ಇದು ಇಂದಿನ ಕುರುಕ್ಷೇತ್ರ

ಇದು ಇಂದಿನ ಕುರುಕ್ಷೇತ್ರ

ಬರಹ

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸಾಗುವ ಹಿಮಸಾಗರ ಎಕ್ಸ್ಪ್ರೆಸ್ ರೈಲು ನಮ್ಮ ದೇಶದ ಅತಿ ಹೆಚ್ಚಿನ ಸಂಖ್ಯೆಯ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಹಾಗೆ ಅದು ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ಸೋನಿಪತ್ ಪಾನಿಪತ್ ಅನಂತರ ಪುರಾಣಪ್ರಸಿದ್ಧ ಕುರುಕ್ಷೇತ್ರ ರೈಲುನಿಲ್ದಾಣ ಸಿಗುತ್ತದೆ. ಅದೊಂದು ಪುಟ್ಟ ರೈಲುನಿಲ್ದಾಣ. ಕುರುಕ್ಷೇತ್ರವೆಂದರೆ ಅದೇ ಮಹಾಭಾರತ ಯುದ್ಧ ನಡೆದ ಸ್ಥಳವೆಂದು ಆಗಾಗ್ಗೆ ನೆನಪಿಸಿಕೊಳ್ಳುವ ಈ ಸ್ಥಳದ ಬಗ್ಗೆ ಎಂಥ ತಾತ್ಸಾರ. ರೈಲಿನಲ್ಲಿದ್ದ ಸಹಪ್ರಯಾಣಿಕರು ಯಾರೂ ರೋಮಾಂಚನಗೊಳ್ಳಲಿಲ್ಲ, ಪರವಶರಾಗಲಿಲ್ಲ, ಚಿಲ್ಲರೆ ಕಾಸಿಗೆ ತಡಕಾಡಲಿಲ್ಲ, ಹೋಗಲಿ ಕೈಯನ್ನು ಎದೆಮುಟ್ಟಿಸಲಿಲ್ಲ.
ಚಿಕ್ಕಂದಿನಲ್ಲಿ ಚಂದಮಾಮ ಓದಿ ಬೆಳೆದ ನನಗೆ ಕುರುಕ್ಷೇತ್ರವೆಂದರೆ ಬಹು ನಿರೀಕ್ಷೆಯ ತಾಣ. ಇಂದು ಇದೊಂದು ಪೌರಾಣಿಕ ಸ್ಥಳವೆಂದು ಬಗೆದು ಬೆರಳೆಣಿಕೆಯಷ್ಟು ಯಾತ್ರಾರ್ಥಿಗಳು ಬರುತ್ತಾರೆ ಹೊರತು ಹೇಳಿಕೊಳ್ಳುವಂಥ ದೊಡ್ಡ ಪಟ್ಟಣವೇನಲ್ಲ. ಪುಟ್ಟ ರೈಲುನಿಲ್ದಾಣ, ಕೆಲವು ಬ್ಯಾಂಕುಗಳು, ಅಂಗಡಿಸಾಲು ಹಾಗೂ ಜನಜೀವನ ಉತ್ತರ ಇಂಡಿಯಾದ ಬೇರೆಲ್ಲ ಊರುಗಳಂತೆಯೇ ದೃಶ್ಯ ಹುಟ್ಟಿಸಿದರೂ ಹಲವಾರು ಧರ್ಮಶಾಲೆಗಳು ಹಾಗೂ ಗುಡಿಗಳು ನಮ್ಮ ಮನಸ್ಸನ್ನು ನಿಧಾನವಾಗಿ ಪುರಾಣಪ್ರಸಿದ್ಧ ಕಾಲವೊಂದಕ್ಕೆ ಕರೆದೊಯ್ಯುತ್ತವೆ.
