ಇಂತಹ ತಪ್ಪುಗಳನ್ನು ಕಂಪ್ಯೂಟರುಗಳು ಮಾಡಲಿ!
ಕೆಲಸಕ್ಕೆ ಖೊಕ್ ಕೊಡಲಿರುವ ರೊಬೋಟ್‌ಗಳು
ಉತ್ಪನ್ನಗಳ ತಯಾರಿಕೆಯನ್ನು ಯಾಂತ್ರೀಕರಣಗೊಳಿಸಿದ ಮೇಲೂ ಅಲ್ಲಿ ಜನರು ಕೆಲಸಕ್ಕೆ ಬೇಕಾಗುತ್ತಾರೆ.ಉತ್ಪನ್ನಗಳು ಹಂತವಾಗಿ ತಯಾರಾಗುತ್ತಾ ಬಂದಂತೆ,ಉತ್ಪನ್ನಗಳ ಎರಡು ಬಿಂದುಗಳ ನಡುವೆ ತಂತಿ ಸಂಪರ್ಕ ಕಲ್ಪಿಸುವಂತಹ ಕೆಲಸವನ್ನು ಜನರು ಮಾಡಬೇಕಾಗುತ್ತದೆ.ಆದರೀಗ ಇಂತಹ ಕೆಲಸವನ್ನು ಮಾಡುವ ರೊಬೋಟುಗಳಿವೆ.ಮಾತ್ರವಲ್ಲ ರೊಬೋಟುಗಳ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಇವುಗಳನ್ನು ಬಳಸುವುದು ಸಾಧ್ಯವಾಗಹತ್ತಿದೆ.ರೊಬೋಟುಗಳ ಬಳಕೆ ನಡೆದರೆ,ಕೆಲಸ ಸತತವಾಗಿ ನಡೆಯುತ್ತದೆ.ಕಾಫಿ ಬ್ರೇಕು ಇಲ್ಲ,ವೇತನ ಕೊಡಬೇಕಿಲ್ಲ,ವೇತನದಲ್ಲಿ ವರ್ಷ ವರ್ಷ ಏರಿಕೆ,ಪಿಂಚಣಿ ಇತ್ಯಾದಿ ತಾಪತ್ರಯ ಕಂಪೆನಿಗಿಲ್ಲ.ವಸ್ತುಗಳನ್ನು ಪ್ಯಾಕ್ ಮಾಡುವಂತಹ ಕೆಲಸವನ್ನು ಮಾಡುವ ರೊಬೋಟುಗಳು ಮಾನವನ್ನು ವಸ್ತುಗಳ ವಿತರಣೆಯ ನೌಕರಿಯಿಂದ ಕಸಿದುಕೊಳ್ಳವುದು ಬಹುತೇಕ ಗ್ಯಾರಂಟಿ.ಇನ್ನು ಕೃಷಿಕ್ಷೇತ್ರಕ್ಕೆ ಬಂದರೆ,ಹಣ್ಣುಗಳನ್ನು ಕೊಯ್ಯುವುದು,ಪ್ಯಾಕಿಂಗ್ ಮಾಡುವುದು ಮುಂತಾದ ಕೆಲಸ ಮಾಡಲು ರೊಬೋಟುಗಳು ಸೂಕ್ತವಾಗಿವೆ.ಬೋಯಿಂಗ್ ವಿಮಾನ ತಯಾರಿಸುವ ವೇಳೆ ಅದರ ಒಳಗೆ ರಿವೆಟ್ ಮಾಡಲು ದೊಡ್ಡ ಯಂತ್ರಗಳ ಬಳಕೆ ಸುರುವಾಗಿದೆ.ಹೀಗಾಗಿ ಕೆಲಸದಲ್ಲಿ ಹೆಚ್ಚಿನ ಗುಣಮಟ್ಟವನ್ನು ಖಾತರಿ ಮಾಡಿಕೊಳ್ಳಬಹುದು.