ಇದನ್ನು ಒಂದು ಕಾಲ್ಪನಿಕ ಕಥೆಯೆಂದೇ ಓದಿಕೊಳ್ಳಿ..
ಅಲ್ಲೊಂದು ಕಾಲೇಜಿನ ವಾರ್ಷಿಕೋತ್ಸವವಿತ್ತು! ವೇದಿಕೆಯ ಮೇಲೆ ಒಂದಷ್ಟು ಸನ್ಮಾನಗಳು ಸರಾಗವಾಗಿ ನಡೆಯುತ್ತಿದ್ದವು! ಮೈಕಾಸುರನ ಆರ್ಭಟವೂ ಜೋರಾಗಿತ್ತು! ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವ್ಯವಸ್ಥೆಯೂ, ಅಷ್ಟೇ ಅವ್ಯವಸ್ಥೆಯೂ ಇತ್ತು! ಈ ನಡುವೆ ಆ ಕಾಲೇಜಿನ ಒಬ್ಬ ನಿವೃತ್ತ ಉಪನ್ಯಾಸಕರು ನನಗೆ ಕಾಣಸಿಕ್ಕಿ ನನ್ನೊಂದಿಗೆ ಪ್ರೀತಿಯಿಂದಲೇ ಮಾತಿಗಿಳಿದರು! ನಿವೃತ್ತ ಉಪನ್ಯಾಸಕರು ಎಂದ ಮೇಲೆ ಪ್ರಾಯ ಒಂದು ಎಪ್ಪತ್ತು ವರ್ಷ ದಾಟಿರಬೇಕೆಂದೇ ಇಟ್ಟುಕೊಳ್ಳಿ!
ಮಾತಿನ ಮಧ್ಯೆ ಮತ್ತೊಬ್ಬ ತಮ್ಮ ಸಮಕಾಲೀನ ಉಪನ್ಯಾಸಕರ ವಿಷಯ ಪ್ರಸ್ತಾಪ ಮಾಡಿ "ಆ ಮನುಷ್ಯನಿಗೆ ನಮ್ಮ ಜಾತಿಯವರನ್ನು ಕಂಡ್ರೆ ಆಗುದಿಲ್ಲ ಮಾರಾಯ್ರೆ! ಎಲ್ಲಿ ಎಲ್ಲಾ ನಮ್ಮ ಜಾತಿಯವರನ್ನು ತುಳಿಲಿಕ್ಕಾಗ್ತದೋ ಅಲ್ಲೆಲ್ಲಾ ನಮ್ಮವರನ್ನು ತುಳಿದಿದ್ದಾನೆ! ಪ್ರಾಯ ಎಪ್ಪತ್ತು ದಾಟಿದ್ರೂ ಇನ್ನು ಆ ಚಾಳಿ ಬಿಡ್ಲಿಲ್ಲ ನೋಡಿ! ಇವತ್ತೂ ನನ್ನ ಮುಖ ನೋಡಿದ ಆತ ಇಂಗು ತಿಂದ ಮಂಗನಂತೆ ಮಾಡಿದ ನೋಡಿ. ಅಂತವನೂ ಒಂದು ಕಾಲೇಜಿನ ಪ್ರಿಂಸಿಪಾಲನಾಗ್ತಾನೆ!! ಮಕ್ಕಳಿಗೆಂತ ಪಾಠ ಹೇಳಿದ್ದಾನೋ.....ಆ ಮಕ್ಕಳನ್ನು ದೇವರೇ ಕಾಯ್ಬೇಕು! ನಾನು ಆ ಮನುಷ್ಯ ಹತ್ತಿರ ಬಂದ್ರೆ ದೂರು ನಿಲ್ಲುದು! ನನ್ಗೆ ಅಂತವ್ರು ಬೇಡ್ವೇ ಬೇಡ!............" ಇತ್ಯಾದಿ ಇತ್ಯಾದಿ.
