ಇಂಥದ್ದೊಂದು ದಿನವಿದೆ ಗೊತ್ತಾ?
ಶುದ್ದ ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಮುಖ-ಮೂತಿ ತೊಳೀದೆ ಲ್ಯಾಪ್ಟಾಪ್ ಹಿಡಿದು ಕೂತಿದ್ದೆ ... ಯಾವ ಘನಂಧಾರಿ ಪ್ರೊಡಕ್ಷನ್ ಸಪೋರ್ಟ್ ಕೆಲಸವೂ ಇರಲಿಲ್ಲ ... ಫೇಸ್-ಬುಕ್ ತೆರೆದು ನೋಡ್ತಿದ್ದೆ ... ನೋಡಿ ವರ್ಷಗಳೇ ಕಳೆದು ಹೋದ ಒಂದಿಬ್ಬರು ಬಂಧುವರ್ಗದವರಿಗೆ 'happy birthday ... have loads of fun' ಅಂತ ಪೋಸ್ಟ್ ಮಾಡಿದೆ ... ಒಬ್ಬ ಎರಡೇ ಸೆಕಂಡ್’ಗೆ ನನ್ನ ಪೋಸ್ಟ್’ಗೆ ’ಲೈಕ್’ ಮಾಡಿ ಮತ್ತೊಂದು ನಿಮಿಷಕ್ಕೆ "ಥ್ಯಾಂಕ್ಸ್ ಕಣೋ ... ನಾಳೆ ಬೆಳಿಗ್ಗೆ ಕೊಡಬೇಕಿರೋ ರೇಷನ್ ಸರಕಿನ ಲಾರಿ 'load'’ಗಾಗಿ ಕಾಯ್ತಿದ್ದೀನಿ" ಅಂತ ಬೇರೆ ಕಮೆಂಟು. ಏನು ಹೇಳಬೇಕೋ ಗೊತ್ತಾಗಲಿಲ್ಲ. ಸುಮ್ಮನಾದೆ ...
ಮತ್ತೈದು ನಿಮಿಷಕ್ಕೆ ಮತ್ತೊಬ್ಬನೂ ಬರೆದ ಕಮೆಂಟು ... "ಥ್ಯಾಂಕ್ಸ್ ಕಣೋ ! ಲಂಚ್ ಪಾರ್ಟಿ ಜೋರಾಗಿತ್ತು ... ಹೊಟ್ಟೆ ಜೋರಾಗಿ 'load' ಆಗಿತ್ತು .. ಹಿಂದುಗಡೆ ಹೋಗಿದ್ದೆ" ಅಂತ ಕಮೆಂಟ್ ಹಾಕಿದ ... ಸುಮ್ನೆ ’ಥ್ಯಾಂಕ್ಸ್’ ಅನ್ನೋದು ಬಿಟ್ಟು ಇವನೆಲಿದ್ದ, ಏನು ಮಾಡ್ತಿದ್ದ ಅಂತ ಸ್ಟೇಟಸ್ ಯಾಕೆ ಅಂತೀನಿ? ಇನ್ಮುಂದೆ ಯಾರಿಗೂ ಅವರ ಜನ್ಮದಿನಕ್ಕೆ ವಿಶ್ ಮಾಡಲೇಬಾರದು ಅಂದುಕೊಂಡರೆ ಅವರು ನನಗೆ ವಿಶ್ ಮಾಡಿದ ಋಣ ಅಂತ ಒಂದಿದೆಯಲ್ಲ? ಅದಕ್ಕಾದರೂ ವಿಶ್ ಮಾಡಲೇಬೇಕು ....
ಹೋಗ್ಲಿ ಬಿಡಿ, ಈ ಮಧ್ಯೆ ಒಂದಿಷ್ಟು ನಗು ಬಾರದ ಜೋಕುಗಳು, ಹಲವಾರು ದೇವರ ಚಿತ್ರಗಳು, 'must watch' ವಿಡಿಯೋಗಳು, ಸಿನಿಮಾ ನಟರೊಬ್ಬರು ತಮ್ಮ ಧರ್ಮಪತ್ನಿಯವರೊಡನೆ ತೆಗೆಸಿಕೊಂಡ "ಅಪರೂಪದ ಚಿತ್ರ" ಎಂಬ ಟೈಟಲ್ ಹೊತ್ತ ಭಾವಚಿತ್ರ, ಒಂದೆರಡು ಉತ್ತಮ ಮಾಹಿತಿಗಳನ್ನು ನೋಡ್ತಿದ್ದಂತೆ, ಕಣ್ಣಿಗೆ ಬಿದ್ದಿದ್ದು ಈ ಒಂದು ಲೈನ್ ಸ್ಟೇಟಸ್ ... ನಂಬೋಕ್ಕೇ ಆಗಲಿಲ್ಲ ... ಹೀಗೂ ಉಂಟೆ? ಇದು ನಿಜವೇ ಅಂತ ಚಿವುಟಿ ನೋಡಿಕೊಳ್ಳಲು ಪಕ್ಕದಲ್ಲಿ ಯಾರೂ ಇರಲಿಲ್ಲ !!!
ಇದೊಳ್ಳೇ ಕೇಸ್ ಆಯ್ತಲ್ಲ? ನಿಮ್ಮನ್ನು ಚಿವುಟಿ ನೋಡಿಕೊಂಡು ಖಾತ್ರಿ ಮಾಡಿಕೊಳ್ಳಲು ಪಕ್ಕದಲ್ಲಿ ಯಾರು ಏಕೆ ಬೇಕು ಅಂದಿರಾ ? ಎಮ್ಮೆ ಚರ್ಮ ... ಚಿವುಟಿಕೊಂಡರೆ ಗೊತ್ತಾಗೋದೇ ಇಲ್ಲ .. ಅಲ್ಲದೇ ಒಮ್ಮೆ ಹೀಗೇ ಆಯ್ತು ... ಬಸ್ಸಿನಲ್ಲಿ ಜೋಲಾಡಿಕೊಂಡು ಹೋಗ್ತಿದ್ದೆ. ಯಾವುದೋ ಒಂದು ಸ್ಟಾಪು ಬಂತು .. ಕಿಟಕಿಯಿಂದ ಹೊರಗೆ ಕಣ್ಣಾಡಿಸುತ್ತಿದ್ದವನಿಗೆ ನಂಬಲಾರದ ದೃಶ್ಯವೊಂದು ಕಣ್ಣಿಗೆ ಬಿತ್ತು ... ನಗುವನ್ನೇ ಮರೆತಿರುವ ರಾಜಕಾರಣಿಯೊಬ್ಬರು ಯಾರೊಂದಿಗೋ ಮಾತನಾಡುತ್ತ ಜೋರಾಗಿ ನಗುತ್ತಾ ನಿಂತಿದ್ದರು .... ನಂಬಲಾಗಲೇ ಇಲ್ಲ ... ಚಿವುಟಿಕೊಂಡು ಕನಸೋ ನನಸೋ ಖಾತ್ರಿ ಮಾಡಿಕೊಳ್ಳೋಣ ಅಂದರೆ ಒಂದು ಕೈ ಬಿಡಿಸಿಕೊಂಡು ಚಿವುಟಿಕೊಳ್ಳಲೂ ಸ್ಥಳವಿಲ್ಲದಂತೆ ಬಸ್ ತುಂಬಿತ್ತು ... ತಟ್ಟನೆ ಉಪಾಯ ಹೊಳೆಯಿತು ...
