ಇದರಾಚೆಗೆ ಏನೂ ಇಲ್ಲ! -- ಫಿನ್ಲೆಂಡ್ ಪ್ರವಾಸ ಕಥನ ಕೊನೆಯ ಭಾಗ (೧೬)
ಇದರಾಚೆಗೆ ಏನೂ ಇಲ್ಲ!
ನಾನು ಮತ್ತು ಭುಪ್ತ ಮುಚ್ಚಿದ ಪಬ್ಬಿನ ಹೊರಗೆ ಕುಳಿತಿದ್ದೆವು. ಆತನ ಆತ್ಮಚರಿತ್ರೆಯ ಕಥನ ಮುಂದುವರೆದಿತ್ತು. ಆತ ಕೊಲ್ಕೊತ್ತದಿಂದ ನ್ಯೂಜಿಲೆಂಡಿಗೆ, ನಂತರ ಸ್ವೀಡನ್ನಿಗೆ, ಆಮೇಲೆ ಫಿನ್ಲೆಂಡಿಗೆ ಬಂದ, ನಡುವೆ ಹಾಯ್ದ ಅನೇಕ ದೇಶ-ಅಪಮಾನ-ಅನುಮಾನ-ಭಯದ ಮೊತ್ತದ ತೂಕ ಎಷ್ಟಿತ್ತೆಂದರೆ, ಆತ ಹೇಳುವ ವಿವರವನ್ನು ಕೇಳುವ ಬದಲು ಅಲ್ಲೆಲ್ಲ ಹಾರಾಡಿ ಬಂದುಬಿಡುವುದೇ ಸರಾಗ ಎನ್ನಿಸತೊಡಗಿತ್ತು. ಕಿರ್ಸಿ ವಾಕಿಪಾರ್ಥಳ ಮೆಸ್‍ಮರಿಸಂನ ಸ್ಯಾಂಪಲ್ ನೋಡಿದ ಮೇಲೆ, ಆಕೆಯೇ ಸ್ವತಃ ಒಂದು ಮೆಸ್ಮರೈಸ್ ಆದಂತೆ, ಹಾಗೆ ಮಾಯವಾಗಿ, ಅದೇ ಹೆಸರು-ರೂಪ ಹೊತ್ತು ಮತ್ಯಾವುದೋ ವೃತ್ತಿವಂತಳಂತೆ, ಭುಪ್ತಳ ಗೆಳತಿಯಾಗಿ ಹೀಗೆ ಬಂದು ಹಾಗೆ ಹೋಗಿದ್ದಳು. ಇವೆಲ್ಲ ಆಕೆಯ ಮೆಸ್ಮರಿಸಮ್ಮಿನ ಪರಿಣಾಮ ಎಂಬುದೂ ನನಗೆ ಅರಿವಾಗತೊಡಗಿತ್ತು.
ಆದರೂ ಭುಪ್ತನನ್ನು ಕೇಳಿದೆ, “ಕಿರ್ಸಿ ವಾಕಿಪರ್ಥ ಎಷ್ಟು ವರ್ಷಗಳಿಂದ ನಿನಗೆ ಗೊತ್ತು?” ಎಂದು.
"೧೯೯೨-೯೪ರಲ್ಲಿ ನಾನಿಲ್ಲಿ ಬಂದ ಹೊಸದರಿಂದಲೂ ಪರಿಚಯ” ಎಂದ.
ಸೂಕ್ಷ್ಮವಾಗಿ ಅತನಿಗೆ ಆದುದೆಲ್ಲವನ್ನೂ ವಿವರಿಸುವ ’ಹುನ್ನಾರ’, ’ಉಮೇದು’ಗಳೆಲ್ಲವನ್ನೂ ತಡೆಹಿಡಿದುಕೊಂಡೆ—ಕನ್ನಡದಲ್ಲಿ ಪಕ್ಕಾ ಮುಂಬಯಿಯ ಬಗ್ಗೆ ಬರೆದವರ ಪದಗಳು ಇವೆರಡೂ ಪದಗಳನ್ನು ಹೋಲುತ್ತವೆ ಎಂಬ ಕಾರಣಕ್ಕೆ. ಆಗಾಗ ನನ್ನ ಮನಸ್ಸಿನಲ್ಲಿ ಉದ್ಭವಿಸುವ ಯೋಚನೆಗಳ ವ್ಯಾಕರಣಗಳ ಕಷ್ಟ-ಅನಿಷ್ಟಗಳನ್ನು ಅಧರಿಸಿದ ಪದಗಳ ಸಮೂಹಗಳ ಏರುಪೇರಿನ ಪ್ರಕಾರ ಮತ್ತು ಅವುಗಳ ಸುತ್ತಲೇ ನನ್ನ ದೈನಂದಿನ ಚಟುವಟಿಕೆಗಳನ್ನೂ ರೂಪಿಸಿಕೊಳ್ಳುತ್ತಿದ್ದೆ. ಉದಾಹರಣೆಗೆ ಬಟ್ಟೆಯೊಂದರ ಬಣ್ಣ ಇಷ್ಟವಾಗದಿದ್ದಲ್ಲಿ ಹೇಗೆ ನಾವುಗಳು ಆ ವಸ್ತ್ರವನ್ನು ಕೊಳ್ಳುವುದಿಲ್ಲವೋ ಹಾಗೇ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಪದಗಳ ಪ್ರಕಾರ ಯಾವ ದಾರಿಯಲ್ಲಿ ಸೈಕಲ್ ತಿರುಗಿಸಬೇಕು ಎಂದು ನಿರ್ಧರಿಸಿಬಿಡುತ್ತಿದ್ದೆ. ಸ್ಟಾಚುಚರಿ ವಾರ್ನಿಂಗ್ ಏನಪ್ಪ ಅಂದರೆ ನನ್ನಂತೆ ಮುವತ್ತೊಂಬತ್ತನೆ ವಯಸ್ಸಿನಲ್ಲಿಯು ನಿಮಗೆ ಮಾಡಲೇನೂ ಕೆಲಸವಿಲ್ಲದೆ, ಮೂರು ತಿಂಗಳ ಕಾಲ ಕಾಣದ ದೇಶದ, ಅರಿಯದ ಭಾಷೆಯ ಸಾತತ್ಯದೊಂದಿಗೆ ಟ್ರಾಫಿಕ್ ಇಲ್ಲದ ರಸ್ತೆಯಲ್ಲಿ ಬಿಟ್ಟಿಯಾಗಿ ದೊರೆತ ಸೈಕಲ್ ಒಂದು ಇರಬೇಕು, ಅಷ್ಟೇ.
