ಇಂದಿನ ವಿದ್ಯಾರ್ಥಿಗಳೇ ನಮ್ಮ ಮುಂದಿನ ಪ್ರಜೆಗಳು....!
ತಮ್ಮ ಮಕ್ಕಳು ಬುದ್ದಿವಂತರಾಗಿ ಬೆಳೆಯಬೇಕು, ವಿದ್ಯಾವಂತರಾಗಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಯರೂ ಬಯಸುತ್ತಾರೆ.ಆದರೆ ಇಂದಿನ ಪರಿಸ್ತಿತಿ ನೋಡಿದರೆ ಆಶ್ಚರ್ಯವಾಗುತ್ತದೆ. ಕಾರಣ, ಇಂದಿನ ಶಿಕ್ಷಣ. ಇಂದು ಮಕ್ಕಳು ಮನೆಯಲ್ಲಿ ಯಾವ ರೀತಿ ಶಿಕ್ಷಣ ಪಡೆಯುತ್ತಿದ್ದಾರೆ? ಅವರ ಸುತ್ತಮುತ್ತಲಿನ ಪರಿಸರವೇನು? ಅವರು ಆರೋಗ್ಯಕರವಾಗಿ ಬೆಳೆಯುತ್ತಿದ್ದಾರೆಯೇ? ತಮ್ಮ ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ತಂದೆ ತಾಯಿಯರ ಪಾತ್ರ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ? ಇವು ಸಮಾಜಶಾಸ್ತ್ರಜ್ನರನ್ನು ಸದಾ ಕಾಡುವ ಬಹುದೊಡ್ಡ ಪ್ರಶ್ನೆಗಳು.
ಮುಂದಿನ ಪೀಳಿಗೆಯು ಶ್ರೇಷ್ಟವಾಗುವುದರ ಹೊಣೆ ಇಂದಿನ ಪ್ರೌಢರ ಮೇಲೇಯೇ ಇದೆ.ಆದ್ದರಿಂದಲೇ ವಿದ್ಯರ್ಥಿಗಳ ಗೈರು ಶಿಸ್ತಿನ ಹೊಣೆಯನ್ನು ಅವರ ಮೇಲೆ ಚೆಲ್ಲಿ ಮುಕ್ತರಾಗುವ ಬದಲು ಅದಕ್ಕೆ ತಮ್ಮ ಸಂಬಂಧವೂ ಇದೆ ಎಂದು ನ್ಯಾಯಶೀಲ ಜನರು ತಿಳಿದುಕೊಳ್ಳುತ್ತಾರೆ. ಈ ಪ್ರವೃತ್ತಿ ಎಷ್ಟು ಸ್ವಾಭಾವಿಕವೋ ಅಷ್ಟೇ ಯೋಗ್ಯವೂ ಆಗಿದೆ. ಮಕ್ಕಳ ವರ್ತನೆಯು ಮನೆ ಮತ್ತು ಸಮಾಜದಿಂದ ಆಗಾಗ ಬರುವ ಸಂಸ್ಕಾರಗಳಿಂದಲೇ ವಿಕಾಸ ಹೊಂದುತ್ತದೆ. ಈ ಸಂಸ್ಕಾರಗಳ ಹೊಣೆ ನಮ್ಮಮೇಲಿದೆಯಾದ್ದರಿಂದ ಬದಲಾದ ಕಾಲಮಾನಕ್ಕನುಗುಣವಾಗಿ ಈ ಸಂಸ್ಕಾರಗಳನ್ನು ಪರಿಶೀಲಿಸಿ, ಪರೀಕ್ಷಿಸಿ, ಒರೆಗೆ ಹಚ್ಚಿನೋಡಿ, ಮನೆ ಮತ್ತು ಸಮಾಜಗಳಲ್ಲಿ ಯೋಗ್ಯರೀತಿಯಿಂದ ಹೊಂದಿಸಿಕೊಳ್ಳಬೇಕು.
