ಇಂದಿನ ನಿರ್ಧಾರ ನಾಳೆಯ ಬೆಳಕಾಗಲಿ...
ಹತ್ತನೇ ತರಗತಿಗೆ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಪ್ರವೇಶಿಸುತ್ತಿದ್ದೆ. ಇದು ನಾನು ರೂಢಿಸಿಕೊಂಡ ಪದ್ಧತಿ. ವಿದ್ಯಾರ್ಥಿಗಳಿಗೆ ಪ್ರತಿದಿನ ಒಂದಷ್ಟು ಮನೆಕೆಲಸ ಕೊಡುತ್ತಿದ್ದೆ. ಅದನ್ನು ನೋಡಿ ಪ್ರತಿದಿನ ಸಹಿ ಮಾಡುತ್ತಿದ್ದೆ. ಒಂದಿಬ್ಬರು ಹೊರತು ಪಡಿಸಿದರೆ ಎಲ್ಲರೂ ಬರೆದು ತರುತ್ತಿದ್ದರು. ಅವರಿಗೆ ನೀಡಿದ ಮನೆಕೆಲಸದ ಮೇಲೆಯೇ ಒಂದು ಕಿರು ಪರೀಕ್ಷೆ ಪ್ರತಿದಿನ ಮಾಡುತ್ತಿದ್ದೆ. ಆಗಲೇ ಕರೆಕ್ಷನ್ ಮಾಡಿ ಅಂಕಗಳನ್ನೂ ಹೇಳುತ್ತೇನೆ. ಆದರೆ ಕೆಲವೇ ವಿದ್ಯಾರ್ಥಿಗಳನ್ನು ಹೊರತು ಪಡಿಸಿದರೆ ಉಳಿದವರಿಂದ ಉತ್ತರಿಸಲು ಸಾಧ್ಯವೇ ಆಗುತ್ತಿಲ್ಲ. ನನ್ನ ನಿರಂತರ ಪ್ರಯತ್ನ ನಿಷ್ಪಲವಾಗುತ್ತಿದೆ. ತಿಂಗಳು ಕಳೆದರೂ ಯಾವುದೇ ಬದಲಾವಣೆ ಕಾಣದು.
ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಾಗಲೆಲ್ಲಾ ಅವರ ಜವಾಬ್ದಾರಿಗಳನ್ನು ನೆನಪಿಸಿದ್ದೇನೆ. ಹೇಗೆ ಓದಬೇಕು? ಯಾಕೆ ಓದಬೇಕು? ಇವೆಲ್ಲವೂ ಮಾಮೂಲಾಗಿ ಹೇಳುತ್ತಿದ್ದೇನೆ. ಪ್ರೇರಣೆಯ ಮಾತುಗಳು, ಸಾಧಕರ ಸಾಧನೆಗಳು ಎಲ್ಲವೂ ನಿರಂತರ. ನಾನು ಕೆಲವೊಮ್ಮೆ ಹೇಳುವ ಅಮ್ಮನ ಕಷ್ಟ, ಅಪ್ಪನ ಶ್ರಮ, ಶಿಕ್ಷಕರ ಪಾಡು... ಇವುಗಳ ವಿಚಾರಗಳನ್ನು ಆಲಿಸುತ್ತಿದ್ದಂತೆ ವಿದ್ಯಾರ್ಥಿಗಳ ಕಣ್ಣುಗಳು ತೇವವಾಗುವುದನ್ನು ಗಮನಿಸಿದ್ದೇನೆ. ನಾನು ಅವುಗಳನ್ನು ಹೇಳುತ್ತಿದ್ದರೆ ಮಕ್ಕಳು ಸಂಪೂರ್ಣ ಮೌನ. ನನಗೆ ಆಗ ಬಹಳನೇ ನೆಮ್ಮದಿ. ಈ ಕ್ಷಣದಿಂದ ನನ್ನ ವಿದ್ಯಾರ್ಥಿಗಳು ಬದಲಾಗುತ್ತಾರೆ ಎಂಬ ನಂಬಿಕೆ. ಆದರೆ ನನ್ನ ನಂಬಿಕೆ ಕೇವಲ ನಂಬಿಕೆಗಳಾಗಿಯೇ ಉಳಿದಿವೆಯೇ ಹೊರತು ಅದು ವಾಸ್ತವ ಆಗುತ್ತಲೇ ಇಲ್ಲ. ನಾನು ತರಗತಿ ಕೋಣೆಯಿಂದ ಹೊರಬಂದ ಅರೆಕ್ಷಣದಲ್ಲೇ ಅವರು ಹಿಂದಿನ ಸಹಜ ಸ್ಥಿತಿಗೆ ಮರಳುತ್ತಿರುವುದು ಕಂಡು ಹತಾಶನಾಗಿದ್ದೇನೆ.
ಇದು ಪ್ರತಿವರ್ಷದ ಅನುಭವ. ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆಯೇ ಹೊರತು ಸುಧಾರಿಸುತ್ತಿರುವುದು ನಾನು ಗಮನಿಸಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿ ನನ್ನನ್ನು ಕಾಡುತ್ತಿದೆ. ನನ್ನೊಳಗೆ ಇದಕ್ಕೆ ಕಾರಣ ಹುಡುಕಿದಾಗ ಕೆಲವು ಕಾರಣಗಳು ಗೋಚರವಾಗುತ್ತದೆ. ಕೆಲವೊಂದು ಸಾರ್ವತ್ರಿಕ ಕಾರಣಗಳಾದರೆ ಕೆಲವೊಂದು ವೈಯಕ್ತಿಕ ಕಾರಣಗಳು. ವೈಯಕ್ತಿಕ ಕಾರಣಗಳಿಗಿಂತಲೂ ತ್ರಾಸದಾಯಕವಾದದ್ದು ಸಾರ್ವತ್ರಿಕ ಕಾರಣ.
ನನ್ನ ವಿದ್ಯಾರ್ಥಿಗಳ ಪೋಷಕರು ಬಡವರು ಹಾಗೂ ಬಹುತೇಕ ಅವಿದ್ಯಾವಂತರು. ಅವರಿಗೆ ತಮ್ಮ ಮಕ್ಕಳು ಹತ್ತನೇ ತರಗತಿವರೆಗೆ ಫೇಲಾಗಿಲ್ಲ ಎಂಬ ಹೆಮ್ಮೆ ಹಾಗೂ ತಮ್ಮ ಮಕ್ಕಳು ಉತ್ತೀರ್ಣವಾಗುತ್ತಲೇ ಇದ್ದಾರೆ ಎಂಬ ಅಭಿಮಾನ. ಅದಕ್ಕಿಂತ ಆಚೆಗೆ ಅವರ್ಯಾರೂ ಯೋಚಿಸುತ್ತಿಲ್ಲ. ತಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ತುಂಬಾ ಶ್ರಮ ಪಡುವ ಅಗತ್ಯವಿಲ್ಲ ಎಂಬುವುದು ನನ್ನ ಅನಿಸಿಕೆ. ಪುಟಾಣಿಗಳ ಪುಸ್ತಕ 'ಬಾಲಮಂಗಳ' ದಂತಹ ಪುಸ್ತಕ ತಂದು ಮಕ್ಕಳ ಕೈಗಿತ್ತು ಇದರಲ್ಲಿರುವ ಕತೆ ಓದಿ ಹೇಳು ಎಂದಿದ್ದರೂ ಸಾಕಿತ್ತು. ಅವನ ಬಂಡವಾಳ ಬಯಲಾಗುತ್ತಿತ್ತು. ಅದು ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಓದಲು ಬಾರದ ಆತನ ಅಸಮರ್ಥತೆ ತಿಳಿಯಬಹುದಿತ್ತು. ಅದ್ಯಾವ ಪ್ರಯತ್ನವೂ ಪೋಷಕರಿಂದ ನಡೆಯದೆ ತಾನು ಕಷ್ಟಪಟ್ಟು ದುಡಿದು, ತಮ್ಮ ಮಕ್ಕಳನ್ನು ಶಾಲೆಯ ಕೋಣೆಯೊಳಗೆ ಕೂರಿಸಿದ್ದಾರೆ.