*
ಇನ್ನೂ ಅರ್ಧ ಗಂಟೆ ಹಾಗೆಯೇ ಕುಳಿತಿದ್ದೆವು ನಾನು ಮತ್ತು ಭುಪ್ತ. ಎದುರಿಗೆ ಯಾರೋ ಹೆಂಗಸೊಬ್ಬಳು ಬರುತ್ತಿದ್ದಳು. ರಾತ್ರಿ ಸುಮಾರು ಎರಡು ಗಂಟೆ. ಈಕೆಯೂ ಕಿರ್ಸಿ ವಾಕಿಪಾರ್ಥಳಾಗಿದ್ದರೆ ಇಂದು ರಾತ್ರಿಯ ಸರ್ರಿಯಲ್ ಅನುಭವ ಪೂರ್ಣವಾಗುತ್ತದೆ ಎಂದುಕೊಂಡೆ. “ಹಾಯ್ ಭುಪ್ತ, ಕೇತನ್ ಭುಪ್ತ ಅಲ್ಲವೆ?” ಎಂದು ಭುಪ್ತನ ಕೈಯನ್ನು ಆಕೆ ತಾನೇ ಎಳೆದುಕೊಂಡು ಕುಲುಕಿದಳು. “ಹೌದು” ಎಂದ. “ನಾನು. ಗುರ್ತು ಸಿಗಲಿಲ್ಲವೆ? ಕಿರ್ಸಿ ವಾಕಿಪಾರ್ಥ. ಕಿಯಾಸ್ಮ ಮ್ಯೂಸಿಯಮ್ಮಿನಲ್ಲಿ ಒಮ್ಮೆ ಸಿಕ್ಕಿದ್ದೆವು, ಹೋದ ವರ್ಷ. ನಾನು 'ಹೆಲ್ಸಿಂಕಿ ಸೋನೋಮತ್' ಪತ್ರಿಕೆಯ ಕಲಾವಿಮರ್ಶಕಿ! ಆದ್ದರಿಂದಲೇ ನಿನಗೆ ನೆನಪು ಆರಿದೆ. ಮೊನ್ನೆಯಷ್ಟೇ ಸಿಕ್ಕಿದ್ದೆಯಲ್ಲ ಎಂದು ಪರಿಚಯಿಸಿಕೊಂಡರೆ, ನಿನಗೆ ವಿಸ್ಮೃತಿ ಆಗಿದೆ ಎಂದು ಆರೋಪಿಸಿದಂತೆ. ಈಗ ನೆನಪಾಯಿತೆ ನಿನ್ನ ನೆನಪು ಆರಿದೆ ಎಂದು?" ಎಂದು ಭುಪ್ತನ ಪಕ್ಕ ಬಂದು ಕುಳಿತಳು.
ಕೆಲವೇ ವಾಕ್ಯಗಳ ಹಿಂದೆ, ಅಂದರೆ ಕೆಲವೇ ನಿಮಿಷಗಳ ಮುಂಚೆ "ಕಿರ್ಸಿ ೧೯೯೨ರಿಂದ ಪರಿಚಯ” ಎಂದಿದ್ದ ಭುಪ್ತನಿಗೆ ಈಕೆ ಯಾರೆಂದು ತಿಳಿಯದಾಗಿತ್ತು. ಅದೇ ಹೆಸರು ಹಾಗೂ ಅದೇ ರೂಪು! ಸುಮಾರು ಮುಕ್ಕಾಲು ಗಂಟೆಯ ಅವಧಿಯಲ್ಲಿ ಭುಪ್ತ, ಇಬ್ಬರು ಒಂದೇ ಹೆಸರಿನ, ಒಂದೇ ರೀತಿ ಇರುವವರನ್ನು ಭೇಟಿ ಮಾಡಿದ್ದ! ಒಬ್ಬರನ್ನೇ ಎರಡು ಬಾರಿ ಭೇಟಿ ಮಾಡಿದ್ದ ಎಂದರೆ ಆತ ಅಲ್ಲಗಳೆಯಬಹುದಾಗಿರುವುದರಿಂದಾಗಿ ಹೀಗೆ ಹೇಳುತ್ತಿರುವೆ ನಾನು. ನಾನಾದರೋ ಕಿರ್ಸಿ ವಾಕಿಪಾರ್ಥ ಎಂಬಾಕೆಯನ್ನು ಅದೇ ಮುಕ್ಕಾಲು ಗಂಟೆಯ ಅವಧಿಯಲ್ಲಿ ಮೂರು ಬಾರಿ ಸಂಧಿಸುತ್ತಿದ್ದೇನೆ. ಅದೇ ಹೆಸರು, ಅದೇ ರೂಪು, ಅದೇ ವ್ಯಕ್ತಿ ಮಾತ್ರವಲ್ಲ, ವಯಸ್ಸೂ ಒಂದೇ ರೀತಿಯಿಲ್ಲ! ಏಕೆಂದರೆ ಮೊದಲ ಕಿರ್ಸಿ ವೃತ್ತಿಯಲ್ಲಿ ಮೆಸ್ಮರಿಸ್ಟ್. ಎರಡನೆಯ ಕಿರ್ಸಿ ಕಲೆಯ ಕ್ಯುರೆಟರ್. ಈಗ ಬಂದಿರುವ ಮೂರನೆಯ ಕಿರ್ಸಿ ಫಿನ್ನಿಶ್ ಪತ್ರಿಕೆಯೊಂದರ ಕಲಾ ವಿಮರ್ಶಕಿ! ಭುಪ್ತ ಮೊದಲನೇ ಕಿರ್ಸಿಯನ್ನು ನೋಡಲಿಲ್ಲ. ಎರಡನೆಯವಳನ್ನು ಪರಿಚಯಿಸಿದ್ದ ನನಗೆ. ಮೂರನೇ ಕಿರ್ಸಿಯನ್ನು ಪರಿಚಯವೇ ಇಲ್ಲದಂತೆ ನಡೆಸಿಕೊಳ್ಳುತ್ತಿದ್ದಾನೆ.
ಈ ಅಸಂಬದ್ದತೆ ಇನ್ನೂ ಆಳಕ್ಕಿಳಿಯಲು ಸಾಧ್ಯವಿಲ್ಲ ಎನ್ನಿಸತೊಡಗಿತು. ಮೂರನೇ ಕಿರ್ಸಿ ಮಾತನಾಡತೊಡಗಿದಳು ಅಥವಾ ಮಾತು ನಿಲ್ಲಿಸುವಂತೆ ಕಾಣಲಿಲ್ಲ: " ಟೀಮೂ ಮಾಕಿಯ ಬೆಕ್ಕನ್ನು ಕೊಂದ ವಿಡಿಯೋ ಕಲೆಯ ಪ್ರಕರಣ ನಿನಗೆ ಗೊತ್ತೇ ಇರಬೇಕು. ಕಿಯಾಸ್ಮ ಸಮಕಾಲೀನ ಸಂಗ್ರಹಾಲಯದ ಕಥೆ ಗೊತ್ತೇ ನಿನಗೆ?" ಎಂದು ನನ್ನ ಕಲಾವಿಮರ್ಶೆಯ ಪೂರ್ವಾಪರ ವಿಚಾರಿಸಿಕೊಂಡು ವಿವರಿಸತೊಡಗಿದಳು, "ಫಿನ್ಲ್ಯಾಂಡ್ ಅನ್ನು ರಕ್ಷಿಸಿದಾತ ಮ್ಯಾನರ್ಹಿಂ ಎಂಬ ಸೈನ್ಯಾಧಿಕಾರಿ. ಕುದುರೆಯ ಮೇಲೆ ಕುಳಿತ ಆತನ ಶಿಲ್ಪವನ್ನು ಕಿಯಾಸ್ಮ ಸಂಗ್ರಹಾಲಯದ ಪಕ್ಕದಿಂದ ತೆಗೆದು ಹಾಕಬೇಕು ಎಂದು ಕಿಯಾಸ್ಮದ ಆರ್ಕಿಟೆಕ್ಟ್ ಯೋಜನೆ ಮಾಡಿದ್ದ, ಮೂರ್ಖ. ಇಡೀ ಊರಿಗೆ ಊರೇ ಅದನ್ನು ಪ್ರತಿಭಟಿಸಿದರು. ಜಾಣ ಆರ್ಕಿಟೆಕ್ಟ್ ಏನು ಮಾಡಿದ ಗೊತ್ತೇ? ಇಲ್ಲ ಅನ್ನು ಮತ್ತೆ. ವಸಾಹತು ಶೈಲಿಯ ಮ್ಯಾನರ್ಹಿಂನ ಶಿಲ್ಪವನ್ನು ಉಳಿಸಿಕೊಂಡು, ಅದರ ನೆರಳು ಸಮಕಾಲೀನ ಸಂಗ್ರಹಾಲಯ ಕಟ್ಟಡದ ಮೇಲೆ ಬೀಳುವಂತೆ ವ್ಯವಸ್ಥೆಗೊಳಿಸಿದ. ಆದ್ದರಿಂದ ಶೈಲಿಯೂ ಉಳಿಯಿತು ಜನರ ಭಾವನೆಯೂ ಸಹ," ಎಂದು ಬಡಬಡಿಸತೊಡಗಿದಳು. ಭುಪ್ತ ಸಿಗರೇಟು ಸೇದುತ್ತಿದ್ದ. ಪ್ಲಾಸ್ಟಿಕ್ ಗ್ಲಾಸಿನಲ್ಲಿ ಇರಿಸಿಕೊಂಡಿದ್ದ ವೋಡ್ಕಾ ಸಿಪ್ಪರಿಸುತ್ತಿದ್ದ. "ರಷ್ಯಾದಲ್ಲಿ ವೋಡ್ಕಾ ಪ್ರಸಿದ್ದವಾಗಿದ್ದರೂ ಫಿನ್ನಿಶ್ ವೋಡ್ಕಾ ಅಸಲಿಯಾದದ್ದು ಗೊತ್ತ? ಅದು ಗೊತ್ತಿಲ್ಲದೇ ದೇಶಭಕ್ತಿಯ ತೀವ್ರತೆಯಲ್ಲಿ ಇಲ್ಲಿ ನೆಲೆಸಿರುವ ರಷ್ಯನ್ನರು ರಷ್ಯನ್ ವೋಡ್ಕಾ ಕುಡಿದು ಕುಡಿದು ಕಣ್ಣು ಕುರುಡಾಗಿಸಿಕೊಂಡಿದ್ದಾರೆ ಗೊತ್ತ?" ಎಂದು ಮುಂದುವರೆಸಿದಳು.
