ಇಂಥ ವಿಕೃತಿಗೆ ಕೊನೆಯೆಂದು?

ಇಂಥ ವಿಕೃತಿಗೆ ಕೊನೆಯೆಂದು?

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ತುಂಡಾಗಿ ಕತ್ತರಿಸಿ, ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ವರದಿಯಾಗಿದೆ. ಪತ್ನಿ ಕಾಣೆಯಾಗಿದ್ದಾಳೆಂದು ಈಗ ಸಂಬಂಧಿಕರಿಗೆ ತಿಳಿಸಿದ್ದನಂತೆ; ಆದರೆ ಅನುಮಾನಕ್ಕೊಳಗಾದ ಪೋಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪತ್ನಿಯನ್ನು ತಾನೇ ಕೊಲೆಮಾಡಿದ್ದಾಗಿ ಒಪ್ಪಿಕೊಂಡ ಎಂದು ತಿಳಿದುಬಂದಿದೆ. ಇನ್ನು, ಪತ್ನಿಯ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಾಗರಬಾವಿಯಿಂದ ವರದಿಯಾಗಿದೆ. ಕೌಟುಂಬಿಕ ಕಲಹದಿಂದ ರೋಸತ್ತು ಆತ ಅಂಥ ಅತಿರೇಕದ ಕ್ರಮಕ್ಕೆ ಮುಂದಾದ ಎನ್ನಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಜೀವನಾಶಕ್ಕೆ ಕಾರಣವಾಗಿರುವುದು ‘ಕೌಟುಂಬಿಕ ಕಲಹ’. ಸಣ್ಣ ಪುಟ್ಟ ಜಗಳ, ತಕರಾರು, ಅಸಮಧಾನ, ನೋವು, ಅಸಹನೆ ಇಲ್ಲದ ಕುಟುಂಬಗಳನ್ನು ಹುಡುಕುವುದು ಕಷ್ಟ. ಜತೆಗೆ ಕೌಟುಂಬಿಕ ಕಲಹ ಎಂಬುದು ನಿನ್ನೆ - ಮೊನ್ನೆಯಷ್ಟೇ ಚಾಲ್ತಿಗೆ ಬಂದಿರುವ ಅಸಹಜ ಬೆಳವಣಿಗೆಯಲ್ಲ ; ಯುಗಯುಗಗಳ ಇತಿಹಾಸದಲ್ಲಿ ಇದಕ್ಕೆ ಪುರಾವೆಗಳಿವೆ. ಆದರೆ ಇತೀಚಿನ ದಿನಗಳಲ್ಲಿ , ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆಗೆ ಮುಂದಾಗುವ ಅಥವಾ ಸಂಗಾತಿಯ ಜೀವ ತೆಗೆಯುವ ಅನಪೇಕ್ಷಿತ ಪರಿಪಾಠಗಳು ಹೆಚ್ಚಾಗುತ್ತಿರುವುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ. ಇಂಥ ಅತಿರೇಕದ ವರ್ತನೆಗೆ ಕಾರಣವಾಗಿರುವುದು ಒತ್ತಡವೇ, ಧಾವಂತದ ಜೀವನಶೈಲಿಯೇ, ಸಾಮಾಜಿಕ ಪರಿಸರವೇ ಅಥವಾ ಆ ಕ್ಷಣದ ದುಡುಕೇ ಎಂಬುದರ ಕುರಿತು ತಜ್ಞರು ವಿಶ್ಲೇಷಿಸಬೇಕಾಗಿದೆ. 

ದಶಕಗಳ ಹಿಂದಿನ ಕೌಟುಂಬಿಕ ಚಿತ್ರಣ ಹೀಗಿರುತ್ತಿರಲಿಲ್ಲ. ಎಂಥದೇ ಸವಾಲು ಅಥವಾ ಸಮಸ್ಯೆ ಎದುರಾದರೂ, ಒಂದೆಡೆ ಕುಳಿತು ನಿಧಾನವಾಗಿ ವಿಚಾರ ಮಾಡಿ ಪರಿಹಾರವನ್ನು ಕಂಡುಕೊಳ್ಳುವ ಪರಿಪಾಠವಿತ್ತು ಅಥವಾ ಹಿಂದಿದ್ದ ಕೂಡುಕುಟುಂಬಗಳು, ಊರ ಪಂಚಾಯಿತಿ ಕಟ್ಟೆಯಂಥ ಸಜ್ಜಿಕೆಗಳು ಇಂಥ ಸಮಸ್ಯೆಗಳನ್ನು ಕೂಲಂಕುಷವಾಗಿ ಆಲಿಸಿ, ಅಲ್ಲಲ್ಲೇ ಅವನ್ನು ಬಗೆಹರಿಸಿ ಬಿಡುತ್ತಿದ್ದವು. ಹಾಗೂ ಕುಟುಂಬದಲ್ಲಿ ಸಹನೆ, ಹೊಂದಾಣಿಕೆಗಳಿಗೆ ಇರುವ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಿದ್ದವು. ದಿನಗಳೆದಂತೆ ಇಂಥ ಸಜ್ಜಿಕೆಗಳು ಮಾಯವಾಗುತ್ತಿವೆ. ಅದುವೇ ಇಂಥ ದುರಂತಗಳಿಗೆ ಒಂದು ಕಾರಣವಾಗಿರಬಹುದೇ?

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೫-೦೧-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