ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣ
ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣ
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗೆ ಅವಕಾಶ ನೀಡಲು ತಾಣವನ್ನು ರೂಪಿಸಲಾಗಿದೆ.ಹೆಚ್ಚಿನ ಕಾಲೇಜುಗಳಲ್ಲಿ ಫೇಸ್ಬುಕ್ ಅಂತಹ ತಾಣಗಳನ್ನು ನಿಷೇಧಿಸಲಾಗಿರುತ್ತದೆ.ಆದರೂ ಸಹಭಾಗಿತ್ವ ಬಯಸುವ ಸಂಶೋಧನೆ ಮತ್ತು ಕಲಿಕೆಯಲ್ಲಿ ಸಾಮಾಜಿಕ ಜಾಲತಾಣಗಳು ಉತ್ತಮ ಕೊಡುಗೆ ನೀಡಬಲ್ಲುವು.ಇದನ್ನು ಪರಿಗಣಿಸಿಯೇ live@eduವನ್ನು ಅಭಿವೃದ್ಧಿ ಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿರುವುದು ಸ್ಪಷ್ಟ.ಮೈಕ್ರೋಸಾಪ್ಟ್ ಕಂಪೆನಿಯ ಕ್ಲೌಡ್ಸೇವೆಗಳನ್ನು ಬಳಸಿಕೊಂಡು live@edu ಪ್ರತಿ ವಿದ್ಯಾರ್ಥಿಗೆ ಹತ್ತು ಗಿಗಾಬೈಟು ಮಿಂಚಂಚೆ ಸ್ಥಳಾವಕಾಶ ಮತ್ತು ಇಪ್ಪತ್ತೈದು ಗಿಗಾಬೈಟು ಕಡತಗಳನ್ನು ದಾಸ್ತಾನು ಮಾಡಲು ಅವಕಾಶ ನೀಡುವ ಪ್ರಸ್ತಾವವಿದೆ.ಆಫೀಸ್ ತಂತ್ರಾಂಶದ ಬಳಕೆಗೂ ಮುಕ್ತ ಅವಕಾಶ ಸಿಗುವುದರಿಂದ ಪದಸಂಸ್ಕರಣ,ಪವರ್ಪಾಯಿಂಟ್ ಸ್ಲೈಡುಗಳ ತಯಾರಿಕೆಯನ್ನು ಸಹಭಾಗಿತ್ವದ ಮೂಲಕ ಕೈಗೊಳ್ಳಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಾಧ್ಯವಾಗಲಿದೆ.ಇನ್ನು ಐದಾರು ತಿಂಗಳುಗಳಲ್ಲಿ live@eduನ ಕನಸು ನನಸಾಗಬಹುದು.
------------------------------------------
4ಜಿ:ಕೊಲ್ಕತಾ ಪ್ರಥಮ
