ಇಂದು ನಮ್ಮೀ ನಾಡು

ಇಂದು ನಮ್ಮೀ ನಾಡು

 

ನನಗೆ ಫೇಸ್ ಬುಕ್ ಮೊದಲಾದ ಜಾಲತಾಣಗಳಲ್ಲಿ ನಮ್ಮ ಪೂರ್ವ ಸಂಸ್ಕೃತಿಯ ಶ್ರೇಷ್ಠತೆ ಇತ್ಯಾದಿಗಳ ಬಗ್ಗೆ ನಡೆಯುವ ನಿರರ್ಥಕ ಚರ್ಚೆಗಳನ್ನ ಕಂಡಾಗ ಗೋಪಾಲಕೃಷ್ಣ ಅಡಿಗರ "ಇಂದು ನಮ್ಮೀ ನಾಡು" ಕವನ ನೆನಪಾಗುತ್ತದೆ. "ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು" ಎನ್ನುವ ನಾಸ್ಟಾಲಾಜಿಕ್ ಹಳಹಳಿಕೆಯಲ್ಲಿ ಮುಳುಗುವುದಕ್ಕಿಂದ ವರ್ತಮಾನದ ಸ್ಥಿತಿಯನ್ನ ವಿವೇಚಿಸುವುದು ಉಚಿತವಲ್ಲವೇ?

 

ಅಂದ ಹಾಗೆ ಅಡಿಗರು ಆಧುನಿಕತೆಯ, ಪಶ್ಚಿಮದ ಅಂಧ ಭಕ್ತರಾಗಿರಲ್ಲಿಲ್ಲ. "ಮತ್ತೆ ಮೊಳಗಲಿ ಪಾಂಚಜನ್ಯ" ಎಂದೇ ಆಶಿಸಿದವರು. ಅಡಿಗರ ಮೊನಚು ವ್ಯಂಗ್ಯಕ್ಕೇ ಶ್ರೇಷ್ಠ ಉದಾಹರಣೆಯಾದ ಈ ಕವನ ನಿಮ್ಮ ಓದಿಗೆ ಇಲ್ಲಿದೆ...

 

 

ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ
ಕೊಂಬೆರೆಂಬೆಗಳಿರಲಿ ಇದ್ದ ಹಾಗೆ;
ಒಳಗಿದೆಲೆಗಳ ತಂದು ಕಾಫಿ ಕಾಯಿಸು, ಕುಡಿ
ತುಂಬಿ ಬರುತಿರೆ ಕಂಠಕಳಲ ಬೇಗೆ.


ತಳಕೆ ಕಟ್ಟೆಯ ಕಟ್ಟಿ ಹಾಕು ನೀರ, ವಿಷಾದ
ತರುಬಿದರೆ ಕುದಿಯೆಸರು ಕಣ್ಣ ನೀರು
ಸುರಿದು ಬೀಳಲಿ ಇಲ್ಲಿ; ಒಳಗೆ ಬೇಯಲಿ ಅಲ್ಲಿ
ಸೈತಾನನಡುಗೆಗೆ ಚಿರೋಟಿ ಖೀರು


ಬಲ್ಬುಗಳ ತಂದು ಜೋಡಿಸು, ಬೆಳಕಿನುಯ್ಯಾಲೆ
ಮಳೆಬಿಲ್ಲ ತೂಗಿಬಿಡು ಕೊಂಬೆ ಕೊಮಬೆ;
ಹಚ್ಚು ಕಾಗದದ ಹೂಕುಚ್ಚುಗಳ, ಅತ್ತರನು
ಹಚ್ಚು ಗುಂಜಾರವದ ಹಾಡು ಹಲಗೆ.


ನೆರಳಿಲ್ಲ, ಕೊಂಬೆ ಬರೀ ಪೊಳ್ಳು ಎನ್ನಲು ಸಲ್ಲ:
ನೆರಳು ಬೇಕೇ ಹೊನ್ನ ಹೊದಿಕೆಗಿಂತ?
ಇದು ಸನಾತನ ವೃಕ್ಷವಣ್ಣ: ನೇಣಿಗೆ ಬೇಕೆ
ಬೇರೆ ಆಧಾರ ಕೊಂಬೆಗಿಂತ?


ಪಡುವಲದ ಗಾಳಿ ಆಡಿದರೆ ತೂಗುವುದಟ್ಟೆ-
ಎಂಥ ಮಾರ್ದನಿ, ಎಂಥ ನಕಲು ಕುಣಿತ!
ನೆಲದ ಕೊಳೆನೀರನೊಲ್ಲದು ನಮ್ಮ ದಿವ್ಯತರು,
ಕುಡಿದು ಬೆಳೆವುದು ಸ್ವಪ್ನಲೋಕದಮೃತ!


ಬಾರವೇ ಇಲ್ಲಿಗೊಂದೂ ಹಕ್ಕಿ? – ಗಿಳಿ ಪುರುಳೆ
ಕೋಗಿಲೆಯು ಗುಬ್ಬಚ್ಚಿ ಕಾಗೆ ಕೂಗೆ?
ಇರುವ ಕೋಗಿಲೆಯ ಬಡಿ, ಕೊಲ್ಲು; ಸತ್ತರೆ ಹುಲ್ಲು
ತುರುಕಿ ಇಡು ಸಾಲಾಗಿ ಕೊಂಬೆ ಮೇಲೆ!


ಹುಳುಕು ತೊಗಟೆಗೆ ಹೊದೆಸು ಅಪರಂಜಿ ತಗಡ; ಮೈ
ಮೇಲೆ ಕೆತ್ತಿಸು ಇದರ ಪೂರ್ವ ಕಥೆಯ:
"ಇಲ್ಲಿ ನೆರಳಿತ್ತು ಹಸುರೆಲೆತಳಿರು ಹೂಹಣ್ಣು
ಕೋಗಿಲೆಯ ಸರವತ್ತಿ ಗಿಳಿಯ ನಿಲಯ!


ಇಲ್ಲಿ ಮಿಡಿದಿತ್ತು ಕೋದಂಡ, ಮೊಳಗಿತ್ತಿಲ್ಲಿ
ಪಾಂಚಜನ್ಯವು, ಚಕ್ರ ತಿರುಗುತ್ತಿತ್ತು;
ದಂಡವೋ, ಕಮಂಡಲುವೋ, ದರ್ಭಾಸವೋ, ಪರ್ಣ-
ಶಾಲೆಯೋ ಇಲ್ಲೆ ಸೊಗಸುತ್ತಿತು".


ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,
ಇದೆ ಹೃದಯದ್ರಾವ ಬೇಡ ನಿನಗೆ.
ಮರವುಂಟು, ಮರಕೆ ಬಂಗಾರವುಂಟಲ್ಲದೆಯೇ
ಕಟ್ಟೆಯುಂಟಲ್ಲ! ನೀರಿಕ್ಕು ಅದಕೆ!