ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ…!

ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ…!

ಇಂಡಿಯಾ ವಿಶ್ವದ ನಂಬರ್ ಒನ್.... ಅಭಿನಂದನೆಗಳು..... Congratulations…!

ಜನಸಂಖ್ಯೆ.

ಭಾರತ 142 + ಕೋಟಿ.

ಚೀನಾ 142 + ಕೋಟಿ.

ಕೆಲವು ಲಕ್ಷಗಳ ಸಂಖ್ಯೆಯಲ್ಲಿ ಭಾರತ ಮುಂದೆ...

ವಿಶ್ವಸಂಸ್ಥೆಯ ಅಂದಾಜಿನಂತೆ ಈ ವರ್ಷದ ಕೊನೆಯಲ್ಲಿ ಭಾರತ ಮೊದಲ ಸ್ಥಾನಕ್ಕೇರಬೇಕಾಗಿತ್ತು. ಆದರೆ ಎಂಟು ತಿಂಗಳು ಮೊದಲೇ ಆ ಸ್ಥಾನ ಪಡೆದ ಸಾಧನೆ. ಚೀನಾ ಕಮ್ಯುನಿಸ್ಟ್ ದೇಶವಾದ ಕಾರಣ ಜನಸಂಖ್ಯೆಯ ವಿಷಯದಲ್ಲಿ ಬಹುತೇಕ ಖಚಿತತೆ ಇರುತ್ತದೆ. ನನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ ಹೇಳುವುದಾದರೆ ಭಾರತದಲ್ಲಿ ಬಹುಶಃ 2 ಕೋಟಿಗೂ ಹೆಚ್ಚು ಜನ ಲೆಕ್ಕಕ್ಕೆ ಸಿಗದೆ ಅನಧಿಕೃತವಾಗಿ ವಾಸಿಸುತ್ತಿರುವ ಅಂದಾಜಿನ ಸಾಧ್ಯತೆ ಇದೆ. ಹಾಗಾದರೆ ಭಾರತದ ಬೃಹತ್ ಜನಸಂಖ್ಯೆ ನಮಗೆ ವರವೇ ಅಥವಾ ಶಾಪವೇ?

ಶೇಕಡಾ 30% ರಷ್ಟು ಶಾಪ ಮತ್ತು ಉಳಿದ ಶೇಕಡಾ 70% ರಷ್ಟು ವರ. ಮೇಲ್ವಿಚಾರಣೆ, ಬಡತನ, ಅಜ್ಞಾನ, ಸಂಪನ್ಮೂಲಗಳ ಹಂಚಿಕೆ, ಜನರ ಮಾನಸಿಕ ಮತ್ತು ದೈಹಿಕ ಗುಣಮಟ್ಟ ಕಾಪಾಡುವಿಕೆ ಮುಂತಾದ ವಿಷಯದಲ್ಲಿ ಜನಸಂಖ್ಯೆ ಭಾರತಕ್ಕೆ ಶಾಪ. ಆದರೆ ಪ್ರಾಕೃತಿಕ ಸಂಪನ್ಮೂಲಗಳ ಲಭ್ಯತೆ, ವಿಶಾಲತೆ, ವೈವಿಧ್ಯತೆ, ರಕ್ಷಣೆ, ಉತ್ಪಾದನೆ, ಅಭಿವೃದ್ಧಿ, ಮುಂತಾದ ವಿಷಯಗಳಲ್ಲಿ ಜನಸಂಖ್ಯೆ ಒಂದು ವರ. ನಿಜಕ್ಕೂ ಭಾರತದ ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದೇ ಆದರೆ ಭಾರತ ಬಲಿಷ್ಠತೆಯಲ್ಲೂ ವಿಶ್ವದ ಪ್ರಬಲ ಶಕ್ತಿಯಾಗಬಹುದು. ಅದಕ್ಕೆ ಮಾಡಬೇಕಾದ ಸಂಕಲ್ಪಗಳು.

ಮೊದಲನೆಯದಾಗಿ, ರಾಜಕಾರಣಿಗಳು ಈಗ ತಾವು  ಮಾಡುತ್ತಿರುವ ಭ್ರಷ್ಟಾಚಾರದಲ್ಲಿ ಶೇಕಡಾ 30% ಕಡಿಮೆ ಮಾಡಿ ಸ್ವಲ್ಪ ಹೆಚ್ಚು ಒಳ್ಳೆಯ ಕೆಲಸ ಮಾಡಿದರೆ ಬಹುದೊಡ್ಡ ಸುಧಾರಣೆ ಖಂಡಿತ ಸಾಧ್ಯವಿದೆ.

