ಇದು ಏನು ಹೇಳಮ್ಮ !

ಇದು ಏನು ಹೇಳಮ್ಮ !

ಕವನ

ಅಮ್ಮ ನೋಡು ಇಲ್ಲಿ ಬಂದು

ಗಿಡದಲೊಂದು ಹುಳವಿದೆ

ತಲೆಯ ಮೇಲೆ ಪುಟ್ಟದಾದ

ಕೋಡು ಎರಡು ಅದಕಿದೆ

 

ಬೆರಳಿನಲ್ಲಿ ಮುಟ್ಟಿದಾಗ

ಕೋಡು ಒಳಗೆ ಸರಿವುದು

ಮೈಯಲೆಲ್ಲ ಜಿಡ್ಡು ಜಿಡ್ಡು

ಸವರೆ ಮನವು ಬಾರದು

 

ಮೆಲ್ಲ ಮೆಲ್ಲ ಸರಿಯುತಿಹುದು

ಇಲ್ಲ ಅದಕೆ ಅವಸರ

ಹರಿದು ಬಂದ ಹಾದಿಯಲ್ಲಿ

ಅಂಟು ನೋಡಿ ಬೇಸರ

 

ಅಮ್ಮ ನನಗೆ ಮನಸಿನಲ್ಲಿ

ಬಂದಿತೊಂದು ಸಂಶಯ

ನೀನು ಮೊನ್ನೆ ಹೇಳಿದಂಥ

ಬಸವನ ಹುಳವೊ ಹೇಳೆಯಾ?||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್