ಇಂಥವರು ನಿಮ್ಮಲ್ಲೂ ಇರಬಹುದು !

ಪ್ರತಿಯೊಂದು ಕಚೇರಿಯಲ್ಲಿಯೂ ಅಥವಾ ಕೆಲಸದ ಸ್ಥಳದಲ್ಲಿಯೂ ಈ ಕೆಳಗಿನಂತಿರುವವರು ಇದ್ದೇ ಇರುತ್ತಾರೆ.
1. ಮೊದಲನೆಯ ವರ್ಗದವರು : ಇವರು ಸದಾ ಪ್ರಾಮಾಣಿಕವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಯಾರ ಹೊಗಳಿಕೆಯಾಗಲಿ, ತಾವು ಕೆಲಸಗಾರರೆಂದು ತೋರಿಸಿಕೊಳ್ಳೋದಾಗಲಿ ಬೇಕಿಲ್ಲ. ಅತ್ಯಂತ ನಿಷ್ಟೆಯಿಂದ ಇದು ತಮಗೆ ವಹಿಸಿದ ಜವಾಬ್ದಾರಿ ಎಂದು ಅತ್ಯಂತ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ. ಸದಾ ಕೆಲಸದಲ್ಲಿಯೇ ಮಗ್ನರಾಗಿರುವ ಇವರಿಗೆ ಸಾಮಾನ್ಯವಾಗಿ ತಮ್ಮ ಸುತ್ತಲೂ ನಡೆಯುತ್ತಿರುವುದೇನೆಂದು ತಿಳಿದಿರುವುದಿಲ್ಲ. ತಿಳಿದರೂ ಅದರೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿರುತ್ತಾರೆ. ಇಂಥವರಿಂದಲೇ ಅಲ್ಲಿ ಕೆಲಸಗಳು ಅಚ್ಚುಕಟ್ಟಾಗಿ ನಡೀತಾ ಇರ್ತವೆ. ಇವರದು ತೋರಿಕೆಯಲ್ಲ ಪ್ರಾಮಾಣಿಕತೆ. ಆದರೆ ಇವರು ಎಲೆ ಮರೆಯ ಕಾಯಿಯಂತೆ ದುಡೀತಾನೇ ಇರ್ತಾರೆ. ಕೊನೆಗೆ ಯಾರ ಅರಿವಿಗೂ ಬಾರದಂತೆ ನಿವೃತ್ತರಾಗುತ್ತಾರೆ. ಇಂಥವರಿಂದಲೇ ಕಚೇರಿ ಅಥವಾ ಉದ್ಯೋಗದ ಸ್ಥಳ ಹೆಸರು ಮಾಡಿರುತ್ತದೆ. ಆದರೆ ಇವರ ಹೆಸರು ಯಾರಿಗೂ ಗೊತ್ತಿರುವುದಿಲ್ಲ.
2. ಎರಡನೆ ವರ್ಗದವರು : ಇವರೂ ಸಹ ನಿಜಕ್ಕೂ ಅತ್ಯುತ್ತಮ ಕೆಲಸಗಾರರೇ. ಕೊಟ್ಟಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಇವರಲ್ಲಿರುವ ಒಂದು ಗುಣವೆಂದರೆ ತಾವು ಮಾಡಿದ ಕೆಲಸವನ್ನು ಎಲ್ಲರೂ ಮೆಚ್ಚಬೇಕೆಂಬುದು. ಯಾರೂ ಏನೂ ಹೇಳದಿದ್ದರೆ ಅಲ್ಲೊಂದು ಅನಾಹುತವೇ ನಡೆದುಹೋಗುತ್ತದೆ. ಇವರು ಸದಾ ಹೊಗಳಿಕೆ ಪ್ರಿಯರು. ಆದರೆ ಕೆಲಸಗಾರರು. ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ಆದರೆ ಅದಕ್ಕೆ ತಕ್ಕಂತೆ ಹೊಗಳಿಕೆಯನ್ನೂ ಬಯಸುತ್ತಾರೆ. ಬೇರೆಯವರನ್ನು ಹೊಗಳಬಾರದು ಎಂಬ ಕಾರಣಕ್ಕೇ ಅತ್ಯಂತ ಪ್ರಾಮಾಣಿಕವಾಗಿಯೂ ಕೆಲಸ ಮಾಡುತ್ತಾರೆ. ಒಂದೇ ಒಂದು ಸ್ವಭಾವವೇನೆಂದರೆ ಇವರಿಗೆ ಪ್ರಚಾರ ಬೇಕು. ಎಲ್ಲರೂ " ಎಂಥ ಕೆಲಸಗಾರ " ಎಂದು ಹೊಗಳಬೇಕು. ತಾವಿರದಿದ್ದರೆ ಇಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎನ್ನುವ ಮನೋಭಾವದವರು ಹಾಗಂತ ಎಲ್ಲರೆದುರು ಹೇಳುವವರೂ ಸಹ. ಇವರು ಸಣ್ಣ ಸಣ್ಣ ವಿಷಯಗಳಿಗೂ ರಾದ್ಧಾಂತ ಮಾಡುತ್ತಿರುತ್ತಾರೆ. ಯಾಕೆಂದರೆ ತಮ್ಮನ್ನು ಗುರುತಿಸಲಿ ಎಂದು. ಇವರು ಕೊನೆಯವರೆಗೂ ಇದೇ ರೀತಿ ಕೆಲಸ ನಿರ್ವಹಿಸಿ ಅದ್ದೂರಿಯಾಗಿ ನಿವೃತ್ತರಾಗುತ್ತಾರೆ. ಇವರ ಹೆಸರು ಎಲ್ಲೆಲ್ಲೂ ರಾರಾಜಿಸುತ್ತಿರುತ್ತದೆ.