ಎಲ್ಲಿಯೋ ತಪ್ಪಿದೆ, ಯತರಲ್ಲೋ ದೋಷವಿದೆ,ಎಂಬ ಮಾತನ್ನು ತತ್ವತಃ ಸಿದ್ದಮಾಡುವ ಪತ್ರಿಕೆಗಳ ಚರ್ಚೆ ಅಥವಾ ಭಾಷ್ಯ-ಭಾಷಣಗಳಿಂದ ಈಸಮಸ್ಯಾ ಪರಿಹಾರಕ್ಕೆ ಮಾರ್ಗ ದೊರೆತೀತೆಂದು ಹೇಳುವುದು ಕಠಿಣ. ಬದಲಿಗೆ ನಿತ್ಯ ಜೀವನದಲ್ಲಿ ಮಕ್ಕಳ ಸಂಗೋಪನೆಯ ಹೊಣೆಯನ್ನು ಹೊರುವ ತಂದೆತಾಯಿಗಳು ವ್ವ್ ಕರ್ಯದತ್ತ ಹೆಚ್ಚು ಲಕ್ಷ್ಯ ಕೊಟ್ಟರೆ ಸಹಾಯವಾದೀತು. ರಾಜಕೀಯ ಕಾಯಿದೆ ಸಾಮಾಜಿಕ ನಿರ್ಬಂಧ ಮತ್ತು ಶಿಕ್ಷಣ ಸಂಸ್ಥೆಗಳ ನಿಯಮ, ಇವು ಎಷ್ಟೇ ವ್ಯಾಪಕವಿದ್ದರೂ ಬಹಳವಾದರೆ ಮನೆಯ ಬಾಗಿಲವರೆಗೆ ಮಾತ್ರ ಬಂದು ಮುಟ್ಟಬಲ್ಲವು, ಮನೆಯೊಳಗಿನ ವಾತಾವರ್ಣ ,ಸಾಮಗ್ರಿ ಎಲ್ಲ ಬೇರೆಯೇ ಆಗಿವೆ. ಮಕ್ಕಳ ಜೀವನದ ವಯಕ್ತಿಕ ವಿಕಾಸವು ಪ್ರಾಮುಖ್ಯವಾಗಿ ಆಗುವುದು ಮನೆಯ ಸಂಸ್ಕಾರದಿಂದಲೇ.
ಈ ದೃಷ್ಟಿಯಿಂದ ಕುಟುಂಬ ಸಂಸ್ಥೆಗೆ ತುಂಬ ಮಹತ್ವವಿದೆ.ತನ್ನ ಮನೆಯಮೇಲೆ ತನ್ನದೆಷ್ಟು ಅಧಿಕಾರವಿದೆಯೆಂದು ಮನುಷ್ಯ ಸಾಧಿಸುತ್ತಾನೋ ಆಷ್ಟೇ ಅಥವಾ ಅದಕ್ಕೂ ಹೆಚ್ಚು ಅಧಿಕಾರವನ್ನು ಮನೆಯಲ್ಲಿಯ ಸಂಸ್ಕಾರಗಳು ಅವನ ಮೇಲೆ ಸಾಧಿಸುತ್ತವೆ. ಮಕ್ಕಳ ಎಳೆಯ ಮನಸ್ಸಿನ ಮೇಲೆ ಈ ಸಂಸ್ಕರಗಳು ಶಾಶ್ವತವಾದ,ದೂರಗಾಮಿಯಾದ ಪರಿಣಾಮವನ್ನು ಬೀರಬಲ್ಲದು. "ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು’ ಎನ್ನುವಂತೆ ಒಂದು ಮಗುವಿನ ಭವಿಷ್ಯ ಒಳ್ಳೆ ರೀತಿಯಲ್ಲಿರಲು ಮನೆಯ ತಂದೆ ತಾಯಿಯರ ಪ್ರಭಾವ ಹೆಚ್ಚಿರುತ್ತದೆ. ಒಂದು ಮಗುವಿನ ವ್ಯಕ್ತಿತ್ವ ಹಾಗೂ ದೃಷ್ಟಿಕೋನ ರೂಪಿಸುವಲ್ಲಿ ಮನೆಯಿಂದ ಸಿಗುವ ಶಿಕ್ಷಣ ಜೀವನದುದ್ದಕ್ಕೂ ಪ್ರಭಾವ ಬೀರುತ್ತದೆ.
