ಇಂಜಿನಿಯರಿಂಗ್ ಶಿಕ್ಷಣಕ್ಕೆ ವಿದಾಯ, ದೇಸಿ ಬೀಜರಕ್ಷಣೆ ದೀಕ್ಷೆ

ಇಂಜಿನಿಯರಿಂಗ್ ಶಿಕ್ಷಣಕ್ಕೆ ವಿದಾಯ, ದೇಸಿ ಬೀಜರಕ್ಷಣೆ ದೀಕ್ಷೆ

ತಮಿಳ್ನಾಡಿನ ಡಿಂಡಿಗಲ್ ಜಿಲ್ಲೆಯ ಕುಟ್ಟಿಯ ಗೌಂಡನ್‍ಪುಡುರ್ ಗ್ರಾಮದಲ್ಲಿದೆ ಆಧಿಯಾಗೈ ಪರಮೇಶ್ವರನ್ ಅವರ ಆರು ಎಕ್ರೆ ಫಾರ್ಮ್.
ಅಲ್ಲಿ ನಿರಂತರವಾದ ನೀರಿನಾಸರೆಯಿಲ್ಲ. ಆದರ ಪರಮೇಶ್ವರನ್‍ಗೆ ತನ್ನ ಬೆಳೆಗಳು ಉಳಿದು ಬೆಳೆಯುತ್ತವೆಂಬ ವಿಶ್ವಾಸ. ಯಾಕೆಂದರೆ ಅವೆಲ್ಲವೂ ಒಣ ಪ್ರದೇಶಕ್ಕೆ ಸೂಕ್ತವಾದ ದೇಸಿ ಬೀಜಗಳಿಂದ ಬೆಳೆಸಿದವುಗಳು.
ತನ್ನ ಹೆತ್ತವರು ಗೇಣಿಗೆ ಪಡೆದ ಒಣಜಮೀನಿನಲ್ಲಿ ದುಡಿಯುತ್ತಾ ಬದುಕಿದ್ದನ್ನು ಗಮನಿಸುತ್ತಲೇ ಬೆಳೆದವರು ಪರಮೇಶ್ವರನ್. ಬಾಲ್ಯದಿಂದಲೇ ಅವರಿಗೆ ಕೃಷಿಯತ್ತ ಒಲವು. ಮುಂದೆ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಕಾಲೇಜು ಸೇರಿದರು. ಆದರೆ ವಾಯುಯಾನ ಇಂಜಿನಿಯರಿಂಗ್ ಶಿಕ್ಷಣವನ್ನು ನಾಲ್ಕನೆಯ ವರುಷದಲ್ಲಿ ತೊರೆದು ತನ್ನ ಹಳ್ಳಿಗೆ ಮರಳಿ ಪೂರ್ಣಾವಧಿ ಸಾವಯವ ಕೃಷಿಕರಾದರು! ಇದರಿಂದಾಗಿ ಅವರ ಹೆತ್ತವರಿಗೆ ತೀವ್ರ ಅಸಮಾಧಾನ. “ಬೇರೆ ಹೆತ್ತವರಿಗೆ ಆಗುವಂತೆಯೇ ನನ್ನ ಹೆತ್ತವರಿಗೂ ಆರಂಭದಲ್ಲಿ ನಿರಾಶೆಯಾಗಿತ್ತು. ಆದರೆ ಈಗ, ನನ್ನ ನಿರ್ಧಾರದ ಬಗ್ಗೆ ಅವರಿಗೆ ಸಂತೋಷ ಹಾಗೂ ಹೆಮ್ಮೆ. ಜೊತೆಗೆ, ನನ್ನ ಪತ್ನಿ ಕಾಯಲ್ ಭದ್ರ ಸ್ತಂಭದಂತೆ ನನಗೆ ಬೆಂಬಲ ನೀಡಿದಳು” ಎಂದೀಗ ನೆನೆಯುತ್ತಾರೆ ಪರಮೇಶ್ವರನ್.
೨೦೧೪ರಲ್ಲಿ ಆರು ಎಕ್ರೆ ಲೀಸ್ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದರು ಪರಮೇಶ್ವರನ್. ಇವರಿಗೆ ಸ್ಫೂರ್ತಿ ಪರಿಸರ ಹೋರಾಟಗಾರ ಹಾಗೂ ಸಾವಯವ ಕೃಷಿ ತಜ್ನ ಜಿ. ನಮ್ಮಾಳ್ವಾರ್. ಕರೂರಿನ ವನಗಂನಲ್ಲಿ ನಮ್ಮಾಳ್ವಾರ್ ನಡೆಸಿದ ಕಾರ್ಯಾಗಾರಕ್ಕೆ ಹಾಜರಾಗಿ, ಅವರ ಕೆಲವು ಕೃಷಿತತ್ವಗಳನ್ನು ಕಲಿತರು.
ಅದು ಬಿಟಿ-ಬದನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದ ಕಾಲ. ಯುವಕ ಪರಮೇಶ್ವರನ್ ತಮಿಳ್ನಾಡಿನ ಮೂಲೆಮೂಲೆಯ ಹಳ್ಳಿಗಳಲ್ಲಿ ಸಂಚರಿಸಿದರು. ಹಿರಿಯ ರೈತರನ್ನು, ಪರಿಣತರನ್ನು ಭೇಟಿ ಮಾಡಿ, ದೇಸಿ ತಳಿಗಳ ವಿವರ ದಾಖಲಿಸಿದರು. ಈ ಸಂವಾದಗಳು ಅವರ ಕಣ್ಣು ತೆರೆಸಿದವು. ಆ ತಳಿವೈವಿಧ್ಯವನ್ನು ಉಳಿಸಲಿಕ್ಕಾಗಿ “ಆಧಿಯಾಗೈ” (ತಮಿಳಿನಲ್ಲಿ ಇದರರ್ಥ ಅರಳುವುದು) ಬೀಜಬ್ಯಾಂಕ್ ಶುರು ಮಾಡಿದರು. ಕಳೆದ ಐದು ವರುಷಗಳಲ್ಲಿ ಪರಮೇಶ್ವರನ್ ಸಂಗ್ರಹಿಸಿರುವ ೩೦೦ಕ್ಕಿಂತ ಅಧಿಕ ತರಕಾರಿಗಳು ಮತ್ತು ಹಣ್ಣುಗಳ ಬೀಜಗಳನ್ನು ಅಲ್ಲಿ ರಕ್ಷಿಸಲಾಗಿದೆ. ಇವನ್ನು ಸುತ್ತಮುತ್ತಲಿನ ರೈತರಿಗೂ, ನಗರಗಳ ಆಸಕ್ತ ಯುವಕರಿಗೂ ಹಂಚುತ್ತಿದ್ದಾರೆ ಅವರು. “ತಮಿಳ್ನಾಡಿನಲ್ಲಿ ನೂರಕ್ಕಿಂತ ಜಾಸ್ತಿ ಬದನೆ ತಳಿಗಳ ಹೆಸರು ತಿಳಿದಾಗ ನನಗೆ ಆಶ್ಚರ್ಯವಾಯಿತು. ಬೆಂಡೆಯಲ್ಲಿಯೂ ಹಲವಾರು ತಳಿಗಳಿವೆ – ಮೂರು ವರುಷ ಇಳುವರಿ ನೀಡುವ ತಳಿಗಳೂ ಇವೆ. ಕೊಂಗು ಪ್ರದೇಶದಲ್ಲಿ ಅಪರೂಪದ ಗುಲಾಲಿ ಬಣ್ಣದ ಬೆಂಡೆ ತಳಿಯೂ ಇದೆ” ಎನ್ನುತ್ತಾರೆ ಪರಮೇಶ್ವರನ್. ಈಗ ಇವುಗಳ ಕೃಷಿ ಮತ್ತು ಪುನರುತ್ಪತ್ತಿ ಕಡಿಮೆಯಾಗಿರುವ ಕಾರಣ ಇವು ಅಳಿದು ಹೋಗುತ್ತಿವೆ ಎಂಬುದು ಅವರ ಆತಂಕ. ಆದ್ದರಿಂದ ಅವನ್ನು ಉಳಿಸಲೇ ಬೇಕೆಂಬ ಸಂಕಲ್ಪ.