3. ಮೂರನೆ ವರ್ಗದವರು : ಇವರೇ ಅತ್ಯಂತ ಅಪಾಯಕಾರಿಗಳು. ಇವರು ಕೆಲಸ ಮಾಡದ ಸೋಮಾರಿಗಳು. ಆದರೆ ಕೆಲಸ ಮಾಡದೆಯೂ ಹೇಗೆ ಬದುಕಬೇಕೆಂದು ಅರಿತಿರುವ ಚಾಣಾಕ್ಷರು. ಯಾವೊಂದು ಕೆಲ್ಸ ಮಾಡದೆಯೂ ಸಮಯ ಸಿಕ್ಕಾಗಲೆಲ್ಲ ನೋಡುವವರಿಗೆ "ಅಬ್ಬಾ ಎಷ್ಟು ಕೆಲಸಗಾರ" ಎಂಬಂತೆ ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಇವರು ಬಿಡುವುದಿಲ್ಲ. ಸದಾ ಮೇಲಾಧಿಕಾರಿಗಳು, ಪ್ರಮುಖರ ಹಿಂದೆ ಓಡಾಡುತ್ತಾ ಅವರ ಬೇಕು ಬೇಡಗಳನ್ನು ಕಿರುಗಣ್ಣಿನಲ್ಲಿಯೇ ಗಮನಿಸುತ್ತಾ ಅದಕ್ಕೆ ತಕ್ಕಂತೆ ವರ್ತಿಸುವವರು. ಇಡೀ ಕಚೇರಿ ಅಥವಾ ಸ್ಥಳದ ಜವಾಬ್ದಾರಿಯೆಲ್ಲ ತಮ್ಮ ಮೇಲೆಯೇ ಬಿದ್ದಿದೆ ಎಂದು ತೋರಿಸಿಕೊಳ್ಳುವುದರಲ್ಲಿ ಇವರದು ಎತ್ತಿದ ಕೈ. ಉದ್ಯೋಗದ ಸ್ಥಳದಲ್ಲಿ ನಿರಂತರವಾಗಿ ಕೆಲಸ ಮಾಡುವವರಿಗಿಂತಲೂ ಬಲು ಬೇಗನೆ ಮೇಲಿನ ಸ್ಥಾನಕ್ಕೆ ಹೋಗುವವರು ಇವರೇ. ಇವರಿಗೆ ಕೆಲಸ ಬೇಕಿಲ್ಲ. ದುಡಿಯುವ ಸ್ಥಳ ತಮ್ಮದೆನ್ನುವ ಯಾವ ಅಭಿಮಾನವೂ ಇರುವುದಿಲ್ಲ. ಇವರಿಗೆ ಬೇಕಿರುವುದು ಸೋಮಾರಿಯಾಗಿಯೂ ಹೆಸರು ಪಡೆಯುವುದು ಹೇಗೆಂಬ ತಂತ್ರಗಳು. ಸಂದರ್ಭ ಸಿಕ್ಕರೆ ಅಥವಾ ತಾವು ಪಾರಾಗಲು, ನಿಷ್ಠೆಯಿಂದ ಕೆಲಸ ಮಾಡುವವರ ಮೇಲೆ ಗೂಬೆ ಕೂರಿಸುವ ಚಾಣಾಕ್ಷಮತಿಗಳು. ಇಂಥವರ ಸಂಖ್ಯೆ ಬಹಳ. ಒಂದು ಕಚೇರಿ ಅಥವಾ ಉದ್ಯೋಗದ ಸ್ಥಳ ಕುಸಿಯುವುದು ಅಥವಾ ಕೆಟ್ಟ ಹೆಸರು ಬರುವುದು ಇಂಥವರಿಂದಲೇ. ಆದರೂ ಮೇಲಾಧಿಕಾರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುವುದರಿಂದಾಗಿ ಇದಾವುದೂ ಯಾರ ಗಮನಕ್ಕೂ ಬರುವುದಿಲ್ಲ. ಬರಲಾರದಂತೆ ಎಚ್ಚರವಹಿಸಿರುತ್ತಾರೆ.
ಈಗ ನಿಮ್ಮ ಉದ್ಯೋಗದ ಸ್ಥಳಗಳನ್ನು ಕೂಲಂಕಷವಾಗಿ ಗಮನಿಸಿದರೆ ನಿಮ್ಮಲ್ಲಿ ಇಂಥವರು ಯಾರಿರಬಹುದೆಂಬ ಸ್ಪಷ್ಟ ಕಲ್ಪನೆ ಸಿಗುತ್ತದೆ.
-ಸಿದ್ಧರಾಮ ಕೂಡ್ಲಿಗಿ, ಬಳ್ಳಾರಿ
ಚಿತ್ರ : ಅಂತರ್ಜಾಲದ್ದು