ರೊಬೋಟಿಕ್ ನೌಕರರನ್ನು ಹೊಂದಿದ ಕಂಪೆನಿಗಳ ಸ್ಥಾಪನೆಗೆ ಹೆಚ್ಚಿನ ಬಂಡವಾಳ ಬೇಕು,ಆದರಿವು ಹತ್ತು ಹನ್ನೆರಡು ವರ್ಷಗಳ ಅವಧಿಯಲ್ಲಿ ಖರ್ಚನ್ನು ಪೂರ್ಣ ಹಿಂದಿರುಗಿಸಿ,ಪೂರ್ತಿ ಲಾಭ ತಂದುಕೊಡುವ ಘಟಕಗಳಾಗಬಲ್ಲುವು.ವಸ್ತುಗಳನ್ನು ದಾಸ್ತಾನು ಮಾಡಲು ಇರುವ ಉಗ್ರಾಣಗಳಲ್ಲಿ,ಭಾರವಾದ ಪೆಟ್ಟಿಗೆ ಅಥವಾ ಚೀಲಗಳನ್ನು ಹೊರಲು ಈಗ ರೊಬೋಟುಗಳು ಬಳಕೆಯಾಗುತ್ತವೆ.
ಇಂತಹ ರೋಬೋಟುಗಳನ್ನು ತಯಾರಿಸುವ ಕಾರಖಾನೆಗಳಲ್ಲಿ,ಮನುಷ್ಯರ ಅಗತ್ಯ ಬಹಳ ಇದೆ ಎನ್ನುವುದು ಒಂದು ಖುಷಿಕೊಡುವ ವಿಚಾರ.ಹಾಗಾಗಿ ರೊಬೋಟುಗಳ ಮೂಲಕ ಕೆಲಸ ಮಾಡುವ ಕಂಪೆನಿಗಳಿಗೆ ರೊಬೋಟು ತಯಾರಿಸುವ ಕೆಲಸ ಮಾಡುವ ಕಂಪೆನಿಗಳಲ್ಲಿ ಅಗಾಧ ನೌಕರಿ ಸೃಷ್ಟಿಯಾಗಲಿದೆ.
-----------------------------------------------
ಫೋನ್ ಕ್ಯಾಮೆರಾದಿಂದ ಉತ್ತಮ ಚಿತ್ರ ತೆಗೆಯಿರಿ.
ಫೋನಿನ ಕ್ಯಾಮರಾದಿಂದ ಚಿತ್ರ ತೆಗೆಯುವಾಗ ಸಾಧ್ಯವಾದಷ್ಟು ಸ್ವಾಭಾವಿಕ ಬೆಳಕು ಬಳಸುವುದು ಒಳ್ಳೆಯದು.ಚಿತ್ರ ತೆಗೆಯುವ ಮುನ್ನ ಚಿತ್ರ ತೆಗೆಯುವ ಜಾಗವನ್ನು ನಿರ್ಧರಿಸಿ,ಲಾಕ್ ಮಾಡಿದ ಬಳಿಕ ಚಿತ್ರ ತೆಗೆವ ವರೆಗೆ ಕೈಯನ್ನು ಅಲುಗಾಡಿಸಬಾರದು.ಚಿತ್ರಗಳನ್ನು ಸತತವಾಗಿ ತೆಗೆಯಿರಿ.ಒಂದೇ ದೃಶ್ಯದ ಹಲವಾರು ನೋಟಗಳು ನಿಮಗೆ ಸಿಗುತ್ತವೆ.ಚಿತ್ರಗಳನ್ನು ತಂತ್ರಾಂಶಗಳನ್ನು ಬಳಸಿ ಸುಧಾರಿಸಿ.ಆಯ್ದ ಕೆಲವನ್ನು ಮಾತ್ರಾ ನಿಮ್ಮವರ ಜತೆ ಹಂಚಿಕೊಳ್ಳಿ.ಸ್ಮಾರ್ಟ್‌ಫೋನ್ ಅನ್ನು ಸೊಂಟದ ಮಟ್ಟದಲ್ಲಿ ಹಿಡಿದುಕೊಳ್ಳಿ.