ಇದು ಮರಕುಟಿಗ ಅಲ್ಲ...ಕಂಚುಕುಟಿಗ !

ಇದು ಮರಕುಟಿಗ ಅಲ್ಲ...ಕಂಚುಕುಟಿಗ !

ಒಗಟಿನ ಜೊತೆ ಹಕ್ಕಿಕಥೆಯ ಇನ್ನೊಂದು ಆವೃತ್ತಿಗೆ ಸ್ವಾಗತ.

ಹಸುರು ಬಣ್ಣದ ಗರಿಗಳು ನನ್ನದು

ಕತ್ತು ಮತ್ತು ಹಣೆಯಲಿ ಕೆಂಪಗೆ ಇರುವುದು

ತಾಮ್ರದ ಚೊಂಬಿಗೆ ಬಡಿಯುವ ತೆರದಲಿ

ಟುಂಕ್ ಟುಂಕ್ ಎಂದು ಕೂಗುವೆ ನಾನು

ಹಣ್ಣುಗಳೆಂದರೆ ಬಲು ಇಷ್ಟ ನನಗೆ

ನಾನ್ಯಾವ ಹಕ್ಕಿ ತಿಳಿಯಿತೆ ನಿಮಗೆ..

ಇವತ್ತು ನಾನು ಪರಿಚಯ ಮಾಡಲು ಹೊರಟಿರುವ ಹಕ್ಕಿಯ ಹೆಸರು ಕಂಚುಕುಟಿಗ. ಈ ಪುಟಾಣಿ ಹಕ್ಕಿ ಗಾತ್ರದಲ್ಲಿ ಬುಲ್ ಬುಲ್ ಗಿಂತ ಚಿಕ್ಕದು. ಮೈಯೆಲ್ಲಾ ಹಸುರು ಬಣ್ಣದ ಗರಿಗಳಿಂದ ಕೂಡಿದ ಈ ಹಕ್ಕಿ ಮರದಲ್ಲಿ ಕುಳಿತಿದ್ದರೆ ತಕ್ಷಣ ಗುರುತು ಹಿಡಿಯೋದು ಬಹಳ ಕಷ್ಟ. ಒಂದು ದಿನ ಹೊರಗಡೆ ಪುಸ್ತಕ ಓದುತ್ತಾ ಕುಳಿತಿದ್ದೆ. ದೂರದಲ್ಲಿ ಒಂದು ಆಲದ ಮರ ಇತ್ತು. ಕುಂ ಕುಂ ಕುಂ ಎಂದು ಪ್ರತಿ ಸೆಕೆಂಡಿಗೆ ಒಂದು ಬಾರಿಯಂತೆ ನಿರಂತರವಾಗಿ ಶಬ್ದ ಕೇಳುತ್ತಿತ್ತು. ಶಬ್ದ ಆ ಆಲದ ಮರದ ಕಡೆಯಿಂದಲೇ ಬರ್ತಾ ಇತ್ತು. ಇದ್ಯಾವ ಹಕ್ಕಿ ಶಬ್ದ ಮಾಡುತ್ತಿರಬಹುದು ಅಂತ ಸಂಶಯದಿಂದ ನನ್ನ ಬೈನಾಕ್ಯುಲರ್ ತಗೆದುಕೊಂಡು ಬಂದು ಮರದ ಎಲ್ಲ ಕಡೆ ಹುಡುಕಾಡಿದೆ. ಕೊನೆಗೆ ನೋಡಿದರೆ ಹಣ್ಣುಗಳಿದ್ದ ತುದಿಯ ಕೊಂಬೆಯೊಂದರಲ್ಲಿ ಕುಳಿತುಕೊಂಡು ತಲೆ ಮತ್ತು ಕತ್ತಿಗೆ ಕೆಂಪು ಬಣ್ಣ ಬಳಿದುಕೊಂಡ ಹಾಗಿದ್ದ ಪುಟಾಣಿ ಹಕ್ಕಿಯೊಂದು ನಿರಂತರವಾಗಿ ಈ ಶಬ್ದ ಮಾಡ್ತಾ ಇತ್ತು. 

ಈ ಕಂಚುಕುಟಿಗ ಹಕ್ಕಿಯ ಮುಖ್ಯ ಆಹಾರ ಹಣ್ಣುಗಳು. ