನ್ನಡ-ಇಂಗ್ಲೀಷ್ ಹಾಗೂ ಇಂಗ್ಲೀಷ್-ಕನ್ನಡ ನಿಘಂಟುವನ್ನು ಈ ರೀತಿ ರಚಿಸಲು ಸಿದ್ಧತೆ ನಡೆಸಿದ್ದಾರೆ.ನಿಘಂಟುವಿಗೆ ಶಬ್ದಗಳನ್ನು ಸೇರಿಸಲು ಕನ್ನಡಿಗರು ಕೈಜೋಡಿಸಬೇಕಾಗಿದೆ.ಉತ್ಸಾಹಿಗಳು ಅವರ ಬ್ಲಾಗ್ http://vasudevkamath.techfiz.com ನೋಡಬಹುದು.
---------------------------------------------------------------------------------
ಬ್ಲಾಗಿನಿಂದ ಪುಸ್ತಕಕ್ಕೆ
http://www.ittigecement.blogspot.com ಎನ್ನುವ ಬ್ಲಾಗ್ ಮೂಲಕ ಬರವಣಿಗೆ ಆರಂಭಿಸಿ,ತಮ್ಮ ಬರವಣಿಗೆ ದಾಟಿಯಿಂದ ಬ್ಲಾಗ್ಲೋಕದಲ್ಲಿ ಮಿಂಚುತ್ತಿರುವ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗ್ ಬರವಣಿಗೆಯನ್ನು ಪುಸ್ತಕವಾಗಿ ಹೊರತರುತ್ತಿದ್ದಾರೆ."ಹೆಸರೇ ಬೇಡ" ಎನ್ನುವ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ತಮ್ಮ ವೃತ್ತಿಯಾದ ಕಟ್ಟಡ ನಿರ್ಮಾಣ ಗುತ್ತಿಗೆಯಲ್ಲಿ ಆಗಿರುವ ಅನುಭವಗಳು,ಜೀವನದ ರಸಪ್ರಸಂಗಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ",ಪತ್ರಿಕಾ ವಿತರಕ ಮತ್ತು ಛಾಯಾಗ್ರಾಹಕ ಶಿವೂ ಅವರ"ವೆಂಡರ್ ಕಣ್ಣು"
ಕೂಡಾ ಬಿಡುಗಡೆಯಾಗಿವೆ.ಪತ್ರಿಕೆ ಹಂಚುವ ವಿತರಕರ,ಹುಡುಗರ ಅನುಭವ,ಕಷ್ಟ-ಸುಖಗಳ ಬಗ್ಗೆ ಹೊಸ ನೋಟ ಇಲ್ಲಿದೆ.
-------------------------------------------------------------------------------------------------------
ಕೆಪಿ ರಾವ್:ಕಂಪ್ಯೂಟರಿಗೆ ಕನ್ನಡ ಕಂಪು
ಕೆ ಪಿ ರಾವ್ ಎಂಬ ಹೆಸರು ಕಂಪ್ಯೂಟರಿನ ಕನ್ನಡ ಕೀಲಿ ಮಣೆ ಬಗ್ಗೆ ಬಂದಾಗಲೆಲ್ಲಾ ಕೇಳಿ ಬರುವ ಹೆಸರು.ಮೊದಲಾಗಿ ಕಂಪ್ಯೂಟರಿಗಾಗಿ ಕನ್ನಡ ಅಕ್ಷರ ವಿನ್ಯಾಸಗಳನ್ನು ರೂಪಿಸಿದವರವರು. ತುಳು ತೆಲುಗು ಅಕ್ಷರ ವಿನ್ಯಾಸಗಳನ್ನು ಕಂಪ್ಯೂಟರಿಗಾಗಿ ಮಾಡಿದ ಸಾಧನೆ ಇವರದು. ಐವತ್ತು ವರ್ಷಗಳಿಂದ ಕಂಪ್ಯೂಟರುಗಳ ಜತೆ ಎಡತಾಕಿದ ಅನುಭವ ಇವರಿಗಿದೆ.ಕನ್ನಡಕ್ಕೆ ತರ್ಕಬದ್ಧ ಕೀಲಿ ಮಣೆ ವಿನ್ಯಾಸ ರೂಪಿಸಿದ ಇವರ ಸಾಧನೆ ಸರಕಾರವೂ ಗುರುತಿಸಿದೆ.ಡಾಟ್ಮ್ಯಾಟ್ರಿಕ್ಸ್ ಮುದ್ರಕಗಳಲ್ಲಿ ಕನ್ನಡ ಲಿಪಿ ಮೂಡಿಬರುವಂತೆ ಮಾಡುವುದರಲ್ಲಿಯೂ ಕೆ ಪಿ ರಾವ್ ಕೆಲಸ ಮಾಡಿದ್ದಾರೆ.ಟಾಟಾ ಪ್ರೆಸ್ನಲ್ಲಿ ಕೆಲಸ ಮಾಡಿದ್ದ ಕೆಪಿ ರಾವ್ ಈಗ ಮಣಿಪಾಲದ ಎಂ ಐ ಟಿಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರು.ಇತ್ತೀಚೆಗೆ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಸನ್ಮಾನದ ಗೌರವ ದೊರಕಿದ ಬೆನ್ನಲ್ಲೇ ನಿಟ್ಟೆಯ ವಿದ್ಯಾರ್ಥಿವೃಂದವೂ ಇವರಿಗೆ ಗೌರವ ಸಲ್ಲಿಸಿತು.ಮಾನವ ಮತ್ತು ಕಂಪ್ಯೂಟರ್ ನಡುವಣ ಸಂವಹನ ಈಗ ಅವರ ಸಂಶೋಧನಾ ಕ್ಷೇತ್ರ.
