ಇದು ಇರಬೇಕೋ ಇರಬಾರದೋ
GOAL ಅಥವಾ ಗುರಿ
ಇದು ಇರಬೇಕೋ ಇರಬಾರದೋ? ಇದು ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಮಕ್ಕಳನ್ನು ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಕೇಳಿದರೆ, ಬಣ್ಣ ಬಣ್ಣದ ಉತ್ತರಗಳು ಹೊರಬರುತ್ತವೆ. ಬೆಳೆಯುತ್ತಾ ಬೆಳೆಯುತ್ತಾ ಕೆಲವರ ಉತ್ತರಗಳು ಬದಲಾಗತೊಡಗುತ್ತವೆ. ಕೆಲವರು ಉತ್ತರಿಸಿದ ತದ್ವಿರುದ್ಧವೆಂಬಂತೆ ದೊಡ್ಡವರಾದ ಬಳಿಕ ಹೊರಹೊಮ್ಮುತ್ತಾರೆ! ಕೆಲವರು ಉತ್ತರಿಸಿದ ಗುರಿಯನ್ನೇ ತಪಸ್ಸು ಮಾಡಿ ತಲುಪುತ್ತಾರೆ. ಇನ್ನೂ ಕೆಲವರು ಇಲ್ಲೂ ಇಲ್ಲ ಅಲ್ಲೂ ಇಲ್ಲವೆಂಬಂತೆ ಎಡಬಿಡಂಗಿಗಳಾಗುತ್ತಾರೆ. ಮತ್ತೂ ಕೆಲವರು ದೇವರು ನಡೆಸಿದ ಕಡೆಗೆ ನಡೆದು ಅದ್ವಿತೀಯರಾಗುತ್ತಾರೆ!
ಯಶಸ್ವಿಯಾಗಬೇಕಾದರೆ,ಜೀವಿಸುವುದಕ್ಕೆ ಒಂದು ಅರ್ಥ ಬರಬೇಕಾದರೆ, ಗುರಿಯೊಂದು ಇರುವುದು ಅತಿ ಮುಖ್ಯ. ಗುರಿಯು ಕೆಲವರಲ್ಲಿ ಸ್ವಂತವಾಗಿ ಬಂದರೆ,ಇನ್ನು ಕೆಲವರಲ್ಲಿ ಬೇರೆಯವರಿಂದ ಹೇರಲ್ಪಟ್ಟಿರುತ್ತದೆ. ಮನಸ್ಸನ್ನು ಬೇರೆಡೆಗೆ ಹರಿಯಬಿಡದೆ, ಗುರಿಯೆಡೆಗೆ ಹರಿಸಿ ಅದನ್ನು ತಲುಪಿದಾಗ ಆಗುವ ಖುಷಿಯೇ ಬೇರೆ.. ಅದೇ ಗುರಿಯನ್ನು ತಲುಪಲು ವಿಫಲವಾದಾಗ ಆಗುವ ನೋವು ಮಾತ್ರ ಅಷ್ಟಿಷ್ಟಲ್ಲ. ಗುರಿಯನ್ನು ತಲುಪುವ ಉದ್ಧೇಶದಿಂದ ತಮಗಿಷ್ಟದ, ತಮಗೊಪ್ಪುವ ಅನೇಕ ಹವ್ಯಾಸಗಳನ್ನು,ಸಂಗತಿಗಳನ್ನು ಬದಿಗೊದ್ದು, ಗುರಿಯನ್ನು ತಲುಪಲು ಕಂಕಣ ತೊಡುತ್ತಾರೆ.
ಹೀಗೊಮ್ಮೆ ಯೋಚಿಸಿ. ಒಂದು ವೇಳೆ ತನಗಿಷ್ಟವಾದ ಇತರ ವಿಷಯಗಳ ಕಡೆಗೂ ಗಮನ ಹರಿಸಿದ್ದರೆ ಅವನಿಗೆ/ಅವಳಿಗೆ ಈಗಿರುವ ಗುರಿಗಿಂತಲೂ ಉತ್ತಮವಾದ ಹೊಸತೊಂದು ರತ್ನವೇ ಸಿಗಬಹುದಿತ್ತೇನೋ ! ಈಗಿರುವುದರ ದುಪ್ಪಟ್ಟು ಸಂತೋಷ ಸಿಗಬಹುದಿತ್ತೇನೋ ಅಲ್ಲವೇ ?
ಹೀಗಿರಲು, ನಾವು ನಮ್ಮ ಮನಸ್ಸನ್ನು ಗುರಿಯನ್ನು ಬಿಟ್ಟು ಬೇರೆಲ್ಲೂ ಹರಿಯಬಿಡದೆ ತಪಸ್ಸು ಮಾಡಬೇಕೊ ಅಥವಾ ಮನಸ್ಸನ್ನು ಸ್ವಲ್ಪ ಚಂಚಲತೆಗೆ ಒಡ್ಡಿ ಈಗಿರುವ ಗುರಿಗಿಂತಲೂ ಆಕರ್ಷಕವಾದ ಬೇರೊಂದು ಸಂಗತಿ ಸಿಕ್ಕರೆ ಹಾದಿ ಬದಲಿಸಿ ದೇವರು ತೋರಿಸಿದಂತೆ ನಡೆದು ಸಂತಸ ಹಾಗೂ ತೃಪ್ತಿಯಿಂದ ಜೀವನ ಸಾಗಿಸಬೇಕೊ?
Comments
ಉ: ಇದು ಇರಬೇಕೋ ಇರಬಾರದೋ