ಇದು ಕಾಡಿನ ಮೊಸಳೆ ನಾಡವರ ಪಾಲಾಗಿ ಕಣ್ಣೀರಿಟ್ಟ ಕಥೆ.

ಇದು ಕಾಡಿನ ಮೊಸಳೆ ನಾಡವರ ಪಾಲಾಗಿ ಕಣ್ಣೀರಿಟ್ಟ ಕಥೆ.

ಬರಹ

ಕಳೆದ ಜನೇವರಿ ೨೫ರ India Today ಸಾಪ್ತಾಹಿಕದಲ್ಲಿ, ಪುಟ ಸಂಖ್ಯೆ ೬೫ ರಲ್ಲಿ, ‘Mangrove Nightmare' ಶೀರ್ಷಿಕೆಯ ಅಡಿಯಲ್ಲಿ ಒರಿಸ್ಸಾದ ಭಿತಾರಕಾನಿಕಾ (ಮೊಸಳೆಗಳ) ರಾಷ್ಟ್ರೀಯ ಉದ್ಯಾನದ ಬಗ್ಗೆ ವಿಸ್ತೃತವಾದ ಲೇಖನವೊಂದು ಪ್ರಕಟಗೊಂಡಿತ್ತು. ಫರ್ಜಾದ್ ಅಹ್ಮದ್ ಅವರ ನುಡಿಚಿತ್ರ ನಿರೂಪಣೆ ಉಪ್ಪು ನೀರಿನ ಮೊಸಳೆಗಳನ್ನು ಓದುಗರ ಮೈಮೇಲೆ ಹತ್ತಿಸಿ, ಇಳಿಸಿದಷ್ಟು ಆಪ್ತವಾಗಿತ್ತು. ಕಾರಣ ಮೊಸಳೆಗಳು ಪ್ರೀತಿಗೆ ಪಾತ್ರವಾಗಬಲ್ಲ ಪ್ರಾಣಿಗಳಲ್ಲ. ನೋಡಿದ ಕೂಡಲೇ ಪ್ರಾಣ ಭಯ ಹುಟ್ಟಿಸಬಲ್ಲ ಕುರೂಪಿ ಜೀವಿಗಳು.

ಆದರೆ ೧೯ನೇ ಶತಮಾನದ ಆದಿಯಿಂದ ಮೊಸಳೆಯ ಚರ್ಮಕ್ಕೆ ಎಲ್ಲಿಲ್ಲದ ಬೇಡಿಕೆ ಹುಟ್ಟಿಕೊಂಡಿತ್ತು. ಇಂದಿಗೂ ಅದು ಅವ್ಯಾಹತವಾಗಿ ಮುಂದು ವರೆದು, ಮೊಸಳೆಗಳ ನಿರಂತರ ಹನನಕ್ಕೆ ಮಾರ್ಗವಾಗಿದೆ. ಕಾರಣ ಕೊಂದವರನ್ನು ಅಷ್ಟು ಸುಲಭವಾಗಿ ಶಿಕ್ಷಿಸುವಂತಿಲ್ಲ. ಕಾರಣ ಅವರು ಅದಕ್ಕೆ ಕೊಡುವ ಸಬೂಬು ‘ಆತ್ಮ ರಕ್ಷಣೆಗಾಗಿ ಕೊಂದೆ’. ಇಂದಿಗೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮೊಸಳೆಯ ಚರ್ಮಕ್ಕೆ ಹಾಗು ಆ ಚರ್ಮದಿಂದ ತಯಾರಿಸಲಾದ ಬೆಲ್ಟ್, ಬೂಟು, ಕೋಟ್, ಹ್ಯಾಟ್ ಹಾಗು ವ್ಯಾನಿಟಿ ಬ್ಯಾಗ್ ಗಳಿಗೆ ಅಪಾರ ಬೇಡಿಕೆ ಇದೆ. ಸಾವಿರಾರು ಮಿಲಿಯನ್ ಡಾಲರ್ ಗಳ ವ್ಯಾಪಾರ ವಹಿವಾಟು ಸಹ ಮೊಸಳೆಯ ಚರ್ಮದ ಮೇಲೆಯೇ ಕುದುರಿದೆ ಎಂದರೆ ಆಶ್ಚರ್ಯವಾಗಬಹುದು.