ಮೇಲೆ ಬಾರ್ ಹಿಡಿದಿದ್ದ ನನ್ನ ಎಡಗೈಯನ್ನು ಹಾಗೇ ಲೈಟಾಗಿ ಜಾರಿಸಿ ಅಲ್ಲೇ ಇದ್ದ ಇನ್ನೊಂದು ಹಸ್ತವನ್ನು ಚಿವುಟಿದೆ ... ಸ್ವಲ್ಪ ಜೋರಾಯಿತೇನೋ, ಅವನು ಸ್ವಲ್ಪ ಜೋರಾಗೇ ಕುಯ್ ಅಂದ ... ಅವನ ಮುಂದಿನವ ಏನಾಯ್ತು ಎಂದು ತಿರುಗುವಾಗ ’ಕುಯ್’ ಅಂದವನ ಕೈ ಆತನ ಜೇಬಿನಲ್ಲಿರುವುದು ಅರಿವಾಗಿ, ಶುರುವಾಯ್ತು ಗಲಾಟೆ ... ಕೊನೆಗೆ ನಾನು ಚಿವುಟಿದವನು ಜೇಬುಗಳ್ಳ ಎಂದು ತಿಳಿದುಬಂದು, ಜನರು ವೀರಾವೇಶದಿಂದ ಬಿಟ್ಟಿ ಸಿಕ್ಕವನಿಗೆ ಧರ್ಮದೇಟು ಹಾಕಿ ನನಗೆ ಶಭಾಷ್’ಗಿರಿ ಕೂಡ ಕೊಟ್ಟರು ಅನ್ನಿ !
ಇಷ್ಟಕ್ಕೂ ಆ ಒಂದು ಲೈನ್ ಸ್ಟೇಟಸ್’ನಲ್ಲಿ ಇದ್ದುದಾದರೂ ಏನು? ... "ಹ್ಯಾಪಿ ಸತ್ಯವಂತರ ದಿನ" ಅಂತಿತ್ತು ... ಅಮ್ಮನ ದಿನ, ಅಪ್ಪ ದಿನ, ಪ್ರೇಮಿಗಳ ದಿನ, ಸ್ನೇಹತರ ದಿನ ಎಂತೆಲ್ಲ ದಿನಗಳ ಬಗೆ ಗೊತ್ತಿರುವ ನನಗೆ ಇದ್ಯಾವುದಿದು ಹೊಸ ದಿನ ಅಂತ ಅರ್ಥವೇ ಆಗಲಿಲ್ಲ? ಎಲ್ಲಿಂದ ಬಂದಿರಬಹುದು ಎಂದು ನೋಡಿದರೆ "Learn_to_speak_truth_in_24_hrs" ಅನ್ನೋ ಫೇಸ್ಬುಕ್ ಪೇಜಿನಿಂದ ’ಹರಿಶ್ಚಂದ್ರ’ ಅನ್ನುವವರಾರೋ ಶೇರ್ ಮಾಡಿದ್ದರು ... ಆ ಪೇಜಿನ ಹೆಸರು, ಆ ಇನ್ನೊಬ್ಬರ ಹೆಸರು ಇದೇ ಮೊದಲು ಕೇಳ್ತಿರೋದು ...
ಆಸಕ್ತಿದಾಯಕವಾಗಿದೆ ಅಂತ ಆ ಪೇಜ್’ಗೆ ಹೋಗಿ ಮಾಹಿತಿ ಪಡೆದೆ ... "ತಿಂಗಳೊಂದರಲಿ ೫ ಶುಕ್ರವಾರಗಳು, ೫ ಶನಿವಾರಗಳು ಮತ್ತು ಐದು ಭಾನುವಾರಗಳು ಬಂದ ಹೊತ್ತು ಆ ಭಾನುವಾರವನ್ನು ’ಸತ್ಯವಂತರ ದಿನ’ ಎಂದು ಆಚರಿಸಲಾಗುತ್ತದಂತೆ. ಆಫೀಸಿಗೆ ರಜೆ ಇರುವುದರಿಂದ ಭಾನುವಾರದಂದೇ ಆಚರಿಸುವುದು ಸೂಕ್ತ ಎಂದು ಸಮಿತಿ ತೀರ್ಮಾನ ಮಾಡಿದೆಯಂತೆ" ... ಮಾರ್ಚ್ ೨೦೧೩ ತಿಂಗಳ ಕೊನೆಯ ಭಾನುವಾರ ಹಾಕಿದ ಅಪ್ಡೇಟ್’ಗೆ ಯಾರೋ ವಿಶ್ವಾಮಿತ್ರ ಅನ್ನುವವರು ಲೈಕ್ ಮಾಡಿದ್ದರು ... ಹಾಗಾಗಿ ಇಂದು ನನ್ನ ಕಣ್ಣಿಗೆ ಬಿತ್ತು ...
ಅದು ಸರೀ, ವರ್ಷವೊಂದರಲ್ಲಿ ಒಂದಕ್ಕಿಂತ ಹೆಚ್ಚು ತಿಂಗಳು ಅರ್ಹವಾದರೇ? ಅಥವಾ ಯಾವ ತಿಂಗಳಲ್ಲೂ ಈ ಐದುಗಳು ಬಾರದೇ ಇದ್ದಲ್ಲಿ? ಅಲ್ಲಿ ಅದಕ್ಕೆ ಉತ್ತರವಿರಲಿಲ್ಲ ...
