ಇದು ಪ್ರೇಮ ಮಹಲ್

ಗಝಲ್ ಕವಿ ಸಿದ್ಧರಾಮ ಹೊನ್ಕಲ್ ಅವರ ನೂತನ ಗಝಲ್ ಸಂಕಲನ ‘ಇದು ಪ್ರೇಮ ಮಹಲ್’ ಪ್ರಕಟವಾಗಿದೆ. ಪ್ರೇಮೋನ್ಮಾದದ ಆಯ್ದ ನೂರು ಗಝಲ್ ಗಳ ಸಂಗ್ರಹ ಈ ಕೃತಿಯಲ್ಲಿದೆ. ಇದಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಕವಿ ಅಬ್ದುಲ್ ಹೈ ತೋರಣಗಲ್ಲು. ಇವರು ಬರೆದ ಮುನ್ನುಡಿಯ ಆಯ್ದ ಸಾಲುಗಳು ನಿಮ್ಮ ಓದಿಗಾಗಿ…
“ಭಯೋತ್ಪಾದನೆ ಒಂದು ಭೂತ
ಖಂಡ ಖಂಡಾಂತರಗಳ ಪ್ರಶ್ನೆ
ಶವಗಳು ಬದುಕುತ್ತಿವೆ!
ಕರೀಮ್ !
ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ.
ಅಬಾಬಿಯ ಈ ಸಂದೇಶ ಧರ್ಮದ ಹೆಸರಲ್ಲಾಗುವ ಮನುಷ್ಯರ ಕೊಲೆಯನ್ನ, ಮಾನವೀಯತೆಯ ಕಗ್ಗೋಲೆಯನ್ನು ಸಾಂಕೇತಿಸಿ ಸಾಗುತ್ತಿದೆ. ದೇಶವೀಗ ಕೋಮುವಾದ, ಮತೀಯವಾದ ಮತ್ತು ಧರ್ಮದ ಹೆಸರಲ್ಲಿ ದಂಗೆಗಳುಂಟು ಮಾಡುವ ಸಂದರ್ಭದಲ್ಲಿ ಸಾಗಿ ಭಾವೈಕ್ಯತೆಯ ಭಾರತದ ಪರಿಕಲ್ಪನೆಯನ್ನು ಅಳಿಸಿಹಾಕುವ ಹುನ್ನಾರವನು ನಡೆಸುತ್ತಿರುವ ಈ ದುರಿತ ಕಾಲದಲ್ಲಿ ಕವಿ ಕಾವ್ಯವನ್ನ ಒಂದು ಖಡ್ಗವಾಗಿ ಮಾನವೀಯ ಮೌಲ್ಯಗಳು ಕೊಂಡೊಯ್ಯುವ ಮಾಧ್ಯಮವಾಗಿ ಬಳಸುವ ತುರ್ತು ಹಿಂದೆಂದಿಗಿಂತಲೂ ಇಂದು ಜರೂರಿಯಾಗಿದೆ. ಬದಲಾದ ಸಂದರ್ಭದಲ್ಲಿ ಕವಿಗಳು ಸಮಾಜಮುಖಿ ಚಿಂತಕರಾಗಿ ತಮ್ಮ ಕಾವ್ಯದ ಹರಿವನ್ನ ಹೆಚ್ಚಿಸಿಕೊಂಡು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ಅದು ಪ್ರೀತಿ ಪ್ರೇಮ ಅನುರಾಗ ಬಂಧುತ್ವದ ಮೂಲಕವೇ ಆಗಬೇಕಾದ ಕೆಲಸವಾಗಿದೆ. ಗಜಲ್ ಕ್ಷೇತ್ರವೂ ಇದಕ್ಕೆ ಹೊರತಲ್ಲ.
