ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯ...

ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯ...

ಮಗು- ಭಗವಂತನ ವರಪ್ರಸಾದ. ಆ ಪ್ರಸಾದವನ್ನು ಜೋಪಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿದೆ. ಹಾಗಂತ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯದಿದ್ದರೆ ಮುಂದೆ ಪಶ್ಚಾತ್ತಾಪ ಪಡುವವರು ನಾವೇ. ಹಸಿ ಮಣ್ಣಿನ ಮುದ್ದೆಯಾದ ಮಗುವನ್ನು, ಕುಂಬಾರ ಮಡಿಕೆ ಮಾಡುವಾಗ ಹೇಗೆ ತಟ್ಟಿ, ಕುಟ್ಟಿ ಆಕೃತಿ ಮಾಡುವನೋ ಹಾಗೆ ನಾವು ಸಹ ಮಾಡಬೇಕು. ಪ್ರೀತಿಯಲ್ಲಿ ತಿಳಿಹೇಳಬೇಕು. ಉತ್ತಮ ಸಂಸ್ಕಾರ, ಗುಣನಡತೆಗಳನ್ನು, ಗುರುಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು. ಹತ್ತಿಪ್ಪತ್ತು ವರ್ಷಗಳ ಹಿಂದಿನಂತೆ ಗದರಿಸಿ, ಹೊಡೆದು ಬಡಿದು ಮಾಡಿದರೆ, ಇಂದಿನ ಮಕ್ಕಳು ಕೈಗೆ ಸಿಗಲಾರರು. ಪರಿಸ್ಥಿತಿ ಮತ್ತು ಕಾಲಕ್ಕೆ ಸರಿಯಾಗಿ ಹೊಂದಾಣಿಕೆ ಆಗಲೇಬೇಕು. ಇರುವ ಒಂದೆರಡು ಮಕ್ಕಳನ್ನು ನಯವಾಗಿ ತಿದ್ದಿ, ಸರಿಯಾದ ವಿದ್ಯಾಭ್ಯಾಸ ಕೊಡಿಸಿ ಅವರ ಕಾಲ ಮೇಲೆ ನಿಲ್ಲುವ ಹಾಗೆ ಮಾಡುವುದು ಹೆತ್ತವರ, ಹಿರಿಯರ ಕರ್ತವ್ಯ ಮತ್ತು ಜವಾಬ್ದಾರಿ. ಮನೆಯೇ ಮೊದಲ ಪಾಠಶಾಲೆ ಅಲ್ಲವೇ? ಅಮ್ಮಮತ್ತು ಗುರು ನೀಡುವ ತಿಳುವಳಿಕೆ ಮಗುವನ್ನು ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಹಕಾರಿ. ‘ಮಕ್ಕಳಿರಲವ್ವ ಮನೆ ತುಂಬ’ . ಆ ಕಾಲ ಈಗ ಹೋಯಿತು. ಓರ್ವ ದಂಪತಿಗೆ ಒಂದು ಮಗು ಹೇಳುವಲ್ಲಿಗೆ ತಲುಪಿದ್ದೇವೆ ನಾವು. ಮಗುವಿನ ನಗುವಲ್ಲಿ ಜಗ ಅಡಗಿದೆಯಂತೆ. ಅಂತಹ ಮಗುವನ್ನು ಸಾಕಿ ಸಲಹಿ ಜಗ ನೋಡುವಂತೆ ಮಾಡುವುದು ನಮ್ಮ ಕರ್ತವ್ಯ. ಮಗುವಿನ ಬಾಲಲೀಲೆಗಳನ್ನು ನೋಡಿದಾಗ ಏನೇ ಕಷ್ಟ, ಸಂಕಟ, ನೋವು, ದುಃಖ ಕ್ಷಣಮಾತ್ರದಲ್ಲಿ ಮರೆಯಾಗುವುದು. ಅದೇ ಮಗು ಮುಂದೆ ಸಂತೋಷದಲ್ಲಿ ಜೀವನಮಾಡುವ ಹಾಗೆ ನಾವು ರೂಪಿಸಬೇಕು. ಇಂದಿನ ಐಷಾರಾಮಿ ಆಕರ್ಷಣೆಯೆದುರು ಮಕ್ಕಳನ್ನು ಸಲಹುವುದು, ತಿದ್ದುವುದು ಸುಲಭದ ಮಾತಲ್ಲ. ಆದರೂ ನಾವು ಮಾಡಲೇಬೇಕಾದ ಕೆಲಸವದು. ಸರಿಯಾದ ಗುರಿ ಮತ್ತು ದಾರಿಯನ್ನು ತೋರಿಸುವಲ್ಲಿ ನಾವು ಸೋತರೆ ಮುಂದೆ ಹೆತ್ತವರು ಬೀದಿಗೆ ಬೀಳುವ ಪ್ರಸಂಗ ಎದುರಾಗಬಹುದು.

