ಇದು ಕೇವಲ ಜೋಕ್ ಮಾತ್ರ ಅಲ್ಲ !

ಇದು ಕೇವಲ ಜೋಕ್ ಮಾತ್ರ ಅಲ್ಲ !

ಸುಬ್ಬನಿಗೆ ಅವನ ಹೆಂಡತಿ ಸಾಕುತ್ತಿರುವ ಬೆಕ್ಕು ಎಂದರೆ ಪರಮ ಕಿರಿಕಿರಿ. ಒಂದು ದಿನ ಅದರಿಂದ ಹೇಗಾದರೂ ಮುಕ್ತಿ ಪಡೆಯಬೇಕೆಂದು ಆ ಬೆಕ್ಕನ್ನು ಹತ್ತಾರು ಬೀದಿಗಳಾಚೆ ದೂರದಲ್ಲಿ ಬಿಟ್ಟು ಬಂದ. ಮನೆಗೆ ವಾಪಸ್ ಬಂದಾಗ ಆಶ್ಚರ್ಯವೆಂಬಂತೆ ಆ ಬೆಕ್ಕು ಮನೆಯಲ್ಲಿತ್ತು ! ಈ ಬಾರಿ ಅವನು ಬೆಕ್ಕನ್ನು ಇನ್ನೂ ಸ್ವಲ್ಪ ದೂರ ಹೋಗಿ ಬಿಟ್ಟು ಬಂದನು.

ಮನೆಗೆ ಬಂದಾಗ ಮತ್ತೆ ಮನೆಯಲ್ಲಿ ಬೆಕ್ಕು ವಾಪಸ್  ಬಂದಿತ್ತು! ಎಷ್ಟು ದೂರ ಕೊಂಡೊಯ್ದರೂ, ಎಷ್ಟೇ ದಾರಿ ಬದಲಿಸಿದರೂ ಮನೆಗೆ ಮರಳಿ ಬರುತ್ತಲೇ ಇತ್ತು. ಕೊನೆಯಲ್ಲಿ, ಅವನು ಬೀದಿಗಳಲ್ಲಿ ತಿರುಗಿ, ಮೂರ್ನಾಲ್ಕು ಮೇಲ್ಸೇತುವೆಗಳನ್ನೂ ದಾಟಿಸಿ ಇನ್ನಷ್ಟು ದೂರದಲ್ಲಿ ಬಿಟ್ಟನು.  ಇನ್ನು ಆ ಬೆಕ್ಕು ಮನೆಗೆ ಬರುವುದಿಲ್ಲ ಎಂದು ಖಚಿತವಾದ ನಂತರ, ಅವನು ಒಂದು ಗಂಟೆ ಬಿಟ್ಟು ಹೆಂಡತಿಗೆ ಕರೆ ಮಾಡಿ ಬೆಕ್ಕು ಬಂದಿದೆಯೇ ಎಂದು ಕೇಳಿದ 'ಹೌದು, ಬಂದಿದೆ ಆದರೆ ನೀನ್ ಎಲ್ಲಿ ಹಾಳಾಗ್ ಹೋದಿ?' ಎಂದು ಅವಳು ತುಸು ಖಾರವಾಗಿ ಕೇಳಿದಾಗ ಹತಾಶನಾಗಿ, "ಅದಕ್ಕೆ ಫೋನ್ ಕೊಡು. ನಾನು ಕಳೆದುಹೋಗಿದ್ದೇನೆ. ಮನೆಗೆ ಬರಲು ದಾರಿ ತಿಳಿಯುತ್ತಿಲ್ಲ!

ಸ್ನೇಹಿತರೆ, ಮೇಲ್ನೋಟಕ್ಕೆ ಇದು ಒಂದು ಜೋಕ್ ಎನಿಸಬಹುದು, ಎಲ್ಲರೂ ಈ ಜೋಕ್ ಕೇಳಿರಬಹುದು ಈ ಜೋಕ್ ನ ಅಂತರಾರ್ಥ ಇಷ್ಟೆ. ‘ನಾವು ಯಾರನ್ನಾದರೂ ಇಷ್ಟಪಡದಿರಬಹುದು, ಆದರೆ ಕೆಲವು ಸಮಯದಲ್ಲಿ ನಮಗೆ ಅವರ ಸಹಕಾರ ಬೇಕಾಗಬಹುದು, ಅವರ ಅವಶ್ಯಕತೆ ಬೀಳಬಹುದು, ಆದ್ದರಿಂದ ಯಾರೊಂದಿಗೂ ದ್ವೇಷ ಬೆಳೆಸಿಕೊಳ್ಳದೆ ಎಲ್ಲರೊoದಿಗೂ ಉತ್ತಮ ಸಂಬಂಧವನ್ನು ಹೊಂದಿರುವುದು ಒಳಿತಲ್ಲವೇ?’

~ಸಂಪಿಗೆ ವಾಸು, ಬಳ್ಳಾರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