ಭಾರತದಲ್ಲಿ ಮೊದಲ ಬಾರಿಗೆ ನಾಲ್ಕನೇ ತಲೆಮಾರಿನ ಮೊಬೈಲ್ ಸೇವೆಯನ್ನು ಪಡೆದ ಖ್ಯಾತಿ ಕೊಲ್ಕತ್ತಾಕ್ಕೆ ಸಂದಿದೆ.ಏರ್ಟೆಲ್ ಈ ಸೇವೆಯನ್ನು ಆರಂಬಿಸುವ ಮೂಲಕ ಸದ್ದಿಲ್ಲದೆ ಸುದ್ದಿ ಮಾಡಿದೆ.ತ್ರೀಜಿ ಸೇವೆಗಳಿಗಿಂತಲೂ ಹೆಚ್ಚಿನ ವೇಗದ ದತ್ತಾಂಶ ಸಾಗಾಟಕ್ಕೆ ಅನುವು ಮಾಡುವ 4ಜಿ ಸೇವೆಯು ವಿಡಿಯೊಫೋನ್ ಮತ್ತು ಮೊಬೈಲ್ ಮೂಲಕ ಟಿವಿ ವೀಕ್ಷಣೆಗೆ ಹೆಚ್ಚು ಸೂಕ್ತವಾಗಲಿದ್ದು,ಜನರನ್ನು ಆಕರ್ಷಿಸಲಿದೆ.4ಜಿ ಸೇವೆಗಳಿಗಾಗಿ ಪ್ರತ್ಯೇಕ ಸ್ಪೆಕ್ಟ್ರಮ್ ಹಂಚಿಕೆಯಿನ್ನೂ ನಡೆದಿಲ್ಲವಾದರೂ,ಏರ್ಟೆಲ್ ಅನಿರೀಕ್ಷಿತವಾಗಿ ಈ ಸೇವೆ ಆರಂಭಿಸಿದೆ.ಪ್ರಾಯಶ: ತನ್ನಲ್ಲಿ ಬಳಕೆಯಾಗದೇ ಉಳಿದ ಸ್ಪೆಕ್ಟ್ರಮ್ ಅವಕಾಶದಲ್ಲೇ 4ಜಿ ಸೇವೆ ನೀಡಲು ಏರ್ಟೆಲ್ ತೀರ್ಮಾನಿಸಿದ ಹಾಗಿದೆ.ಇದರ ಮೂಲಕ ಗ್ರಾಹಕರು ಸಂಚಾರದಲ್ಲಿರುವಾಗ ನೂರು ಮೆಗಾಬಿಟ್ಗಳ ವೇಗವನ್ನೂ,ಸ್ಥಿರವಾಗಿರುವಾಗ ಒಂದು ಗಿಗಾಬಿಟ್ ವೇಗದ ಸೇವೆಯನ್ನು ಪಡೆಯುವುದು ಸಾಧ್ಯವಾಗುತ್ತದೆ.ಸದ್ಯದ ಜಾಲಗಳಿಗಿಂತ 4ಜಿ ಹತ್ತು ಪಟ್ಟು ಹೆಚ್ಚು ವೇಗದ್ದಾಗಿದೆ.ಬೆಂಗಳೂರಿನಲ್ಲೂ 4ಜಿ ಸೇವೆಗಳು ತಿಂಗಳೊಪ್ಪತ್ತಿನಲ್ಲಿ ಬರಬಹುದಂತೆ.4ಜಿ ಲೈಸೆನ್ಸ್ ಹಂಚಿಕೆಯ ಬೆಂಗಳೂರು,ಕೊಲ್ಕತ್ತಾ,ಮುಂಬೈ ಹೊರತುಪಡಿಸಿ ಮಹಾರಾಷ್ಟ್ರ ಮತ್ತು ಚಂಡೀಗಡದಲ್ಲಿ ಸೇವೆ ನೀಡಲು ಏರ್ಟೆಲ್ ಅವಕಾಶ ಪಡೆದಿತ್ತು.ಮುಕೇಶ್ ಅಂಬಾನಿಯವರ ರಿಲಾಯೆನ್ಸ್ ಇಂಡಸ್ಟ್ರೀಸ್ ಕಂಪೆನಿಯು ಭಾರತದಲ್ಲೆಡೆ 4 ದತ್ತಾಂಶ ಸೇವೆ ಪಡೆಯಲು ಲೈಸೆನ್ಸ್ ಪಡೆದಿದ್ದರೂ,ಅದು ಧ್ವನಿ ಸೇವೆ ನೀಡಲು ಇತರ ಸೇವಾದಾತೃಗಳನ್ನು ಅವಲಂಬಿಸಬೇಕಾಗುತ್ತದೆ.ಹಾಗಾಗಿ,ಅದರ ಸೇವೆಗಳು ಆರಂಭವಾಗಲು ತುಸು ತಡವಾಗಲಿದೆ.ಅಷ್ಟರೊಳಗೆ 4ಜಿ ಸ್ಪೆಕ್ಟ್ರಮ್ ಹಂಚಿಕೆ ನಡೆದರೆ,ಇತರ ಕಂಪೆನಿಗಳೂ ಸೇವೆ ಆರಂಭಿಸಬಹುದು.
