ಇತಿಹಾಸದ ಪಾಠ - ಇತಿಹಾಸದಿಂದ ಪಾಠ...
ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ... ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು.
ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು ಪರಿಶೀಲಿಸಿ ಅದಕ್ಕೆ ಬೆಲೆ ಕಟ್ಟುತ್ತಾರೆ. ಮನುಷ್ಯರಲ್ಲೂ ಗಂಡು ಹೆಣ್ಣು ಇಬ್ಬರನ್ನೂ ಇದೇ ರೀತಿ ಪರಿಶೀಲಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಿ ಗುಂಪುಗಳಾಗಿ ವ್ಯಾಪಾರ ಮಾಡಿ ಸಾಗಿಸಲಾಗುತ್ತಿತ್ತು. ಬಲಿಷ್ಠವಾದ ದೇಹದವರನ್ನು ಬೇಟೆಯಾಡಿ, ಆಯುಧಗಳಿಂದ ಗಾಯ ಮಾಡಿ ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗುತ್ತಿತ್ತು.
ಹೀಗೆ ಬಂಧಿಸಿದ ನೂರಾರು ಜನರನ್ನು ವ್ಯಾಪಾರಿಗಳು ಖರೀದಿಸಿ ನಡೆಸಿಕೊಂಡು ಅಥವಾ ಹಡಗಿನಲ್ಲಿ ಕುರಿಗಳಂತೆ ತುಂಬಿ ತಿಂಗಳು ಗಟ್ಟಲೆ ಪ್ರಯಾಣ ಮಾಡಿ ದೂರದ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದರು. ಆಗಿನ ಕಾಲದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ನೀಡುತ್ತಿದ್ದರು. ಆ ಗುಂಪಿನಲ್ಲಿ ಯಾರಾದರೂ ಅನಾರೋಗ್ಯದಿಂದ ಸಾವನ್ನಪ್ಪಿದರೆ ಸಮುದ್ರಕ್ಕೆ ಎಸೆಯುತ್ತಿದ್ದರು. ಅದು ಜಲಚರಗಳಿಗೆ ಆಹಾರವಾಗುತ್ತಿತ್ತು.
ಇವರನ್ನು ಗುಲಾಮರೆಂದು ಕರೆಯಲಾಗುತ್ತಿತ್ತು. ವಿಶ್ವದ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಇದ್ದರೂ ಇದರ ಅತ್ಯಂತ ಹೆಚ್ಚು ದಾರುಣ ಕಥೆಗಳು ಕಂಡುಬರುವುದು ಆಫ್ರಿಕಾ ಮೂಲನಿವಾಸಿಗಳಾದ ಕಪ್ಪು ಜನರಲ್ಲಿ. ಅವರನ್ನು ಮುಖ್ಯವಾಗಿ ಯೂರೋಪ್ ಮತ್ತು ಅಮೆರಿಕಾಗಳಿಗೆ ರಪ್ತು ಮಾಡಲಾಗುತ್ತಿತ್ತು. ಯಾವ ಕಾನೂನು, ಮಾನವ ಹಕ್ಕುಗಳು, ದಯಾ ಸಂಘಟನೆಗಳು ಆಗ ಇರಲಿಲ್ಲ. ಇದ್ದರೂ ಕೇಳುವವರಾರು !!?
ಗೆಳೆಯರೆ,
ಅಭಿವ್ಯಕ್ತಿ ಸ್ವಾತಂತ್ರ್ಯ ಮೀರಿ ಸ್ವೇಚ್ಚಾ ಸಮಾಜದಲ್ಲಿ ವಾಸಿಸುತ್ತಿರುವ ನಾವು ಒಮ್ಮೆ ಇದನ್ನು ನೆನಪಿಸಿಕೊಳ್ಳೋಣ.
ಮೈ ನಡುಗುತ್ತದೆ,
ಮನಸ್ಸು ಕದಡುತ್ತದೆ,
ಹೃದಯ ಕಲಕುತ್ತದೆ,
ರೋಷ ಉಕ್ಕುತ್ತದೆ.
ರಕ್ತ ಕುದಿಯುತ್ತದೆ.
ಈಗ ಇದು ಇತಿಹಾಸವೆಂಬುದು ನಿಜ. ಆದರೆ ಈ ಇತಿಹಾಸದ ಘಟನೆ ನಮಗೆ ಪಾಠವಾಗಬಾರದೆ? ನಮ್ಮಲ್ಲಿ ವಿನಯ, ಸಭ್ಯತೆ, ಮಮತೆ, ಕರುಣೆ ಹುಟ್ಟಿಸಬಾರದೆ? ಸಹಕಾರ, ಸಮನ್ವಯ, ಸಂಸ್ಕಾರ ಬೆಳೆಸಬಾರದೆ?
ಬಹುತೇಕ ಎಲ್ಲಾ ಅನುಕೂಲಗಳು, ಪೋಲೀಸ್, ಕಾನೂನು, ನ್ಯಾಯಾಲಯ, ಮಾಧ್ಯಮ, ಪ್ರಜಾಪ್ರಭುತ್ವ ಎಲ್ಲವೂ ನಮಗಾಗಿ ಇರುವಾಗ ಕನಿಷ್ಠ ಉತ್ತಮ ನಾಗರಿಕರಾಗಿ ಬಾಳಬಾರದೆ? ಇಷ್ಟೊಂದು ಶಿಕ್ಷಣ ಸಂಪರ್ಕ ತಂತ್ರಜ್ಞಾನದ ಸೌಕರ್ಯಗಳು ಇದ್ದರೂ ನಾವುಗಳು ಇನ್ನೂ ಕೆಲಸಕ್ಕೆ ಬಾರದ ಏನೇನೂ ವಿಷಯಗಳಿಗೆ ಅಸಹನೆ ಅತೃಪ್ತಿ ವ್ಯಕ್ತಪಡಿಸುತ್ತಾ, ಒಬ್ಬರಿಗೊಬ್ಬರು ಅಸೂಯೆ ಪಡುತ್ತಾ, ಬೆನ್ನಿಗೆ, ಹೃದಯಕ್ಕೆ ಚೂರಿ ಹಾಕುತ್ತಾ ಅನಾಗರಿಕರಂತೆ ಬದುಕುತ್ತಿದ್ದೇವೆ. ಇದು ಸರಿಯೇ....?
ಗುಲಾಮಿತನದಿಂದ ಮತದಾರ ಪ್ರಭುವಾಗಿ ಬದಲಾಗಿರುವ ನಾವು ಇನ್ನಾದರೂ ವಿವೇಚನೆಯಿಂದ ಜೀವನ ಸಾಗಿಸೋಣ. ದಯವಿಟ್ಟು ಇಂದಿನಿಂದಲೇ ಸಾಧ್ಯವಾದಷ್ಟು ಒಳ್ಳೆಯ ನಡತೆಯ ನಾಗರಿಕರಾಗಿ ವರ್ತಿಸೋಣ. ಅಂದಿನ ದಿನಗಳನ್ನು ನೆನೆದು ಇಂದಿನ ಪರಿಸ್ಥಿತಿಗೆ ಹೆಮ್ಮೆ ಪಡೋಣ.
- ಜ್ಞಾನ ಭಿಕ್ಷಾ ಪಾದಯಾತ್ರೆಯ 264 ನೆಯ ದಿನ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿಯೇ ವಾಸ್ತವ್ಯ ಹೂಡಿತು. ಆ ಸಮಯದಲ್ಲಿ ಬರೆದ ಬರಹ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