ಹಿಂದಿನ ಕತೆಗಳು ಏನೇ ಇದ್ದರೂ, ವಿದ್ಯಾರ್ಥಿಗಳಿಗೆ ಈ ಕ್ಷಣದಿಂದ ಬದಲಾಗಲು ಸಾಧ್ಯವೇ?... ಸಾಧ್ಯ ಎಂಬುವುದು ನನ್ನ ಬಲವಾದ ನಂಬಿಕೆ. ಅಂತಹ ಬದಲಾದ ಒಂದಷ್ಟು ಉದಾಹರಣೆಗಳು ನನ್ನಲ್ಲಿವೆ. ವಿದ್ಯಾರ್ಥಿಗಳು ಕಳಪೆ ಸಾಧನೆ ಮಾಡಿದಾಗ ಶಿಕ್ಷಕರು ಪೋಷಕರ ಮೊರೆ ಹೋಗುವುದು ಸಹಜ. ಇಂತಹ ಸಂದರ್ಭ ಪೋಷಕರನ್ನು ಶಾಲೆಗೆ ಕರೆಸಲಾಗುತ್ತದೆ. 'ನನ್ನ ಮಗನಿಗೆ ಬರಹ ತಲೆಗೆ ಹತ್ತುವುದಿಲ್ಲ ಅವನು ಮೊದಲಿನಿಂದಲೂ ಹೀಗೆ. ಹೊಡೆದರೂ ಪ್ರಯೋಜನವಿಲ್ಲ. ಹತ್ತನೇವರೆಗೆ ಇರಲಿ' ಮೇಸ್ಟ್ರೇ ಎಂದು ಬಹಳನೇ ಸಲೀಸಾಗಿ ಹೇಳಿ, ತಮ್ಮ ಕೆಲಸವಾಯಿತೆಂದು ನೆಮ್ಮದಿಯಿಂದ ತೆರಳುವುದನ್ನು ಕಂಡಿದ್ದೇನೆ. ಈ ಮಾತು ಕೇಳಿಸಿಕೊಂಡ ಮಗ 'ನನಗೆ ಬರಹ ತಲೆಗೆ ಹತ್ತವುದಿಲ್ಲ' ಎಂಬ ಪ್ರಮಾಣ ಪತ್ರಕ್ಕೆ ಅರ್ಹನಾಗಿಯೇ ಇರುವ ಪ್ರಯತ್ನ ಮಾಡುತ್ತಾನೆ.
ಓದಿದ್ದು ತಲೆಗೆ ಹತ್ತುವುದಿಲ್ಲ. ಕಲಿತದ್ದು ನೆನಪುಳಿಯುವುದಿಲ್ಲ ಎಂಬ ಭ್ರಮಾ ಲೋಕದಿಂದ ನಮ್ಮ ಮಕ್ಕಳನ್ನು ಹೊರತರಬೇಕಿದೆ. ಇಲ್ಲವಾದಲ್ಲಿ ಯಾವುದೇ ಪ್ರಯತ್ನ ನಿಷ್ಪಲ. ಮಕ್ಕಳ ಓದುವ ಕ್ರಮ ಮತ್ತು ಕಲಿಯುವ ವಿಧಾನ ಬದಲಾಯಿಸಿದಲ್ಲಿ ಅದ್ಭುತ ಫಲಿತಾಂಶ ದೊರೆಯಬಹುದು ಎಂಬ ಸತ್ಯ ಮಕ್ಕಳಿಗೆ ಅರ್ಥವಾಗಿಸಬೇಕಿದೆ. ಕೇವಲ ಹೆಗಲ ಮೇಲೆ ಹತ್ತಾರು ಕಿಲೋ ತೂಕದ ಚೀಲ ಹೊತ್ತು ಬಂದ ಮಾತ್ರಕ್ಕೆ ಕಲಿಕೆಯಾಗದು. ಗಂಟೆಗಟ್ಟಲೆ ಬರೆದರೆ ಮಾತ್ರ ಸಾಲದು. ನಿದ್ದೆಗೆಟ್ಟು ಓದಿದರೂ ಬದಲಾವಣೆಯಾಗದು. ಬರೆಯುವ ಕ್ರಮ ಓದುವ ವಿಧಾನ ಬದಲಾಗಬೇಕು.
