ಇಕ್ಷ್ವಾಕು ಕುಲತಿಲಕ

ಇಕ್ಷ್ವಾಕು ಕುಲತಿಲಕ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಅಮೀಶ್ ಕನ್ನಡಕ್ಕೆ: ಬಿ.ಕೆ.ಎಸ್. ಮೂರ್ತಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ : ಆಗಸ್ಟ್ ೨೦೧೬

ಖ್ಯಾತ ಆಂಗ್ಲ ಲೇಖಕರಾದ ಅಮೀಶ್ ತ್ರಿಪಾಠಿ ಅವರ ರಾಮಚಂದ್ರ ಸರಣಿಯ ಮೊದಲ ಪುಸ್ತಕವೇ ‘ಇಕ್ಷ್ವಾಕು ಕುಲತಿಲಕ' (Scion of Ikshvaku). ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ಕೆ.ಎಸ್. ಮೂರ್ತಿ ಇವರು. ಶಿವ ಸರಣಿಯ ಮೂರು ಪುಸ್ತಕಗಳನ್ನು (ಮೆಲೂಹದ ಮೃತ್ಯುಂಜಯ, ನಾಗ ರಹಸ್ಯ, ವಾಯುಪುತ್ರರ ಶಪಥ - ಅನುವಾದ: ಎಸ್.ಉಮೇಶ್) ಈಗಾಗಲೇ ಕನ್ನಡದಲ್ಲಿ ಓದಿರುತ್ತೀರಿ. ಪೌರಾಣಿಕ ಪಾತ್ರಗಳನ್ನು ಈಗಿನ ಕಾಲಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ ಮೂಲ ಉದ್ದೇಶಕ್ಕೆ, ಕಥೆಗೆ ಚ್ಯುತಿಯಾಗದಂತೆ ಬರೆವ ಕಲೆ ಅಮೀಶ್ ಅವರಿಗೆ ಸಿದ್ಧಿಸಿದೆ. 

ಈ ಪುಸ್ತಕದ ಬೆನ್ನುಡಿಯಲ್ಲಿ “ರಾಮರಾಜ್ಯ ಅತಿ ಶ್ರೇಷ್ಟ ನೆಲ. ಆದರೆ ಶ್ರೇಷ್ಟತೆ ಮೌಲ್ಯ ಉಳ್ಳದ್ದಾಗಿದೆ. ಆ ಮೌಲ್ಯವನ್ನು ಆತ ಪಾವತಿಸಿದ್ದಾನೆ. ಭಾರತ ಕ್ರಿ.ಪೂ,೩೪೦೦ ಅಯೋಧ್ಯ ವಿಭಾಗಗಳಿಂದಾಗಿ ದುರ್ಬಲವಾಗಿದೆ. ಒಂದು ಭಯಂಕರ ಯುದ್ಧ ಹಾನಿ ಉಂಟು ಮಾಡಿದೆ. ಹಾನಿ ಅಪಾರ. ಲಂಕೆಯ ದೈತ್ಯ ದೊರೆ ರಾವಣ ಸೋತ ಪ್ರಾಂತ್ಯದ ಮೇಲೆ ತನ್ನ ಆಡಳಿತ ಹೇರುವುದಿಲ್ಲ. ಬದಲಿಗೆ ಅವನು ತನ್ನ ವ್ಯಾಪಾರ ವಿಧಿಸುತ್ತಾನೆ. ಸಾಮ್ರ್ಯಾಜ್ಯದ ಹಣವನ್ನು ಹೀರುತ್ತಾನೆ. ಸಪ್ತ ಸಿಂಧೂ ಜನರು ಬಡತನ, ನಿರುತ್ಸಾಹ ಮತ್ತು ಭ್ರಷ್ಟಾಚಾರಕ್ಕಿಳಿಯುತ್ತಾರೆ. ಆ ಪ್ರದೇಶದಿಂದ ತಮ್ಮನ್ನು ನಡೆಸಲು ಒಬ್ಬ ನಾಯಕನಿಗಾಗಿ ಅವರು ಹಂಬಲಿಸುತ್ತಾರೆ.