ಒಂದು ಮಗುವಿಗೆ ಜನ್ಮ ಕೊಟ್ಟ ಕೂಡಲೇ ಯಾವುದೇ ತಾಯಿಯ ಕೆಲಸ ಪೂರ್ಣವಾದಂತಲ್ಲ. ನಿಜವಾದ ಹೊಣೆ ಆನಂತರ ಶುರುವಾಗುತ್ತದೆ. ಮಕ್ಕಳು ಹೇಗೆ ಬೆಳೆಯುತ್ತಾರೆ ಎನ್ನುವುದು ಮುಖ್ಯ.ತಮ್ಮ ಮಕ್ಕಳಿಗೆ ಒಂದಿಷ್ಟು ಆಹಾರ , ಬಟ್ಟೆ ಕೊಟ್ಟು ಶಾಲೆಗೆ ಕಳಿಸಿದರೆ ತಮ್ಮ ಕೆಲಸ ಮುಗಿಯಿತೆಂದು ಕೆಲವು ಪೋಷಕರು ಭಾವಿಸುತ್ತರೆ. ಶಾಲೆಯಲ್ಲಿ ಮಕ್ಕಳು ಏನು ಮಾಡುತ್ತಾರೆ? ಶಾಲೆಯಲ್ಲಿ ಶಿಕ್ಷಣ ಸರಿಯಾಗಿದೆಯೇ ? ಪಾಲಕರು ಇದನ್ನು ವಿಚಾರಿಸುತ್ತಾರೆಯೇ? ಇಂದಿನ ಮಗು ನಾಳೆ ಸಮಾಜಕ್ಕೆ ಸಂಪತ್ತಾಗಬಹುದು, ಹೊರೆಯೂ ಆಗಬಹುದು. ಇಂದಿನ ದಿನಗಳಲ್ಲಿ ಮಗುವಿಗೆ ಏ.ಬಿ. ಸಿ. ಡಿ. ,೧,೨,೩ ಕಲಿಸಲು ಶುರುಮಾಡುತ್ತಾರೆ. ಆದರೆ ಇದರ ಸಂಗಡ ನೈತಿಕ ಶಿಕ್ಷಣ ಕೊಡದೇ ಇರುವುದು ಬೇಸರದ ವಿಷಯ. ಇಂಗ್ಲಿಷ್ ಸ್ಚೂಲಿಗೇ ಹೋಗುತ್ತಾರೆ, ಇಂಗ್ಲಿಷ್ ಮಾತನಾಡಿದರೆ ಮಾತ್ರ ತಮಗೆ ಪ್ರತಿಷ್ಠೆ, ಗೌರವವಿದೆಯೆಂದು ಭಾವಿಸುತ್ತಾರೆ. ವಸ್ತುಸ್ಥಿತಿ ಎನೆಂದರೆ ಪ್ರತಿಯೊಂದು ಮಗುವಿಗೂ ತನ್ನದೇ ಆದ ಘನತೆ, ಗೌರವವಿರುತ್ತದೆ. ಬರೇ ಇಂಗ್ಲಿಷ್ ಗೆ ಅಲ್ಲ.
