ಇತಿಮಿತಿಯ ನಡುವಿನ ರಾಜ್ಯ ಬಜೆಟ್

ಇತಿಮಿತಿಯ ನಡುವಿನ ರಾಜ್ಯ ಬಜೆಟ್

ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್ ಗೆ ಪ್ರತೀ ಬಜೆಟ್ ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. ೪.೦೯ ಲಕ್ಷ ಕೋಟಿಯ ರೂ. ದಾಖಲೆಯ ರಾಜ್ಯ ಬಜೆಟ್ ಇದಾಗಿದ್ದು, ಈ ಮುಂಗಡ ಪತ್ರವು ಶೋಷಿತರ, ದೀನ ದಲಿತರ ಮತ್ತು ಅಲ್ಪ ಸಂಖ್ಯಾತರ ಮೇಲೆ ಹೆಚ್ಚಿನ ಗಮನ ಗಮನ ಹರಿಸಿದೆ ಎಂಬುದು ಒಂದೇ ನೋಟಕ್ಕೆ ಅನಿಸಿದರೂ ಇತರ ವಲಯದ ಬೇಡಿಕೆಗಳನ್ನೂ ಚಿಕ್ಕ ಪ್ರಮಾಣದಲ್ಲಿ ಈಡೇರಿಸುವಲ್ಲಿ ಸಿದ್ಧರಾಮಯ್ಯ ಚಾಕಚಕ್ಯತೆ ಮೆರೆದಿದ್ದಾರೆ. ೧೯೯೫ರಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಬಜೆಟ್ ಮಂಡಿಸಿದಾಗ ಅದರ ಗಾತ್ರವು ಕೇವಲ ೧೨ ಸಾವಿರ ಕೋಟಿ ರೂ. ಇತ್ತು. ಕಳೆದ ವರ್ಷ ಸಾಲ ೧,೦೫,೨೪೬ ಕೋಟಿ ರೂ ಆಗಿದ್ದು, ಈ ವರ್ಷ ೧,೧೬,೦೦೦ ಕೋಟಿ ರೂ. ಸಾಲವಷ್ಟೇ ಏರಿರುವುದು ಗಮನಾರ್ಹ ವಿಷಯ. ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆಯ ಪ್ರಕಾರ ಒಂದು ರಾಜ್ಯದ ಬಜೆಟ್ ಜಿಎಸ್ ಡಿಪಿಯ ಶೇಕಡಾ ೨೫ರೊಳಗೆ ಸಾಲದ ಪ್ರಮಾಣ ಇರಬೇಕು. ಈ ಬಜೆಟ್ ನಲ್ಲಿ ಶೇ ೨೪.೯೧ ಸಾಲ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ತಮ್ಮ ಸಮರ್ಥನೆಯನ್ನೂ ಮಾಡಿದ್ದಾರೆ.

ಕೇಂದ್ರ ಸರಕಾರಕ್ಕೆ ಹೋಲಿಸಿದರೆ ರಾಜ್ಯ ಸರಕಾರದ ವಿತ್ತೀಯ ಕೊರತೆ ತುಂಬಾ ಕಡಿಮೆ ಎಂದೂ ಹೇಳಿದ್ದಾರೆ. ಗ್ಯಾರಂಟಿಗಳನ್ನು ಜಾರಿ ಮಾಡಿದಾಗ ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದರೂ ವಿತ್ತೀಯ ಶಿಸ್ತನ್ನು ಕಾಪಾಡಲು ನಮ್ಮಿಂದ ಸಾಧ್ಯವಾಗಿದೆ ಎಂದು ಸಿದ್ಧರಾಮಯ್ಯ ಬಜೆಟ್ ಮಂಡನೆಯ ವೇಳೆ ತಿರುಗೇಟು ನೀಡಿದ್ದಾರೆ. ೨೦೨೫-೨೬ ನೇ ಸಾಲಿನ ಒಟ್ಟು ೨,೯೨,೪೭೭ ಕೋಟಿ ರೂ. ಗಳ ರಾಜಸ್ವ ಸ್ವೀಕೃತಿಯನ್ನು ಅಂದಾಜಿಸಲಾಗಿದ್ದು, ಇದರಲ್ಲಿ ೨,೦೮,೧೦೦ ಕೋಟಿ ರೂ. ಗಳ ರಾಜ್ಯ ತೆರಿಗೆ ಮತ್ತು ಕೇಂದ್ರ ಸರಕಾರದ ಸ್ವೀಕೃತಿ ೬೭,೮೭೭ ಕೋಟಿ ರೂ. ಸೇರಿವೆ ಎಂದು ಬಜೆಟ್ ಭಾಷಣದಲ್ಲಿ ಸ್ವತಃ ಆರ್ಥಿಕ ತಜ್ಞರೂ ಆಗಿರುವ ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯದ ಆರು ಆದ್ಯತಾ ವಲಯಗಳಾದ ಕಲ್ಯಾಣ ಕಾರ್ಯಕ್ರಮ, ಕೃಷಿ-ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮೂಲಸೌಕರ್ಯ, ಹೂಡಿಕೆ ಮತ್ತು ಉದ್ಯೋಗ ಸೃಜನೆಗೂ ತಕ್ಕ ಮಟ್ಟಿಗಿನ ಪ್ರಾಮುಖ್ಯತೆ ನೀಡಿದ್ದಾರೆ ಎಂಬುದೂ ಉಲ್ಲೇಖಾರ್ಹ ವಿಷಯ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೮-೦೩-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