ಇದು ಬರಿ ಬೆಳಗಲ್ಲೋ...
ಎದ್ದ ಕೂಡಲೇ ಏನು ಮಾಡುತ್ತೀರಿ?
ಮುಖ ಮಾರ್ಜನ ಒತ್ತಟ್ಟಿಗಿರಲಿ, ಏನು ಯೋಚಿಸುತ್ತೀರಿ?
ನಾನಂತೂ, ಇಂದು ಮಾಡಬೇಕಾದ ಕೆಲಸಗಳನ್ನು ಮನಸ್ಸಿನ ಮುಂದೆ ತಂದುಕೊಳ್ಳುತ್ತೇನೆ. ನಿನ್ನೆ ಮಾಡದೇ ಉಳಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇನೆ. ಅವನ್ನು ಮಾಡಲು ನಾನು ಸಮರ್ಥಳಿದ್ದೇನೆ ಎಂದು ಹೇಳಿಕೊಳ್ಳುತ್ತೇನೆ. ’ಆಯಿತಲ್ಲ, ಇನ್ನೊಂದೈದು ನಿಮಿಷ ಹಾಗೇ ಅಡ್ಡಾಗೋಣ’ ಎಂದು ಎಳೆಯುತ್ತಿರುವ ಮೊಂಡ ಮನಸ್ಸನ್ನು ಪುಸಲಾಯಿಸಿ ಏಳುತ್ತೇನೆ. ಲೈಟ್ ಹಾಕಿದ ಕೂಡಲೇ ಕಾಣಬಹುದಾದ ರೂಮಿನ ಅವಾಂತರಗಳನ್ನು ಫಟಾಫಟ್ ಸರಿಪಡಿಸಿ, ಬೆಳಗಿನ ಕರ್ಮಗಳನ್ನು ಮುಗಿಸಿ, ಓದಲು ಕೂಡುತ್ತೇನೆ. ಸಾಮಾನ್ಯವಾಗಿ ಓದುವುದು, ಮನಸ್ಸು ಅರಳಿಸುವಂಥ ಪುಸ್ತಕಗಳನ್ನು. ಒಮ್ಮೊಮ್ಮೆ ಕವಿತೆಗಳೂ ಅದರಲ್ಲಿ ಸೇರುತ್ತವೆ.
ಅರ್ಧ ಗಂಟೆ ಓದಿದ ನಂತರ, ಹೊಸ ಹೊಸ ವಿಚಾರಗಳು ಬರುತ್ತವೆ. ಅವನ್ನು ಕೈಬರಹದಲ್ಲಿ ಒಂದೆಡೆ ಬರೆಯುತ್ತೇನೆ. ಬೆಳಿಗ್ಗೆ ಎದ್ದು ಕಂಪ್ಯೂಟರ್ ತೆರೆಯುವುದು ಕಡಿಮೆ. ಬರೆದಿದ್ದನ್ನು ಒಂದು ಸಾರಿ ಓದುತ್ತೇನೆ. ಎಷ್ಟೋ ಸಾರಿ, ಬರೀ ಹೆಡ್ಡಿಂಗ್, ಒಂದೆರಡು ವಿಚಾರಗಳು ಮಾತ್ರ ಇರುತ್ತವೆ. ಅಷ್ಟು ಸಾಕು, ನಂತರ ಅವನ್ನೆಲ್ಲ ಬರಹಗಳನ್ನಾಗಿ ಪರಿವರ್ತಿಸಬಹುದು.
ಅವ್ವ ಎದ್ದಿದ್ದಾಳೇನೋ ಎಂಬಂತೆ ಒಮ್ಮೆ ಸುಮ್ಮನೇ ಇಣುಕಿ ನೋಡುತ್ತೇನೆ. ಆಕೆ ಆಗಲೇ ಎದ್ದು ಅಡುಗೆ ಮನೆ ಸೇರಿರುತ್ತಾಳೆ. ಚಳಿ ಇದ್ದರೆ ಒಂದು ಬಿಸಿ ಕಾಫಿ ಕೂತಲ್ಲೇ ಬರುವ ಗ್ಯಾರಂಟಿ ಉಂಟು. ಮನಸ್ಸು ತನಗೆ ತಾನೆ ಪ್ರಫುಲ್ಲವಾಗುತ್ತದೆ. ಹೊರಗೆ ಮೋಡದ ರಾಶಿಯಲ್ಲಿ ಹುದುಗಿರುವ ಧಾರವಾಡ. ರಾತ್ರಿ ಸಣ್ಣ ಮಳೆ ಸುರಿದಿರಬೇಕು. ಡಾಂಬರು ರಸ್ತೆ ಕಪ್ಪಗೇ ಕಾಣುತ್ತದೆ. ನಿಂತ ಮರಗಳಲ್ಲಿ ತಂಪು ಉಸಿರು.