-----------------------------------------------------------------
ಗೂಗಲ್ ಪೋನ್ಗೆ ರಿಲಾಯನ್ಸ್ ಜತೆ
ರಿಲಾಯೆನ್ಸ್ ಇನ್ಫೋಕಾಮ್ ಟೆಲಿಕಾಂ ಕಂಪೆನಿಯು ಗೂಗಲ್ ಆಂಡ್ರಾಯಿಡ್ ಪೋನುಗಳಿಗೆ ಸೇವೆ ನೀಡಲು ಮೊದಲ ಅವಕಾಶಗಿಟ್ಟಿಸಿದೆ.ಗ್ರಾಹಕ ಬಯಸಿದರೆ ಆತ ಇತರ ಜಾಲಗಳಿಂದಲೂ ಸಂಪರ್ಕ ಸೇವೆ ಪಡೆಯಬಹುದು.ಗೂಗಲ್ ಆಂಡ್ರಾಯಿಡ್ ಫೋನುಗಳನ್ನು ಭಾರತದಲ್ಲಿ ಜನಪ್ರಿಯಗೊಳಿಸುವ ಜವಾಬ್ದಾರಿಯೀಗ ರಿಲಾಯೆನ್ಸ್ ಸಮೂಹದ್ದಾಗಿದೆ.ಸ್ಯಾಮ್ಸಂಗ್,ಎರಿಕ್ಸನ್,ಎಚ್ ಟಿ ಸಿ,ಎಲ್ಜಿ ಕಂಪೆನಿಗಳು ಗೂಗಲ್ ಅನುಮೋದಿತ ಆಂಡ್ರಾಯಿಡ್ ಫೋನುಗಳನ್ನು ತಯಾರಿಸುತ್ತಿವೆ.ಇವುಗಳಲ್ಲಿ ರಿಲಾಯೆನ್ಸ್ ಇನ್ಫೋಕಾಂ ಕಂಪೆನಿಯ ತ್ರೀಜಿ ಸಂಪರ್ಕವನ್ನು ಗ್ರಾಹಕರು ಪಡೆದುಕೊಳ್ಳಬಹುದು.ಅದು ಬೇಡ ಎನ್ನುವವರು ಇತರ ಕಂಪೆನಿಗಳ ಸೇವೆಗೆ ಹೋಗಲವಕಾಶವಿದೆಯಾದರೂ,ಸಾಮಾನ್ಯವಾಗಿ ಗ್ರಾಹಕರು ರಿಲಾಯೆನ್ಸ್ ಇನ್ಫೋಕಾಂ ಸೇವೆ ಪಡೆಯಲು ಮುಂದಾಗಬಹುದು ಎನ್ನುವುದೇ ಇಲ್ಲಿನ ಲೆಕ್ಕಾಚಾರ.ಎರಡು ವರ್ಷಗಳ ಕಾಲದ ಈ ಒಪ್ಪಂದಕ್ಕೆ ರಿಲಾಯೆನ್ಸ್ ಇಪ್ಪತ್ತೈದು ಕೋಟಿ ಖರ್ಚು ಮಾಡಬೇಕಾದೀತು.ಸುಮಾರು ಎರಡು ಲಕ್ಷ ಗ್ರಾಹಕರು ಇಂತಹ ಪೋನುಗಳನ್ನು ಖರೀದಿಸಬಹುದು ಎನ್ನುವ ನಿರೀಕ್ಷೆಯಿದೆ.