ಇಂಗ್ಲಿಷ್ ಒಂದು ಸುಂದರ ಭಾಷೆಯಂತೂ ಹೌದು, ಹಾಗೆಂದು, ನಮ್ಮ ಪ್ರದೇಶಿಕ ಭಾಷೆಯನ್ನೂ ಅದರ ಸಂಗಡ ಚೆನ್ನಾಗಿ ಅರಿಯಬೇಡವೆಂದು ಅರ್ಥವೇ? ಮಕ್ಕಳಿಗೆ ಸಣ್ಣವರಿರುವಾಗ ಯಾವ ರೀತಿ ಶಿಕ್ಷಣ ಕೊಡುತ್ತಾರೋ ಸಾಮಾನ್ಯವಾಗಿ ಅದೇ ರೀತಿ ಮಗು ಬೆಳೆಯುತ್ತದೆ. ಯವುದೇ ಶಿಕ್ಷಣವಿರಲಿ ಅಥವಾ ವಿಕಾಸವಾಗಲಿ ಅದಕ್ಕೆ ಶಿಸ್ತಿನ ಬಂಧನವಿದೆ. ಮತ್ತು ಅದನ್ನು ನಾವು ಪಾಲಿಸಲೇಬೇಕು ಎನ್ನುವುದರ ಅರಿವೇ ಇಲ್ಲದಂತಾಗಿ ಮಕ್ಕಳು ಅಧ್ಯಯನ ಮತ್ತು ವಿದ್ಯಾ ಸಂಪದನೆಯ ಕಾಲದಲ್ಲಿ ಉಪದ್ರವ ವೃತ್ತಿಯಲ್ಲಿ ಮಗ್ನರಾಗುತ್ತರೆ. ನಮ್ಮಲ್ಲಿನ್ನೂ ಸಾಮಾನ್ಯವಾಗಿ ಪಾಲಕರು ಮಕ್ಕಳ ಸಂಗೋಪನವನ್ನುಅಂದರೆ, ಆಹಾರ , ವಿಹಾರ, ಬಟ್ಟೆಬರೆ, ಆರೋಗ್ಯ ಇತ್ಯಾದಿಗಳ ವಿಚಾರವನ್ನು ಮೊದಲಿನ ೫-೬ ವರ್ಷ್ಯ ಕಾಳಜಿಯಿಂದ ಮಾಡುತ್ತಿರುವರಾದರೂ ಅವರ ಮನಸ್ಸಿನ ವಿಕಾಸದತ್ತ ಅಷ್ಟು ಗಮನವೀಯುವುದಿಲ್ಲ. ಇದಕ್ಕೆ ಪಾಲಕರಿಗೆ ದೂರದೃಷ್ಟಿ ಬೇಕಾಗುತ್ತದೆ. ಸುತ್ತಲಿನ ಸಾಮಾಜಿಕ ಸ್ಥಿತಿಗತಿಗಳ ಅರಿವು ಬೇ್ಕಾಗುತ್ತದೆ.
ಮಕ್ಕಳ ಸ್ವಾಭಿಮಾನ ಬೆಳೆಯುವಂಥ ವರ್ತನೆಯು ತಂದೆ ತಾಯಿಗಳದಿರಬೇಕು. ಮಕ್ಕಳಿಗೆ ಆಡಿ ತೋರಿಸಲು ಬಾರದಿದ್ದರೂ ಅಪಮಾನದ ಅರಿವು ಇರುತ್ತದೆ. ತಪ್ಪು ಮಾಡಿದಾಗಲೆಲ್ಲ ’ಮೂರ್ಖ, ಹುಚ್ಚ’ ಇತ್ಯಾದಿ...ಸಂಬೋಧನೆಗಳಿಂದ ಮಕ್ಕಳನ್ನು ಜರೆಯಲಾಗದು. ಸ್ವಚ್ಚತೆ, ಹೊಲಸುಗಳ ಅರಿವನ್ನು ಮಕ್ಕಳಿಗೆ ಮಾಡಿಕೊಡುವುದು,ತಂತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಉತ್ತೇಜನವೀಯುವುದು, ಮಕ್ಕಳ ಆಟಪಾಟಗಳಲ್ಲಿ ವಿಶೆಷ ನಿರ್ಬಂಧ ಹೇರದಿರುವುದು ಇವೆಲ್ಲಾ ತಂದೆ ತಾಅಯಿಗಳು ಮಾಡಬೇಕಾದ ಕಾರ್ಯಗಳಾಗಿವೆ. ಸಾಮಾನ್ಯವಾಗಿ ಮಗು ಹಾಳಾಗಲು ಪರಿಸರ ಹಾಗೂ ವ್ಯವಸ್ಥೆಯನ್ನು ದೂರುತ್ತಾರೆ. ಆದರೆ ಮೂಲತಃ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವವರು ಯಾರು? ಕುಟುಂಬದಿಂದ ಹೊರಬರುವ ಜನರೇ ತನೆ? ಮಕ್ಕಳಲ್ಲಿ ದೊಡ್ಡವರು ಎಂದೂ ಕೀಳು ಭಾವನೆ ಬಿತ್ತಬಾರದು. ಯಾವುದೇ ಕೆಲಸ ಮಾಡಲಿ ಅದು ಕೀಳು, ಇದು ಕೀಳು ಎನ್ನಬಾರದು. ಪ್ರತಿಯೊಂದಕ್ಕೂ ಅಂತಸ್ತಿನ ಪ್ರಜ್ನೆ!