ನನಗಾದರೋ ಒಂದು ಕಿವಿ ಆಕೆಯ ಮಾತಿನೆಡೆ ಮತ್ತು ಒಂದು ಗಮನ “ಈ ಕಿರ್ಸಿ ಯಾರು? ಮೊದಲ ಕಿರ್ಸಿಯ ಮೆಸ್ಮರಿಸಮ್ಮಿನ ಒಂದು ಪಾತ್ರವಾಗಿ ಈ ಮೂರನೇ ಕಿರ್ಸಿ ಬಂದಿದ್ದಾಳೆಯೇ?” -- ಇತ್ಯಾದಿ ಪ್ರಶ್ನೆಗಳ ಕಡೆ ಇದ್ದಿತು.
"ಅನಿಲ್. ನೀನೂ ವಿಮರ್ಶಕ ಅನ್ನುತ್ತೀಯ. ರಷ್ಯನ್ ಪರ್ಫಾರ್ಮೆನ್ಸ್ (ಅಭಿನಯಕಾರ) ಕಲಾವಿದನೊಬ್ಬನ ಕಥೆ ಕೇಳು. ಸ್ವೀಡನ್ನಿನ ಕ್ಯುರೆಟರ್ ಒಬ್ಬ, ಸ್ವೀಡನ್ ಸಂಗ್ರಹಾಲಯದಲ್ಲಿ ಪ್ರದರ್ಶನವೊಂದನ್ನು ಏರ್ಪಡಿಸಿದ್ದ. ಅನೇಕ ಕಲಾವಿದರನ್ನು ಆಹ್ವಾನಿಸಿದ್ದ. ಅವರ ಕೃತಿಗಳೆಲ್ಲವೂ ಬಂದಿದ್ದವು. ಈ ರಷ್ಯನ್ ಪರ್ಫಾರ್ಮನ್ಸ್ ಕಲಾವಿದನನ್ನೂ ಆಹ್ವಾನಿಸಿದ. ರಷ್ಯನ್ ಸ್ಪಷ್ಟವಾಗಿ ಕ್ಯುರೆಟರನಿಗೆ ಹೇಳಿದ್ದು ಇದು, 'ನಾನು ಅಭಿನಯಿಸುವಾಗ ನಾಯಿಯಾಗುತ್ತೇನೆ. ನಾಯಿಯಾಗಿ ಅಭಿನಯಿಸುವುದಿಲ್ಲ ನಾಯಿಯೇ ಆಗಿಬಿಡುತ್ತೇನೆ. ಅದಕ್ಕೆ ನೀನು ಸಿದ್ದನೆ?' ಎಂದು.
"ನಾಯಿಯಾಗುವ ಅಭಿನಯಕಾರನ ಸೂಚನೆಯನ್ನು ಕ್ಯುರೆಟರ್ ತಪ್ಪರ್ಥ ಮಾಡಿಕೊಂಡ. ಪ್ರದರ್ಶನದ ಆರಂಭೋತ್ಸವದಲ್ಲಿ ಆತ 'ನಾಯಿಯೇ' ಆಗಿಬಿಟ್ಟು ಒಬ್ಬನನ್ನು ಮಾಂಸಖಂಡ ಹೊರಬರುವಂತೆ ಕಚ್ಚಿಬಿಟ್ಟ. ಯಾರೂ ಏನೂ ಮಾಡುವಂತಿಲ್ಲ. ಆತನ ಕರಾರೆ ಹಾಗಿತ್ತು, 'ನಾಯಯಾಗಿಬಿಡುವೆ' ಎಂದಾತ ನುಡಿದಿದ್ದನೆ ಹೊರತು 'ನಾಯಿಯಂತೆ' ಎಂದಲ್ಲ. ವಿಶೇಷವೆಂದರೆ ಆತ ಕಚ್ಚಿದ್ದು ಯಾರನ್ನು ಎಂದು ಹೇಳಬೇಕಿಲ್ಲವಷ್ಟೇ!" ಎಂದು ಜೋರಾಗಿ ನಗತೊಡಗಿದಳು. ಆಕೆ ಮಾತನಾಡುವ ರೀತಿ, ಶೈಲಿ, ಆಕೆ ಒಂದನೇ ಮೆಸ್ಮರಿಸ್ಟ್ ಕಿರ್ಸಿಯ ಮೂರನೇ ಅವತಾರ ಕಿರ್ಸಿ ಎಂಬ ಪರಿಕಲ್ಪನೆ--ಇವೆಲ್ಲವೂ ಅಲ್ಲಿನ ವಾತಾವರಣವನ್ನು ವಿಕ್ಷಿಪ್ತಗೊಳಿಸಿಬಿಟ್ಟಿತ್ತು.
ಕಿರ್ಸಿ ಮುಂದುವರೆಸಿದಳು,"ರಾಯ್ ವಾರ ಎಂಬ ಅಭಿನಯದ ಕಲಾವಿದ (ಪರ್ಫಾರ್ಮೆನ್ಸ್ ಆರ್ಟಿಸ್ಟ್) ಗೊತ್ತಿರಬೇಕು ನಿನಗೆ?" ಎಂದು.
"ಹೌದು. ಕೇಬಲ್ ಫ್ಯಾಕ್ಟರಿಯಲ್ಲಿಯೇ ಇರುವುದು" ಎಂದೆ.
ಆತ ಕಿಯಾಸ್ಮ ಎದುರಿಗಿರುವ ಪಾರ್ಲಿಮೆಂಟ್ ಹೌಸಿನಲ್ಲಿ ನೀಡಿದ ಪರ್ಫಾರ್ಮೆನ್ಸ್ ಬಗ್ಗೆ ಕೇಳಿರುವೆಯ?" ಎಂದಳು.