ಗಜಲ್ ಒಂದು ಉತ್ಕೃಷ್ಟ ಕಾವ್ಯ ಪ್ರಕಾರವಾಗಿದೆ. ಜೊತೆಗೆ ಕಾವ್ಯ ರಾಣಿಯೂ ಹೌದು. ಕನ್ನಡದ ಗಜಲ್ಗಳು ಉತ್ತರ ಕರ್ನಾಟಕದ ಬಯಲು ಸೀಮೆಯಲ್ಲಿ ಮೈದಾಳಿ ಇಲ್ಲಿಯೇ ಮೆರೆದ ಕಾಲವೊಂದಿತ್ತು. ಕಾಲ ಕ್ರಮೇಣ ಅವು ತಮ್ಮ ವ್ಯಾಪ್ತಿ ಮತ್ತು ವಿಸ್ತಾರತೆಯನ್ನು ಹೆಚ್ಚಿಸಿಕೊಂಡು ನಾಡಿನೆಲ್ಲೆಡೆ ಪಸರಿಸಿ ಹುಲುಸಾಗಿ ಬೆಳೆಯುತ್ತಿರುವುದು ಸತ್ಯ. ಈ ಕ್ಷೇತ್ರಕ್ಕೆ ಸೆಳೆಯಲ್ಪಟ್ಟು ಸಾಧನೆಗೈದ ಸಾಧಕರು ಅನೇಕರಿದ್ದಾರೆ. ಅಂತಹ ಸಾಧಕರಲ್ಲಿ;
ಅಗಾಧ ಜ್ಞಾನ; ವಿದ್ಯೆ ಮತ್ತು ವಿನಯವನ್ನು ಮೈಗೂಡಿಸಿಕೊಂಡು ಶುದ್ಧ ಭಾವದಿ ಬರೆಯುವ ಮುತ್ಸದ್ದಿ ಬರಹಗಾರರು, ಖ್ಯಾತ ಲೇಖಕರು, ಭಿನ್ನ ಭಿನ್ನ ಪ್ರಕಾರದಲ್ಲಿ ಬರೆದು ಎಲ್ಲದರಲ್ಲೂ ಸೈ ಎನಿಸಿಕೊಂಡು ನಾಡಿನ ಹಿರಿಯ ಲೇಖಕರ ಸಾಲಿಗೆ ಸೇರಿದ ಶ್ರೀ ಸಿದ್ದರಾಮ ಹೊನ್ನಲ್ ರವರು ಈ ನಾಡ ಸಾಕ್ಷಿಪ್ರಜ್ಞೆಯೆಂದರೆ ಅತಿಶಯೋಕ್ತಿಯಲ್ಲ. ಸಾಹಿತ್ಯದ ಎಲ್ಲಾ ಪ್ರಕಾರದ ಒಳ ಹೊರಗನ್ನು ಬಲ್ಲ ಶ್ರೀಯುತರು ಗಜಲ್ಗಳನ್ನು ಅತ್ಯಂತ ಪ್ರೀತಿಪೂರ್ವಕವಾಗಿ, ಸುಂದರವಾಗಿ, ಮೋಹಕವಾಗಿ ಬರೆದು ಓದುಗರೆದೆಗೆ ದಾಟಿಸುತ್ತಾರೆ. ಹೀಗೆ ಪ್ರೀತಿಸಿ, ಧ್ಯಾನಿಸಿ ಬರೆವ ಇವರ ಈ ಗಜಲ್ಗಳಲ್ಲಿ ಪ್ರೇಮಾಂತರ್ಯದ ಆಲಾಪನೆಯಿದೆ. ಭಾವ ಸ್ಪುರಿಸಿ ಎದೆಗಳನ್ನು ಬೆಸೆಯುವ ಮಾಧುರ್ಯವಿದೆ. ಇನ್ನಿಲ್ಲದಂತೆ ನೊಂದು ಅಧೀರರಾದ ನೊಂದಿತರ ಕಣ್ಣೀರ ಕಥೆಗಳಿವೆ. ಸೋತವರ ಎದೆಯ ಹಾಡುಗಳ ನೋವ ನಿವಾರಿಸಿ ಆ ಮನಸುಗಳಿಗೆ ಪ್ರೀತಿ ಉಣಿಸುವ ಕನಿಕರದ ಕರುಳಿದೆ. ಜೊತೆಗೆ ಶತ ಶತಮಾನಗಳು ಕಳೆದರು ಪ್ರೀತಿ ಪ್ರೇಮದ ಭಾವಗಳು ಎಲ್ಲರೆದೆಯಲ್ಲಿ ಜೀವ ನದಿಯಾಗಿ ಹರಿಯಬಲ್ಲದು ಎಂಬುದರ ಸಾಕ್ಷಿಗಳಿವೆ. ಹೀಗೆ ಇವರ ಗಜಲ್ ಗಳು ನಿತ್ಯ ನೂತನ ಭಾವದಿ ಮೆರೆದು ಗಜಲ್ ಕ್ಷೇತ್ರವನ್ನು ಆಳುತ್ತಿವೆ.