ಎರಡನೆಯದಾಗಿ, ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಅಧಿಕಾರಿಗಳು ತಾವು ತೆಗೆದುಕೊಳ್ಳುವ ಲಂಚದ ಪ್ರಮಾಣದಲ್ಲಿ ಶೇಕಡಾ 40% ಕಡಿಮೆ ಮಾಡಿಕೊಂಡು ಜನರ ಸೇವೆಯನ್ನು ಸ್ವಲ್ಪ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಿದರೆ ಭಾರತದ ನಿಜವಾದ ವಿಶ್ವ ದರ್ಜೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಖಜಾನೆಯ ದುಂದು ವೆಚ್ಚವನ್ನು ಶೇಕಡಾ 50% ರಷ್ಟು ಕಡಿಮೆ ಮಾಡಿ ಸಾಕಷ್ಟು ಹಣ ಉಳಿಸಿದರೆ ಕೇಂದ್ರ ಮತ್ತು ರಾಜ್ಯಗಳು ಪಾವತಿಸುತ್ತಿರುವ ಬಡ್ಡಿ ಹಣ ಕಡಿಮೆಯಾಗಿ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ.

ನ್ಯಾಯಾಂಗ ವ್ಯವಸ್ಥೆ ಈಗಿನ ಭ್ರಷ್ಟಾಚಾರದಲ್ಲಿ ಶೇಕಡಾ 20% ಕಡಿಮೆ ಮಾಡಿಕೊಂಡರೆ ಮತ್ತು ಹೆಚ್ಚು ಕ್ರಿಯಾಶೀಲವಾಗಿ ಕೆಲಸ  ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲಾ ರೀತಿಯ ಮಾಧ್ಯಮಗಳು ಈಗಿನ ಅವಿವೇಕತನವನ್ನು ಶೇಕಡಾ 50% ಕಡಿಮೆ ಮಾಡಿಕೊಂಡು ವಿವೇಚನೆ ಮತ್ತು ಜವಾಬ್ದಾರಿಯನ್ನು  ಹೆಚ್ಚು ಮಾಡಿಕೊಂಡರೆ ಪ್ರಜಾಪ್ರಭುತ್ವ ಮತ್ತಷ್ಟು ಯಶಸ್ವಿಯಾಗಿ ಅಭಿವೃದ್ಧಿಯ ಗುಣಮಟ್ಟ ಹೆಚ್ಚಾಗುತ್ತದೆ. ದೊಡ್ಡ ದೊಡ್ಡ ಉದ್ದಿಮೆ ಮತ್ತು ವ್ಯಾಪಾರಸ್ಥರು, ಗ್ರಾಹಕರು ಎಂದು ಪರಿಗಣಿಸುವ ಜನರು ನಮ್ಮ ದೇಶದವರೇ, ಅವರಿಗೆ ಮೋಸ ವಂಚನೆ ಗೊಂದಲ ಉಂಟುಮಾಡಿ ಲಾಭ ಮಾಡುವುದನ್ನು ಶೇಕಡಾ 25% ಲಾಭವನ್ನು ಕಡಿಮೆ ಮಾಡಿಕೊಂಡು ಸೇವಾ ಮನೋಭಾವ ಹೆಚ್ಚು ಮಾಡಿಕೊಂಡರೆ ವಿಶ್ವ ದರ್ಜೆಯ ಅಭಿವೃದ್ಧಿ ಸಾಧ್ಯವಾಗುತ್ತದೆ.