"ಇದೇನು ಬರೀ ಕಲೆಯನ್ನು ಕುರಿತು ಡೈರೆಕ್ಟರಿ ತರಹ ಒಂದೇ ಸಮನೆ ಹೇಳುತ್ತಾ ಹೋಗುತ್ತಿರುವೆಯಲ್ಲ?" ಎಂದು ತಮಾಷೆ ಮಾಡಿದೆ. ಕಲಾ ವಿಮರ್ಶಕರು ಮಹಾನ್ ಬ್ಲೇಡ್ ಜನ ಎಂಬುದು ನನ್ನ ನಂಬಿಕೆ. ಅದಕ್ಕೆ ಸಾಕ್ಷಿ ನಾನೇ. ಸ್ವಾನುಭವದ ಪರಿಣಾಮವಿದು! ಆಕೆ ಸ್ವಲ್ಪ ಇರಿಸುಮುರಿಸುಗೊಂಡಳು. ಸಿಗರೇಟು ತರಲು ಪಕ್ಕದ ಬೀದಿಗೆ ಹೋಗಿ ಬರುವುದಾಗಿ ನಾವು ಕುಳಿತಲ್ಲಿಂದ ಬಲಕ್ಕೆ ಹೊರಟಳು. ಭುಪ್ತ ತನ್ನ ಆತ್ಮಕಥೆ ಪೂರ್ಣವಾಗಿ ನನಗೆ ಹೇಳಿಲ್ಲವಲ್ಲ ಎಂದು ಡಿಪ್ರೆಸ್ಸ್ ಆಗತೊಡಗಿದ.
"ಈಗ ಹೇಳು ಭುಪ್ತ. ಪಬ್ಬಿನ ಒಳಗಡೆ ಭೇಟಿ ಮಾಡಿದ ಕಿರ್ಸಿ, ನೀನು ಆಕೆಯನ್ನು ನನಗೆ ಪರಿಚಯಿಸಿದ್ದು--ಯಾವುದೂ ನೆನಪಿಲ್ಲವೇ?" ಎಂದು ಕೇಳಿದೆ.
ಇಲ್ಲವೆಂದು ತಲೆಯಾಡಿಸಿದ. "ಡೋಪ್ ಗೀಪ್ ಹೊಡೆದಿಲ್ಲವಷ್ಟೇ!" ಎಂದು ನನ್ನನ್ನೇ ಕಿಚಾಯಿಸಿದ. ಆತನ ಡೊಪ್, ಗ್ರಾಸ್, ಎಲ್.ಎಸ.ಡಿ ಮುಂತಾದುವನ್ನು ಸೇವಿಸಿದ ಅನುಭವವನ್ನು ಹಂಚಿಕೊಂಡ.
"ಎರಡು ಬಾಚಣಿಗೆಗಳನ್ನೂ ಹಲ್ಲುಗಳಿರುವ ಕಡೆ ಒಂದಕ್ಕೊಂದು ಬೆಸೆಯಲಾಗಿದೆ ಎಂದುಕೊ. ನಿರ್ದಿಷ್ಟ ಹಲ್ಲುಗಳು ನಿರ್ದಿಷ್ಟ ಇದಿರು ಬಾಚಣಿಗೆಯ ಹಲ್ಲುಗಳ ಸಂದಿಯಲ್ಲಿ ಸೇರಿಕೊಂಡಿರುತ್ತವೆ. ಅವುಗಳು ಒಟ್ಟಾಗಿ ಅಗ ಒಂದು ಸುಸೂತ್ರವಾದ ಕಾರ್ಯನಿರ್ವಹಣಾ ಕ್ರಮ ರೂಢಿಸಿಕೊಂಡಿರುತ್ತವೆ. ನಮ್ಮ ದೇಹದ ಅಂಗಗಳೂ ಹಾಗೆಯೇ. ಈ ಎರಡೂ ಬಾಚಣಿಕೆಗಳನ್ನೂ ಬೇರ್ಪಡಿಸಿ, ಒಂದೆರೆಡು ಹಲ್ಲುಗಳ ಹಿಂದುಮುಂದಾಗಿ ಮತ್ತೆ ಸೇರಿಸಲಾಗುತ್ತದೆ ಎಂದುಕೋ. ಮನುಷ್ಯರ ದೇಹ ವ್ಯವಸ್ಥೆಯು ಎಲ್.ಎಸ್.ಡಿ, ಆಫೀಮು, ಎಕ್ಸ್ತೆಸಿ ಮುಂತಾದುವನ್ನು ಸೇವಿಸಿದಾಗ ಹೀಗೆ ಆಗುತ್ತದೆ. ಆಗ ನೀನು, ಅಲ್ಲ ನಾನು, ಅಥವಾ ನಾವೆಲ್ಲರೂ ಮನುಷ್ಯರನ್ನು ಕೊಲೆ ಮಾಡುವುದಕ್ಕೂ ಸುಮ್ಮನೆ ಒಂದು ಸೊಳ್ಳೆಯನ್ನು ಹಿಸುಕಿ ಹಾಕುವುದಕ್ಕೂ ವ್ಯತ್ಯಾಸವೇ ತಿಳಿಯಲಾರದವರಂತೆ ಆಗಿಬಿಡುತ್ತೇವೆ. ಅವುಗಳು ಸ್ವೀಕರಿಸಲ್ಪಟ್ಟ ದೇಹಕ್ಕೆ ಹೆಚ್ಚು ಹಾನಿ ಮಾಡುತ್ತವೋ ಅಥವಾ ಸ್ವೀಕರಿಸಿದವರು ಇತರರಿಕೆ ಹೆಚ್ಚು ಹಾನಿ ಮಾಡುತ್ತಾರೋ ಹೇಳುವುದು ಕಷ್ಟ. ಆಗ ಅದೊಂದು ವೈದ್ಯಕೀಯ ಸಮಸ್ಯೆಯಲ್ಲ, ಸಾಮಾಜಿಕ ಸಮಸ್ಯೆಯಾಗಿಬಿಡುತ್ತದೆ", ಎಂದು ತನ್ನ ವ್ಯಾಖ್ಯೆಯನ್ನು ಮುಂದಿಟ್ಟ ಭುಪ್ತ.
"ನಾನು ಏನನ್ನು ಸೇವಿಸದೆಯೂ ಕಳೆದ ಅರ್ಧ ಗಂಟೆಯಿಂದ ನೀನು ಹೇಳಿದ ಎಲ್ಲ ಅನುಭವಗಳೂ ಆಗುತ್ತಿದೆಯಲ್ಲ" ಎಂದು ಅರ್ಧ ತಮಾಷೆಯಾಗಿ ಇನ್ನರ್ಧ ಗಂಭೀರವಾಗಿ ಕೇಳಿದೆ.
"ಹೊರಗಿನ ಪ್ರೇರಕ ವಸ್ತುಗಳ ಸಹವಾಸವಿಲ್ಲದೆ ಇಂತಹ ಅನುಭವವಾದಲ್ಲಿ ಅದನ್ನು ಮನುಷ್ಯ ಸಾಧನೆ ಎನ್ನುತ್ತಾರೆ. ಕನಸು ಕಾಣುವಾಗ, 'ನಾನು ಕನಸು ಕಾಣುತ್ತಿದ್ದೇನೆ' ಎಂದುಕೊಂಡೆ ಕನಸು ಕಾಣುವವರು ಕೆಲವರು ನನಗೆ ಗೊತ್ತು. ಆದರೆ ಮಜವೇ ಮಜಾ. ಆದರೆ ಅದನ್ನು ನಿರಂತರವಾಗಿ, ಯಾವುದೇ ಹೊರಗಿನ ಪ್ರೇರಕ ಶಕ್ತಿಯಿಲ್ಲದೆ ಅಂದುಕೊಳ್ಳುವುದು ಒಂದೂ ಸಾಧನೆ ಅಥವಾ ವರವೇ ಹೌದು" ಎಂದ.
"ನೀನು ಇವುಗಳನ್ನೆಲ್ಲ ಸೇವಿಸಿದ್ದೀಯ?" ಎಂದು ಕೇಳಿದೆ.
"ಹೌದು, ಆದರೆ ಈಗಲ್ಲ", ಎಂದ ಆತ ನಿರ್ಭಿಡೆಯಿಂದ.
"ನಿನ್ನ ಮೆಚ್ಚಿನದ್ದು ಯಾವುದು?"
"ನಿನಗೆ ಯಾವುದು ಗೊತ್ತು ಹೇಳು?" ಎಂದ.
"ಉಹೂಂ"
"ಏನ್^ಲೈಟನ್^ಮೆಂಟ್--ಎಂಬ ಮಾತ್ರೆಯೊಂದಿದೆ. ಅಂತಹ ಮಾತ್ರೆಯನ್ನು ಸೇವಿಸಿದರೆ ವಾರಗಟ್ಟಲೆ ಹಾರಾಡುತ್ತೀಯ. ಅಂದರೆ ಯಾವುದೇ ನೋವು, ದುಃಖ, ಬೇಸರ ಇರುವುದಿಲ್ಲ. ವಿಪರೀತ ಏಕಾಗ್ರತೆಯಿಂದ ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತಿರುತ್ತೀಯ. ಆದರೆ ಅದು ಬಹಳ ಹಣ. ಒಂದು ಗ್ರಾಮಿಗೆ ಐದು ಸಾವಿರ ರೂಪಾಯಿ. ಮೊದಲ ಬಾರಿ ಸೇವಿಸುವವರಿಗೆ ಅರ್ಧ ಗ್ರಾಂ ಸಾಕು!' ಎಂದು ನನ್ನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ.
"ಎಕ್ಸ್ತೆಸಿ ಕೇಳಿದ್ದೆ, ಆದರೆ ಈ ಏನ್^ಲೈಟನ್^ಮೆಂಟ್ ಯಾವುದು ಗುರುವೇ?" ಎಂದು ಗೊಂದಲಗೊಂಡೆ.
ಭುಪ್ತ ಜೋರಾಗಿ ನಗತೊಡಗಿದ, "ಅದೊಂದು ಭವಿಷ್ಯದಲ್ಲಿ ನಮಗೆಲ್ಲ ಲಭಿಸಲಿ ಎಂದು ನಾವೆಲ್ಲಾ ಆಸೆಪಡುತ್ತಿರುವ ಮಾತ್ರೆ. ಅಂತಹುದ್ಯಾವುದೂ ಇಲ್ಲ. ಇದ್ದರೂ ಅದಕ್ಕೆ ಆ ಹೆಸರಿಲ್ಲ" ಎಂದು ನಗುವುದನ್ನು ಮುಂದುವರೆಸಿದ.
'ನನ್ನ ಇಂದಿನ ಸರ್ರಿಯಲ್ ಅನುಭವಕ್ಕೆ ಮತ್ತೊಂದು ಸೇರ್ಪಡೆ' ಎಂದುಕೊಳ್ಳತೊಡಗಿದೆ. ಸಿಗರೇಟು ತರುವೆನೆಂದು ಹೇಳಿ ನಮ್ಮ ಬಲಭಾಗಕ್ಕೆ ಹೋಗಿದ್ದಳು ಕಿರ್ಸಿ, ಮೂರನೇ ಕಿರ್ಸಿ.
ಇನ್ನೂ ಆಕೆ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಎಡ ಭಾಗದಿಂದ ಬರತೊಡಗಿದಳು ಕಿರ್ಸಿ, ಮೊದಲನೇ ಕಿರ್ಸಿ! ನಾನು ವಿಕ್ಷಿಪ್ತಾನುಭಾವದಿಂದ ಎದ್ದು ನಿಂತೆ. ಅದೇ ಐವತ್ತು ವರ್ಷವಾಗಿದ್ದರೂ ಅರವತ್ತರಂತೆ ಕಾಣುತ್ತಿದ್ದ ಕಿರ್ಸಿ! ಹಾವಿನ ಭ್ರಮೆಯನ್ನು ಸತ್ಯಜಿತ್ ರೆ ಭಾವಚಿತ್ರದ ಸುತ್ತಲೂ ಸೃಷ್ಟಿಸಿದ್ದ ಕಿರ್ಸಿ! ಹತ್ತಿರ ಬಂದವಳು, "ಸಾರಿ" ಎಂದವಳೇ ನನ್ನ ಬಲಗೈ ಮುಷ್ಟಿಯನ್ನು ಸಡಿಲಿಸಿದಳು. ಆಗ ತಿಳಿಯಿತು ನನ್ನ ಕೈ ಮುಷ್ಟಿಯಾಗಿದೆ ಎಂದು! ಅದರೊಳಗಿದ್ದ ರುದ್ರಾಕ್ಷವನ್ನು ಕೈಯಲ್ಲಿ ತಿರುಗಿಸಿ ತಿರುಗಿಸಿ ನೋಡಿದಳು, ಯಾವುದೋ ವಜ್ರವನ್ನು ನೋಡುವಂತೆ.
"ಇನ್ನು ನಿನ್ನ ಮೆಸ್ಮರಿಸ್ಮ್ ಕಳೆಯಿತು" ಎಂದು ನಗುತ್ತ ನಿಂತಳು.
"ನಿನ್ನಂತೆ ಇನ್ನಿಬ್ಬರು ಕಿರ್ಸಿಗಳು ಬಂದು ಹೋದದ್ದು ಸಹ ಈ ರುದ್ರಾಕ್ಷದ ಪರಿಣಾಮವೇ?" ಎಂದು ಕೇಳಿದೆ.
ಆಕೆ ಹಸನ್ಮುಖಿಯಾಗಿದ್ದಳು, "ನಾನು ಏನು ಹೇಳಿದರೂ ನಂಬುವೆ. ಹೌದೆನ್ನಲಿ, ಇಲ್ಲವೆನ್ನಲಿ--ಎರಡನ್ನೂ ನಂಬುವಷ್ಟು ನಿನ್ನ ಮನಸ್ಸು ಈಗ ತಯಾರಿರಬಹುದು. ನಾವು ಮೂವರೂ ಕಿರ್ಸಿಯರೂ ಸಹ ತ್ರಿವಳಿಗಳು. ಹೀಗೆ ಆಗಾಗ ಎಲ್ಲರಿಗೂ ಮೆಸ್ಮರಿಸ್ಮ್ ಬಿಸ್ಕತ್ ಹಾಕುತ್ತಿರುತ್ತೇವೆ" ಎನ್ನುತ ಬ್ಯಾಗಿನೋಳಗಿನಿಂದ ರಬ್ಬರ್ ಹಾವುಗಳೆರಡನ್ನು ತೆರೆದು ತೋರಿಸಿದಳು. ಅಷ್ಟರಲ್ಲಿ ಮತ್ತಿಬ್ಬರು ಕಿರ್ಸಿಯರು ಬಂದು ನಿಂತರು. ಭುಪ್ತನನ್ನು ನೋಡಿದೆ. ಆತ ನಗುತ್ತ, "ನಾನು ಈ ನಾಟಕದ ಭಾಗವಾಗಿದ್ದೆ. ನಮ್ಮ ಭಾರತೀಯನಿಗೆ ಹೆಲ್ಸಿಂಕಿಯಲ್ಲಿ ಬೇಸರ ಹೆಚ್ಚಾದಂತೆನಿಸಿತು. ತಾವು ಭಾರತೀಯ ಮೂಲದವರು ಎಂಬ ಈ ಜಿಪ್ಸಿ ಸೋದರಿಯರು ಸಾತ್ ನೀಡಿದರು. ಹೇಗಿದೆ ನಮ್ಮ ಮೆಸ್ಮರಿಸ್ಮ್", ಎಂದು ಹಿಂದಿಯಲ್ಲಿ ಮಾತನಾಡತೊಡಗಿದ.