ಕಲಿಕೆಯೊಂದಿಗೆ ಸಂಸ್ಕಾರ ಬೇಕು, ಶ್ರಮಪಡಬೇಕು. ಕಲಿಕೆಯಲ್ಲಿ ಶ್ರದ್ಧೆ ಇರಬೇಕು. ಕಲಿಯುವಿಕೆ ಒಂದೆರಡು ರಾತ್ರಿ ನಿದ್ದೆಗೆಟ್ಟು ಉರು ಹೊಡೆಯುವ ಕ್ಷಣಿಕ ಕ್ರಿಯೆಯಲ್ಲ. ಅದು ನಿರಂತರತೆ ಹೊಂದಿರಬೇಕು. ಯಾವುದೇ ಜ್ಞಾನ ಪರಿಪೂರ್ಣವಾಗಿ ತನ್ನದಾಗುವವರೆಗೆ ಕಠಿಣ ಶ್ರಮಬೇಕು. ಒಂದ್ಹತ್ತು ನಿಮಿಷ ಪುಸ್ತಕ ತೆರೆದು, ಗಡಿಬಿಡಿಯಲ್ಲಿ ಕೆಲವೊಂದು ಅಕ್ಷರಗಳನ್ನು ಗೀಚಿದ ಮಾತ್ರಕ್ಕೆ ನಾವು ಬುದ್ದಿವಂತರಾಗಲು ಸಾಧ್ಯವಿಲ್ಲ. ಗಮನವೆಲ್ಲ ಪುಸ್ತಕದ ಹೊರಗಡೆಯೇ ಕೇಂದ್ರಿಕೃತವಾಗಿ, ಪಕ್ಕದಲ್ಲಿ ಮೊಬೈಲ್ ಇಲ್ಲವೇ ಇತರ ವಿಚಾರಗಳಲ್ಲಿ ಹೊರಳುತ್ತಿದ್ದರೆ ಅದೆಂದಿಗೂ ಓದು, ಬರಹ ಸಿದ್ಧಿಸದು.
ಸಂಪತ್ತು ಮತ್ತು ವಿದ್ಯೆ ಇವೆರಡೂ ನಮಗೆ ದೇವರು ನೀಡುವ ಅನುಗ್ರಹ. ಅದು ನಮ್ಮದಾಗಬೇಕಿದ್ದರೆ ಭಕ್ತಿ ಇರಲೇಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೇವರನ್ನು ನಂಬಿರುವ ನಾವು, ಅವನು ಇಷ್ಟಪಡುವ ರೀತಿಯ ವರ್ತನೆಯನ್ನು ರೂಢಿಸಬೇಕು. ತನ್ನ ಶಿಕ್ಷಕರ ಶ್ರೇಷ್ಠತೆಯ ಅರಿವಿರಬೇಕು. ಅವರೆಂದೂ ದೋಣಿಯಲ್ಲಿ ನದಿಯನ್ನು ದಾಟಿದ ಕೂಡಲೇ ಮರೆತುಬಿಡುವ ಅಂಬಿಗರಲ್ಲ. ಅಥವಾ ಕೇವಲ ಸಂಬಳಕ್ಕಾಗಿ ದುಡಿಯುವ ನೌಕರರಂತಲ್ಲ. ಅವರಲ್ಲೊಂದು ಶಕ್ತಿ ಇದೆ. ಅವರ ಮಾತಿಗೆ ಮೌಲ್ಯವಿದೆ. ಅವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸುವ ಯಾವ ವಿದ್ಯಾರ್ಥಿಯೂ ಸಾಧಕನಾಗಲಾರ.