ಇದರೊಂದಿಗೆ ಮಾನವೀಯತೆಯನ್ನು ಮೈಗೂಡಿಸಿಕೊಂಡು ಜೀವ ಕಾರುಣ್ಯಕ್ಕಾಗಿ ಮಿಡಿಯುವ ಇಂತಹ ಕವಿ ಮಾತ್ರ ಕಾವ್ಯವನ್ನು ಕರುಣಾಮಯಿ ಯಾಗಿ ಬರೆಯಬಲ್ಲರು. ಇತರರನ್ನೂ ಗೌರವಿಸುವ ಮಹಾ ಮನಸು ಹೊಂದಬಲ್ಲರು. ಇದನ್ನ ಸದಾ ಎಚ್ಚರಿಕೆಯ ಭಾವದಲ್ಲಿ ಹಿಡಿದಿಟ್ಟುಕೊಂಡು ಮುನ್ನಡೆಯುವ ಮಹಾ ಮನಸಾದ ಇವರು 70ಕ್ಕೂ ಹೆಚ್ಚು ಪುಸ್ತಕಗಳ ರಚಿಸಿದ್ದು, ನೂರಾರು ಪ್ರಶಸ್ತಿಗಳು ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾಗ್ಯೂ ಸ್ವಲ್ಪವೂ ಹಮ್ಮು ಬಿಮ್ಮಿಲ್ಲದೇ ಎಳೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮುನ್ನಡೆಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಅಜಾತಶತೃವಾಗಿ ನಿಂತು ಅವಮಾನವನ್ನ ಹರಾಜಿಗಿಡದ ಕೋಮಲ ಭಾವದ ಕವಿಯಾಗಿ ದಕ್ಕಿದ್ದನ್ನ ದಾಖಲಿಸುವ ದೈತ್ಯ ಬರಹಗಾರರಾಗಿದ್ದಾರೆ. ಇವರು ಭಾವನೆಗಳನ್ನು ಬಂದಿಸದೇ ಸರಾಗ ಸಂಚಾರಕ್ಕೆ ಅಣಿಗೊಳಿಸುವ ಛಲಗಾರ. ಸಾತ್ವಿಕತೆಯೇ ಇವರ ಆಭರಣ. ಅದುವೇ ಅವರ ಗಜಲ್ ಕಾವ್ಯದ ಹೂರಣ.
ಇಂಥಹ ಅಮೋದಪ್ರಿಯ ಮನಸಿನ ಈ ಕವಿ ಎದೆಯೊಳಗೆ ಸಾಂದ್ರ ಗೊಂಡ ಸಂಗತಿಗಳಿಗೆ ಸದಾಶಯ ತುಂಬಿ ಲೋಕದ ಗಾಯಗಳಿಗೆ ಉತ್ತರ ವಾಗಿಸುತ್ತಾರೆ. ನಿತ್ರಾಣಗೊಂಡ ಮನಸುಗಳಲ್ಲಿ ಉತ್ಸಾಹ ಉಕ್ಕಿಸಿ ಜೀವ ಚೈತನ್ಯ ತುಂಬುತ್ತಾರೆ. ಹೀಗೆ ಬರೆಯುವ ಇವರಿಗೆ ಒಳನೋಟ ಹೊರನೋಟವೆಂಬುದಿಲ್ಲ. ಎಲ್ಲವೂ ನೇರ. ತೆರೆದೆದೆಯ ಸುಂದರ ಭಾವ. ಅದುವೇ ಅವರ ಈ ಇದು ಪ್ರೇಮಮಹಲ್ ಎಂಬ ಗಜಲ್ ಸಂಕಲನದ ಜೀವಾಳ.