ಮೇಲಾಗಿ ಮೊಸಳೆ ಎಂದಿಗೂ ತನ್ನ ವಾಸಸ್ಥಳ ಬಿಟ್ಟು, ವೈರಿಯನ್ನು ಬೆನ್ನಟ್ಟಿ ಬಂದು, ಇತರೆ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹಗಳಂತೆ ಕೊಂದೊಯ್ದ ಉದಾಹರಣೆಗಳು ಇಲ್ಲ. ಆದರೆ ಮನುಷ್ಯ ಮಾತ್ರ ಅವುಗಳ ವಾಸಸ್ಥಳಗಳನ್ನು ಅತಿಕ್ರಮಿಸಿ, ಅವುಗಳ ಬದುಕುವ ಹಕ್ಕು ಕಸಿದುಕೊಳ್ಳಬಲ್ಲ. ಕೊನೆಗೆ ತನ್ನ ಪ್ರಾಣ ರಕ್ಷಣೆಯ ಹೆಸರಿನಲ್ಲಿ ಅದರ ಪ್ರಾಣಕ್ಕೂ ಎರವಾಗಬಲ್ಲ. ಒರಿಸ್ಸಾದ ಭಿತಾರಕಾನಿಕಾ ವನ್ಯ ಜೀವಿ ಅಭಯಾರಣ್ಯದ ಅಧಿಕಾರಿಗಳ ಅಧಿಕೃತ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಹೇಳುವುದಾದರೆ, ೧೯೯೬ ರಿಂದ ೨೦೦೮ರ ಅವಧಿಯಲ್ಲಿ ಒಟ್ಟು ೧೭ ಜನ ಹಾಗು ೪೬ ಪ್ರಾಣಿಗಳು ಮೊಸಳೆಗಳ ಹೊಡೆತಕ್ಕೆ ಸಿಕ್ಕು ಅಸುನೀಗಿದ್ದಾರೆ. ಆದರೆ ಸರ್ವೇ ಸಾಧಾರಣವಾಗಿ ಮೊಸಳೆಗಳು ಎಂದಿಗೂ ತನ್ನ ಆಹಾರ ಹೆಕ್ಕಲು, ಬೇಟೆ ಅಥವಾ ವೈರಿಯನ್ನು ಬೆನಟ್ಟಿ ವಾಸಸ್ಥಳ ಬಿಟ್ಟು ಹೊರಬಂದು ಮರ್ಮಾಘಾತ ನೀಡಿದ ಉದಾಹರಣೆಗಳಿಲ್ಲ. ಅಧಿಕಾರಿಗಳು ವಿಷಾದದಿಂದ ಹೇಳುವಂತೆ, ಮನುಷ್ಯರೇ ನಿರ್ಭಂಧಿತ ಪ್ರದೇಶಗಳನ್ನು ಲಂಘಿಸಿ, ಅವುಗಳ ವಾಸಸ್ಥಳಗಳತ್ತ ತೆರಳಿ ಕಾನೂನು ಮುರಿದು ಮೀನು ಹಿಡಿಯಲು ಇಳಿದು ಮೊಸಳೆಗಳ ಬಾಯಿಗೆ ತುತ್ತಾಗಿದ್ದಾರೆ! ಆದರೂ ಸರಕಾರ ಇವರ ಆಶ್ರಿತರಿಗೆ ಮಾನವೀಯ ಅನುಕಂಪದಡಿಯಲ್ಲಿ ಪರಿಹಾರ ಕೊಡಬೇಕು!