ತಮ್ಮ ನಡುವಿನ ನಾಯಕನನ್ನು ಅವರು ಪ್ರಶಂಸಿಸುವುದು ಅಲ್ಲ, ಆತ ಅವರು ಬಲ್ಲವರೇ. ಹಿಂಸೆಗೊಳಗಾದವನೂ ಮತ್ತು ದೇಶ ಭ್ರಷ್ಟನೂ ಆದ ರಾಜಕುಮಾರ. ತಾವೆಲ್ಲ ಭೇದಿಸಲು ಪ್ರಯತ್ನಿಸಿದ ರಾಜಕುಮಾರ. ರಾಮ ಎನ್ನಲಾದ ರಾಜಕುಮಾರ. ಅವನು ತನ್ನ ದೇಶವನ್ನೂ ತನ್ನ ದೇಶದ ಜನ ಯಾತನೆಗೀಡು ಮಾಡಿದರೂ ಪ್ರೀತಿಸಿದವನು. ಧರ್ಮ -ನ್ಯಾಯಗಳಿಗಾಗಿ ಅವನು ಒಬ್ಬನೇ ನಿಂತನು. ಅವನ ಸೋದರ ಸಮೂಹ, ಅವನ ಪತ್ನಿ ಸೀತಾ ಮತ್ತು ಅವನು, ಅರಾಜಕತೆಯ ಅಂಧಕಾರದದೆದುರಿಗೆ.

ಇತರರು ಆತನ ಮೇಲೆ ಅಪವಾದವನ್ನು ಹೇರುವಲ್ಲಿ ರಾಮ ಕಳಂಕಗಳಿಂದ ಹೊರ ಬಂದನೇ? ಸೀತಾಳಿಗಾಗಿ ಅವನ ಪ್ರೇಮ ಅವನ ಹೋರಾಟದ ಮೂಲಕ ಸುಸ್ಥಿರವಿದ್ದಿತೆ? ಅವನ ಬಾಲ್ಯವನ್ನು ನಾಶ ಮಾಡಿದ ದೈತ್ಯ ಪ್ರಭು ರಾವಣನನ್ನು ಅವನು ಸೋಲಿಸಿದನೇ? ಅವನು ವಿಷ್ಣುವಿನ ಅದೃಷ್ಟವನ್ನು ಪೂರೈಸಿದನೇ? ಅಮೀಶ್ ರ ಇತ್ತೀಚಿನ ‘ರಾಮಚಂದ್ರ ಸರಣಿ’ಯೊಂದಿಗೆ ಕಾವ್ಯ ಪಯಣ ಆರಂಭಿಸಿ.”

ಈ ಬೆನ್ನುಡಿ ಓದುವಾಗಲೇ ನಿಮಗೆ ಇದರ ಅನುವಾದದ ಬಗ್ಗೆ ಸಂಶಯ ಮೂಡುತ್ತದೆ. ಅಲ್ಲವೇ? ತಾಳೆಯಾಗದ ವಾಕ್ಯಗಳು, ಅರ್ಥಗಳು ಸರಾಗವಾಗಿ ಓದಲು ಹಿನ್ನಡೆಯಾಗಿದೆ. ಮೂಲತಃ ಅಮೀಶ್ ಬಹಳ ಪ್ರಭಾವಶಾಲಿ ಬರವಣಿಗೆಯ ಲೇಖಕರು. ಆಂಗ್ಲ ಪುಸ್ತಕದಲ್ಲಿ ಅವರ ಭಾಷೆಯ ಮೇಲಿನ ಹಿಡಿತ ಬಹಳಷ್ಟು ಬಲಿಷ್ಟ. ಆದರೆ ಕನ್ನಡಕ್ಕೆ ಅನುವಾದ ಮಾಡಿದಾಗ ಮಾತ್ರ ಲೇಖಕರು ಶಬ್ದಾನುವಾದ ಮಾತ್ರ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಅಮೀಶ್ ಅವರ ಈ ಹಿಂದಿನ ಶಿವ ಸರಣಿಯ ಅನುವಾದ ಮಾಡಿದ ಎಸ್ . ಉಮೇಶ್ ಅವರು ಬಹಳ ಸೊಗಸಾಗಿ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಓದುವಾಗ ಎಲ್ಲೂ ವಾಕ್ಯಗಳು ಹಾದಿ ತಪ್ಪುವುದಿಲ್ಲ. ಆದರೆ ಇಲ್ಲಿ ಆ ಭಾವನೆ ಬರುತ್ತಿಲ್ಲ.