ನಾನು ಅವರನ್ನೇನೋ ಬೀಳ್ಕೊಂಡೆ. ಆದರೆ ನನ್ನ ಮನಸ್ಸು ಇನ್ನೂ ಕೂಡಾ ಅವರ ಮಾತಿನ ಸುತ್ತ ಗಿರ್ಕಿ ಹೊಡೆಯೊಯುತ್ತಿದೆ. ಮಕ್ಕಳಿಗೆ ಪಾಠ ಹೇಳಿಕೊಡುವ ಶಾಲಾ ಮೇಷ್ಟ್ರು,ಗಳನ್ನು, ಕಾಲೇಜಿನ ಉಪನ್ಯಾಸಕರುಗಳನ್ನು ನಾವು - ಅಂದರೆ ನನ್ನಂತಹ ವಿದ್ಯಾರ್ಥಿಗಳು - ಸೂರ್ಯ-ಚಂದ್ರರು ಎಂತಲೋ, ಚಿನ್ನ- ವಜ್ರ ಎಂತಲೋ, ವಿಶ್ವಾಮಿತ್ರ - ವಸಿಷ್ಠರು ಎಂತಲೋ ಆದರ್ಶರು- ದಾರ್ಶನಿಕರು ಎಂತಲೋ ತಿಳಿದು ಗೌರವಿಸಿದರೆ ಆ ಉಪನ್ಯಾಸಕರುಗಳ ಮನಸ್ಸಿನೊಳಗೆ ಇಷ್ಟೆಲ್ಲಾ "ಹುಳಿ" ಇರುತ್ತದೆ ಅಂತ ನಿನ್ನೆ ಆ ಹಿರಿಯರ ಮಾತಿನಿಂದಲೇ ತಿಳಿದು ಬಂದದ್ದು! ನಾವೇನಿದ್ದರೂ ಪಾಠಕೇಳಿ ಗೌರವದ ವಿದಾಯಕ್ಕೆ ಸಾಕ್ಷಿದಾರರಾಗಿ ಕಾಲೇಜಿಗೆ ಬೆನ್ನು ಹಾಕಿರುತ್ತೇವೆಯೇ ವಿನಃ ಅವರೊಳಗಿನ ಇಂತಹ ಒಳ ರಾಜಕೀಯ ನಮಗೆ ತಿಳಿದಿರುವುದೇ ಇಲ್ಲ ಅಲ್ಲವೇ! ಇತ್ತೀಚೆಗೆ ಮಕ್ಕಳಲ್ಲಿ ತುಂಬಾ ಬದಲಾವಣೆಯಾಗಿದೆಯೆಂತಲೋ, ಮೇಷ್ಟ್ರು ಮತ್ತು ವಿದ್ಯಾರ್ಥಿಗಳ ಸಂಬಂಧ ಕೆಟ್ಟಿದೆಯೆಂತಲೋ ನಾವು ವಿದ್ಯಾರ್ಥಿಗಳನ್ನು ದೂಷಣೆ ಮಾಡುತ್ತೇವೆ. ಆದರೆ ಅದೇ ಮೇಷ್ಟ್ರುಗಳು, ಉಪನ್ಯಾಸಕರುಗಳು ತಪ್ಪು ದಾರಿ ಹಿಡಿಯುವುದು, ವೃತ್ತಿಧರ್ಮ ಏನೆಂದೇ ತಿಳಿಯದ ಗಮಾರರಂತೆ ವರ್ತಿಸುವುದು, ಸಿನಿಕತನ ತೋರುವುದು, ಸಣ್ಣ ಬುದ್ದಿ ಹೊಂದಿರುವುದು, ಸಾಮಾನ್ಯರಂತೆ ಹಾಳು ಮನಸ್ಸುಗಳನ್ನು ಹೊಂದಿರುವುದು, ಇವೆಲ್ಲಾ ಆತಂಕಕಾರಿ ವಿಷಯಗಳೇ ಅಲ್ಲವೇ?!
ನನಗೆ ಆ ಹಿರಿಯರು ಹೇಳಿ ತೋರಿಸಿದ್ದು ಒಂದು ಉದಾಹರಣೆ ಅಷ್ಟೇ. ಇಂತಹ ಅದೆಷ್ಟು ಕಥೆಗಳು ಶಾಲಾ ಕಾಲೇಜಿನ ಕ್ಯಾಂಪಸ್ಸಿನ ಹಸಿರು ಹುಲ್ಲು ಹಾಸಿನೊಳಗೆ ಹುದುಗಿವೆಯೋ ದೇವರೇ ಬಲ್ಲ! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ-
(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