ಮೊಸಳೆಗಳ ಬಗ್ಗೆ ಇಷ್ಟೆಲ್ಲ ಪೂರ್ವ ಪೀಠಿಕೆ ಏಕೆ? ಸಂಪದಿಗರು ಯೋಚಿಸುತ್ತಿರಬಹುದು.

ಇತ್ತೀಚೆಗೆ ನಮ್ಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ನದಿ ನೀರಲಗಿ ಗ್ರಾಮ ಪ್ರಾದೇಶಿಕವಾಗಿ ೮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುದ್ದಿಯಲ್ಲಿತ್ತು. ಕಾರಣ ಈ ಗ್ರಾಮದಲ್ಲಿ ಹಾಯ್ದು ಹೋದ ವರದಾ ನದಿಯಲ್ಲಿ ಮೊಸಳೆಯ ಮರಿಯೊಂದು ಕಂಡು ಬಂದಿತ್ತು. ಮೊಸಳೆ ನೋಡಿದ ಹೆಣ್ಣು ಮಕ್ಕಳು ಜಾಗರೂಕತೆಯಿಂದ ನದಿ ಬದಿಯಲ್ಲಿ ನೀರು ತುಂಬಿಕೊಂಡು ತಮ್ಮ ಪಾಡಿಗೆ ತಾವು ಮನೆಗೆ ಬಂದರು. ಮಕ್ಕಳನ್ನು, ದನಗಾಹಿಗಳನ್ನು ಎಚ್ಚರಿಸಿದರು. ಆದರೆ ಊರಿನ ಗಂಡಸರು ಸುಮ್ಮನಿದ್ದಾರೆಯೇ? ವಿಷಯ ತಿಳಿಯುತ್ತಲೇ ಅದಕ್ಕೊಂದು ಗತಿ ಕಾಣಿಸಲು ನಿರ್ಧರಿಸಿದರು. ಸರಿ ವಾರಗಟ್ಟಲೇ ಹೊಂಚು ಹಾಕಿ ಕಾಯ್ದರು. ಅರಣ್ಯ ಇಲಾಖೆಯವರು ಇವರ ಮನವೊಲಿಸಲು ಹೆಣಗಿ ಸುಸ್ತಾದರು.

"ನಮ್ಮೂರ ಹೆಣ್ಣ ಮಕ್ಳು, ನಮ್ಮ ಮರಿ- ಮಕ್ಳು, ಪಾಪ ದನಕರುಗಳ ಗತಿ ಏನ್ರೀ? ನೀರು ಕುಡಿಯಾಕ ನದಿಯಾಗ ಇಳದು ಈ ಮೊಸಳಿ ಬಾಯಿಗೆ ತುತ್ತಾದರ..ಯಾರ ಬರ್ತಾರೀ?" ಎಂದು ತಾವೇ ಮುಂದಾಗಿ ಅವೈಜ್ಞಾನಿಕವಾಗಿ ಆ ಮೊಸಳೆಯನ್ನು ಬಂಧಿಸಲು ಮುಂದಾದರು. ಶತಾಯುಗತಾಯು, ಪಣತೊಟ್ಟು ಹಗ್ಗ, ಹುರಿ, ಬಡಿಗೆ, ಗುದ್ದಲಿ, ಪಿಕಾಸುಗಳನ್ನು ತೆಗೆದುಕೊಂಡು ಮೊಸಳೆಯನ್ನುಬಂಧಿಸಲು ವರದಾ ನದಿಗೆ ಹೋದರು. ನೆಲದ ಮೇಲೆ ಇವರು ರಾಜರಾದರೆ, ನೀರಿನಲ್ಲಿ ಅದು ಮಹಾರಾಜ. ಆದರೆ ನೂರಾರು ಜನ ಆಯುಧ ಸನ್ನದ್ಧರಾಗಿ ನದಿಗೆ ಇಳಿದು ಮೊಸಳೆಯನ್ನು ಮೈಯುಳಿ ಬಡಿದರು. ನೂರಾರು ಪೆಟ್ಟುಗಳಿಗೆ ಸೋತು, ಸೀದು ಹೋದ ಮೊಸಳೆ ನದಿಯ ದಂಡೆಗೆ ಬಂದು ಬಿತ್ತು. ನಂತರ ಅದನ್ನು ಬಂಧಿಸಿ ಊರಿಗೆ ತರಲಾಯಿತು. ಅರಣ್ಯ ಇಲಾಖೆಗೆ ಸುದ್ದಿ ಹೋಯಿತು. ಪಾಪ.. ಗೋಣು ಹೊರಳಿಸಲು ಸಹ ಆಗದಷ್ಟು ನಿತ್ರಾಣಗೊಂಡಿತ್ತು ಮೊಸಳೆ. ಹತ್ತಿರದಿಂದ ನೋಡಿದರೆ ಕಣ್ಣು, ಮೂಗು, ಬಾಯಿಯ ಮೇಲ್ಭಾಗ ಹಾಗು ಮುಂದಿನ ಹಲ್ಲುಗಳಿಗೆ ಬಲವಾದ ಏಟುಗಳು ಬಿದ್ದಿದ್ದವು. ನದಿನೀರಲಗಿ ಗ್ರಾಮಸ್ಥರಿಗೆ ಈ ಘಟನೆ ಚೆಲ್ಲಾಟವಾಗಿ ಹಾಗು ಮೊಸಳೆಗೆ ಪ್ರಾಣಸಂಕಟವಾಗಿ ಪರಿಣಮಿಸಿತ್ತು.