"ಹಾಗಿದ್ದರೆ ಆ ಗೇ ಪ್ರಸಂಗ?" ಎಂದೆ.
"ಅದು ಮಾತ್ರ ಆಕಸ್ಮಿಕ" ಎಂದ. ಮತ್ತೆ ಸಿಗುವುದಾಗಿ ಹೇಳಿ ಭಿನ್ನ ವೃತ್ತಿಯ ತ್ರಿವಳಿ ಕಿರ್ಸಿ ಸೋದರಿಯರು ವಿದಾಯ ಹೇಳಿದರು.
*
ಸುಮಾರು ಮೂರುವರೆ ಬೆಳಗಿನ ಜಾವ. ಭುಪ್ತ ತನ್ನ ಜೀವನಗಾಥೆಯನ್ನು ಮುಂದುವರೆಸುತ್ತಲೇ ಇದ್ದ.
"ಎಲ್ಲ ಪಬ್ಬುಗಳೂ ಮುಚ್ಚಿರುತ್ತವೆ ಅಲ್ಲವೇ ಈಗ? ಎಲ್ಲಿಯೂ ಚಹಾ ಸಿಗುವುದಿಲ್ಲವೇ?" ಎಂದು ಕೇಳಿದೆ.
"ಕಾಫಿಯ ಬೆಲೆಯಲ್ಲಿ ಹಾಲು ಕುಡಿವ ಬೆಕ್ಕು ನೀನು. ಬಾ" ಎಂದು ಆತ ಕೊನೆಯದಾಗಿ ಬೆಳಗಿನ ಆರು ಗಂಟೆಯವರೆಗೂ ತೆರೆದಿರುವ 'ಲಾಸ್ಟ್ ಹೋಪ್' ಎಂಬ ಪಬ್ಬಿಗೆ ಕರೆದೊಯ್ದ. ಎಂತಹ ಅರ್ಥಪೂರ್ಣ ಪಬ್ಬದು. ಸಾಕಷ್ಟು ಇಕ್ಕಟ್ಟಿದ್ದ 'ಕೊನೆಯ ಆಸರೆ'ಯಲ್ಲಿ ದೊಡ್ಡ ಲೋಟದ ತುಂಬಾ ಕಾಫಿ ಹೀರುತ್ತಾ ಸುತ್ತಲೂ ಕಣ್ಣಾಡಿಸಿದೆ. ನಾಲ್ಕು ಜನರಿದ್ದ ಪಬ್ ಹತ್ತು ಜನರನ್ನು ಇರಿಸಿಕೊಂಡಂತೆ ಕಾಣುತ್ತಿತ್ತು. ಅಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ಹೇಳಿಬಿಡುವೆ. ಮೂಲೆಯಲ್ಲಿ ಹಣ್ಣು ಹಣ್ಣಾದ ಮತ್ತೊಂದು ಜಿಪ್ಸಿ ಮುದುಕಿ ಕುಳಿತಿತ್ತು. ಕೈ ಬೀಸಿ ನನ್ನನ್ನು ಕರೆಯಿತು. ಆಕೆಗೆ ಸುಮಾರು ಎಂಬತ್ತರಿಂದ ಎಂಬತ್ತೈದು ವರ್ಷ ವಯಸ್ಸಾಗಿತ್ತು ಎಂದು ಕಾಣುತ್ತದೆ. ನಾನು, ಭುಪ್ತ ಹತ್ತಿರ ಹೋಗಿ ಕುಳಿತೆವು. ಆಕೆಯ ಹಲ್ಲು ಬೆಳ್ಳಗಿತ್ತು, ಕಟ್ಟಿಸಿಕೊಂಡದ್ದು. ತುಂಬಾ ಚುರುಕು ಕಂಗಳ ಮುದುಕಿಯದು. ನನ್ನನ್ನು ನೋಡುತ್ತಲೇ ನನ್ನ ಬಲಗೈ ಹಿಡಿದು ನೋಡತೊಡಗಿತು.
"ಇದೂ ನಿನ್ನ ಜಾಲವೇ ಇರಬೇಕು ಭುಪ್ತ. ಈಕೆಯನ್ನು ನೋಡಿದಾರೆ ತ್ರಿವಳಿ ಕಿರ್ಸಿ ವಾಕಿಪಾರ್ಥರುಗಳ ಅಮ್ಮನಂತೆ ಇದ್ದಾಳೆ" ಎಂದೆ. ಆಕೆಯೇ ಮಾತನಾಡಿ, ತಾನು ತ್ರಿವಳಿ ವಾಕಿಪಾರ್ಥರುಗಳ ಅಮ್ಮನೇ ಹೌದು ಎಂದಳು. ಅವರು ಮೂವರೂ ನಿನ್ನನ್ನು ಮೆಸ್ಮರೈಸ್ ಮಾಡಲು ಪ್ರಯತ್ನಿಸಿದರೆ? ಎಂದು ಆತ್ಮೀಯವಾಗಿ, ಮಮತೆಯಿಂದ ಕೇಳಿದಳು. ನನ್ನ ಅಜ್ಜಿ ನೆನಪಾದಂತೆ ಆಯ್ತು. ಹೌದು ಎಂದೆ. "ಹಾವು ಗೋಡೆಯ ಮೇಲೆ, ಕಾಲ ಬಳಿ, ಅಂಗೈಯಲ್ಲಿ ರುದ್ರಾಕ್ಷ" ಇತ್ಯಾದಿಗಳ ಬಗ್ಗೆ ಕೇಳಿದಳು. ಇದು ಖಂಡಿತ ಮೆಸ್ಮರಿಸ್ಮ್ ಅಲ್ಲವಷ್ಟೇ ಎಂದು ಕೇಳಿದೆ. ಭುಪ್ತ ತಮಾಷೆಯ ಮುಖಭಾವವನ್ನು ವ್ಯಕ್ತಪಡಿಸಿದ. ಆಕೆಗೆ ಇದೆಲ್ಲ ತಿಳಿದದ್ದು ಮೆಸ್ಮರಿಸಂ ಅಲ್ಲವೆಂದೂ, ತನ್ನ ಮಕ್ಕಳೇ ತನಗೆ ಫೋನ್ ಮುಖಾಂತರ ತಿಳಿಸಿದರೆಂತ ಹೇಳಿದಳು. ಭುಪ್ತ ಮಾತ್ರ ಹಾವು ಮೆಟ್ಟಿದವನಂತೆ ಮುಖ ಮಾಡಿದ. "ಆಕೆಯ ಬಳಿ ಫೋನ್ ಇಲ್ಲವೆಂತಲೂ, ಆಕೆ ತನ್ನ ಮಕ್ಕಳೊಂದಿಗೆ ಮಾತನಾಡದೆಯೇ ಹಲವು ವರ್ಷಗಳು ಕಳೆದಿವೆ" ಎಂತಲೂ ಆತ ಮಾರನೆ ದಿನದ ನಾಟಕೀಯ ಸಂಜೆ ನನಗೆ ತಿಳಿಹೇಳಿದ!! ಅಂದರೆ ಈ ಮುದುಕಿಗೆ ಆ ಮುನ್ನ ಮಾಸ್ಕೋ ಬಾರಿನಲ್ಲಿ, ಅದರ ಹೊರಗೆ ನಡೆದ ಅಷ್ಟೂ ವಿವರ ಹೇಗೆ ತಿಳಿಯಿತು ಎಂದು ಈಗಲೂ ನನಗೆ ಅರ್ಥವಾಗಿಲ್ಲ.