---------------------------------------
ಅಂತರ್ಜಾಲ ಮತ್ತು ಅಂತರಜಾಲದ ನಡುವಣ ಅಂತರ
ಇಂಟರ್ನೆಟ್ ಶಬ್ದಕ್ಕೆ ಕನ್ನಡ ಪದವಾಗಿ ಬಳಕೆಯಲ್ಲಿರುವ ಅಂತರ್ಜಾಲ ಪದಪ್ರಯೋಗ ತಪ್ಪು ಎನ್ನುವ ಚರ್ಚೆ ವಿಜ್ಞಾನ ಬರಹಗಾರರ ಮಿಂಚಂಚೆ ಬಳಗದಲ್ಲಿ ಈ ವಾರ ಮತ್ತೆ ಪ್ರಸ್ತಾಪವಾಯಿತು.ಇಂಟರ್-ಕಾಲೇಜು ಎನ್ನುವುದಕ್ಕೆ ಸಮಾನಾರ್ಥಕವಾಗಿ ಅಂತರಕಾಲೇಜು,ಇಂಟ್ರಾ-ಕಾಲೇಜುಗೆ ಅಂತರ್ಕಾಲೇಜು ಶಬ್ದಗಳಂತೇ,ಇಂಟರ್-ನೆಟ್ ಅನ್ನುವುದಕ್ಕೆ ಅಂತರಜಾಲ, ಇಂಟ್ರಾನೆಟ್ಗೆ ಅಂತರ್ಜಾಲ ಎನ್ನುವುದು ಸಮಾನಾರ್ಥಕ ಶಬ್ದಗಳಾಗುತ್ತವೆ ಎನ್ನುವುದು ಹಳೆಯ ವಾದ.ಅಂತರ-ರಾಷ್ಟ್ರೀಯ ಮತ್ತು ಅಂತರ್-ರಾಷ್ಟ್ರೀಯ ಶಬ್ದಗಳಿಗೆ ಅಂತಾರ್ರಾಷ್ಟ್ರೀಯ ಶಬ್ದಗಳ ಬಳಕೆಯೇ ವಾಡಿಕೆಯಾಗಿರುವಂತೆ,ಅಂತರ್ಜಾಲ,ಅಂತರಜಾಲಗಳಿಗೆ ಅಂತರ್ಜಾಲವೆನ್ನುವ ಪದವೇ ಬಳಕೆಯಾಗುತ್ತಿರಬಹುದು.ಮಡಿವಂತರ ಪ್ರಕಾರ ಇಂಟರ್ನೆಟ್ಗೆ ಅಂತರಜಾಲವೇ ಸರಿಯಾದ ಪ್ರಯೋಗ.ಇದೆಲ್ಲಾ ತಲೆನೋವು ಬೇಡವೆನ್ನುವವರು ಇಂಟರ್ನೆಟ್ ಶಬ್ದ ಬಳಸಬಹುದು.
---------------------------------------------------
ಇನ್ಸ್ಟಾಗ್ರಾಮ್: ಫೇಸ್ಬುಕ್ ಬಳಗಕ್ಕೆ
ಜನಪ್ರಿಯವಾದ ತಾಣಗಳನ್ನು ತಮ್ಮ ಬಳಗಕ್ಕೆ ಸೇರಿಸಿಕೊಳ್ಳುವ ಸದ್ಯದ ವೈಖರಿಯನ್ವಯ,ಇನ್ಸ್ಟಾಗ್ರಾಂ ಎನ್ನುವ ತಾಣವನ್ನು ಪೇಸ್ಬುಕ್ ಕಂಪೆನಿಯು ತನ್ನದಾಗಿಸಿಕೊಂಡಿದೆ.ಚಿತ್ರಗಳನ್ನು ಅಪ್ಲೋಡ್ ಮಾಡಲು ಇನ್ಸ್ಟಾಗ್ರಾಂ ಸೇವೆಯನ್ನು ಬಳಸುವ ಗ್ರಾಹಕರ ಸಂಖ್ಯೆ ದೊಡ್ಡದಿದ್ದುದೇ ಫೇಸ್ಬುಕ್ ಅನ್ನು ಆಕರ್ಷಿಸಿರಬಹುದು.ಫೇಸ್ಬುಕ್ ಬಳಕೆದಾರರಿಗೆ ಇನ್ಸ್ಟಾಗ್ರಾಂ ಸೇವೆ ಬೋನಸ್ ಆಗಿ ಒದಗಲಿದೆ.ಆದರೆ ಫೇಸ್ಬುಕ್ ಬಳಕೆದಾರರಲ್ಲದ ಇನ್ಸ್ಟಾಗ್ರಾಂ ಬಳಕೆದಾರರು ತ್ರಿಶಂಕು ಸ್ಥಿತಿ ಎದುರಿಸಬೇಕಾಗುತ್ತದೆಯೇ ಎನ್ನುವುದು ಸ್ಪಷ್ಟವಿಲ್ಲ.ಈ ಖರೀದಿಗೆ ಫೇಸ್ಬುಕ್ ಒಂದು ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.
--------------------------------------
ರದ್ದಿ ಮಾರಲೂ ಜಾಲತಾಣ
ರದ್ದಿ ಪತ್ರಿಕೆಗಳನ್ನು ಮಾರಲೂ ಅಂತರ್ಜಾಲ ಬಳಕೆ ಮಾಡಲೀಗ ಅವಕಾಶವಿದೆ. kuppathotti.com ತಮಿಳ್ನಾಡಿನಲ್ಲಿ ಇಂತಹ ಸೇವೆ ಒದಗಿಸುವ ತಾಣವಾಗಿದೆ.ನೋಂದಾಯಿಸಿಕೊಂಡ ಸದಸ್ಯರು ಬಯಸಿದಾಗ,ಕಂಪೆನಿಯ ನೌಕರರು ಮನೆಗೆ ಬಂದು ರದ್ದಿ ಮತ್ತಿತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ.
ಬರಹಗಾರರಿಗೆ ತಮ್ಮ ಬರಹಗಳನ್ನು ಇತರರ ಜತೆ ಹಂಚಿಕೊಳ್ಳಲು ಅನುವು ಮಾಡಲೂ ಅಂತರ್ಜಾಲ ತಾಣಗಳಿವೆ ಎನ್ನುವುದು ನಿಮಗೆ ಗೊತ್ತೇ ಇದೆ.ಕನ್ನಡದ ಸಮುದಾಯ ತಾಣ ಸಂಪದ.ನೆಟ್ ಇಂತಹದ್ದುಕ್ಕೆ ಅವಕಾಶ ನೀಡುತ್ತದೆ.ನೋಂದಾಯಿಸಿಕೊಂಡ ಸದಸ್ಯರು ವಿವಿಧ ಪ್ರಕಾರಗಳ ಬರಹಗಳನ್ನು ಈ ತಾಣದಲ್ಲಿ ಸಂಪಾದಕರ ಮುಲಾಜೇ ಇಲ್ಲದೆ ಬಳಗದ ಜತೆ ಹಂಚಿಕೊಳ್ಳಬಹುದು.ಬರಹಗಳ ಬಗ್ಗೆ ಆಕ್ಷೇಪ ಬಂದರೆ ನಿರ್ವಾಹಕರು ಪರಿಶೀಲಿಸಿ,ಕ್ರಮ ತೆಗೆದುಕೊಳ್ಳುತ್ತಾರೆ.ಓದುಗರು ಒಡನೆಯೇ ತಮ್ಮ ವಿಮರ್ಶೆಯನ್ನೂ ನೀಡಬಹುದು.ಇನ್ನು ಇಂಗ್ಲೀಷ್ ಭಾಷೆಯ ಬರಹಗಾರರಾದರೆ,Movellas.com ತಾಣವನ್ನು ಅವಲಂಬಿಸಿ,ಇಂತಹ ಸೇವೆ ಪಡೆಯಬಹುದು.ಇಲ್ಲೂ ಬರಹಗಳ ವಿಮರ್ಶೆಗೆ ಅವಕಾಶವಿದೆ.ಒಂದು ಹಂತ ದಾಟಿದ ಜನಪ್ರಿಯ ಬರಹಗಾರರ ಬರಹಗಳನ್ನು ಓದಲು ಅಧ್ಯಾಯಕ್ಕೆ ಇಂತಿಷ್ಟು ಎನ್ನುವ ಪ್ರಕಾರ ಹಣಪಾವತಿಸ ಬೇಕಾಗುತ್ತದೆ.ಆದರೆ ಈ ಶುಲ್ಕ ಅಲ್ಪವೇ ಆಗಿದೆ.ಹೀಗೆ ಜನಪ್ರಿಯರಾದವರು ತಮ್ಮ ಬರಹಗಳಿಂದ ತುಸು ಸಂಪಾದನೆಯನ್ನೂ ಮಾಡಲವಕಾಶವಿದೆ.
udayavani
UDAYAVANI
ಅಶೋಕ್ಕುಮಾರ್ ಎ