ಇತರಿಗೆ ನೀವು ಪೋಟೋ ತೆಗೆಯುತ್ತಿದ್ದೀರಿ ಅನಿಸದಂತೆ ತೆಗೆದರೆ ಬರುವ ಚಿತ್ರಗಳು ಸ್ವಾಭಾವಿಕವಾಗಿರುತ್ತವೆ.ಈ ಟಿಪ್ಸ್‌ಗಳನ್ನು ಪಾಲಿಸಿದರೆ,ನೀವು ಸ್ಮಾರ್ಟ್‌ಫೋನು ಮೂಲಕವೂ ಉತ್ತಮ ಚಿತ್ರ ತೆಗೆಯಬಹುದು ಎಂದು ಐಫೋನ್ ಮೂಲಕ ರಸ್ತೆ ಚಿತ್ರಗಳನ್ನು ತೆಗೆಯುವ ರಿಚಾರ್ಡ್ ಕೋಕಿ ಹೇಳುತ್ತಾರೆ.
ಈ ಅಂಕಣದ ಬರಹಗಳು http://ashok567.blogspot.comನಲ್ಲೂ ಲಭ್ಯ.
--------------------------------
ಜಿಸ್ಯಾಟ್ ಹತ್ತು ಉಪಗ್ರಹ ಯಶಸ್ವಿ ಉಡಾವಣೆ
ಭಾರತವು ತನ್ನ ನೂರಒಂದನೆಯ ಉಪಗ್ರಹವಾದ ಜಿಸ್ಯಾಟ್ ಹತ್ತನ್ನು ಏರಿಯಾನ್5 ರಾಕೆಟ್ ಮೂಲಕ ಕಕ್ಷೆಗೇರಿಸಲು ಸಫಲವಾಗಿದೆ.ಮೂರುಸಾವಿರದನಾಲ್ಕುನೂರು ಕಿಲೋಗ್ರಾಮ್ ತೂಕದ ಉಪಗ್ರಹ ಇದುವರೆಗಿನ ಉಪಗ್ರಹಗಳಿಗಿಂತ ಅತಿ ಹೆಚ್ಚುತೂಕದ್ದೂ ಕೂಡಾ ಆಗಿದೆ.ಭೂಸ್ಥಿರ ಕಕ್ಷೆಯಲ್ಲಿ ಈ ಸಂಪರ್ಕ ಉಪಗ್ರಹವನ್ನು ಇರಿಸಬೇಕಿದೆ.ಉಪಗ್ರಹದಲ್ಲಿ ಕೂಬ್ಯಾಂಡ್,ಸಿಬ್ಯಾಂಡ್ ಮತ್ತು ವಿಸ್ತೃತ ಸಿಬ್ಯಾಂಡ್ ಎನ್ನುವ ಮೂರು ನಮೂನೆಯ ಟ್ರಾನ್‌ಸ್ಪೋಂಡರುಗಳು ಇವೆ.ನಿಗದಿತ ಕಕ್ಷೆಯ ಅತಿ ಸಮೀಪ ಉಡ್ಡಯನ ಸಾಧ್ಯವಾಗಿದೆ.ಇನ್ನು ತುಸು ಅತ್ತಿತ್ತ ಸರಿಸಿ,ನಿಗದಿತ ಕಕ್ಷೆಯಲ್ಲಿ ಉಪಗ್ರಹವನ್ನು ಕೂರಿಸುವ ಕೆಲಸ ನಡೆಯಬೇಕಿದ್ದು,ಹಾಸನದ ನಿಯಂತ್ರಣ ಕೊಠಡಿಯಿಂದ ಇಸ್ರೋ ಇಂಜಿನಿಯರ್‌ಗಳದನ್ನು ಸಾಧಿಸಲಿದ್ದಾರೆ.ನವಂಬರ್ ಹೊತ್ತಿಗೆ ಉಪಗ್ರಹ ಬಳಕೆಗೆ ಲಭ್ಯವಾಗಲಿದೆ ಎನ್ನುವುದೀಗದ ನಿರೀಕ್ಷೆ.