ಜಗತ್ತಿನ ಸರ್ವಶ್ರೇಷ್ಠ ಚಿತ್ರಕಾರ ಪಿಕಾಸೋ ಬೀದಿಯಲ್ಲಿ ಸಾಗುವಾಗ, ಎದುರಿಗೆ ಬಂದು ಕೇಳಿಕೊಂಡ ಮಹಿಳೆಗೆ 30 ಸೆಕೆಂಡುಗಳಲ್ಲಿ ಚಿತ್ರವೊಂದನ್ನು ಬಿಡಿಸಿ ಕೈಗಿಡುತ್ತಾನೆ. ಆ ಚಿತ್ರ ಪ್ರದರ್ಶನವೊಂದರಲ್ಲಿ 30 ಲಕ್ಷಕ್ಕೆ ಮಾರಾಟವಾದಾಗ ಚಕಿತಗೊಂಡ ಮಹಿಳೆ ಮತ್ತೊಮ್ಮೆ ಪಿಕಾಸೋ ನನ್ನು ಭೇಟಿಯಾಗಿ "ಕೇವಲ 30 ಸೆಕೆಂಡುಗಳಲ್ಲಿ, 30 ಲಕ್ಷ ಬೆಲೆಬಾಳುವ ಚಿತ್ರ ಬಿಡಿಸಲು ಹೇಗೆ ಸಾಧ್ಯವಾಯಿತು?" ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಪಿಕಾಸೋ ನೀಡಿದ ಉತ್ತರ ಅರ್ಥವತ್ತಾಗಿತ್ತು. "ಆ 30 ಸೆಕೆಂಡಿನ ಚಿತ್ರದ ಹಿಂದೆ ನನ್ನ 30 ವರ್ಷದ ಶ್ರಮವಿದೆ". ಎಂಬುವುದಾಗಿತ್ತು ಆತನ ಉತ್ತರ. ಹೌದು ಶ್ರಮವಿಲ್ಲದೆ ಸಾಧನೆ ಸಾಧ್ಯನೇ ಇಲ್ಲ. ಪ್ರತಿಯೊಬ್ಬ ಸಾಧಕನ ಹಿಂದೆಯೂ ಅವಿರತ ಶ್ರಮವಿದೆ.
ಬದಲಾವಣೆ ನಮ್ಮೊಳಗಿನಿಂದ ಸಂಭವಿಸಬೇಕು. ನಾನು ಬದಲಾಗಬೇಕು ಎಂಬ ಒಂದು ನಿರ್ಧಾರ ನಮ್ಮನ್ನು ಬದಲಾಯಿಸಬಲ್ಲದು ಎಂಬುವುದನ್ನು ನಮ್ಮ ಮಕ್ಕಳು ಅರ್ಥ ಮಾಡಿಕೊಳ್ಳಬೇಕಿದೆ. ನನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲವೆಂಬ ಅರಿವು ಅವರಲ್ಲಿ ಮೂಡಬೇಕು. ನನ್ನ ಸ್ನೇಹಿತ ಸಾಧನೆ ಮಾಡಬಹುದಾದರೆ ನಾನ್ಯಾಕೆ ಮಾಡಬಾರದು? ಎಂಬ ಪ್ರಶ್ನೆ ಮಕ್ಕಳ ಮನದೊಳಗೆ ಮೂಡಬೇಕು. ಮನಸ್ಸಿನ ಯೋಚನೆ ಬದಲಾದ ದಿನದಿಂದ ಹೊಸ ಪ್ರಯತ್ನ ಆರಂಭವಾಗಬೇಕು. ಆ ದಿನದಿಂದ ಫಲಾಪೇಕ್ಷೆ ಮರೆತು ಪ್ರಯತ್ನದತ್ತ ಮಾತ್ರ ಗಮನವಿರಿಸಬೇಕು.
"ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಸು ಕದಾಚನ" ಎಂಬ ಗೀತೆಯ ನುಡಿಯಂತೆ ನಡೆಯಬೇಕು. ಮರೆಯಬೇಡಿ ಆ ರೀತಿಯ ಸಾಧನೆ ಆರಂಭಿಸಿ, ಅದೇ ಯೋಚನೆಯಿಂದ ಮಲಗಿದ ನಿಮ್ಮಲ್ಲಿ ಮರುದಿನದ ಸೂರ್ಯೋದಯ ಬದಲಾವಣೆಯ ಕಿರಣಗಳಾಗಬಹುದು. ಅದು ಯಾವುದಾದರೂ ಒಂದು ದಿನ ಸಂಭವಿಸಿದರೂ ಸಾಕು. ಆದರೆ ಹತಾಶರಾಗದೆ ಕಾಯುವ ತಾಳ್ಮೆ ಬೇಕು. ಕುರುಬ ಕಾಳಿದಾಸ ಮೂರ್ಖನಾಗಿದ್ದನಂತೆ. ಆದರೆ ಅವನ ಭಕ್ತಿ ಒಂದು ದಿನದ ಸೂರ್ಯೋದಯಕ್ಕೆ ಆತನನ್ನು "ಕವಿರತ್ನ" ರ ಸಾಲಿನಲ್ಲಿ ನಿಲ್ಲಿಸಿತು. ತೆನಾಲಿ ರಾಮ ದಡ್ಡರ ಸಾಲಿನಲ್ಲಿ ಗುರುತಿಸಿಕೊಂಡಿದ್ದ. ಆತನ ಭಕ್ತಿ ಅದೊಂದು ದಿನ ಆತನನ್ನು "ವಿಕಟಕವಿ" ಯಾಗಿ ಪರಿವರ್ತಿಸಿ ಅಮರವಾಗಿರಿಸಿತು. ಏಕಲವ್ಯ ನಿಷ್ಠೆಯಿಂದ, ಶ್ರದ್ಧೆಯಿಂದ ಕಲಿತ. ಆದರೆ ಗುರುವಿನ ಆಶೀರ್ವಾದ ಪಡೆಯುವಲ್ಲಿ ಎಡವಿದ್ದೇ ಆತನ ಸೋಲಿಗೆ ಕಾರಣವಾಯಿತು. ಗುರುವಿನ ಅಭಯ ದೊರೆಯದ ಕರ್ಣ ಮಹಾಭಾರತ ಯುದ್ಧದಲ್ಲಿ ಎಲ್ಲಾ ಯೋಗ್ಯತೆಗಳಿದ್ದರೂ ಹತನಾದ.
ವಿದ್ಯಾರ್ಥಿಗಳು "ಗುರು" ಹಾಗೂ "ಭಕ್ತಿ" ಇವೆರಡರ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ನಡೆಯುವ ನಿರ್ಧಾರ ಆಂತರ್ಯದಲ್ಲಿ ಮೂಡಿಸಿ, ನಾನು ಬದಲಾಗಲೇಬೇಕೆಂಬ ನಿರ್ಧಾರ ಮಾಡಿದಾಗ ಮಾತ್ರ ಸಾಧಕನಾಗಲು ಸಾಧ್ಯ. ಅದು ಹೊರಗಿನಿಂದ ತುರುಕಿಸಲಾಗದು. ಹೇಳಿದ ಮಾತುಗಳೆಲ್ಲಾ ಕ್ಷಣಿಕವಾಗಿ ಕೇಳಿ, ಎಂದಿನ ಚಾಳಿಯನ್ನೇ ಮುಂದುವರಿಸಿದಲ್ಲಿ ಕಳೆದು ಕೊಳ್ಳಬೇಕಾದವರು ವಿದ್ಯಾರ್ಥಿಗಳೇ ಹೊರತು ಇನ್ಯಾರೂ ಅಲ್ಲ. ಇಂದಿನ ನಿಮ್ಮ ಒಂದು ಉತ್ತಮ ನಿರ್ಧಾರ, ನಾಳೆಯಿಂದ ನಿಮ್ಮ ಬದಕಿನ ಒಂದು ಉತ್ತಮ ಬದಲಾವಣೆಗೆ ನಾಂದಿಯಾಡಲಿ ಎಂಬುವುದೇ ನನ್ನ ಮನದಾಳದ ಪ್ರಾರ್ಥನೆ.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