ಆಕೆ ತನ್ನ ಹೆಸರು ಫಿನ್ನೋಕಿವಾ ಎಂದಳು. 'ಫಿನ್ನೋಕಿವ' ಎಂದು ನಾನು ಪುನರ್ ಉಚ್ಚರಿಸಿದ್ದಕ್ಕೆ ಆಕೆ ಫಿನ್ನೋಕಿ'ವಾ' ಎಂದು ತಿದ್ದಿದಳು. ಅಂದರೆ ತಾನು ಅಸಲಿ 'ಫಿನ್ನಿಶ್ ಕಿರ್ಸಿ ವಾಕಿಪಾರ್ಥ' ಎಂದು ತನ್ನ ಹೆಸರಿನ ಅರ್ಥವನ್ನೂ ವಿವರಿಸಿದಳು.
"ಕೇಳಬಾರದ ಪ್ರಶ್ನೆಗಳನ್ನು ಕೇಳಿ, ಕೇಳಿಕೊಂಡು ಬದುಕು ಹಾಳು ಮಾಡಿಕೊಳ್ಳಬಾರದು" ಎಂದಳು. ನಿಗೂಢವಾಗಿ ಮಾತನಾಡತೊಡಗಿದಳು. ಯಾವ ವಿಷಯದ ಬಗ್ಗೆ ಎಂದು ಕೇಳಿದೆ. ಆಕೆ ನೇರವಾಗಿ ಏನನ್ನೂ ಮಾತನಾಡುತ್ತಿರಲಿಲ್ಲ.
"ಇಲ್ಲಿ ಏನನ್ನು ಹುಡುಕಿ ಬಂದೆ ನೀನು?" ಎಂದು ಕೇಳಿದಳು. ಪಬ್ಬಿಗೋ, ಫಿನ್ಲೆಂಡಿಗೋ ಎಂದು ನನಗೆ ಗೊಂದಲಕ್ಕೆ ಇಟ್ಟಿಕೊಂಡಿತು.
"ಎರಡಕ್ಕೂ ಅಲ್ಲ. ಈ ಭೂಮಿಗೆ" ಎಂದಳು. ಆಕೆಯ ಗಂಟು ಹುಬ್ಬಿಕ್ಕಿತ್ತು, ಸದಾ. ನನಗೆ ಉತ್ತರಿಸಲೂ ಸಮಯ ನೀಡುತ್ತಿರಲಿಲ್ಲ ಆಕೆ.
"ಪ್ರಶ್ನೆ ಕೇಳುವುದು. ಸಂಶೋಧಿಸುವುದು. ಆಮೇಲೆ ಉತ್ತರ ಕಂಡುಕೊಳ್ಳುವುದು. ಆ ಉತ್ತರದ ಪರಿಧಿಗೆ ಸಿಕ್ಕದ ಸಮಸ್ಯೆ ಹುಟ್ಟಿಕೊಂಡರೆ ಮತ್ತೊಂದು ಸಂಶೋಧನೆ ಕೈಗೊಳ್ಳುವುದು. ಇದೇ ಆಗಿಹೋಯಿತು ಮಾನವ ಜನ್ಮ", ಎಂದಳು ಗೊಣಗಿಕೊಳ್ಳುತ್ತ.
*
ಫಿನ್ನೋಕಿವಾ ಏಕಪಾತ್ರಧಾರಿಯಂತೆ ಮಾತನಾಡುತ್ತಲೇ ಹೋದಳು. ನನ್ನ ಕೈಯನ್ನು ಮಾತ್ರ ಬಿಡಲೇ ಇಲ್ಲ. ಭುಪ್ತ ರೇಗಿಸತೊಡಗಿದ. 'ಈಕೆ ನನ್ನಜ್ಜಿಗೆ ಸಮ' ಎಂದದ್ದಕ್ಕೆ, 'ಅಪ್ಪನ ಕಡೆಯ ಅಮ್ಮನ ಕಡೆಯವಳ' ಎಂದೂ ಲೇವಡಿ ಮಾಡಿದ.
"ಮನುಷ್ಯ ಯಾವ ಪಾತ್ರ ಬೇಕಾದರೂ ಮಾಡಲಿ. ದೇವರ ಪಾತ್ರ ಮಾತ್ರ ಮಾಡಬಾರದು," ಎಂದಳು.
"ನೀವು ಏನು ಮಾತನಾಡುತ್ತಿದ್ದೀರೋ ಅದೊಂದೂ ನನಗೆ ತಿಳಿಯುತ್ತಿಲ್ಲ" ಎಂದು ನಾನು ಹೇಳಿದ್ದಕ್ಕೆ, "ಸುಳ್ಳನ್ನು ಆಡುವ ಅವಶ್ಯಕತೆ ಇಲ್ಲ. ನೀನು ಓದುವದು, ಬರೆಯುವದೂ ಹೀಗೆಯೇ ಅಲ್ಲವೇ?" ಎಂದು ಪ್ರತಿಶೋಧ ಕೈಗೊಂಡಳು. 'ಹೋಗು ಮಗ ನನಗೊಂದಷ್ಟು ಕುಡಿಯಲು ತಾ" ಎಂದು ಭುಪ್ತನನ್ನು ಓಡಿಸಿದಳು. ನಾನೇ ತರುವೆ ಎಂದದ್ದಕ್ಕೆ ನನ್ನನ್ನು ಎಳೆದು ಕೂರಿಸಿದಳು. ಆಗ ತಿಳಿಯಿತು ಅದೆಷ್ಟು ಗಟ್ಟಿಯಿದ್ದಾಳೆ ಆಕೆ ಎಂದು.
"ಇರುವುದನ್ನು ಬಿಟ್ಟು ಇಲ್ಲದುದನ್ನು ಏಕೆ ಹುಡುಕುವೆ?" ಎಂದು ನನ್ನನ್ನು ಕೇಳತೊಡಗಿದಳು.
ಭುಪ್ತ ವೈನ್ ಗ್ಲಾಸಿನೊಂದಿಗೆ ವಾಪಸ್ ಬಂದ. ಆಕೆಗೆ ವೈನ್ ನೀಡಿದ.
"ನಿನ್ನ ಪೂರ್ವೋತ್ತರ ಬೇಡ. ಆದರೆ ನಿನ್ನ ಬದುಕಿನ ಅತ್ಯಂತ ಆಸಕ್ತಿಕರವಾದುದು, ನಿಗೂಢವಾದುದು ಏನನ್ನಾದರೂ ಹೇಳು," ಎಂದೆ. ಆಕೆ ಕ್ರಮೇಣ ನಮಗೆ ಕಾಲ ಕಳೆಯಲು ಮಾತನಾಡುತ್ತಿರುವಂತೆ ಅನ್ನಿಸಿಬಿಟ್ಟಿತ್ತು.
"ಒಂದಂತೂ ನಿಜ. ನಮ್ಮ ಆಚೆಗೆ ಏನೋ ಇದೇ. ಅಂದರೆ ನಾವು ಗ್ರಹಿಸಲು ಆಗದ್ದೆಲ್ಲ ನಮ್ಮ ಆಚೆಗಿದೆ ಅಂದುಕೊಳ್ಳಬೇಕೇ ಹೊರತು ಆಚೆ ನಿಜವಾಗಿಯೂ ಏನೋ ಇದೇ ಎಂದು ಭಾವಿಸಬಾರದು" ಎಂದಳು.
"ಅಂದರೆ ಭಗವಂತ, ಮರಣೋತ್ತರ, ವಿಶ್ವದ ಅನವರತೆ--ಇವೆಲ್ಲವೂ ಕಲ್ಪನೆಯೇ?" ಎಂದು ಕಾಲೆಳೆಯತೊಡಗಿದ ಭುಪ್ತ.