ಹೀಗೆ ಒಂದು ಘಟನೆ ನೆನಪಾಯಿತು. ನಾನು ನಮ್ಮ ಶಾಲಾ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆ ಕೊಡಲು ಸ್ಥಳೀಯ ಆರಕ್ಷಕ ಠಾಣೆಗೆ ಪ್ರತಿವರ್ಷದಂತೆ ಹೋಗಿದ್ದೆ. ಅಲ್ಲಿ ೩೫ರ ಪ್ರಾಯದ ಓರ್ವ ಯುವಕ ಇದ್ದ. ಅಲ್ಲಿರುವ ಕಾನ್ಸ್ಟೇಬಲ್ ಸರ್ ಅವರು ನನ್ನ ಹತ್ತಿರ ಮೇಡಂ, ಈ ಹುಡುಗನಿಗೆ ಏನು ಮಾಡಬೇಕು? ಯಾವ ಶಿಕ್ಷೆ ಕೊಡಬಹುದು ಹೇಳಿ, ಇವ ಹೆತ್ತ ತಾಯಿಗೆ ಹೊಡೆದು ಬಡಿದು ಮಾಡಿ, ಇದು ಐದನೇ ಸಲ ಬಂದದ್ದು, ಸ್ವಲ್ಪವೂ ಹೇಳಿದ ಮಾತು ಕೇಳದ ಉಂಡಾಡಿ ಗುಂಡ, ಕೆಲಸವೂ ಮಾಡುವುದಿಲ್ಲ' ಎಂದರು. ಅವನ ಮುಖವೋ ಇವರ ಪೆಟ್ಟು ತಿಂದು ಊದಿತ್ತು. ೬೫ ವರ್ಷದ ತಾಯಿ ಅಳುತ್ತಾ ಕುಳಿತಿದ್ದರು. ಇಂತಹ ಮಕ್ಕಳು ಬೇಕೇ ಅನಿಸಿತು. ಅಯ್ಯೋ ಅನಿಸಿತು ತಾಯಿಯನ್ನು ನೋಡಿ. ಬಾಲ್ಯದ ಮುದ್ದು, ಶಿಕ್ಷಣದ ಕೊರತೆ, ನೈತಿಕ ಮೌಲ್ಯಗಳ ಕೊರತೆ, ಪರಿಸರ, ಕೌಟುಂಬಿಕ ಕಾರಣ ಇರಬಹುದು ಹೀಗೆಲ್ಲ ಆಗಲು.

ನಾವು ಹೆತ್ತ ಮಕ್ಕಳನ್ನು ಪ್ರೀತಿಸೋಣ, ಜೊತೆಗೆ ಜೀವನ ಶಿಕ್ಷಣವನ್ನು ನೀಡೋಣ. ನಾಳೆಯ ದಿವಸ ಬೇರೆಯವರಿಗೆ ಉಪಕಾರಿಯಾಗದಿದ್ದರೂ ಬೇಡ. ಅಪಕಾರ, ತೊಂದರೆ ಮಾಡುವುದು ಬೇಡ. ‘ಬಿತ್ತಿದಂತೆ ಬೆಳೆ’ ಅರಿತು ಬೆಳೆಸೋಣ. ಮಕ್ಕಳು ನಮ್ಮ ದೇಶದ, ನಮ್ಮ ಮನೆಗಳ ಸಂಪತ್ತು. ಮನೆಯ ಭಾಗ್ಯಗಳಾದ ಮಕ್ಕಳನ್ನು ಚೆನ್ನಾಗಿ ಬೆಳೆಸೋಣ, ನಾವೂ ಸಂತಸದಿಂದ ಇರೋಣ.

ಎಲ್ಲಾ ಪುಟಾಣಿಗಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. 

-ರತ್ನಾ ಭಟ್ ತಲಂಜೇರಿ 

ಪುಟಾಣಿ ರೂಪದರ್ಶಿಗಳು: ಮಾಲ್ವಿ, ಹವಿಕ್ಷ್ ಮತ್ತು ಸಾನ್ವಿ, ಕುಂಪಲ, ಮಂಗಳೂರು