ಬೃಹದಾಕಾರದ ಬ್ರಹ್ಮಸರೋವರವು ಯಾತ್ರಾರ್ಥಿಗಳಿಗೆ ತಂಗುದಾಣ, ಸ್ನಾನಘಟ್ಟ, ದೋಣಿವಿಹಾರ, ನಡುಗಡ್ಡೆ ಮುಂತಾದವುಗಳಿಂದ ಸುಸಜ್ಜಿತವಾಗಿದೆ. ಸರೋವರದ ಎದುರಿಗಿನ ವಿದ್ಯಾಪೀಠದಲ್ಲಿ ಕುರುಕ್ಷೇತ್ರ ಯುದ್ಧವನ್ನು ಜೀವಂತಿಕೆಯಿಂದ ತೋರಿಸುವ ಗೊಂಬೆ ಗ್ಯಾಲರಿ ಇದೆ. ಅಲ್ಲಿಂದ ಪಂಚಪಾಂಡವರ ಮಂದಿರ ದಾಟಿಕೊಂಡು ಮುಂದೆ ಹೋದರೆ ಬಿರ್ಲಾ ಮಂದಿರವಿದ್ದು ಅದರ ಆವರಣದಲ್ಲಿರುವ ಅಮೃತಶಿಲೆಯ ಶ್ರೀಕೃಷ್ಣರಥವು ಕಣ್ಮನ ಸೆಳೆಯುತ್ತದೆ. ಮಹಾಭಾರತ ಯುದ್ಧದಲ್ಲಿ ಪ್ರಾಣತೆತ್ತ ಹದಿನೆಂಟು ಅಕ್ಷೋಹಿಣಿ ಸೈನಿಕರಿಗೆ ಒಮ್ಮೆಗೇ ತರ್ಪಣ ಬಿಟ್ಟ ಸ್ಥಳವೆಂದು ಸೂರಜ್ಕುಂಡ್ ಪ್ರಸಿದ್ಧವಾಗಿದೆ.
ಮಹಾಭಾರತದ ಯುದ್ಧದಲ್ಲಿ ನಡೆದ ಅತಿ ಮುಖ್ಯವಾದ ಘಟನೆ ಗೀತೋಪದೇಶ. ಕುರುಕ್ಷೇತ್ರದ ಊರ ಹೊರಗೆ ಹೊರಟರೆ ನಾಲ್ಕು ಕಿಲೋಮೀಟರು ದೂರದಲ್ಲಿ ಜೋತಿಸರ ಎಂಬಲ್ಲಿ ಒಂದು ಪ್ರದೇಶವನ್ನು ಈ ಗೀತೋಪದೇಶದ ತಾಣವೆಂದು ಗುರುತಿಸಲಾಗಿದೆ. ಆ ಜಾಗದಲ್ಲಿ ಒಂದು ರಥವನ್ನೂ ಅದರಚಾಲಕಸ್ಥಾನದಲ್ಲಿ ಕೃಷ್ಣನ ಮೂರ್ತಿಯಲ್ಲದೆ ನೆಲದಮೇಲೆ ತಲೆಬಾಗಿ,
ಸೇನೆಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ

ಎನ್ನುತ್ತಿರುವ ಅರ್ಜುನನ ಮೂರ್ತಿಯನ್ನೂ ನಿಲ್ಲಿಸಲಾಗಿದೆ. ಸನಿಹದಲ್ಲೇ ಒಂದು ಪುರಾತನ ಆಲದಮರವಿದ್ದು

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ

ಎಂಬ ಗೀತೋಪದೇಶಕ್ಕೆ ಸಾಕ್ಷಿಯಾದ ಮರವೆಂದು ಅದನ್ನು ಪೂಜಿಸಲಾಗುತ್ತಿದೆ. ಈ ಜಾಗವನ್ನೂ ಹತ್ತಿರದ ಗುಡಿಗಳು ಹಾಗೂ ಸನಿಹದ ಸರೋವರವನ್ನೂ ಸಂಯೋಜಿಸಿ ರಾತ್ರಿ ಹೊತ್ತಿನಲ್ಲಿ ಪ್ರದರ್ಶಿಸುವ ಧ್ವನಿಬೆಳಕಿನ ಕಾರ್ಯಕ್ರಮವು ನೋಡಲು ಚೆನ್ನಾಗಿರುತ್ತದೆ.
ಕುರುಕ್ಷೇತ್ರದ ಇನ್ನೊಂದು ಮುಖ್ಯವಾದ ಸ್ಥಳ ಬಾಣಗಂಗಾ. ಕುರುಕ್ಷೇತ್ರ ಯುದ್ಧದಲ್ಲಿ ಧರೆಗುರುಳಿದ ಇಚ್ಛಾಮರಣಿ ಭೀಷ್ಮನಿಗೆ ನೀರಡಿಕೆಯಾದಾಗ ಬಿಲ್ಗಾರ ಅರ್ಜುನನು ಭೂಮಿಗೆ ಬಾಣ ಹೂಡಿ ನೀರು ಚಿಮ್ಮಿಸಿದನೆನ್ನಲಾದ ತಾಣವಿದು. ಈ ಸ್ಥಳದಲ್ಲಿ ಒಂದು ಬಾವಿಯಿದ್ದು ಇದರ ಜಲವನ್ನು ಜನರು ಶ್ರದ್ಧಾಭಕ್ತಿಗಳಿಂದ ತಲೆಯ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ.
ಇವೇ ಪುರಾಣ ದೃಶ್ಯಗಳನ್ನು ಆಧುನಿಕ ಕನ್ನಡಕ ಹಾಕಿಕೊಂಡು ನೋಡಲೆಂದೇ ಇರುವ ಪ್ಯಾನೋರಮಾ ಮತ್ತು ವಿಜ್ಞಾನಕೇಂದ್ರವು ಕುರುಕ್ಷೇತ್ರ ಯುದ್ಧವರ್ಣನೆಯನ್ನು ವಿವರಿಸುವ ವಿನೂತನ ತಂತ್ರಜ್ಞಾನದ ಸ್ಥಿರಚಿತ್ರಶಾಲೆ. ಕುರುಕ್ಷೇತ್ರದ ನೆಲದಲ್ಲಿ ಕಾಲೂರಿ ಕುರುಕ್ಷೇತ್ರದ ಕಾಲಕ್ಕೆ ಜಾರುತ್ತಾ ಅಂದಿನ ಮಹಾಭಾರತ ಯುದ್ಧವನ್ನು ಕಣ್ಣಾರೆ ಕಾಣುವ ಸಂಜಯಾವತಾರವನ್ನು ಮೂಡಿಸುತ್ತದೆ ಈ ಕಲಾಕೇಂದ್ರ. ಕೃಷ್ಣವಸ್ತುಸಂಗ್ರಹಾಲಯವೂ ಪಕ್ಕದಲ್ಲಿಯೇ ಇದ್ದು ಮಹಾಭಾರತವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇಷ್ಟಲ್ಲದೆ ಕುರುಕ್ಷೇತ್ರದಲ್ಲಿ ವಿಶ್ವವಿದ್ಯಾಲಯವಿದೆ, ಕಲ್ಪನಾಚಾವ್ಲಾ ತಾರಾಲಯವಿದೆ. ಇವೆಲ್ಲ ಆಧುನಿಕತೆಯ ನಡುವೆ ಎತ್ತ ನೋಡಿದರತ್ತ ಗಲೀಜು, ಕಾವಿಧಾರಿ ಭಿಕ್ಷುಕರ ಸಾಲು, ಬೀಡಾಡಿ ವೃದ್ಧರ ದಯನೀಯ ಚಿತ್ರಗಳು ನಮ್ಮ ಭಾರತದ ಪುರಾಣ ಮತ್ತು ನವ್ಯತೆಯ ನಡುವಿನ ಕೊಂಡಿಗಳಾಗಿ ಉಳಿಯುತ್ತವೆ.