ನಿನ್ನ ನೋವುಗಳೆಲ್ಲಾ ನನಗಿರಲಿ ಸಖಿ
ಜಗದ ಸುಖಗಳೆಲ್ಲಾ ನಿನ್ನದಾಗಲಿ ಸಖಿ
ಪ್ರಿಯತಮನೊಬ್ಬ ತನ್ನ ಪ್ರೇಯಸಿಯನ್ನು ಎಷ್ಟೊಂದು ಎದೆ ತುಂಬಿ ಪ್ರೀತಿಸುತ್ತಿದ್ದನೆಂದರೆ ನಿನ್ನ ನೋವು ನನಗಿರಲಿ ಎಂದು ಹೇಳುವಾಗಿನ ಆ ನಿಷ್ಕಲ್ಮಶ ಭಾವವೇ ಬೆಸೆದು ಆ ಮಿಸ್ರದೊಳಗೆ ಪ್ರೀತಿಯ ಉತ್ತುಂಗ ಸ್ತರವನ್ನು ಕಟ್ಟಿಕೊಟ್ಟಿದ್ದಾರೆ. ಎರಡನೆಯ ಮಿತ್ರವು ಸೇರಿ ಸುಂದರ ಶೇರ್ ಆಗಿಸಿ ಅದಕ್ಕೆ ಅತ್ಯಂತ ಕೋಮಲ ಭಾವದ ಹೊದಿಕೆಯನ್ನು ಹೊದಿಸಿದ್ದಾರೆ. ಸ್ವಲ್ಪವೂ ಸ್ವಾರ್ಥವಿರದ ತ್ಯಾಗಮಯ ಆಲಾಪನೆಯೊಂದು ಈ ಶೇರ್ ಮುಖೇನ ತನ್ನ ಪ್ರಿಯತಮೆಯ ಶ್ರೇಯಸ್ಸು ಕೋರುವ ಶ್ರೇಷ್ಠ ಮತ್ತು ಅಪ್ಯಾಯಮಾನವಾದ ಪ್ರೀತಿಯ ಫಲಿತವನ್ನು ದಾಖಲಿಸಿದ್ದಾರೆ.
ಎಂದೆಂದು ಮರೆಯಲಾಗದ ಸುಂದರ ಕನಸಾದವಳು ನೀನು
ಆ ವಸಂತವೇ ನಾಚುವ ವನದೇವತೆಯಾದವಳು ನೀನು
ಆಗಲದಿರು ಓ ನನ್ನ ಆತ್ಮಸಖಿಯೇ ನಿಜದಿ ನನ್ನ ಬದುಕಾದವಳು ನೀನು
ಹೊನ್ನಸಿರಿ'ಯ ಪ್ರೇಮ ಮಹಲ್ ದ ಪ್ರಣತೆಗೆ ಜೀವ ಹನಿಯಾದವಳು ನೀನು
ಈ ರೀತಿಯ ಶೇರ್ಗಳನ್ನೊಳಗೊಂಡ ಗಜಲ್ಗಳು ಈ ಸಂಕಲನ ದುದ್ದಕ್ಕೂ ಮೆರೆಯುತಿರುವುದನ್ನು ಕಾಣಬಹುದಾಗಿದೆ. ಇದು ಪ್ರೀತಿಯ ಜಾಡಲಿ ನಡೆಯುವ ಮನಸಿನ ಕ್ರಿಯೆಯಾಗಿ ನಡೆಸಿ ಅಪಾರ ಪ್ರೇಮ ವಿರಹ ಮತ್ತು ವೇದನಾಮಯ ಆಲಾಪನೆಯನ್ನ ಬಹು ಸುಂದರವಾಗಿ ಅಭಿವ್ಯಕ್ತಿಸಿದ್ದಾರೆ.
ಗಜಲ್- ೩ರ ಈ ಕೆಳಗಿನ ಗಜಲ್ ಸಾಲನ್ನು ಓದುತ್ತಾ ಸಾಗಿದಾಗ
ಮನುಷ್ಯ ಅನೇಕ ಸಲ ಚಿಂತಿಸುತ್ತಾ, ಯೋಚಿಸುತ್ತಾ ತನ್ನೊಳಗೆ ತಾನು ಕಳೆದು ಹೋಗುತ್ತಾನೆ. ಆ ಪರಿಯ ಭಾವವನ್ನ ತಂದು ಓದುಗರೆದೆಗೆ ದಾಟಿಸುವ ಕುಶಲತೆಯೊಂದು ಇಲ್ಲಿ ಮೈದಾಳಿ ಮೆರೆದಿದೆ.
ಮನದ ಮಾತು ಮನಕಲ್ಲದೆ ಅನ್ಯರಿಗೆ ಅರ್ಥವಾಗುವುದೇ ಸಖಿ
ಹೊನ್ನಸಿರಿ ಮರೆತು ನೀ ಬದುಕಲಾರೆ ಬಲ್ಲೆ ನಿನ್ನಾ
ಸಂಕಟವೇ ನನ್ನಲ್ಲಿ ಗಜಲಾಗುವುದು
ಹೀಗೆ ವೇದನಾಮಯ ಮೌನವನ್ನ ಮಾತಿಗಿಳಿಸುವ ಕ್ರಿಯೆಯೊಂದು ಇಲ್ಲಿ ಮೈದಾಳಿ ಹೃದಯ ಬಿರಿತದ ಆರ್ತನಾದವನ್ನ ಅಕ್ಷರಕ್ಕಿಳಿಸಿ ಓದುಗನನ್ನೂ ಒಮ್ಮೆ ಅಂತರ್ಮುಖಿಯಾಗಿ ಆಲೋಚಿಸುವಂತೆ ಮಾಡುತ್ತಿದೆ.
ಅವಳು ಮುನಿದು ಹೋದ ಮೇಲೆ ಅವಳಂತೆ ಯಾರೂ ಬೇಕೆನಿಸಲಿಲ್ಲ
ಜನಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ಬೇಕೆನಿಸಲಿಲ್ಲ
ಮೇಲಿನ ಶೇರ್ ಓದುವಾಗ ಗಾಢವಾಗಿ ಕಾಡುವ ವಿಷಾದವನ್ನು, ಜೊತೆಗೆ ಅಪರಿಮಿತ ಪ್ರೇಮವನ್ನು ಕಟ್ಟಿಕೊಡುವ ಒಂದಕ್ಕಿಂತ ಒಂದು ಶ್ರೇಷ್ಠ ಆದರ್ಶ ಪ್ರೇಮದ ಅನುಭೂತಿಯನ್ನು ಈ ಪ್ರೇಮಮಹಲ್ ಸಂಕಲನದ ನೂರಾರು ಗಜಲ್ ಗಳು ನವ ನವೀನ ಭಾವ ಹೊತ್ತು ಓದುಗನೆದೆಯಲ್ಲಿ ನವಿರಾಗಿ, ಕೋಮಲವಾಗಿ ಸದಾ ಪ್ರೀತಿಯ ನದಿಯಾಗಿ ಹರಿಯುವಂತಿವೆ.
ಇಲ್ಲಿಯ ಎಲ್ಲಾ ಗಜಲ್ಗಳು ಓದುಗನನ್ನ ಪುನಃ ಪುನಃ ಕಾಡುತ್ತವೆ. ಈ ರೀತಿ ಬರೆದು ಬಯಲಾಗುವ ಶ್ರೀಯುತರಾದ ಹೊನ್ನಲ್ ಜೀ ರವರಿಗೆ, ಅವರ ಈ 'ಇದು ಪ್ರೇಮ ಮಹಲ್' ಗಜಲ್ದ ಆರನೇ ಆಯ್ದ ಪ್ರೇಮೋನ್ಮಾದದ ಕೃತಿಗೆ ಶುಭವಾಗಲೆಂದು ಹಾರೈಸುವೆ”. ಸುಮಾರು ೧೩೫ ಪುಟಗಳ ಈ ಕೃತಿ ಗಝಲ್ ಪ್ರಿಯರಿಗೆ ಇಷ್ಟವಾದೀತು.