ಈಗ ಪರಮೇಶ್ವರನ್ ಅವರ ಬೀಜಬ್ಯಾಂಕಿನಲ್ಲಿ ಬದನೆ ಮತ್ತು ಸೋರೆಕಾಯಿಯ ತಲಾ ೩೦ ತಳಿಗಳು, ಬೆಂಡೆಯ ೧೩ ತಳಿಗಳು, ಜೋಳದ ೧೦ ತಳಿಗಳು, ಲವಂಗ ಬೀನ್ಸ್, ರೆಕ್ಕೆ ಬೀನ್ಸ್ ಮತ್ತು ಕತ್ತಿ ಬೀನ್ಸಿನ ಅಪರೂಪದ ತಳಿಗಳನ್ನು ರಕ್ಷಿಸಲಾಗಿದೆ. ಅವರು ಸಂಗ್ರಹಿಸಿದ ಹಲವಾರು ತಳಿಗಳನ್ನು ರೈತರು ಮನೆಬಳಕೆಗಾಗಿ ಬೆಳೆಯುತ್ತಿದ್ದರು. ಇನ್ನು ಅನೇಕ ತಳಿಗಳನ್ನು ದೇಶದ ಹಲವೆಡೆಗಳ ಬೀಜರಕ್ಷಕರಿಂದ ಮತ್ತು ಬೀಜ ಉತ್ಸವಗಳಿಂದ ಸಂಗ್ರಹಿಸಿದ್ದಾರೆ. ಈ ದೇಸಿ ತಳಿಗಳನ್ನು ಸಣ್ಣ ಜಾಗದಲ್ಲಿ ಮನೆಬಳಕೆಗಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದ್ದಾರೆ ಪರಮೇಶ್ವರನ್.
ಅವರ ಆರೆಕ್ರೆ ಜಮೀನಿನಲ್ಲಿ ಮೂರೆಕ್ರೆಯಲ್ಲಿ ನೆಲಗಡಲೆ ಕೃಷಿ. ಉಳಿದ ಮೂರೆಕ್ರೆ ತರಕಾರಿ ಕೃಷಿಗೆ ಮೀಸಲು. ಅವೆಲ್ಲ ದೇಸಿ ತಳಿ ತರಕಾರಿ ಗಿಡಗಳಿಗೆ ಯಾವುದೇ ಗೊಬ್ಬರ ಹಾಕುತ್ತಿಲ್ಲ ಪರಮೇಶ್ವರನ್. ಒಣ ಪ್ರದೇಶದಲ್ಲಿ ತಾನು ಬೆಳೆಯುತ್ತಿರುವ ದೇಸಿ ತಳಿಗಳು ಉತ್ತಮ ಫಸಲು ನೀಡಲು ಆಗೊಮ್ಮೆ ಈಗೊಮ್ಮೆ ಮಳೆ ಬಂದರೆ ಸಾಕೆನ್ನುತ್ತಾರೆ ಅವರು. ಮೆಣಸು, ಬದನೆ, ಬೆಂಡೆ, ಟೊಮೆಟೊ, ಸೋರೆಕಾಯಿ, ಪಡುವಲಕಾಯಿ, ಲವಂಗ ಬೀನ್ಸ್, ಕತ್ತಿ ಬೀನ್ಸ್, ರೆಕ್ಕೆ ಬೀನ್ಸ್ – ಇವೆಲ್ಲ ತರಕಾರಿಗಳನ್ನು ಜೊತೆಜೊತೆಯಾಗಿ ಬೆಳೆಸುವ ಕಾರಣ ಕೀಟಗಳ ಬಾಧೆ ಕನಿಷ್ಠ; ಹೀಗೆ ಬಹುಬೆಳೆ ಕೃಷಿ ಮಾಡಿದರೆ ಕೀಟ ನಿಯಂತ್ರಣಕ್ಕಾಗಿ ವೆಚ್ಚ ಮಾಡಬೇಕಾಗಿಲ್ಲ ಎನ್ನುತ್ತಾರೆ.
ನಗರಗಳಲ್ಲಿ ಚಾವಣಿ ತೋಟ ಮತ್ತು ಕೈತೋಟ ಬೆಳೆಸಲು ಮಾರ್ಗದರ್ಶನ ನೀಡುವ ಮೂಲಕವೂ ಆದಾಯ ಗಳಿಸುತ್ತಿದ್ದಾರೆ ಪರಮೇಶ್ವರನ್. ಈ ವರೆಗೆ ೨೦೦ ಕಾರ್ಯಾಗಾರ ನಡೆಸಿದ್ದಾರೆ. ಇದರಲ್ಲಿ ಭಾಗವಹಿಸಿದವರಿಗೆ ತಮ್ಮ ಬೀಜಬ್ಯಾಂಕಿನಿಂದ ದೇಸಿ ಬೀಜಗಳನ್ನು ನೀಡುತ್ತಾರೆ. ಅವರು ಬೆಳೆ ಬೆಳೆಸಿದ ನಂತರ ಅವರಿಂದ ಸ್ವಲ್ಪ ಬೀಜಗಳನ್ನು ವಾಪಾಸು ಪಡೆಯುತ್ತಾರೆ.
ಹೈಬ್ರಿಡ್ ಬೀಜಗಳು ಮಾರುಕಟ್ಟೆಗೆ ಬಂದಾಗಿನಿಂದ ರೈತರಿಗೆ ದೇಸಿ ಬೀಜಗಳು ಸಿಗುತ್ತಿಲ್ಲ. ಹೈಬ್ರಿಡ್ ಬೀಜಕ್ಕಾಗಿ ರೈತರು ತಮ್ಮ ಒಟ್ಟು ಕೃಷಿ ವೆಚ್ಚದ ಶೇ.೨೦ರಷ್ಟು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ದೇಸಿ ತಳಿಗಳ ಸಂರಕ್ಷಣೆ ತುರ್ತಾಗಿ ಆಗಬೇಕಾದ ಕೆಲಸ. ಇದಕ್ಕಾಗಿ ಯುವಜನರನ್ನು ಕೃಷಿಯಲ್ಲಿ ತೊಡಗಿಸುವುದೂ ಅಗತ್ಯ ಎಂದು ವಿವರಿಸುತ್ತಾರೆ ಪರಮೇಶ್ವರನ್.
“ಪ್ರತಿ ದಿನ ೨,೦೦೦ ರೈತರು ಕೃಷಿ ತೊರೆಯುತ್ತಿದ್ದಾರೆ. ಇದನ್ನು ಗ್ರೇಟ್ ಇಂಡಿಯನ್ ಅಗ್ರೋ ಬೈನ್ ಡ್ರೈನ್ ಎಂದು ಕರೆಯುತ್ತಾರೆ. ಇಂತಹ ಸನ್ನಿವೇಶದಲ್ಲಿ ಯುವಜನರಲ್ಲಿ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು ಜರೂರಿನ ಕೆಲಸ. ಅದಕ್ಕಾಗಿ, ಶಾಲಾ ಪಠ್ಯಕ್ರಮದಲ್ಲೇ ಕೃಷಿಯನ್ನು ಸೇರಿಸಬೇಕಾಗಿದೆ” ಎಂದು ಪರಮೇಶ್ವರನ್ ಹೇಳುತ್ತಿದ್ದರೆ, ನಮ್ಮ ಮಹಾನ್ ದೇಶದ ಕೃಷಿರಂಗದ ಭವಿಷ್ಯದ ಬಗ್ಗೆ ಕಾರ್ಯಶೀಲರಾಗಬೇಕೆಂಬ ಪ್ರೇರಣೆ ನಮ್ಮಲ್ಲಿ ಮೂಡುತ್ತದೆ. 

ಫೋಟೋ ಕೃಪೆ: ದ ಬೆಟರ್ ಇಂಡಿಯಾ ವೆಬ್-ಸೈಟ್