ಎಲ್ಲಾ ವೃತ್ತಿನಿರತರು ಅಂದರೆ ಡಾಕ್ಟರ್ ಆಕ್ಟರ್ ಲಾಯರ್ ಆಡಿಟರ್ ಕಂಟ್ರಾಕ್ಟರ್ ಟೀಚರ್ ಕನ್ಸ್ರಕ್ಟರ್ ಪೇಂಟರ್  ಆರ್ಕಿಟೆಕ್ಚರ್ ಡ್ರೈವರ್ ರೈಟರ್ ಮುಂತಾದವರು ತಮ್ಮ ವೃತ್ತಿಯನ್ನು ಇನ್ನೂ ಹೆಚ್ಚಿನ ‌ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ ಲಾಭದ ಪ್ರಮಾಣವನ್ನು ‌ಶೇಕಡಾ 20% ಕಡಿಮೆ ಮಾಡಿಕೊಂಡರೆ ಈ ದೇಶಕ್ಕೆ ಜನಸಂಖ್ಯೆ ಒಂದು ಹೊರೆಯೇ ಅಲ್ಲ. ಎಲ್ಲಾ ಸಂಘ ಸಂಸ್ಥೆಗಳು, ಸಮಾಜ ಸೇವಕರು, ಹೋರಾಟಗಾರರು ಮುಂತಾದವರು ನಾಯಕತ್ವ ಪ್ರಶಸ್ತಿ ಅಧಿಕಾರ ಪ್ರಚಾರ ಇತ್ಯಾದಿ ವಿಷಯಗಳಲ್ಲಿ ಶೇಕಡಾ  50% ಆಸೆಗಳನ್ನು, ಸ್ಬಾರ್ಥವನ್ನು ಕಡಿಮೆ ಮಾಡಿಕೊಂಡು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಖಂಡಿತ ದೇಶದ ದೊಡ್ಡ ಮಟ್ಟದ ಅಭಿವೃದ್ಧಿ ಕಷ್ಟವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಜನರು ತಮ್ಮ ಕುಟುಂಬ ಪ್ರೀತಿಯಲ್ಲಿ ಶೇಕಡಾ ‌20% ಕಡಿಮೆ ಮಾಡಿಕೊಂಡು ಆ ಪ್ರಮಾಣವನ್ನು ದೇಶದ ಮೇಲಿನ ಪ್ರೀತಿ ಅಭಿಮಾನವಾಗಿ ಮಾರ್ಪಾಡಿಸಿಕೊಂಡು ಸಮಾಜದ ಹಿತಕ್ಕಾಗಿ ಸ್ವಲ್ಪ ಸಮಯ ಮೀಸಲಿರಿಸಿ‌ ಸ್ಪಂದಿಸಿದರೆ ಭಾರತ ವಿಶ್ವ ಗುರು ಎಂಬ ಕನಸು ನನಸಾಗುವ ಸಾಧ್ಯತೆ ಇದೆ. ಹಾಗೆಯೇ ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಉಡಾಫೆಯಾಗಿ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಳನ್ನು ನೀಡಿ ಈಗಿರುವ ‌ವಿಭಜನಾತ್ಮಕ ಮನಸ್ಥಿತಿಯನ್ನು ಮತ್ತಷ್ಟು ದೊಡ್ಡದು ಮಾಡದೇ ಭಿನ್ನ ಅಭಿಪ್ರಾಯಗಳನ್ನು ಸಹ ಗೌರವಿಸುವ ವಿಶಾಲ ಮನೋಭಾವ ಪ್ರದರ್ಶಿಸಿ ಸಮಗ್ರ ಚಿಂತನೆಯನ್ನು, ಗೌರವದ ಭಾಷೆಯನ್ನು ಸಾರ್ವಜನಿಕವಾಗಿ ಉಪಯೋಗಿಸಿ ಅರಿಷಡ್ವರ್ಗಗಳ ಮೇಲೆ ಶೇಕಡಾ ‌50% ರಷ್ಟು ನಿಯಂತ್ರಣ ಸಾಧಿಸಿದರೆ ದೇಶದ ಪ್ರಗತಿಯನ್ನು ವಿಶ್ವ ಗುರುತಿಸುವುದು ನಿಶ್ಚಿತ.

ಜೊತೆಗೆ ಯುವ ಶಕ್ತಿ ಕೇವಲ ತಂತ್ರಜ್ಞಾನಕ್ಕೆ ದಾಸರಾಗದೆ, ಸೋಮಾರಿಗಳಾಗದೆ ತಮ್ಮ ಸಾಮರ್ಥ್ಯವನ್ನು ಶೇಕಡಾ 75% ರಷ್ಟು ಕ್ರಿಯಾತ್ಮಕ ಮತ್ತು ಧನಾತ್ಮಕ ‌ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಭಾರತ ‌ಎಲ್ಲಾ ದೃಷ್ಟಿಯಲ್ಲಿ ನಂಬರ್ ಒನ್ ಆಗಬಹುದು. ಇಲ್ಲಿ‌‌ ಶೇಕಡಾವಾರು ಪ್ರಮಾಣವು ಒಂದು ‌ಸಾಂಕೇತಿಕ ಸಂಖ್ಯೆ ಮಾತ್ರ. ಅಷ್ಟರ ಮಟ್ಟಿಗೆ ಒಳ್ಳೆಯ ಬದಲಾವಣೆಯಾಗಲಿ ಎಂಬ ಆಶಯ. ಏಕೆಂದರೆ ಸಂಪೂರ್ಣ ಬದಲಾವಣೆ ವಾಸ್ತವದಲ್ಲಿ ಅಷ್ಟು ಸುಲಭವಲ್ಲ ಎಂಬ ಕಾರಣದಿಂದ… ಇದು ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ..!

-ವಿವೇಕಾನಂದ ಎಚ್ ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