ಶುಕ್ರ/ಶನಿವಾರಗಳಾದಲ್ಲಿ ಬೆಳಿಗ್ಗೆ ಆಫೀಸಿಗೆ ತಡವಾಗಿ ಹೋದಲ್ಲಿ ಬಾಸ್’ಗೆ ರೀಲು ಬಿಡಬೇಕು .. ಅದರಿಂದ ಸತ್ಯವಂತರ ದಿನಕ್ಕೆ ಧಕ್ಕೆ ಆಗುವುದು ಎಂದು ಭಾನುವಾರಕ್ಕೆ ಇಟ್ಟುಕೊಂಡಿರುವುದು ಸೂಕ್ತವೇ ಸರಿ ...
ಇಂದು ಭಾನುವಾರ ... ಹೇಗಿದ್ರೂ ಹೆಂಡತಿ ಬೇರೆ ಊರಲ್ಲಿಲ್ಲ ... ಅಂದು ಆಚರಿಸಲಾಗದ ಆ ದಿನವನ್ನು ಇಂದೇಕೆ ಆಚರಿಸಬಾರದು?
ಫೇಸ್ಬುಕ್’ನಿಂದ ಲಾಗ್-ಔಟ್ ಆಗಿ, ನಿತ್ಯಕರ್ಮಗಳನ್ನು ಮುಗಿಸಿ ... ದೇವರ ಮುಂದೆ ಸಾಷ್ಟಾಂಗ ಅಡ್ಡಬಿದ್ದೆ ... ಹೊಟ್ಟೆ ಅಡ್ಡಬರುತ್ತೆ ಅಂತ ದಿನವೂ ದೇವರಿಗೇ ರೀಲ್ ಬಿಡುವುದನ್ನು ಇಂದು ಮಾಡಲಾರೆ ...
ಈಗ ಹೊರಗಡೆ ಎಲ್ಲಾದರೂ ಹೋಗಲೇಬೇಕು ... ಮೈ-ಕೈಯಲ್ಲಿ ಸ್ವಲ್ಪ ಸಣ್ಣ ನೋವು ಎಂದು ನನಗೆ ನಾನೇ ಸುಳ್ಳು ಹೇಳಿಕೊಂಡು ವಾಕಿಂಗ್ ತಪ್ಪಿಸುವ ಹಾಗಿಲ್ಲ ... ಬೇರೆಲ್ಲೆಲ್ಲೂ ಸುಡುಬಿಸಿಲಿದ್ದರೂ ಅದ್ಯಾಕೋ ನಮ್ ಬೀದಿಯಲ್ಲಿ ಮಾತ್ರ ಭಯಂಕರ ಮಳೆ ಅಂತ ಸ್ವಯಂ ರೀಲು ಬಿಟ್ಟುಕೊಳ್ಳುವ ಹಾಗಿಲ್ಲ ... ಸತ್ಯವಂತರ ದಿನ !!
"ಮನೆಯ ಬಾಗಿಲ ಚಿಲುಕ ಜಡಿದು ಹೊರಗೆ ಹೊರಟು ಹಲವಾರು ಪರಿಚಿತ ನಗುಮೊಗಗಳಿಗೆ ಕಿರು ನಗೆ ಸೂಸಿ ಮುಂದೆ ಸಾಗುತ್ತ, ಸೈಕಲ್ಲುಗಳು ಮತ್ತು ಆಟ ಆಡುವ ಮಕ್ಕಳ ಮಧ್ಯೆ ನುಸುಳಿಕೊಂಡು, ಎಡಬಲಕ್ಕೆ ಇರೋ ಪೆಟ್ಟಿಗೆ ಅಂಗಡಿಗಳನ್ನು ನೋಡುತ್ತ, ಅಲ್ಲೇ ಫುಟ್ ಪಾಥ್ ಮೇಲೆ ಚೇರ್ ಹಾಕ್ಕೊಂಡು ಪೇಪರ್ ಓದುತ್ತಿದ್ದ ಸುಬ್ಬರಾಯರಿಗೆ ನಮಸ್ಕಾರ ಹೊಡೆದು ..." ಎಂದೆಲ್ಲ ಹೇಳಹೊರಟರೆ "ಏನ್ ಸಾರ್, ೧೯೪೭ ಸ್ಟೋರೀನಾ?" ಅಂತೀರಾ ... ಸತ್ಯವಂತರ ದಿನ, ಹಾಗಾಗಿ ಸತ್ಯವನ್ನೇ ಹೇಳುತ್ತೇನೆ ...
ಮನೆ ಬಾಗಿಲ ಹೊರಗೆ ಹೊರಟು, ಬೀಗ ಜಡಿದು, ಮೂರು ಬಾರಿ ಬಾಗಿಲೇ ಕಿತ್ತುಹೋಗುವಂತೆ ಎಳೆದು, ಗಟ್ಟಿಯಾಗಿದೆ ಎಂದು ಖಾತ್ರಿ ಪಡಿಸಿಕೊಂಡು, ನಂತರ ಕಬ್ಬಿಣದ ಜಾಲರಿ ಗೇಟಿನ ಬೀಗ ಬಡಿದು ಹೊರಗೆ ಬಂದು ಬೀದಿಯಲ್ಲಿ ನಿಂತು ನಾಲ್ಕು ಬಾರಿ ಮನೆ ಕಡೆ ನೋಡಿ, ಯಾವ ಕಿಟಕಿಯೂ ತೆರೆದಿಲ್ಲ ಎಂದು ಗ್ಯಾರಂಟಿ ಆದ ಮೇಲೆ, ಮತ್ಯಾರೂ ನಮ್ ಮನೆ ಫೋಟೋ / ವಿಡಿಯೋ ತೆಗೆಯುತ್ತಿಲ್ಲ ಎಂದು ಖಚಿತಪಡಿಸಿಕೊಂಡಾದ ಮೇಲೆ ವಾಕಿಂಗ್ ಹೊರಟೆ ! ಇನ್ನು ಎದುರಾಗುವವರೆಲ್ಲರೂ ಪರಿಚಯವೇ ಇಲ್ಲದ ಅಕ್ಕಪಕ್ಕದ ಸಿಡುಕು ವದನಗಳನ್ನು. ಇನ್ನೊಂದು ಹೆಜ್ಜೆ ಇಡುವ ಮುನ್ನ ಮನೆ ಹೊರಗಿನ ಲೈಟ್ ಆರಿಸಿದೆಯೋ ಇಲ್ಲವೋ ಎಂದು ನೋಡಿದೆ. ಸದ್ಯ ಆರಿಸಿತ್ತು. ಮರೆತು ನೆನ್ನೆ ರಾತ್ರಿ ಹಾಕಿರಲಿಲ್ಲ ಸದ್ಯ.