ನದಿ ನೀರಲಗಿ ಗ್ರಾಮ ಪಂಚಾಯಿತಿ ಎದುರು ಮೊಸಳೆಯನ್ನು ಇಡಲಾಯಿತು. ಅಲ್ಲಿ ಮೊಸಳೆಯ ಸಾರ್ವಜನಿಕ ಪ್ರದರ್ಶನಕ್ಕೆ ಏರ್ಪಾಟು. ನಂತರ ಹಿಡಿದವರಿಂದ ಸಾಧನೆಯ ಸಿಂಹಾವಲೋಕನ ರೀತಿ ವರದಿ ಮಂಡನೆ. ಕಾಲು, ಬಾಲ ಹಾಗು ದೇಹ ಹಿಡಿದೆತ್ತಿದರು. ಅದನ್ನು ಬಂಧಿಸಿದವರು ನಾಲ್ಕಾರು ಕೋನಗಳಲ್ಲಿ ಅದನ್ನು ಎತ್ತಿ ಹಿಡಿದು ಮಾಧ್ಯಮದ ಛಾಯಾಗ್ರಾಹಕರಿಗೆ ಪೋಸು ಕೊಟ್ಟು ಸಂಭ್ರಮಿಸಿದರು. ಊರವರೆಲ್ಲ ಮೊಸಳೆಯ ಸುತ್ತ ನೆರೆದು ಈ ಗಂಡುಗಲಿಗಳ ಪೌರುಷ ನೋಡಿದರು. ನಾಲ್ಕಾರು ಜನ ಅದನ್ನು ಹಗ್ಗದಿಂದ ನಾಲ್ಕೂ ಬದಿಗಳಲ್ಲಿ ಬಂಧಿಸಿ ಜಗ್ಗಿ ಹಿಡಿದು ಸಂಭ್ರಮಿಸಿದರು. ಪಾಪ ನೋವು ತಾಳಲಾರದೇ ಮೊಸಳೆ ತುಸು ಮಿಸುಕಿ ಬಾಯಾಡಿಸಿದ್ದರೂ ಕ್ಷಣಾರ್ಧದಲ್ಲಿ ಹೆಣವಾಗುತ್ತಿತ್ತು. ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುವವರು ಎಲ್ಲಿದ್ದರೋ ಆಗ?