-------------------------------------------------------------
ತ್ರೀಜಿ:ಸ್ಟಾಪ್-ಜೀ!
ಟೆಲಿಕಾಂ ಇಲಾಖೆಯು ಮೊಬೈಲ್ ಸೇವಾದಾತೃಗಳು ತ್ರೀಜಿ ಸೇವೆಯನ್ನು ತಮಗೆ ಪರವಾನಗಿ ಇರುವ ವೃತ್ತಗಳಲ್ಲಿ ಮಾತ್ರಾ ನೀಡಬೇಕೆಂದು ವಿಧಿಸಿದೆ.ತಮ್ಮ ಪರವಾನಗಿ ಇರುವ ಪ್ರದೇಶಗಳ ಹೊರತಾಗಿ ಇತರೆಡೆ ಸೇವೆ ನೀಡುತ್ತಿರುವವರು ಮೂರು ದಿನಗಳ ಒಳಗೆ ಅದನ್ನು ನಿಲ್ಲಿಸಬೇಕೆಂದು ಶೋಕಾಸ್ ನೀಡಲು ತಯಾರಿ ನಡೆಸಿದೆ.ತಾವು ಪರವಾನಗಿ ಇಲ್ಲದ ವೃತ್ತಗಳಲ್ಲಿ ರೋಮೊಂಗ್ ಸೇವೆಯ ಮೂಲಕ ತ್ರೀಜಿ ಸೇವೆ ನೀಡುತ್ತಿದ್ದು,ಲೈಸೆನ್ಸ್‌ನ ನಿಯಮಗಳ ಅನ್ವಯ ಇದು ನ್ಯಾಯಬದ್ಧ ಎಂದು ಕಂಪೆನಿಗಳು ವಾದಿಸಿವೆ.ರೋಮಿಂಗ್ ಸೇವೆ ನ್ಯಾಯಬದ್ಧ,ಆದರೆ ರೋಮಿಂಗ್ ಸೇವೆ ನೀಡುವಾಗ,ಒಂದು ಟೆಲಿಕಾಂ ಸೇವಾದಾತೃ ತನ್ನ ಬಳಕೆದಾರ ಭಾರತದ ಯಾವೆಡೆ ಹೋದರೂ ಸೇವೆ ಪಡೆಯಲು ಒದಗಿಸುವ ಸೇವೆ,ಅಲ್ಲಿ ಪರವಾನಗಿ ಹೊಂದಿರುವ ಕಂಪೆನಿಯು,ತನ್ನ ಸಲಕರಣೆಗಳ ಮೂಲಕ ಸೇವೆ ಒದಗಿಸುತ್ತದೆ.ಆದರೆ ತ್ರೀಜಿ ಸೇವೆಯಲ್ಲಿ ಲೈಸೆನ್ಸ್ ಹೊಂದಿದ ಕಂಪೆನಿಯು ಇತರ ಕಂಪೆನಿಯ ಜತೆ ಒಪ್ಪಂದ ಮಾಡಿಕೊಂಡು,ತನ್ನ ಸಲಕರಣೆಗಳನ್ನು ಅಲ್ಲಿ ಸ್ಥಾಪಿಸಿ,ಸೇವೆ ನೀಡುತ್ತದೆ.ಇದು ಕ್ರಮಬದ್ಧವಲ್ಲ,ಹಾಗಾಗಿ ಸೇವೆಯನ್ನು ಹಿಂದೆಗೆಯಬೇಕು ಎಂದು ಟೆಲಿಕಾಂ ಇಲಾಖೆ ಪಟ್ಟು.