ಹಿಂದಿನ ಕಾಲದಲ್ಲಿ ಒಂದು ಟ್ರೆಂಡ್ ಇತ್ತು. ತಾವು ಮನೆಯಲ್ಲಿ ಇಲ್ಲದಿದ್ದಾಗ ಮನೆ ಮುಂದಿನ ಅಥವಾ ಮನೆ ಒಳಗೆ ಒಂದು ಲೈಟನ್ನು ಆನ್ ಮಾಡಿಟ್ಟು ಹೋಗುತ್ತಿದ್ದರು. ಯಾರೋ ಮನೆಯಲ್ಲಿ ಇದ್ದಾರೆ ಎಂದು ಅಂದುಕೊಳ್ಳಲಿ ಎಂದು. ಇಂದಿನ ದಿನಗಳಲ್ಲಿ ಮನೆ ಮುಂದೆ ದೀಪ ಯಾರು ಹೊತ್ತಿಸುತ್ತಾರೆ. ದಿನದಿನಕ್ಕೂ ಏರುತ್ತಿರುವ ಬೆಲೆಗಳನ್ನು ನೋಡಿದರೆ, ಇದೊಂದು ವೃಥಾ ಖರ್ಚು ಎಂದು ಯಾರೂ ಸುಮ್ಸುಮ್ನೆ ಲೈಟ್ ಹಾಕೋದೇ ಇಲ್ಲ. ಅಂದರೆ, ಮನೆ ಹೊರಗೆ ದೀಪ ಆರಿಸಿದ್ದಲ್ಲಿ ಮನೆಯಲ್ಲಿ ಯಾರೋ ಇದ್ದಾರೆ ಎಂದು ಅರ್ಥ !!!
ಎರಡು ರೋಡ್ ದಾಟಿದೊಡನೆ ’ಧನ್ವಂತ್ರಿ’ ಮಾಲ್ ಸಿಕ್ತು ... ಈ ನಡುವೆ ಚಿಕ್ಕಪುಟ್ಟ ಅಂಗಡಿಗಳು ಇಲ್ಲ ಅನ್ನೋದು ನಿಮಗೂ ಗೊತ್ತಿರೋ ವಿಷಯವೇ ! ಈ ಮಾಲ್ ಬಂದ ಮೇಲೆ ಒಂದು ವಿಷಯದಲ್ಲಿ ನನ್ನ ಸ್ಟೇಟಸ್ ಏರಿದೆ ಅನ್ನಬಹುದು ... ಮಾಲ್ ಬರುವುದಕ್ಕೆ ಮುನ್ನ, ಯಾರಿಗಾದರೂ ಅಡ್ರಸ್ ಹೇಳಬೇಕಾದರೆ "... ಅಲ್ಲಿ ಬಂದರೆ ಒಂದು ಕಾಕ ಅಂಗಡಿ ಇದೆ ... ಅಲ್ಲಿ ಎಡವಿ ಬಿದ್ರೆ ಒಂದು ಕ್ಲಿನಿಕ್ ಇದೆ .. ಕ್ಲಿನಿಕ್ ಎದುರಿಗೇ ನಮ್ಮ ಮನೆ ಅಂತ" .. ಈಗ ಹಾಗಲ್ಲ "ಧನ್ವಂತರಿ ಮಾಲ್ ಇದೆಯಲ್ಲ ಅಲ್ಲಿಂದ ...." ಅಂತ ಹೇಳ್ತೀನಿ ...
ಹಮ್ ಮ್ ಮ್ ... ಇಲ್ಲ ಕಣ್ರೀ, ಈ ಸತ್ಯವಂತರ ದಿನ ಮತ್ತೆ ನನ್ನ ಮನಸ್ಸನ್ನು ಚುಚ್ಚುತಿದೆ ... ನಿಜ ಹೇಳಿಬಿಡ್ತೀನಿ ...
ಈ ಮಾಲ್ ಬಂದ ಮೇಲೆ, ನನಗೆ ಸ್ನೇಹಿತರು (ಬೇಡದ) ಜಾಸ್ತಿ ಆಗಿಬಿಟ್ಟಿದ್ದಾರೆ ಕಣ್ರೀ ... ಮಾಲ್’ಗೆ ಅಂತ ಬರೋವ್ರು ನನ್ನ ಮನೆ ಮುಂದೆ ಅವರ ಕಾರು ಪಾರ್ಕ್ ಮಾಡ್ತಾರೆ ... ಭಾನುವಾರ ಮಧ್ಯಾನ್ನ ಉಂಡು ಮಲಗಿದ್ದಾಗ, ಗೇಟು ಬಡಿದೋ / ಕಾಲಿಂಗ್ ಬೆಲ್ ಒತ್ತಿಯೋ ನನ್ನನ್ನು ಎಬ್ಬಿಸಿ ’ಮಲಗಿದ್ರಾ? ಸಾರಿ ... ಕಾರು ನಿಲ್ಲಿಸಿದ್ದೀನಿ ... ಈಗ ಬಂದುಬಿಡ್ತೀನಿ" ಅಂತ ಹೇಳಿ ಹೋಗ್ತಾರೆ ... ಇಪ್ಪತ್ತು ಮೈಲಿ ದೂರದಲ್ಲಿರುವ ತಮ್ಮ ಮನೆಯಿಂದ ಇಲ್ಲಿಗೆ ಬರಲು ಎರಡು ತಾಸು ತೆಗೆದುಕೊಂಡು ’ಈಗ’ ಬಂದುಬಿಡೋಕ್ಕೆ ಆಗುತ್ತ? ಬರೀ ಸುಳ್ಳು ! ಸುಳ್ಳು ಅನ್ನೋದಕ್ಕಿಂತ ಬಾಯಿಮಾತು ಅಷ್ಟೇ ! ... ಒಮ್ಮೆ ಹಾಗೇ ಆಯ್ತು ... ಮಧ್ಯಾಹ್ನ ಮೂರಕ್ಕೆ ಹೋಗಿ ರಾತ್ರಿ ಎಂಟಕ್ಕೆ ವಾಪಸ್ ಬಂದ ಒಬ್ಬರು ನನ್ನನ್ನು ಕೇಳಿದರು "ಯಾರೋ ನನ್ನ ಕಾರಿಗೆ ಸೈಡ್’ನಲ್ಲಿ ಗುದ್ದಿ ಹೋಗಿದ್ದಾರೆ, ನೀವು ನೋಡಿಕೊಳ್ಳಲಿಲ್ವಾ? ಏನ್ ಜನಾರೀ, ಥತ್’ ಅಂತ ... ಇದೊಳ್ಳೇ ಕೇಸು ಮರಾಯ್ರೇ ! ಈ ಗೋಳೇ ಬೇಡ ಅಂತ ಮನೆ ಮುಂದೆ ಅಡ್ಡಲಾಗಿ ನನ್ನ ’ದೊಡ್ಡ’ ಸ್ಕೂಟಿ ನಿಲ್ಲಿಸಿದ್ದೆ ... ಸ್ವಲ್ಪ ಸಮಯದ ನಂತರ ಹೊರಗೆ ಬಂದರೆ ನನ್ನ ಗಾಡಿ ಜಾಗದಲ್ಲಿ ಯಾವುದೋ ಫೋರ್ಡ್ ಗಾಡಿ ನಿಂತಿತ್ತು. ಎದೆ ದಸಕ್ ಅಂತು ! ಪುಣ್ಯಕ್ಕೆ ನನ್ನ ಗಾಡಿಗೆ ಏನೂ ಆಗಿರಲಿಲ್ಲ ... ಯಾರೋ ಅದನ್ನ ನನ್ನ ಕಾಂಪೌಂಡ್’ನಲ್ಲಿ ನಿಲ್ಲಿಸಿ (ಎತ್ತಿಟ್ಟು) ತಮ್ಮ ಕಾರು ನಿಲ್ಲಿಸಿದ್ದರು ... ಸತ್ಯವನ್ನೇ ಹೇಳುತ್ತೇನೆ ... ಇಂಥವರಿಗೆಲ್ಲ ನಾನು ಹಾಕಿರುವ ಶಾಪ ಏನಪ್ಪ ಅಂದರೆ "ನಿಮ್ಮ ಮನೆಗಳ ಬಳಿಯಲ್ಲೂ ಮಾಲ್’ಗಳು ತೆರೆಯಲಿ" ಅಂತ ...
ಹೇಗಿದ್ರೂ ವಾಕಿಂಗು ... ಬೀದಿಯಲ್ಲಿ ನೆಡೆಯೋಕ್ಕಿಂತ ಅಂಗಡಿ ಒಳಗೆ ನೆಡೆಯೋದೇ ಕ್ಷೇಮ ಅಂತ ಒಳಕ್ಕೆ ಹೋದೆ ... ಸುಮ್ನೆ ತಿರುಗಾಡೋಕ್ಕೆ ಬುಟ್ಟಿ/ಕಾರ್ಟು ಯಾಕೆ ಅಂತ ಕೈ ಬೀಸಿಕೊಂಡೇ ಹೋದೆ .. ಮಾಲ್’ನಲ್ಲಿ ಅಲೆ ಅಲೆಯಾಗಿ "ಮೈ ನೇಮ್ ಈಸ್ ಶೀಲಾ, ಶೀಲಾ ಕಿ ಜವಾನಿ" ಹಾಡು ಮೂಡಿ ಬರ್ತಿತ್ತು ... ಆ ಹಾಡು ಕೇಳುತ್ತ ಹಾಡಿಗೆ ಹೆಜ್ಜೆ ಹಾಕುತ್ತಿತ್ತು ಐದು ವರ್ಷದ ಹುಡುಗಿ .. ಅಪ್ಪ-ಅಮ್ಮ ಬಾಯಗಲ ಮಾಡಿಕೊಂಡು ದಾರಿಗೆ ಅಡ್ಡಲಾಗಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು ... ಇಂಥಾ ಹಾಡೇ ಹಾಕಬೇಕೂ ಅಂತ ಕಾನೂನು ಇದ್ದರೆ "ಜೋಕೆ, ನಾನು ಬಳ್ಳಿಯ ಮಿಂಚು" ಹಾಕಬಹುದಲ್ಲ? ಸತ್ಯವಂತರ ದಿನ ಕಣ್ರೀ, ಸುಳ್ಳು ಹೇಳೋಲ್ಲ ... ಬರುತ್ತಿದ್ದ ಹಾಡಿಗೆ ನಾನೇ ಹೆಜ್ಜೆ ಹಾಕುತ್ತಿದ್ದೆ !
ಮುಂದಿನಿಂದ ಬಂತೊಂದು ದನಿ may i help you ಅಂತ ... ನಾನು "ಕನ್ನಡ ಮಾತಾಡ್ತೀಯಾ?" ಅಂದೆ ... ಮತ್ತೆ "may i help you" ಅಂದ ... "ಅಲ್ಲಯ್ಯಾ, ಕನ್ನ .." ಅನ್ನೋಷ್ಟರಲ್ಲಿ ತಿಳೀತು ಅವನು ಎರಡನೇ ಬಾರಿ ಕೇಳಿದ್ದು ನನಗಲ್ಲ, ನನ್ನ ಹಿಂದಿನವರಿಗೆ ಅಂತ ... ಅಂದರೇ, ನಾನಿದ್ದರೂ ಅವನಿಗೆ ನಾನಿಲ್ಲ ... ಅವರಿಬ್ಬರ ಹರುಕು-ಮುರುಕು ಆಂಗ್ಲ ಸಂಭಾಷಣೆ ಸಾಗುತ್ತಿದ್ದಂತೇ, ನಾನು ಒಳ ಹೊಕ್ಕೆ ...