-------------------------------------------------------------------
ಕ್ರೋಮ್ ಓಎಸ್ ಬಿಡುಗಡೆಯಾಗಿಯೇ ಬಿಟ್ಟಿತೇ?
ಗೂಗಲ್ ಕಂಪೆನಿಯ ಕ್ರೋಮ್ ಓಎಸ್ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶಗಳ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವುದು ಖಚಿತ.ಇದರ ಮೊದಲ ಆವೃತ್ತಿ ಮುಂದಿನವಾರ ಬಿಡುಗಡೆಯಾಗಲಿದೆ ಎಂಬುದು ಕಂಪ್ಯೂಟರ್ ಜಗತ್ತಿನಲ್ಲಿ ಹಬ್ಬಿರುವ ವದಂತಿ; ಈಗಾಗಲೇ ಹಲವು ಸಲ ಕ್ರೋಮ್ ಓಎಸ್ "ಬಿಡುಗಡೆ" ಆಗಿದೆ. ಈ ವಾರಾಂತ್ಯದಲ್ಲಿ ಒಂದು ಐನೂರು ಮೆಗಾಬಿಟ್ ಗಾತ್ರದ ಕಡತವು ಡೌನ್ಲೋಡಿಗೆ ಲಭ್ಯವಿದ್ದು,ಅದನ್ನು ಅನುಸ್ಥಾಪಿಸಿ,ಕಂಪ್ಯೂಟರಿನಲ್ಲಿ ಬಳಸಲೂ ಸಾಧ್ಯವಾಗಿತ್ತು.ಆದರಿದು ನಕಲಿ ತಂತ್ರಾಂಶವೆನ್ನುವುದು ಬಹುತೇಕ ನಿಶ್ಚಿತ.ಕಂಪ್ಯೂಟರಿನ ಅತಿ ಕಡಿಮೆ ಸಂಪನ್ಮೂಲಗಳನ್ನು ಬಳಸಿ,ಅತ್ಯಂತ ಚುರುಕಾಗಿ ಚಾಲೂ ಆಗಿ,ಒಡನೆಯೇ ಕಂಪ್ಯೂಟರನ್ನು ಅಂತರ್ಜಾಲ ಜಾಲಾಟಕ್ಕೆ ಅಣಿಗೊಳಿಸುವುದು ಕ್ರೋಮ್ ಓಎಸ್ನ ಗುರಿ.
------------------------------------------------------------------------------
ಶೋಧ ಪಟುಗಳ ಮದುವೆ!