"ಅಲ್ಲ. ಮನುಕುಲ ಮೊದಲಿಂದಲೂ ಹಾದಿ ತಪ್ಪಿದ ರೀತಿ ಬದುಕನ್ನು ಶೋಧಿಸತೊಡಗಿದ್ದರಿಂದಲೇ ಗುಟ್ಟುಗಳ ಗಂಟು ಬೆಳೆಯತೊಡಗಿದ್ದು" ಎಂದು ನಂತರ ಆಕೆ ಹೇಳಿದ ವಿಷಯವು, ವಿಷಯಕ್ಕಾಗಿಯೋ ಅಥವಾ ಹೇಳಿದ ರೀತಿಯಿಂದಲೋ ನಿದ್ರೆ ಎಳೆಯುತ್ತಿದ್ದ ನನ್ನ ಕಂಗಳು ವಿಶಾಲವಾಗಿ ಹೋಯಿತು.
ಆಕೆ ಮುಂದುವರೆದು, "ನಾಳೆ ಬೆಳಿಗ್ಗೆ ಇದೇ ಸಮಯಕ್ಕೆ ಈ ಟೇಬಲ್ಲಿನ ಸುತ್ತಲೂ ನಾವು ಮೂವರೂ ಕುಳಿತುಕೊಳ್ಳುವಂತೆ ಆದರೆ ಎಂತ ಚೆನ್ನ" ಎಂದುಬಿಟ್ಟಳು ಫಿನ್ನೋಕಿವಾ.
ಏನು ಆಕೆಯ ಮಾತಿನರ್ಥ ಎಂಬ ತರ್ಕವನ್ನು ಗಾಢ ನಿದ್ರೆಯು ದೂರ ಇಟ್ಟುಬಿಟ್ಟಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಮಲಗಿಬಿಟ್ಟೆ ರೂಮಿಗೆ ವಾಪಸ್ ಬಂದು.
*
ಬೆಳಿಗ್ಗೆ ಹನ್ನೊಂದಕ್ಕೆಲ್ಲ ಫೋನ್ ಬಡಿದುಕೊಂಡಿತು. ಎಷ್ಟೇ ಸುಸ್ತಾಗಿದ್ದರೂ ಫೋನ್ ಆಫ್ ಮಾಡುತ್ತಿರಲಿಲ್ಲ ನಾನು ಮಲಗುವಾಗ. ತೀರ ಆತ್ಮೀಯರು ಫೋನ್ ಮಾಡುವ ಕಾಲವನ್ನು ನಿದ್ರಾಕಾಲವೆನುತ್ತೇವೆ, ಅದಕ್ಕೆ! ಫೋನ್ ರಿಸಿವ್ ಮಾಡಿದೆ.
"ಅನಿಲ್!"
"ಭುಪ್ತ?!"
"ಒಂದು ಕೆಟ್ಟ ಸುದ್ದಿ"
"..."
"ಫಿನೋಕಿವಾ ತೀರಿಕೊಂಡಳು"
"!?..."
"ಪಬ್ಬಿನಿಂದ ಮನೆಗೆ ಹೋದಾಗ ತೀರ ಮನೆಯ ವಟಾರದಲ್ಲಿ ಬಿದ್ದು ಸತ್ತಳಂತೆ. ಆದರೆ ನಿನ್ನೆ ರಾತ್ರಿ ನಾವು ಆಕೆಯನ್ನು ಭೇಟಿ ಮಾಡುವ ಮುನ್ನ ಆಕೆಯ ಪ್ರಸಂಗವೊಂದು ಬಾರಿ ಸುದ್ಧಿಯಾಗಿತ್ತಂತೆ".
"ಏನು?"
"ಯಾರೋ ಒಬ್ಬ ಅಪರಿಚಿತ 'ಕೊನೆಯ ಆಸರೆ' ಪಬ್ಬಿನಲ್ಲಿ ನೆನ್ನೆ ಸಂಜೆಯೇ ಆಕೆಯ ಬಳಿ ಬಂದು ಹೇಳಿದ್ದನಂತೆ,"ನಾಡಿದ್ದು ಬೆಳಿಗ್ಗೆ ನಾವಿಬ್ಬರೂ ಹೀಗೆ ಕುಳಿತು ಕುಡಿಯಲಾರೆವೋ ಏನು" ಎಂಬರ್ಥದಲ್ಲಿ. ಬಾರ್ ಮೇಡ್ ಕೇಳಿಸಿಕೊಂಡಿದ್ದಳಂತೆ".
ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ.
"ಅನಿಲ್, ಏನಾದರೂ ಹೇಳು!" ಎಂದನಾತ.
"ಆ ಅಪರಿಚಿತ ಹೇಳಿದ್ದನ್ನು ಈಕೆ ಪುನರುಚ್ಚರಿಸುವ ಅವಶ್ಯಕತೆ ಈಕೆಗಿರಲಿಲ್ಲ ಅನ್ನಿಸುತ್ತದೆ" ಎಂದೆ.
"ನೀನು ಬಿಡಪ್ಪ. ಆಕೆಯ ಫ್ಯಾನ್ ಆಗಿಹೋಗಿದ್ದೆ, ಅದೂ ಈ ಚಳಿ ದೇಶದಲ್ಲಿ. ಆಕೆಗೂ ನಿನ್ನ ಬಗ್ಗೆ ತುಂಬಾ ಅಕ್ಕರೆ ಬಂದುಬಿಟ್ಟಿತ್ತು. ಮುದುಕಿಯರಿಗೆ ಯಾಕೆ ನಿನ್ನ ಕಂಡರೆ ಅಂತಹ ಕ್ರಷ್" ಎಂದು ಮೆಲುನಗೆ ನಕ್ಕ. "ನಾನು ಇರುವುದಕ್ಕಿಂತಲೂ ವಯಸ್ಸಾದಂತೆ ಕಾಣುತ್ತೇನೆ ಅದಕ್ಕೆ" ಎಂದು ಮೆಲುವಾಗಿ ನಕ್ಕು ಮುಂದುವರೆಸಿದೆ, " ಕೊನೆಯ ಆಸರೆ ಪಬ್ಬಿನಿಂದ ಹೊರಬಂದು, ಬಾಯ್ ಬಾಯ್ ಹೇಳುವಾಗ ಆಕೆ ಒಂದು ಮಾತು ಹೇಳಿದಳು. ನೆನಪಿದೆಯೇ?"
"ಅದೇ. ಬಾಯ್ ಬಾಯ್ ಎಂದು?"
"ಅಲ್ಲ. 'ಇದಮಿತ್ತಂ. ಇಷ್ಟೇ. ಇದರಾಚೆಗೆ ಏನೂ ಇಲ್ಲ. ಅನಾವಶ್ಯಕವಾಗಿ ಏನನ್ನೂ ಹುಡುಕದಿರು. ಮನುಷ್ಯ ತನ್ನ ಸಮಾಧಾನಕ್ಕಾಗಿ ಮಾಡಿಕೊಂಡ ಉಪಾಯವೇ ಕಾರ್ಯ-ಕಾರಣ ಸಂಬಂಧ' ಎಂದು.
"ಬಿಟ್ಟಾಕಿ ಗುರುವೇ. ಅದೆಲ್ಲ ತಲೆ ಕೆಡಿಸಿಕೊಳ್ಳಬೇಡಿ," ಎಂದ ಭುಪ್ತ.
"ಕರೆಕ್ಟ್. ಅದನ್ನೇ, ಅದೇ ಅರ್ಥದಲ್ಲೇ ಆಕೆ ಹೇಳಿದ್ದು! ಆದರೆ ಆಕೆಯ ಮಾತಿನಲ್ಲಿ ಒಂದು ಮಾಂತ್ರಿಕತೆ ಇತ್ತು," ಎಂದು ನೋಕಿಯ ಫೋನ್ ಕೆಳಗಿಟ್ಟೆ!//
* *
(ಮುಗಿಯಿತು)