ಅಲ್ಲೊಂದು ಸೀನು ... ಎಳಸು ಗಂಡ ಹೆಂಡತಿಗೆ ಕೇಳ್ತಿದ್ದ "shall I get green beans to make ಹುರುಳೀಕಾಯಿ ಪಲ್ಯ?" ... ವಾವ್! ಹುರುಳೀಕಾಯಿ ಪಲ್ಯಕ್ಕೆ ಗ್ರೀನ್ ಬೀನ್ಸ್ ಬಳಸ್ತಾರೆ ಅಂತ ನನಗೆ ಗೊತ್ತೇ ಇರಲಿಲ್ಲ ! ಆದರೆ ಇನ್ನೂ ಮೋಜು ತಂದಿದ್ದು ಅಂದರೆ ಆ ಎಳೇ ಹೆಂಡತಿಯ ಉತ್ತರ "ನೀನು ತಾನೇ ಅಡುಗೆ ಮಾಡೋದು? get whatever you want ! ... ಮಧ್ಯಮದವರ ಭಾಷೆಯಲ್ಲಿ ಹೇಳುವುದಾದರೆ ಇವರು ಟೆಕ್ಕಿಗಳು !! ಮನದಲ್ಲೇ ನಕ್ಕು ಮುಂದೆ ಹೋದೆ ! ಆಕೆ ಸದಾ ಸತ್ಯ ಹೇಳುತ್ತಾಳೋ ಅಥವಾ ಆಕೆಯೂ ಸತ್ಯವಂತರ ದಿನ ಆಚರಿಸುತ್ತಿದ್ದಾಳೋ ಗೊತ್ತಿಲ್ಲ !
ಮತ್ತೊಂದು ಸಂಸಾರ ... ಚಿಕ್ಕ ಹುಡುಗನೊಬ್ಬ ’ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್ ತೆಗೆದುಕೊಂಡು ಬಂದು ಕಾರ್ಟ್’ನಲ್ಲಿ ಹಾಕಿದ ... ಅವನಮ್ಮ ಅದನ್ನು ತೆಗೆದಿಟ್ಟು ’ನಬಿಸ್ಕೋ ಕುಕ್ಕಿ’ ತಂದು ಕಾರ್ಟ್’ನಲ್ಲಿ ಇಟ್ಟಲು .. ಸದ್ಯ ಕುಕ್ಕಲಿಲ್ಲ ... ಅವರವರಿಗೆ ಏನು ಬೇಕೋ ತಿನ್ನಬಹುದು, ಅದ್ಕ್ಯಾವ ದೋಣೆನಾಯಕನ ಅಡ್ಡಿ? ಆದರೂ ’ಪಾರ್ಲೆ-ಜಿ ಮುಚ್ಚುತ್ತಿರೋದು ಯಾಕೆ ಅಂತ ಸತ್ಯದ ಅರಿವಾಯ್ತು’ !
ಅರ್ಧ ಘಂಟೆ ಸುತ್ತಾಡಿ ಹೊರ ಬಂದೆ ...
ದೊಡ್ಡ ಮಾಲ್ ಬಂದಿದ್ದರೂ ಸೋಜಿಗ ಅಂದರೆ ಅಲ್ಲೇ ಮೂಲೆಯಲ್ಲಿದ್ದ ಕಾಕ ಅಂಗಡಿಗೆ ಮಾತ್ರ ಧಕ್ಕೆ ಆಗಿರಲಿಲ್ಲ ... ಅದು ನನ್ನ ಖಾಯಂ ಅಂಗಡಿ ... ಹಿರಿಯ ಕಾಕ ಈಗಿಲ್ಲ, ಬದಲಿಗೆ ಅವನ ಮಗನಿದ್ದಾನೆ. ಈ ಮಾಲ್ ಗಲಾಟೆಯಲ್ಲಿ ಅವನು ನೊಣ ಹೊಡೀತಿರ್ತಾನೆ ಅಂತ ಗೊತ್ತು. ಮಾತನಾಡಿಸೋಣ ಅಂತ ಹೋದೆ .. "ಬನ್ನಿ ಸಾರು ... ಆರೋಕ್ಯಮಾ?" ಅಂದ .. ಮಾಲ್ ಭಾಷೆಗಿಂತ ಇವನ ಭಾಷೆಯೇ ವಾಸಿ ಎಂದುಕೊಂಡು ಸುಮ್ನೆ ಬಂದೆ ಅಂತ ಹೇಳಿ "ಮಾಲ್ ಬಂದರೂ ನಿನ್ ಅಂಗಡಿ ಮುಟ್ಟೋಕ್ಕೆ ಅವರಿಗೆ ಆಗಲಿಲ್ಲ ನೋಡು .. ಅದೇ ಆಶ್ಚರ್ಯ ... ಹೇಗಿದೆ ವ್ಯಾಪಾರ ?" ಅಂದೆ ... ಅದಕ್ಕೆ ಅವನು "ಸಾರ್ ಇವತ್ತು ಸತ್ತವಂತರ ದಿನ ಮಾಡ್ತಿದ್ದೀನಿ .. ಸುಳ್ ಹೇಳಲ್ಲ .. ಅದೂ ನಿಮ್ ಹತ್ತಿರ ಮಾತ್ರ ಇಲ್ಲೆ ಸಾರ್ ... ಮಾಲ್ ಬಂದು ನಿಮ್ಮ ಮನೆಯವರು ಅಲ್ಲೇ ಐಟಮ್ಸ್ ತೊಗೊಂಡ್ರೂ, ರೇಜರ್ ಬ್ಲೇಡಿಗೆ ನೀವು ನಮ್ಮ ಅಂಗಡಿಗೇ ಬರ್ತೀರ ... ಅದು ನಮಗೆ ಖುಷಿ ..."
ಅಂದರೇ ಇವನೂ ನನ್ನ ಹಾಗೇ ಇವತ್ತು ಸತ್ಯವಂತರ ದಿನ ಆಚರಣೆ ಮಾಡ್ತಿದ್ದಾನೆ ... "ಅದು ಸತ್ತವಂತರ ದಿನ ಅಲ್ಲ ಕಣಯ್ಯ ... ಆ ದಿನಕ್ಕೆ ಮಹಾಲಯ ಅಂತಾರೆ" "ಏ! ಎನಕ್ಕು ಕೊತ್ತಿಲ್ವಾ ಸಾರ್ ... ನೀವು ಕರಿ ತಿಳ್’ಗೆ ನಮ್ಮ ಅಂಗಡಿಗೆ ತಾನೇ ಬರೋದು?" .... ಹೌದಲ್ವೇ?
"ಆಮೇಲೆ ಯಾಪಾರ ಸರ್, ಹೊಸ ಗೋರ್ಮೆಂಟ್ ಬಂದ ಮೇಲೆ ಸ್ವಲ್ಪ ವಾಸಿ ಸರ್ ... ಜನ ಒಂದು ರುಪಾಯಿ ಅಕ್ಕಿ ನಮಗೆ ಮಾರ್ತಾರೆ ... ಬಂದಿರೋ ದುಡ್ಡು ತೊಗೊಂಡ್ ಮಾಲ್’ಗೆ ಹೋಗ್ತಾರೆ ... ಇವರು ಮಾರಿದ್ ಅಕ್ಕಿ ನಾವು ನಿಮ್ಮಂಥೋರಿಗೆ ಚೆನ್ನಾಗಿ ಪ್ಯಾಕ್ ಮಾಡಿ ಮಾಲ್’ನಲ್ಲಿ ಮಾರ್ತೀವಿ ... " ಸತ್ಯವನ್ನೇ ನುಡಿದಿದ್ದ ಕಾಕ .... "ಅಲ್ಲಪ್ಪಾ, ಮಾಲ್’ನಲ್ಲಿ ಪ್ಯಾಕ್ ಮಾಡ್ತೀವಿ, ಮಾರುತ್ತೀವಿ ಅಂತೆಲ್ಲ ಅಂದ್ಯಲ್ಲ, ಆ ಮಾಲ್’ನವರು ನಿನ್ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರಾ?"
"ಅಯ್ಯೋ ಸಾರೇ, ಇವತ್ತು ಸತ್ತವಂತರ ದಿನ ... ನಿಜ ಹೇಳಿಬಿಡ್ತೀನಿ ... ಧನ್ವಂತರೀ ಮಾಲ್ ನಂದೇ ಸಾರೇ !!" ... ವಿಷಯ ಕೇಳಿ ಕುಸಿದು ಬೀಳಲಿದ್ದೆ:-) .. ಯಾವ ಹುತ್ತದಲ್ಲಿ ಯಾವ ಹಾವಿದೆಯೋ !!
ಹೇಗಿದ್ರೂ ಹೊರಗೆ ಬಂದಿದ್ದೀನಿ, ರಿಪೇರಿಗೆ ಕೊಟ್ಟಿರೋ ಗಾಡಿ ತೊಗೊಂಡು ಹೋಗೋಣ ಅಂತ ರಫೀಕ್ ಅಂಗಡಿಗೆ ಹೋದೆ ... "ಸಲಾಮ್ ಸಾಬ್ ! ನಿಂದು ಗಾಡಿ ರಿಪೈರ್ ಆಯ್ತು ... ಇವತ್ತು ನಂದು ಸತ್ಯವಂತರ ದಿನ ಮಾಡ್ತಾರೆ ಸಾಬ್ ... ಸುಳ್ಳು ಹೇಳಲ್ಲ ... ನಿಮ್ ಗಾಡಿ ನನ್ ಐದು ವರ್ಷದ್ದು ಮಗ ಇಲ್ವ ಹುಸೇನ್’ಉ, ಅವನು ತೊಗೊಂಡ್ ಹೋಗಿದ್ದ ... ಮಡ್ ಗಾರ್ಡ್’ಗೆ ಗುದ್ಬಿಟ್ಟಿದ್ದಾನೆ ... ಪರವಾಗಿಲ್ಲ ಸಾರ್, ಯಾವ್ದಾದ್ರೂ ದೊಡ್ ಗಾಡಿದು ಮಡ್ ಗಾರ್ಡ್ ಅಡ್ಜಸ್ಟ್ ಮಾಡಿಕೊಡ್ತೀನಿ ಬಿಡಿ. ಮತ್ತೆ, ನಿಮ್ ಗಾಡಿ ಪೆಟ್ರೋಲ್ ಸ್ವಲ್ಪ ನಮ್ ಗಾಡಿಗೆ ಹಾಕ್ಕೊಂಡೆ ... ಅರ್ಜಂಟ್ ಮನೇಗೆ ಹೋಗ್ಬೇಕಿತ್ತು .. ನನ್ ಗಾಡೀಲಿ ಪೆಟ್ರೋಲ್ ಇರ್ಲಿಲ್ಲ ... ಶುಕ್ರಿಯ ಸಾಬ್ ... ಸಂಜೆ ಬಂದು ಬಿಡಿ ಸಾರ್. ನಿಮ್ ಗಾಡಿ ರೆಡಿ ಇರುತ್ತೆ. " ನನ್ನ ಮಾತಿಗೆ ಅಲ್ಲಿ ಅವಕಾಶವೇ ಇರಲಿಲ್ಲ ... ನಾನು ಕೇಳೋಕ್ಕೆ ಮುಂಚೆ ಅವನೇ ಎಲ್ಲ ನುಡಿದಿದ್ದ ...
ಇದೇ ಕಣ್ರೀ ಪ್ರಾಬ್ಲಮ್ಮು ! ಜನ ನಿಜ ಹೇಳಿಬಿಟ್ರೆ ಜಗಳ ಆಡ್ಲಿಕ್ಕೇ ಆಗಲ್ಲ ... ಮುಂಚೇನೂ ಜಗಳ ಆಡ್ತಿರ್ಲಿಲ್ಲ ಬಿಡಿ, ಯಾಕಂದ್ರೇ, ಅವನು ಇಷ್ಟು ದಿನ ನನ್ನ ಮುಖದ ಮೇಲೇ ಸುಳ್ಳು ಹೇಳ್ತಿದ್ರೂ ಗೊತ್ತಾಗ್ತಿರ್ಲಿಲ್ಲ ... ನಾನೇನೂ ಗಾಡಿ ಬೇಕು ಅಂತ ಬರಲಿಲ್ಲ ... ಸುಮ್ನೆ ನೋಡ್ಕೊಂಡ್ ಹೋಗೋಣ ಅಂತ ಬಂದೆ ... ಮುಂದೆ ಹೋದಂತೆ ಏನೋ "ಜೈ"ಕಾರ ಕೇಳಿಸಿತು ... ಆ ದಿಕ್ಕಿನಲ್ಲಿ ಹೋದೆ ...
