ಇದು ಪ್ರಕಾಶನದ ಪ್ರಹಸನ

ಇದು ಪ್ರಕಾಶನದ ಪ್ರಹಸನ

ಇತ್ತೀಚೆಗೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದೆ. ಪ್ರಕಾಶಕರು ತುಂಬ ಅದ್ದೂರಿಯಾಗಿಯೇ ಅದನ್ನು ಆಯೋಚಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಜತೆಗೆ ಆಯಾ ಲೇಖಕರಿಗೆ ಹಾರ, ಫಲ-ತಾಂಬೂಲ ಹಾಗೂ ಪುಸ್ತಕದ ಕೆಲವು ಪ್ರತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದವರಲ್ಲಿ ಕೆಲವರು ತಂತಮ್ಮ ಪರಿಚಯದ ಲೇಖಕರಿಂದ ಗೌರವ ಪ್ರತಿಗಳನ್ನು ಪಡೆದು ತೆರಳಿದರು, ಸಭಾಂಗಣದ ಬಾಗಿಲ ಬಳಿ ಮಾರಾಟಕ್ಕೆಂದು ಇಟ್ಟಿದ್ದ, ಅಂದು ಬಿಡುಗಡೆಗೊಂಡ ಪುಸ್ತಕಗಳು ಬಹುತೇಕರು ಕಣ್ಣು ಹಾಯಿಸಲಿಲ್ಲ. ಈ ಸನ್ನಿವೇಶವನ್ನು ಗಮನಿಸಿದಾಗ. ಈಗಿನ ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ ಔದಾರ್ಯವನ್ನೇಕೆ ತೋರುತ್ತಿಲ್ಲ? ಲೇಖಕರು ಯಾರಿಗಾಗಿ ಬರೆಯಬೇಕು? ಎಂಬ ಪ್ರಶ್ನೆಗಳು ಮೂಡಿದ್ದು ನಿಜ.

ನಮ್ಮಲ್ಲಿ ಲೇಖಕರು ತಮ್ಮ ಪುಸ್ತಕದ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯ ಬಹಳಷ್ಟಿದೆ. ಪ್ರಕಾಶಕರು ಪುಸ್ತಕಗಳ ಮಾರಾಟಕ್ಕಾಗಿ ಸಾಂಪ್ರದಾಯಿಕ ಪುಸ್ತಕ ವ್ಯಾಪಾರಿಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಶಿಕ್ಷಣ ಸಂಸ್ಥೆಗಳು ಮತ್ತು ನೇರವಾಗಿ ತಮ್ಮಲ್ಲಿಗೇ ಬಂದು ಖರೀದಿಸುವ ಓದುಗರನ್ನು ಅವಲಂಬಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಪಠ್ಯೇತರ ವಿಷಯಗಳ ಪುಸ್ತಕಗಳನ್ನು ಖರೀದಿಸುವುದು ವಿರಳ, ಪುಸ್ತಕ ವ್ಯಾಪಾರಿಗಳು ಮುಂಗಡ ನೀಡಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾರರು. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಿ ಹಣ ದಕ್ಕಿಸಿಕೊಳ್ಳಲು ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಇನ್ನು ಲೇಖಕನೇ ಪ್ರಕಾಶಕನಾಗಿ ಪುಸ್ತಕ ಪ್ರಕಟಿಸಲು ಮುಂದಾಗುವುದಾದರೆ, ಮಾರಾಟದ ವಿಭಿನ್ನ ತಂತ್ರಗಳು ಮತ್ತು ಸೂಕ್ಷ್ಮತೆಯ ಅರಿವಿರಬೇಕು. ಒಟ್ಟಿನಲ್ಲಿ ಪ್ರಸಕ್ತ ಸನ್ನಿವೇಶವು, ಲೇಖಕರು ಗೌರವಧನವನ್ನು ಅಪೇಕ್ಷಿಸದಷ್ಟರ ಮಟ್ಟಿಗೆ ಪ್ರಕಾಶಕರಿಗೆ ಪೂರಕವಾಗಿದೆ (ಲೇಖಕರಿಗೆ ಯಥೋಚಿತ ಗೌರವಧನ ನೀಡುವ ಪ್ರಕಾಶಕರೂ ಸಾಕಷ್ಟಿದ್ದಾರೆ. ಆ ಮಾತು ಬೇರೆ). ನವೋದಯ ಕಾಲದಲ್ಲಿ ಕನ್ನಡದಲ್ಲಿ ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡಿರುವ ಲೇಖಕರ ಸಂಖ್ಯೆ ವಿರಳ. ಎಸ್.ಎಲ್. ಭೈರಪ್ಪ, ಶಿವರಾಮ ಕಾರಂತ, ಅನಕೃ, ತರಾಸು ಮುಂತಾದ ಖ್ಯಾತ ಸಾಹಿತಿಗಳು ಈ ಮಾತಿಗೆ ಅಪವಾದವಾಗಿರಬಹುದು. ಆದರೆ ಅಂಥ ಲೇಖಕರ ಸಂಖ್ಯೆ ಕನ್ನಡಿಗರು ಹೆಮ್ಮೆ ಪಡುವಷ್ಟೇನಿಲ್ಲ. 

ಪ್ರಕಾಶನ ಹಾಗೂ ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ, ಬೌದ್ಧಿಕ ಸ್ವತ್ತಿನ ಕಾನೂನಾತ್ಮಕ ಹಕ್ಕು ಲೇಖಕನಿಗೆ ಸೇರಿದ್ದು, ಆದರೆ ಆರ್ಥಿಕ ಲಾಭ ದಕ್ಕಿಸಿಕೊಳ್ಳಲೆಂದು ಕೆಲವು ಪ್ರಕಾಶಕರು ಈಚೀಚೆಗೆ ಕೃತಿಸ್ವಾಮ್ಯ ವನ್ನು ನಿಯಮಬಾಹಿರವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಪುಸ್ತಕದ ಹಕ್ಕು ಒಮ್ಮೆ ಪ್ರಕಾಶಕರ ಪಾಲಾದರೆ, ಆಗ ಲೇಖಕನ ಒಪ್ಪಿಗೆಯಿಲ್ಲದೆ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಬಹುದು. ಅದಕ್ಕೆ ಯಾವ ಅಡೆತಡೆ ಎದುರಾಗುವುದಿಲ್ಲ. ಆಗ ಆರ್ಥಿಕವಾಗಿ ಶೋಷಣೆಗೊಳಗಾಗುವವರು ಲೇಖಕರು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಲೇಖಕರನ್ನು ಪೋಷಿಸಿ ಬೆಳೆಸುವ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಮಾತು ನಿಜವೆನ್ನಿಸುತ್ತದೆ.

ಲೇಖಕರಿಗೆ ಪ್ರಕಾಶಕರಿಂದ ಆಗುವ ಆರ್ಥಿಕ ಶೋಷಣೆ ಒಂದು ಬಗೆಯಾದರೆ, ಮತ್ತೊಂದೆಡೆ ಲೇಖಕರ ವೈಚಾರಿಕ ದನಿಯನ್ನು ದಮನಗೊಳಿಸುವ ಪ್ರಭುತ್ವದ ಶೋಷಣೆಯದ್ದು ಇನ್ನೊಂದು ಬಗೆ. ಬರಹಗಾರನ ವೈಚಾರಿಕ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರ ಕಾಲಕಾಲಕ್ಕೆ ತನ್ನ ಅಟ್ಟಹಾಸವನ್ನು ಮೆರೆಯುತ್ತಾ ಬಂದಿದೆ. ಇಂಥ ತೊಡರುಗಳ ಜತೆಗೆ ಲೇಖಕನು 'ವಿಮರ್ಶೆ' ಎಂಬ ಅಗ್ನಿಕುಂಡವನ್ನು ಪ್ರವೇಶಿಸಿ ಎದ್ದುಬರಬೇಕು. ಈಗಂತೂ ವಿಮರ್ಶೆಗೆ 'ಖರೀದಿ ಮೌಲ್ಯ' ಪ್ರಾಪ್ತವಾಗಿದೆ; ವಿಮರ್ಶಕರು ಎಂಥ ಗಟ್ಟಿ ಸಾಹಿತ್ಯವನ್ನೂ ಪ್ರಪಾತಕ್ಕೆ ತಳ್ಳಬಹುದು ಮತ್ತು ಟೊಳ್ಳು ಬರವಣಿಗೆ ಯನ್ನೂ ಮೇಲಕ್ಕೆತ್ತಬಹುದು. ಒಟ್ಟಾರೆ, ಪ್ರಕಾಶಕರ ಆರ್ಥಿಕ ಶೋಷಣೆ, ಪ್ರಭುತ್ವದ ಹಿಂಸೆ ಮತ್ತು ವಿಮರ್ಶೆಯ ಕಾಕಕೃಷಿಗೆ ಸಿಲುಕಿ ಲೇಖಕ ಹೈರಾಣಾಗುತ್ತಿದ್ದಾನೆ. ಇಂಥ ಸನ್ನಿವೇಶದಲ್ಲಿ ನಿಜವಾದ ಲೇಖಕ ಹೊಮ್ಮುವುದು ಮತ್ತು ಆತನಿಂದ ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?

-ಸಂದೀಪ್ ಶರ್ಮಾ ಮೂಟೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