ಇದರ ಬಗ್ಗೆ ಮೊಬೈಲ್ ಕಂಪೆನಿಗಳು ನ್ಯಾಯಾಲಯದ ಮೆಟ್ಟಲೇರಿವೆ.ಟೆಲಿಕಾಂ ಕ್ಷೇತ್ರವೀಗ ಒಂದು ತೆರನ ಅಸ್ಥಿರತೆ ಎದುರಿಸುತ್ತಿದೆ.ಟೂಜಿ ಲೈಸೆನ್ಸ್ ರದ್ದು ಪಡಿಸಿ,ಸ್ಪೆಕ್ಟ್ರಂ ಹಂಚಿಕೆಯನ್ನು ಹರಾಜು ಪಕ್ರಿಯೆಯ ಮೂಲಕ ನಡೆಸಲು ಜನವರಿ ತಿಂಗಳವರೆಗಿನ ಹೆಚ್ಚುವರಿ ಸಮಯವನ್ನು ನೀಡಿ,ಪರಿಸ್ಥಿತಿ ತಿಳಿಯಾಗುವುದು ನಿಧಾನವಾಗುತ್ತಿದೆ.
------------------------
ಆನಲೈನ್ ಖರೀದಿ:ಟ್ರಯಲ್ ರೂಮ್
ಆನ್‌ಲೈನ್ ಮೂಲಕ ಒಡವೆ,ಕನ್ನಡಕ,ಸನ್‌ಗ್ಲಾಸ್,ಉಡುಪು ಇತ್ಯಾದಿ ಖರೀದಿಸುವಾಗ,ಗ್ರಾಹಕನಿಗೆ ತಾನು ಖರೀದಿಸುವುದು ತನಗೆ ಒಪ್ಪುತ್ತದೋ ಎನ್ನುವುದನ್ನು ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ.ಹಾಗಾಗಿ,ಈಗ ಹಲವು ಇ-ವಾಣಿಜ್ಯ ಸೈಟುಗಳು ಮಿಥ್ಯಾಟ್ರಯಲು ರೂಮು ಸೇವೆಯನ್ನೂ ಒದಗಿಸುವತ್ತ ಹೆಜ್ಜೆ ಹಾಕಿವೆ.ಗ್ರಾಹಕ ತನ್ನ ವೆಬ್‌ಕ್ಯಾಮ್ ಚಾಲೂ ಇಟ್ಟುಕೊಳ್ಳುವ ಮೂಲಕವಾಗಲಿ,ಅಥವಾ ಫೊಟೊವನ್ನು ಕಳುಹಿಸುವ ಮೂಲಕವಾಗಲಿ,ತಾನು ಆಯ್ದ ವಸ್ತು ತನ್ನ ಮುಖಕ್ಕೆ ಹೇಗೆ ಕಾಣಿಸಬಹುದು ಎನ್ನುವುದನ್ನು ತೆರೆಯ ಮೂಲಕ ತಿಳಿದುಕೊಳ್ಳುವ ಸೇವೆಯೂ ಇದೀಗ ಲಭ್ಯ.
------------------------
ಇಂತಹ ತಪ್ಪುಗಳನ್ನು ಕಂಪ್ಯೂಟರುಗಳು ಮಾಡಲಿ!