ಅಂತೂ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಮೊಸಳೆಯನ್ನು ಅವರ ಸುಪರ್ದಿಗೆ ಒಪ್ಪಿಸಿದರು. ಮೊಸಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿಸುವಷ್ಟು ನೈತಿಕ ಸ್ಥೈರ್ಯ ಈ ಅಧಿಕಾರಿಗಳಲ್ಲಿ ಉಳಿಯದೇ ಹೋದದ್ದು ನನಗಂತೂ ಜುಗುಪ್ಸೆ ಹುಟ್ಟಿಸಿದೆ. ಇಲಾಖೆಗಳ ಈ ಪರಿಯ ನಿಷ್ಕ್ರೀಯತೆ ಯಾರು ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿಯಾದರೂ, ಯಾವ ಕಾನೂನನ್ನಾದರೂ ಕೈಗೆತ್ತಿಕೊಳ್ಳಬಹುದು ಎನ್ನುವಂತಾದರೆ? ಅದರಲ್ಲೂ ಆ ಸಲಿಗೆ ಇಂಥವರಿಗೆ ಸಿಕ್ಕರೆ? ಮೂಕ ಪ್ರಾಣಿಯ ರೋದನ ಕೇಳುವರು ಯಾರು? ಅರಣ್ಯ ಇಲಾಖೆ ಸಹ ಇದಕ್ಕೆ ಗ್ರಾಮಸ್ಥರಷ್ಟೇ ಹೊಣೆಗಾರರು. ಅವರು ಸಕಾಲದಲ್ಲಿ ಕ್ರಮ ಜರುಗಿಸಿದ್ದರೆ ಮೊಸಳೆಗೆ ಈ ಪ್ರಾಣಾಂತಿಕ ಪರಿಸ್ಥಿತಿ ಬರುತ್ತಿತ್ತೇ?

ಇಲಾಖೆಯೂ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆಯಬೇಕಿದೆ. ಜನರೂ ಸಕಲಕಲಾವಲ್ಲಭರಾಗಿ ಮೆರೆಯುವ ಬದಲು, ಬಲ್ಲವರಿಂದ ಕಲಿಯಲು, ತಿಳಿದುಕೊಳ್ಳಲು ಪ್ರಯತ್ನಿಸಬೇಕಿದೆ. ಬದುಕಿ, ಇತರರರಿಗೂ ಬದುಕಲು ಬಿಡುವ ವಿವೇಕ ನಮ್ಮದಾಗಬೇಕಿದೆ. ಅಂತೂ ಹೋಳಿ ಹುಣ್ಣಿಮೆಯ ಮೊದಲೇ ರಕ್ತದೋಕುಳಿ ನದಿನೀರಲಗಿ ಗ್ರಾಮದವರು ಆಡಿದ್ದಾರೆ. ಅವರ ಕೈಗಳಿಗೆ, ಮೈಗೆ ಹಾಗು ಬಟ್ಟೆಗೆ ಹತ್ತಿದ ರಕ್ತ ಇನ್ನೂ ಮಾಸಿರಲಿಕ್ಕಿಲ್ಲ. ಆಗಲೇ ರಂಗಪಂಚಮಿ ಬಂದಿದೆ. ಅತ್ತ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಮೊಸಳೆಯ ಆರೈಕೆಗೆ ಸೂಕ್ತ ವೈದ್ಯರು ದೊರಕದೇ, ಚಿಕಿತ್ಸೆಗಾಗಿ ಪರಿತಪಿಸಿ ಅದು ತನ್ನ ಬದುಕಿನ ಅಂತಿಮಕ್ಷಣಗಣನೆಯಲ್ಲಿದೆ.

ನಾವು ವಿವೇಕಿಗಳಾ? ಮತ್ತೆ ಮತ್ತೆ ಈ ಪ್ರಶ್ನೆ ನನ್ನ ಮನದಲ್ಲಿ ಮೂಡುತ್ತದೆ.