ಇಂದಿನ ಯುವಕರಲ್ಲಿ ಬೇರೂರಿರುವ ನಿಷ್ಕ್ರೀಯತೆ, ಛಲದ ಆವೇಗ, ಕ್ರಿ್ಯಾಶೀಲತೆಯ ಕೊರತೆ , ಸವಾಲುಗಳನ್ನು ಹೇಗೆ ಎದುರಿಸಬೇಕೆನ್ನುವ ಬಗ್ಗೆ ಅಧೈರ್ಯ ಮುಂತಾದವು ಅವರ ಬಾಲ್ಯ ಜೀವನದ ದೌರ್ಬಲ್ಯವನ್ನು ಎತ್ತಿತೋರಿಸುತ್ತದೆ.ಇದಕ್ಕೆ ಮನೆಯ ಪರಿಸರವೂ ಕಾರಣ.. ಯಾರೂ ಯಾರನ್ನೂ ಉದ್ದಾರ ಮಾಡಬೇಕಾಗಿಲ್ಲ .ತಂದೆ ತಾಯಿಯರು ಹೇಗೋ ಹಾಗೇ ಮಕ್ಕಳೂ ಇರುತ್ತಾರೆ. ಹೆರಿಯರ ಜೀವನ ಮಕ್ಕಳಿಗೆ ಮಾದರಿಯಾಗುವಂತಿರಬೇಕು. ಯಾಕೆಂದರೆ ಮಕ್ಕಳಿಗೆ ತಾವು ಯಾರಂತಾಗಬೇಕು ಎನ್ನುವ ಮಾನಸಿಕ ತೊಳಲಾಟ ಇದ್ದೇ ಇರುತ್ತದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಸಣ್ಣವರಿದ್ದಾಗ ಕಲಿತ ಶಿಸ್ತು , ಒಳ್ಳೆಯತನ ಯಾವಾಗಲೂ ಉಳಿಯುವಂಥದು.
ಮಕ್ಕಳ ಸಾನಿಧ್ಯದಲ್ಲಿ ಸದಾ ಇರುವ ಪಾಲಕರು ಕರ್ತವ್ಯದಕ್ಷರಾಗಿಯೂ ,ಆರೋಗ್ಯಶಾಲಿಗಳಾಗಿಯೂ ಇರಬೇಕಾಗುವುದು. ಅಂದರೆ, ಅವರು ತಮ್ಮ ಮಕ್ಕಳಿಗೂ ಉತ್ತಮ ಪರಂಪರೆ ಹಾಕಿಕೊಡಲು ಸಮರ್ಥರಾಗುತ್ತಾರೆ. ಬದಲಾದ ಪರಿಸ್ಥಿತಿಯನ್ನು ಅರಿತುಕೊಳ್ಳದೇಹೋದರೆ ಅವರು ತಮ್ಮ ಮಕ್ಕಳಲ್ಲಿ ಯಾವ ಒಳ್ಳೆಯ ಕಾರ್ಯವನ್ನೂ ಮಾಡುವ ಶಕ್ತಿಯನ್ನು ಹುಟ್ಟಿಸಲು ಅಸಮರ್ಥರಾಗುವರು.