ರಶ್ಯಾದ ಚೆಸ್ ದಿಗ್ಗಜ ಹಿಂದೊಮ್ಮೆ ಕಂಪ್ಯೂಟರ್ ಜತೆ ಚೆಸ್ ಆಡಿದ್ದು ನಿಮಗೆ ನೆನಪಿರಬಹುದು.ಕಂಪ್ಯೂಟರಿಗೆ ಡೀಪ್‌ಬ್ಲೂ ಎಂದು ಹೆಸರಿಡಲಾಗಿತ್ತು.1997ರಲ್ಲಿ ಡೀಪ್‌ಬ್ಲೂ ಮತ್ತು ಕಾಸ್ಪರೋವ್ ನಡುವಣ ಚೆಸ್ ಪಂದ್ಯ ನಡೆಯಿತು.ತಾನು ಕಂಪ್ಯೂಟರ್ ಮುಂದೆ ಸೋಲೆನು ಎಂದು ಆತ್ಮವಿಶ್ವಾಸದಿಂದಿದ್ದ ಕಾಸ್ಪರೋವ್ ಪಂದ್ಯದಲ್ಲಿ ಸೋತು ಬಿಟ್ಟರು.ಡೀಪ್‌ಬ್ಲೂವನ್ನು ಐಬಿಎಂ ಕಂಪೆನಿ ವಿನ್ಯಾಸಗೊಳಿಸಿತ್ತು.ಮುರ್ರೇ ಕಾಂಪ್‌ಬೆಲ್ ಎನ್ನುವ ಕಂಪ್ಯೂಟರ್ ತಜ್ಞ ನಿಗದಿತ ವೇಳೆಯಲ್ಲಿ ಚೆಸ್ ತಂತ್ರಾಂಶವನ್ನು ಪರಿಶೀಲಿಸಲು ಅನುಮತಿಸಲಾಗಿತ್ತು.ಒಂದು ನಡೆಯಲ್ಲಿ ಕಂಪ್ಯೂಟರ್ ವಿಚಿತ್ರ ನಡೆ ನಡಿಸಿ,ಪಂದ್ಯ ಗೆಲ್ಲಲು ಕಾರಣವಾಯಿತು.ನಿಜಕ್ಕಾದರೂ,ಕಂಪ್ಯೂಟರ್ ತಂತ್ರಾಂಶದಲ್ಲಿದ್ದ ತಪ್ಪೊಂದರಿಂದ,ಒಂದು ನಡೆಯ ಬಗ್ಗದು ಸರಿಯಾದ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ,ಖುಷಿ ಕಂಡ ನಡೆ ನಡೆಸಿತ್ತು.ಕಾಸ್ಪರೋವ್ ಈ ನಡೆಯ ಹಿಂದಿನ ಗುಟ್ಟೇನು ಎಂದು ತಲೆಕೆಡಿಸಿ,ಆಟದಲ್ಲಿ ಹಿನ್ನಡೆ ಕಂಡರು.ನಂತರ ಡೀಪ್‌ಬ್ಲೂ ಸುಧಾರಿತ ಆವೃತ್ತಿಯ ಜತೆ ಕಾಸ್ಪರೋವ ಮತ್ತು ಕ್ರಾಮ್ನಿಕ್ ಆಡಿ,ಡ್ರಾಗೈಯಲಷ್ಟೇ ಸಮರ್ಥರಾದರು.
--------------------------
ಮೂರು ದಿನ ಪ್ರೊಫೆಸರ್ ಮತ್ತೆ ಮೂರು ದಿನ ಇಂಜಿನಿಯರ್
ಈ ಕಿರುಬರಹ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸ್ತುಮತಿ ಪವಾರ್ ಅವರಿಗೆ ಖುಷಿ ಕೊಟ್ಟಿದೆ.ಸೂರ್ಯನಾರಾಯಣ ಅವರು ತಾವು ಕೆಲಸ ಮಾಡುವ ಕಂಪೆನಿ ಟೆಕ್ಸ್‌ಮೋಟೊ,ಹಾಗೂ ಇದರಲ್ಲಿ ತಾವು ವಿದ್ಯುನ್ಮಂಡಲಗಳ ವಿನ್ಯಾಸದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.ಅವರ ಮೊಬೈಲ್ ಸಂಖ್ಯೆ 9945569606.
*ಅಶೋಕ್‌ಕುಮಾರ್ ಎ