ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ

ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ವಿಠಲ ವೆಂಕಟೇಶ ಕಾಮತ್, ಕನ್ನಡಕ್ಕೆ: ಅಕ್ಷತಾ ದೇಶಪಾಂಡೆ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
೧೨೦.೦೦, ಮುದ್ರಣ : ೨೦೧೦

‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ ಪುಸ್ತಕದ ಕನ್ನಡಾನುವಾದ ನನಗಾಗಿ ಒಂದು ಅಭೂತಪೂರ್ವ ಅನುಭವ. ಅನುವಾದ ಮಾಡುವಾಗಿನ ಅನುಭವ, ಇದನ್ನು ಓದಬೇಕಾದರೆ ಊಟ ತಿಂಡಿ ಮರೆತ ಅನುಭವ ಬೇರೆಯಾಗಿರಲಿಲ್ಲ. ಈ ಪುಸ್ತಕದ ಪ್ರತಿಯೊಂದು ವಾಕ್ಯದಲ್ಲಿ ಜಿದ್ದಿದೆ, ಆತ್ಮವಿಶ್ವಾಸವಿದೆ, ಅತ್ಮೀಯತೆ ಇದೆ ಮತ್ತು ಓದುಗರನ್ನು ಕಟ್ಟಿ ಹಾಕುವ ಜಾದೂ ಅದರಲ್ಲಿದೆ. ಪುಸ್ತಕವನ್ನು ಓದುತ್ತಾ ಹೋದಂತೆ ಕಾಮತರ ಸಾಧನೆಯಿಂದ ನಮ್ಮಲ್ಲೂ ಒಂದು ಹುರುಪು ಬಂದಂತಾಗಿ ಜೀವನದಲ್ಲಿ ಏನನ್ನೂ ಸಾಧಿಸದೆ ಹೋದರೆ ಅರ್ಥವೇ ಇಲ್ಲ. ಅನಿಸುವುದು ನಿಜ, ಜೊತೆಗೆ ಅಂದಿನಿಂದಲೇ ನಾವು ಕೂಡಾ ನಮ್ಮ ಸಾಧನೆಯತ್ತ ಮೊದಲ ಹೆಜ್ಜೆಯನ್ನು ಹಾಕಿದ್ದಾಗಿದೆ. 

ವಿಠಲ ಕಾಮತರು ಆರ್ಕಿಡ್ ನಂತಹ ಅನೇಕ ಪಂಚತಾರಾ ಹೋಟೇಲುಗಳ ಮಾಲಿಕರಾಗಿದ್ದರೂ ‘ಹಿ ಇಸ್ ಅ ಡೌನ್ ಟು ಅರ್ತ್ ಪರ್ಸನ್'. ಜೀವನದಲ್ಲಿ ಕಷ್ಟ ಪಟ್ಟು ಏನನ್ನಾದರೂ ಸಾಧಿಸಬೇಕು ಅನ್ನುವವರಿಗಾಗಿ ಅವರು ತುಂಬ ಪ್ರಾಧಾನ್ಯತೆ ಕೊಡುತ್ತಾರೆ.’