ಬೀದಿ ಹೊಕ್ಕೊಡನೆ ಕಂಡಿದ್ದು ಜನ ಸಮೂಹ ... ಯಾರೋ ಸ್ವಾಮೀಜಿ ಬಂದಿದ್ದಾರಂತೆ ... ಅಲ್ಲೇ ಇದ್ದ ಯಾರನ್ನೋ ಕೇಳಿದೆ ’ಯಾವ ಸ್ವಾಮಿಗಳು?" ಅಂತ ... ಅದಕ್ಕವರು "ಮಹಾಸ್ವಾಮಿಗಳು ... ಜಗದ್ ಹರುಕ ಸ್ವಾಮಿಗಳು ... ತುಂಬಾ ಸತ್ಯವಂತೆ ... ಹತ್ತು ವರ್ಷ ಹಿಮಾಲಯದಲ್ಲಿ ಇದ್ದು ಈಗ ರಿಲೀಸ್ ಆದರಂತೆ"
ಥತ್! ಜಗದೋದ್ಧಾರಕ ಹೋಗಿ ಜಗದ್ ಹರುಕ ಆಗಿತ್ತು !! ಈ ಜನಕ್ಕೆ ಇಂಗ್ಲೀಷ್ ವ್ಯಾಮೋಹ ಯಾವಾಗ ಹೋಗುತ್ತೋ .. ರಿಲೀಸ್ ಅಂತೆ ! ಆಯ್ತು ನಾನು ಸ್ವಾಮಿಗಳನ್ನ ನೋಡಿದೆ ... ಮೂವತ್ತರ ಆಸುಪಾಸು, ಹತ್ತು ವರ್ಷ ಸರ್ವೀಸು ... ಪೇಪರ್’ನಲ್ಲಿ ಈ ಸ್ವಾಮಿಗಳ ಮುಖ ನೋಡಿದ ನೆನಪು ... ಹ್ಮ್ ಮ್ ಮ್ ಮ್ ... ಅಂದ್ರೇ ಆ ಮನುಷ್ಯ ’ರಿಲೀಸ್’ ಅಂದಿದ್ದು ನಿಜ ... ಸತ್ಯವನ್ನೇ ನುಡಿದಿದ್ದ ... ಇಪ್ಪತ್ತು ವರ್ಷಕ್ಕೆ ಡೆಹ್ರಾಡೂನ್ ಸೆರೆಮನೆ ಸೇರಿದ ಈತ, ಹತ್ತು ವರ್ಷ ಅಲ್ಲಿ ಸೇವೆ ಸಲ್ಲಿಸಿ, ಈಗ ಮೂಢ ಜನರ ಕಣ್ಣಿಗೆ ಮಂಕುಬೂದಿ ಎರಚಿ ’ಸ್ವಾಮಿಗಳು’ ಅನ್ನುವ ಹೆಸರಿಗೆ ಕಳಂಕ ತಂದಿದ್ದಾನೆ ... ಸ್ವಾಮಿಗಳ ಉಪದೇಶ ಸಾಗಿತ್ತು "ಸತ್ಯ ಎಂಬೋದು ಸ್ವರ್ಗಲೋಕದಲ್ಲೆಲ್ಲೋ ಇಲ್ಲ. ಸತ್ಯಾನ್ವೇಷಣೆಗೆ ಮೂಗು ಹಿಡಿದು ತಪಸ್ಸು ಮಾಡಬೇಕಿಲ್ಲ. ಸತ್ಯ ಎಂಬೋದು ನಮ್ಮೆಲ್ಲರ ಮಧ್ಯೆ ಇರುತ್ತದೆ ... ಅದನ್ನು ಕಾಣಲು ವಿಶೇಷ ದೃಷ್ಟಿಯೂ ಬೇಕಿಲ್ಲ ... ನಮಗಿರುವ ಸಾಮಾನ್ಯ ಜ್ಞ್ನಾನವನ್ನು ಸ್ವಲ್ಪ ವಿಸ್ತಾರ ಮಾಡಿಕೊಂಡರೆ ಕಾಣುತ್ತದೆ ..." ಭಕ್ತರ ಚಪ್ಪಾಳೆ ... ಇಷ್ಟು ಸ್ಪಷ್ಟವಾಗಿ ಆತ ಸತ್ಯ ಹೇಳುತ್ತಿದ್ದರೂ, ಇವರುಗಳು ಆ ಸತ್ಯ ಅರ್ಥ ಮಾಡಿಕೊಳ್ಳಲಿಲ್ಲ ... ಇನ್ನು ಇಲ್ಲಿ ನಿಲ್ಲಲಾರೆ ...
ಮನೆ ಕಡೆ ಹೋಗುವ ಮನಸ್ಸಾಯಿತು ... ಸತ್ಯಾ, ಸತ್ಯಾ, ಸತ್ಯಾ ಎಂದು ಕೇಳಿ ಕೇಳಿ ನಾನು ಬದುಕಿದ್ದೀನಿ ಅನ್ನೋದೆ ಮರೆತಂತಾಗಿದೆ !
ಹೋಗೋ ದಾರಿಯಲ್ಲಿ ಸುಮ್ನೆ ಹಾಗೇ ಒಮ್ಮೆ ವಿಧಾನಸೌಧದ ಕಡೆ ಹೋದೆ ... ಹೋಗ್ಲಿ ಬಿಡಿ ... ಕಾದಂಬರಿ ಬರೆಯುವ ಮನಸ್ಸು ಸದ್ಯಕ್ಕಿಲ್ಲ !!!
ನನ್ನ ಅನುಭವ ಕನಸೋ ನನಸೋ ತಿಳಿಯಲಿಕ್ಕೆ ಒಮ್ಮೆ ಚಿವುಟಿ ನೋಡಿಕೊಳ್ಳಿ :-)
Comments
ಉ: ಇಂಥದ್ದೊಂದು ದಿನವಿದೆ ಗೊತ್ತಾ?
In reply to ಉ: ಇಂಥದ್ದೊಂದು ದಿನವಿದೆ ಗೊತ್ತಾ? by partha1059
ಉ: ಇಂಥದ್ದೊಂದು ದಿನವಿದೆ ಗೊತ್ತಾ?
In reply to ಉ: ಇಂಥದ್ದೊಂದು ದಿನವಿದೆ ಗೊತ್ತಾ? by bhalle
ಉ: ಇಂಥದ್ದೊಂದು ದಿನವಿದೆ ಗೊತ್ತಾ?
In reply to ಉ: ಇಂಥದ್ದೊಂದು ದಿನವಿದೆ ಗೊತ್ತಾ? by partha1059
ಉ: ಇಂಥದ್ದೊಂದು ದಿನವಿದೆ ಗೊತ್ತಾ?
ಉ: ಇಂಥದ್ದೊಂದು ದಿನವಿದೆ ಗೊತ್ತಾ?
In reply to ಉ: ಇಂಥದ್ದೊಂದು ದಿನವಿದೆ ಗೊತ್ತಾ? by makara
ಉ: ಇಂಥದ್ದೊಂದು ದಿನವಿದೆ ಗೊತ್ತಾ?