ಪುಸ್ತಕದ ತುಂಬೆಲ್ಲಾ ಅರ್ಥಹೀನ ಸಂಭಾಷಣೆಗಳು ತುಂಬಿ ಹೋಗಿದೆ. ಓದುಗರು ಪುಸ್ತಕವನ್ನು ಹೇಗೆ ಓದಿ ಮುಗಿಸುವುದು ಎಂಬ ಗೊಂದಲದಲ್ಲಿ ಮುಳುಗುವುದು ಸಹಜ. ಒಂದೆಡೆ ಇರುವ ಬರಹವನ್ನು ಗಮನಿಸಿ

“ರಾಮನ ಕಣ್ಣುಗಳು ತೇವಗೊಂಡವು, ಆತ ಹೇಳಿದ: ‘ನನ್ನ ನಿನ್ನ ಲೋಹ ಒಂದೇ ರೀತಿಯದು ತಂದೆ.' ದಶರಥನಿಗೆ ಈಗ ಮಗನ ಬಗ್ಗೆ ಹೆಮ್ಮೆ ಎನಿಸಿತು. ಈಗ ಅವನಿಗೆ ರಾಮನ ಬಗ್ಗೆ ತನ್ನ ಕಣ್ಣು ತೆರೆಯಿತು ಎನಿಸಿತು. ‘ನಿನಗೂ ಮೃಗಸ್ಯನಿಗೂ ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ?’ ಎಂದು ಕೇಳಿದ ದಶರಥ. 

ರಾಮ ಹೇಳಿದ: ‘ನಮ್ಮಿಬ್ಬರಲ್ಲಿ ಯಾವ ಭಿನ್ನಾಭಿಪ್ರಾಯಗಳೂ ಇಲ್ಲ ತಂದೆಯವರೇ.”

ಈ ಸಂಭಾಷಣೆಯಲ್ಲಿ ಬರುವ ಲೋಹ, ಮೃಗಸ್ಯ, ತಂದೆಯವರೇ ಎಂಬ ಪದಗಳು ನಾವು ಕನ್ನಡದಲ್ಲಿ ಬಳಸುವ ಆಡುಪದಗಳಲ್ಲ. ವಾಕ್ಯಗಳ ಸರಾಗ ಓದುವಿಕೆಗೂ ಸೂಕ್ತ ಪದಗಳೂ ಅಲ್ಲ. ಇದು ಅಮೀಶ್ ಅವರ ಆಂಗ್ಲ ಭಾಷಾ ಬಳಕೆಯ ಯಥಾವತ್ತಾದ ಅನುವಾದ. ಇಂತಹ ಪುಸ್ತಕಗಳು ಭಾವಾನುವಾದವನ್ನು ಬಯಸುತ್ತವೆ. ಏಕೆಂದರೆ ರಾಮಾಯಣದ ಈ ಎಲ್ಲಾ ಪಾತ್ರಗಳಲ್ಲಿ ಭಾವನಾತ್ಮಕ ಸಂಬಂಧಗಳು ಅಧಿಕ. 

ರಾಮಚಂದ್ರ ಸರಣಿಯ ಮುಂದಿನ ಭಾಗಗಳಲ್ಲಾದರೂ ಈ ಕೊರತೆಯನ್ನು ಅನುವಾದಕರು ನೀಗಿಸುವರೆಂದು ನಮ್ಮ ನಂಬಿಕೆ. ಸುಮಾರು ೨೫೦ ಪುಟಗಳ ಈ ಪುಸ್ತಕವನ್ನು ಮೂಲ ಲೇಖಕರು ತಮ್ಮ ತಂದೆ ವಿನಯ್ ಕುಮಾರ್ ತ್ರಿಪಾಠಿ ಹಾಗೂ ತಾಯಿ ಉಷಾ ತ್ರಿಪಾಠಿ ಅವರಿಗೆ ಅರ್ಪಣೆ ಮಾಡಿದ್ದಾರೆ. ಒಳರಕ್ಷಾಪುಟದಲ್ಲಿ ಕ್ರಿ,ಪೂ. ೩೪೦೦ರ ಅಖಂಡ ಭಾರತದ ಭೂಪಟ ನೀಡಲಾಗಿದೆ.