ಈ ವಿನಯ ಮತ್ತು ಕಠಿಣ ಪರಿಶ್ರಮವೇ ವಿಠಲ ಕಾಮತ್ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಅವರೇ ತಮ್ಮ ಮಾತಿನಲ್ಲಿ ಹೇಳುತ್ತಾರೆ ‘ನನ್ನ ಪುಸ್ತಕದ ಹೆಸರಿನ ಬಗ್ಗೆ ಅನೇಕರಿಗೆ ಕುತೂಹಲವಿರಬಹುದು. ಆದರೆ ಅದರ ಬಗ್ಗೆಯೇ ಹೇಳುತ್ತೇನೀಗ. ಅದಕ್ಕೂ ಮುನ್ನ ನನ್ನ ತಾಯಿಯ ಕೈರುಚಿಯ ಬಗ್ಗೆ ಸ್ವಲ್ಪ! ಎಲ್ಲಿಂದೆಲ್ಲಿಗೆ ಅನ್ನಬೇಡಿ. ಓದಿದಾಗ ನಿಮಗೆ ತಿಳಿಯುತ್ತದೆ. ನನ್ನ ತಾಯಿಯ ಕೈರುಚಿಯಂತೂ ಆಹಾ.. ಆಕೆ ಅನ್ನಪೂರ್ಣೆಯೇ ಸರಿ. ಆಕೆ ತಯಾರಿಸಿದ ಇಡ್ಲಿಯನ್ನು ಒಮ್ಮೆ ತಿಂದಾತ ಅದರ ರುಚಿಯನ್ನು ಜೀವನದುದ್ದಕ್ಕೂ ಮರೆಯುವುದಿಲ್ಲ. ನನ್ನ ತಾಯಿ ಎಂಬ ಕಾರಣಕ್ಕೆ ಆಕೆಯನ್ನು ಹೊಗಳುತ್ತಿದ್ದೇನೆ ಅಂದುಕೊಳ್ಳಬೇಡಿ. ಆದರೆ ಇಡ್ಲಿ ತಯಾರಿಸುವುದರಲ್ಲಿ ಆಕೆಯ ಸಮಾನರಾದವರು ಜಗತ್ತಿನಲ್ಲಿ ಹುಟ್ಟೇ ಇಲ್ಲ ಅನ್ನಬಹುದು. ಇಂದಿಗೂ ಕೂಡ ಆಕೆಗೆ ಎಪ್ಪತ್ತು ದಾಟಿದ್ದರೂ ಅಷ್ಟೇ ಮೃದುವಾದ ಇಡ್ಲಿಗಳನ್ನು ತಯಾರಿಸಬಲ್ಲಳು.  ಆಕೆಯಿಂದಲೇ ನಾನು ಇಡ್ಲಿಯನ್ನು ತಯಾರಿಸಲು ಕಲಿತು ಜಗತ್ತಿನಾದ್ಯಂತ ಹೆಸರುವಾಸಿ ಮಾಡಿದೆ. ಇದರಲ್ಲಿ ನಾನು ಎಷ್ಟು ಸಫಲನಾಗಿದ್ದೇನೆ ಅನ್ನುವುದನ್ನು ನೀವು ಈ ಪುಸ್ತಕದ ‘ಅದ್ಭುತ ಉಮೇದುವಾರಿ' ಸಂದರ್ಭದಲ್ಲಿ ಓದುತ್ತೀರಿ. ಜಗತ್ತಿನ ಮೂಲೆ ಮೂಲೆಗಳಲ್ಲಿ ನಾನು ಇಡ್ಲಿಯನ್ನು ಹೆಸರುವಾಸಿ ಮಾಡಿದ್ದೇನೆ. ಯುರೋಪಿನಲ್ಲಂತೂ ಇಡ್ಲಿಯನ್ನು ರೈಸ್ ಪುಡ್ಡಿಂಗ್ ಹಾಗೂ ಚಟ್ನಿಯನ್ನು ಕೋಕೋನಟ್ ಸಾಸ್ ಎಂದು ಹೇಳಿ ಮಾರಿದ್ದೇನೆ. ನಮ್ಮ ಕಾಮತರನ್ನು ಎಲ್ಲರೂ ಇಡ್ಲಿ-ವಡಾ-ಸಾಂಬಾರ್ ಮಾರುವವರು ಎಂದು ಹಾಸ್ಯ ಮಾಡುತ್ತಾರೆ. ಆದರೆ ಈ ಇಡ್ಲಿಯಿಂದಲೇ ನಾನು ಜಗತ್ತೆಲ್ಲಾ ಸುತ್ತಿ ಬಂದಿದ್ದೇನಲ್ಲದೇ ಆರ್ಕಿಡ್ ನಂತಹ ಏಷ್ಯಾ ಖಂಡದ ಪ್ರಥಮವೆನ್ನಬಹುದಾದಂತಹ ಪರಿಸರಕ್ಕೆ ಬೆಲೆ ಕೊಡುವಂತಹ ಹೋಟೇಲನ್ನು ಕಟ್ಟಿರುವೆ. ಇಂತಹ ಇಡ್ಲಿಯ ಉಪಕಾರವನ್ನು ನಾನು ಮರೆಯಲುಂಟೇ? ಅದಕ್ಕೇ ನನ್ನ ಪುಸ್ತಕದ ಹೆಸರನ್ನು ಇಡ್ಲಿಯಿಂದ ಆರಂಭಿಸಿದ್ದೇನೆ.’

ಪುಸ್ತಕದ ಒಳಗಡೆ ೩೫ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯಕ್ಕೂ ಸೂಕ್ತವೆನಿಸುವ ರೇಖಾಚಿತ್ರಗಳಿವೆ. ವಿಠಲ ಕಾಮತರಿಗೆ ಈ ಪುಸ್ತಕ ಏಕೆ ಬರೆಯಬೇಕೆನಿಸಿತು? ಎಂಬುವುದರಿಂದ ಹಿಡಿದು, ಕಾಮತರ ಆತ್ಮ ಬಲದವರೆಗೆ ಈ ಪುಸ್ತಕ ತಿಳಿಸುತ್ತದೆ. ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಹೇಳುತ್ತಾರೆ..'ಈ ಕೃತಿಯ ಶ್ರೇಷ್ಟತೆಯಿರುವುದು ಲೇಖಕ ವಿಠಲ ವೆಂಕಟೇಶ ಕಾಮತರು ಓದುಗನನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರಲ್ಲ ಅಲ್ಲಿ. ಅವರು ಶಿಖರದ ತುದಿಯಲ್ಲಿರಲಿ ಅಥವಾ ಕರುಣಾಜನಕ ಸ್ಥಿತಿಯಲ್ಲಿರಲಿ ಓದುಗನಿಗೂ ಅದೇ ಅನುಭವವಾಗುತ್ತದೆ. ಓದುಗರನ್ನು ಮೋಡಿ ಮಾಡುವ ಈ ಅನುಪಮ ಸಾಮರ್ಥ್ಯವು ಕೆಲವು ಲೇಖಕರಲ್ಲಿ ಕಾಣಬಹುದು.’

ಸುಮಾರು ೧೮೦ ಪುಟಗಳ ಈ ಕಾದಂಬರಿಯನ್ನು ಲೇಖಕರು ತಮ್ಮ ಬದುಕಿನ ಪ್ರಕ್ಷುಬ್ಧ ಸಂದರ್ಭದಲ್ಲಿ ಸಹಾಯ ಮಾಡಿದ, ಜೀವನದುದ್ದಕ್ಕೂ ತಮಗೆ ದಾರಿ ತೋರಿದ ಮಾರ್ಗದರ್ಶಕ ಮತ್ತು ಆಪ್ತ ಸಖ ಶ್ರೀ ಎಂ.ಅರ್.ಪೈ ಅವರಿಗೆ ಅರ್ಪಿಸಿದ್ದಾರೆ.