ಬಿಂಗ್ ಮತ್ತು ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಗಳು ತಮ್ಮ ಸೇವೆಯನ್ನು ಜಂಟಿಯಾಗಿ ನೀಡಲು ನಿರ್ಧರಿಸಿವೆ.ವೋಲ್ಫ್ರಾಮ್ ಆಲ್ಫಾ ಶೋಧ ಸೇವೆಯು ಶೋಧ ನಡೆಸಿದಾಗ,ಕೊಂಡಿಗಳನ್ನು ನೀಡದೆ,ಅವುಗಳಿಗೆ ಉತ್ತರ ತಯಾರಿಸಿ,ಕಡತ ತಯಾರಿಸಿ ಒದಗಿಸುತ್ತದೆ.ಬಿಂಗ್ ಆದರೋ ಈಗ ನಿಧಾನವಾಗಿಯಾದರೂ ಜನರಿಗೆ ಪ್ರಿಯವಾಗಿ ಸುಮಾರು ಹತ್ತು ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದುಕೊಂದಿದೆ. ಗೂಗಲ್ನ ಎಪ್ಪತ್ತು ಶೇಕಡಾ ಪಾಲಿಗೆ ಹೋಲಿಸಿದರೆ,ಇದು ಜುಜುಬಿ ಅನಿಸುತ್ತದಾದರೂ,ಮೈಕ್ರೋಸಾಫ್ಟ್ ಕಂಪೆನಿಯು ಈಗ ತಾನೇ ಶೋಧ ಸೇವೆಯ ಮೂಲಕ ಸುದ್ದಿ ಮಾಡುತ್ತಲಿದೆ.
------------------------------------------------------------------------------------
ಗೂಗಲ್ ಪೋನ್ ಕಂಪೆನಿಯಾದೀತೇ?
ಗೂಗಲ್ ಗಿಜ್ಮೋ5 ಎನ್ನುವ ಫೋನ್ ಕಂಪೆನಿಯನ್ನು ತನ್ನದಾಗಿಸಿಕೊಂಡಿದೆ.ಇದರೊಂದಿಗೆ ಗೂಗಲ್ ತನ್ನ ಗೂಗಲ್ ವಾಯಿಸ್ ಸೇವೆಯನ್ನು ಇನ್ನಷ್ಟು ಚುರುಕಾಗಿಸಲಿದೆ. ಅಮೆರಿಕಾದಲ್ಲಿ ಅಂತರ್ಜಾಲ ಕರೆಗಳ ಮೂಲಕ ಜಂಗಮ,ಸಂಚಾರಿ ದೂರವಾಣಿ ಅಥವಾ ಕಂಪ್ಯೂಟರಿಗೆ ಕರೆ ಮಾಡುವುದನ್ನು ಬಹುತೇಕ ಉಚಿತವಾಗಿಸಿರುವ ಗೂಗಲ್,ಅಂತಾರ್ರಾಷ್ಟ್ರೀಯ ಕರೆಗಳನ್ನೂ ಮಾಡಲು ಸಾಧ್ಯವಾಗಿಸಿದೆ.ಜತೆಗೇ ಉಚಿತ ಎಸೆಮ್ಮೆಸ್ ಸೇವೆ,ಉಚಿತ ಗುಂಪು ಕರೆ,ಮುದ್ರಿತ ಸಂಭಾಷಣೆ ಮೂಲಕ ಸಂದೇಶ ಕೇಳಿಸುವ ಸೌಲಭ್ಯ ಇವೆಲ್ಲವನ್ನೂ ಗ್ರಾಹಕರಿಗೆ ಒದಗಿಸುವುದು ಗೂಗಲ್ ಗುರಿ.ಗೂಗಲ್ ವಾಯಿಸ್ ಸೇವೆ ಇದೀಗ ಅಮೆರಿಕಾದಲ್ಲಿ ಮಾತ್ರಾ ಲಭ್ಯವಿರುವ ಸೇವೆ. ಅಲ್ಲಿ ಐದು ಲಕ್ಷ ಚಂದಾದಾರರು ಗೂಗಲ್ ವಾಯಿಸನ್ನು ಬಳಸಲು ಆಹ್ವಾನ ಪಡೆದಿದ್ದಾರೆ.ದಶಲಕ್ಷ ಜನರು ಕರೆಗಳ ಲಾಭ ಪಡೆದು ಕೊಳ್ಳುತ್ತಿದ್ದಾರೆ.ಇತರ ದೂರಸಂಪರ್ಕ ಕಂಪೆನಿಗಳು,ತನ್ನ ಸೇವೆಗೆ ವಿರೋಧ ಮಾಡದಂತೆ ಗೂಗಲ್ ಎಚ್ಚರ ವಹಿಸಿದೆ.ತನ್ನ ಸೇವೆಯು ದೂರವಾಣಿ ಇಲ್ಲದಂತೆ ಮಾಡದೆ,ದೂರವಾಣಿ ಇದ್ದವರಿಗೆ ನೀಡುವ ಸೇವೆ ಎಂದು ಅದು ಹೇಳಿಕೊಳ್ಳುತ್ತಿದೆ.
*ಅಶೋಕ್ಕುಮಾರ್ ಎ