ಇಡ್ಲಿ ವಡ ಡೆಡ್ಲಿ ಮರ್ಡರ್

ಇಡ್ಲಿ ವಡ ಡೆಡ್ಲಿ ಮರ್ಡರ್

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೭೫.೦೦ ಮುದ್ರಣ: ಎಪ್ರಿಲ್ ೨೦೧೯

೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ. ಜ್ಯೋತಿಷ್ಯದ ಮೇಲೆ ರಾಜಗೋಪಾಲ್ ಗೆ ಬಹಳಷ್ಟು ನಂಬಿಕೆ. ಕೃಪಾನಂದ ವಾರಿಯರ್ ಸ್ವಾಮಿಗಳ್ ಭಕ್ತರಾಗಿದ್ದ. ಆದರೆ ಕುಳಂತೈ ಪಂಡಿಚ್ಚಿ ಎಂಬ ಜ್ಯೋತಿಷಿಯ ಮಾತು ಕೇಳಿಯೇ ಈ ಕೊಲೆ ಮಾಡಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಿದ. ಅತ್ಯಂತ ಕಡು ಬಡತನದ ಹಿನ್ನಲೆಯಿಂದ ಬಂದಿದ್ದ ರಾಜಗೋಪಾಲ್ ಸಣ್ಣವರಿದ್ದಾಗಲೇ ಹೋಟೇಲ್ ಒಂದರಲ್ಲಿ ಕ್ಲೀನರ್ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇಪ್ಪತೈದು ರೂಪಾಯಿ ಸಂಬಳಕ್ಕೆ ದುಡಿಯುತ್ತಿದ್ದ ವ್ಯಕ್ತಿ ಕಾಲಕ್ರಮೇಣ ಕೋಟ್ಯಾಂತರ ಬೆಲೆ ಬಾಳುವ ಶರವಣ ಹೋಟೇಲ್ ಮಾಲಕನಾದದ್ದು ಕೆಲಸದ ಮೇಲಿನ ಶೃದ್ಧೆ ಹಾಗೂ ದುಡಿಮೆಯಿಂದ. ರಾಜಗೋಪಾಲನಿಗೆ ಯಾವುದೇ ಚಟಗಳು ಇಲ್ಲದೇ ಹೋದರೂ ಹುಡುಗಿಯರ ಖಯಾಲಿ ಜೋರಾಗಿತ್ತು. 

ಮೊದಲ ಪತ್ನಿ ವಳ್ಳಿಯಮ್ಮಾಳ್ ಜೀವಂತವಿರುವಾಗಲೇ ಕೃತಿಕಾ ಎಂಬ ಹುಡುಗಿಯನ್ನು ಬಲವಂತದಿಂದ ಮದುವೆಯಾದ. ಎರಡನೇ ಮದುವೆಯ ನಂತರವೂ ರಾಜಗೋಪಾಲನ ಹೆಣ್ಣು ಹುಚ್ಚು ಬಿಡಲಿಲ್ಲ. ಶರವಣ ಭವನದ ಶಾಖೆಗಳು ವಿದೇಶದಲ್ಲೂ ಹರಡಿದವು. ಎರಡನೇ ಪತ್ನಿ ಕೃತಿಕಾ ಜೊತೆ ಸಿಂಗಾಪುರಕ್ಕೂ ಹೋಗಿ ಅಲ್ಲಿಯ ವ್ಯವಸ್ಥೆಯನ್ನು ನೋಡಿದ ನಂತರ ಅಲ್ಲೂ ಒಂದು ಶರವಣ ಭವನ ನಿರ್ಮಾಣವಾಯಿತು. ಯಶಸ್ಸು ಒಂದೊಂದಾಗಿಯೇ ಕೈ ಹಿಡಿಯುತ್ತಿರುವಾಗ ಈ ಭವಿಷ್ಯ ಹೇಳಿದ ಜ್ಯೋತಿಷಿಯನ್ನು ನೆನಪು ಮಾಡಿಕೊಳ್ಳಲೇ ಬೇಕಲ್ವೇ?

ಸಿಂಗಾಪುರದಿಂದ ನೇರ ಆ ಮಾಂತ್ರಿಕನ ಬಳಿಗೆ ಹೋದ ರಾಜಗೋಪಾಲನಿಗೆ ಅವನು ಹೇಳಿದ್ದು ಇಷ್ಟೇ, ಒಬ್ಬಳಿದ್ದಾಳೆ. ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದವಳು. ಇಪ್ಪತ್ತು ಕೂಡಾ ದಾಟಿಲ್ಲ. ಆದರೆ ಮದುವೆಯಾಗಿದೆ. ನೀನು ಅವಳನ್ನು ಒಲಿಸಿ ಮದುವೆಯಾದರೆ ನಿನ್ನ ವ್ಯವಹಾರ ಕೋಟಿಗಳಲ್ಲಿ ಹೊರಳಾಡುತ್ತೆ. ಹೆಸರು ವಿದೇಶಗಳಲ್ಲಿ ಹರಡುತ್ತದೆ' ಎಂದು ಮನಸ್ಸನ್ನು ಕೆಡಿಸಿದ. ಅಲ್ಲಿಂದ ಬಂದ ಬಳಿಕ ಎಡ ಕೆನ್ನೆಯ ಮೇಲೆ ಮಚ್ಚೆ ಇರುವ ಹುಡುಗಿಯದ್ದೇ ಕನವರಿಕೆ. ಆಗ ಸಿಕ್ಕಿದ ಹುಡುಗಿಯೇ ಜೀವಜ್ಯೋತಿ. ಅವಳೇನೂ ಅಪರಿಚಿತೆಯಲ್ಲ. ರಾಜಗೋಪಾಲನ ಹೋಟೇಲ್ ಉದ್ಯೋಗಿಯಾಗಿದ್ದ ರಾಮಸ್ವಾಮಿ ಎಂಬವರ ಮಗಳು. ಪ್ರೀತಿಸಿ ಮದುವೆಯಾಗಿದ್ದಾಳೆ. ವಯಸ್ಸಿನ್ನೂ ಇಪ್ಪತ್ತು. 

ಈ ವಿಷಯ ತಿಳಿಯುತ್ತಲೇ ರಾಜಗೋಪಾಲ್ ಜೀವಜ್ಯೋತಿಯನ್ನು ತನ್ನವಳನ್ನಾಗಿಸಲು ನಾನಾ ರೀತಿಯ ಪ್ರಯತ್ನ ಮಾಡುತ್ತಾನೆ. ಕೊನೆಗೊಮ್ಮೆ ಅವಳ ಗಂಡ ಪ್ರಿನ್ಸ್ ಶಾಂತಕುಮಾರ್ ಎಂಬ ಅಮಾಯಕ ಹುಡುಗನನ್ನು ಕೊಲೆ ಮಾಡಿಸಿಯೇ ಬಿಡುತ್ತಾನೆ. ಕೊಲೆ ಮಾಡಿದವರು ಬಾಯಿ ಬಿಡದೇ ಇರುತ್ತಾರಾ? ರಾಜಗೋಪಾಲ ಸಿಕ್ಕಿ ಬೀಳುತ್ತಾನೆ. ಜೀವಾವಧಿ ಶಿಕ್ಷೆಯಾಗುತ್ತೆ. ಇವೆಲ್ಲವನ್ನೂ ನೀವು ಖುದ್ದಾಗಿ ಓದಿಯೇ ತಿಳಿದುಕೊಂಡರೆ ಅದರ ಮಜಾವೇ ಬೇರೆ. 

ರಾಜಗೋಪಾಲ್ ಕಥೆ ನೋಡಿದರೆ ಒಂದು ಕಡೆ ತುಂಬಾನೇ ಬೇಜಾರು ಆಗುತ್ತದೆ. ಒಂದು ಬಾಳೆ ಎಲೆ ಹರಿದರೆ ಮಧ್ಯೆ ಸಿಗುವ ಕಡ್ಡಿಯಿಂದ ಟೇಬಲ್ ಒರೆಸುತ್ತಿದ್ದ ತಿರುನಲ್ವೇಲಿಯ ಮಾಮೂಲಿ ಅರೆ ಅನಕ್ಷರಸ್ಥ ಹುಡುಗ ಹೋಟೇಲ್ ಉದ್ಯಮಕ್ಕೆ ಕೈ ಇರಿಸಿದಾಗ ಅದರ ಪ್ರತಿಯೊಂದು ಮಾಹಿತಿಯನ್ನು ಇಂಚು ಇಂಚಾಗಿ ತಿಳಿದುಕೊಂಡಿದ್ದ. ರಾಜಗೋಪಾಲ್ ಗೆ ಕುಡಿಯುವ, ಮೋಸ ಮಾಡುವಂತಹ ಯಾವುದೇ ಅಭ್ಯಾಸವಿರಲಿಲ್ಲ. ಆದರೆ ಹುಡುಗಿಯರ ಚಟ ಅವನನ್ನು ಈ ಮಟ್ಟಕ್ಕೆ ಮುಟ್ಟುವಂತೆ ಮಾಡಿತು. ದೇಶ ವಿದೇಶಗಳಲ್ಲಿ ಹತ್ತಾರು ಹೋಟೇಲ್ ಗಳು, ಕೋಟ್ಯಾಂತರ ರೂಪಾಯಿ ಹಣ ಎರಡು ಪತ್ನಿಯರು ಎಲ್ಲವೂ ಇದ್ದವು. ಅದರೆ ಮತ್ತೊಂದು ಹೆಣ್ಣಿನ ಆಶೆ ಅವನಿಗೆ ಜೈಲು ಊಟದ ರುಚಿ ತೋರಿಸಿತು.

ಸುಮಾರು ೬೫ ಪುಟಗಳ ಪುಟ್ಟ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಹಲವಾರು ಅಪರೂಪದ ಚಿತ್ರಗಳು ಪುಸ್ತಕದ ಹೈಲೈಟ್. ರವಿ ಬೆಳಗೆರೆ ಈ ಪುಸ್ತಕವನ್ನು ಶಂಕರ್ ಬಿದರಿಯವರಿಗೆ ಅರ್ಪಿಸಿದ್ದಾರೆ.