ಮಾತಿಲ್ಲದೇ ಅವ್ವ ತಂದುಕೊಟ್ಟ ಬಿಸಿ ಕಾಫಿ ಹೀರುತ್ತ ಕೂಡುತ್ತೇನೆ. ’ಇಷ್ಟು ಬೇಗ ಯಾಕೆ ಎದ್ದೆ ಪಲ್ಲೂ’ ಅನ್ನುತ್ತಾಳೆ ಅವ್ವ. ನಾನು ಉತ್ತರ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತು. ಹೀಗಾಗಿ, ಸುಮ್ಮನೇ ಕಾಫಿ ಕುಡಿಯುತ್ತೇನೆ. ಆಕೆ ಸುಮ್ಮನೇ ನಿಂತಿರುತ್ತಾಳೆ. ಕಾಫಿ ಕುಡಿದು, ಕಪ್ ಕೈಗಿಡುವಾಗ ಆಕೆಗೊಂದು ಬಿಸಿ ಬಿಸಿ ಬೆಳಗಿನ ಮುತ್ತು. ಆಕೆಯೂ ಪ್ರಫುಲ್ಲ.
ಬಾಗಿಲು ತೆರೆದು ಒಂದೈದು ನಿಮಿಷ ಹೊರಗಿನ ತಂಪಿನಲ್ಲಿ ನೆನೆಯುತ್ತೇನೆ. ಎಂಥದೋ ಹಾಯ್! ಮತ್ತೆ ಬಂದು ಓದುತ್ತ ಕೂಡುತ್ತೇನೆ.
ನಿಧಾನವಾಗಿ ಬೆಳಕಾಗುತ್ತದೆ. ಅದೂ ಒಂಥರಾ ಮಂಕು. ಸೂರ್ಯ ಕಾಣುವುದು ಇನ್ನೂ ಎಷ್ಟೊತ್ತೋ! ಬರಲಿ ಸೂರ್ಯ, ಸೋಮಾರಿ ಎಂದು ಅಂದುಕೊಳ್ಳುತ್ತ ಸ್ನಾನ ಮುಗಿಸುತ್ತೇನೆ. ಮಳೆ ಬರುವ ಲಕ್ಷಣವಿದ್ದರೆ ಅಪ್ಪನ ಕಾರು, ಇಲ್ಲದಿದ್ದರೆ ಸ್ಕೂಟಿ ಸಾಕು, ಐದು ನಿಮಿಷದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುತ್ತೇನೆ. ಅಲ್ಲಿಂದ ಶಾಲ್ಮಲೆ ಒಡಲು ಸೇರಿಕೊಳ್ಳಲು ಐದು ನಿಮಿಷದ ವಾಕ್ ಸಾಕು.
ಮೂಡಣದಲ್ಲಿ ಎಲ್ಲೋ ಸೂರ್ಯ ನಾಚುತ್ತ ಬರುತ್ತಾನೆ. ಹೊಂಗಿರಣಗಳ ಮೊದಲ ಮುತ್ತು ಎತ್ತರದ ಮರಗಳ ತುದಿಗೆ. ದೂರದ ಬೆಟ್ಟಗಳ ತುದಿಯಲ್ಲಿ ಕಿರೀಟವಿಟ್ಟಂಥ ಮೋಡಗಳು. ಅವು ಓಡುತ್ತಿದ್ದರೂ ನಿಂತಂತೆ ಕಾಣುತ್ತವೆ. ನನ್ನಂತೆ ಬೆಳಿಗ್ಗೆ ವಾಕಿಂಗ್ ಬಂದವರಿಗೆ ಅದರತ್ತ ಗಮನವಿರುತ್ತದೋ ಗೊತ್ತಿಲ್ಲ. ನಾನು ಮಂತ್ರಮುಗ್ಧಳಂತೆ ಅದನ್ನೇ ನೋಡುತ್ತೇನೆ.
’ಮೂಡಣ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದಾ, ನುಣ್ಣನೆ ಎರಕವ ಹೊಯ್ದಾ
ಬಾಗಿಲು ತೆರೆದು, ಬೆಳಕು ಹರಿದು
ಜಗವೆಲ್ಲ ತೊಯ್ದಾ, ದೇವನು ಜಗವೆಲ್ಲಾ ತೊಯ್ದಾ’
ಎಂಬ ಬೇಂದ್ರೆಯವರ ಕವಿತೆ ಬಾಯಿಗೆ ಬರುತ್ತದೆ.
ಮುಕ್ಕಾಲು ಗಂಟೆಯ ವಾಕಿಂಗ್‌ನಲ್ಲಿ ಮನಸ್ಸು, ದೇಹ ಎರಡೂ ತಾಜಾ ಆಗಿಬಿಡುತ್ತವೆ. ಮನೆಗೆ ಮರಳುವಾಗ ಎಂಥದೋ ಖುಷಿ. ಮನಸ್ಸು ಮತ್ತೆ ಮತ್ತೆ ಹೇಳಿಕೊಳ್ಳುತ್ತದೆ:
ಇದು ಬರಿ ಬೆಳಗಲ್ಲೋ ಅಣ್ಣಾ !!
- ಪಲ್ಲವಿ ಎಸ್.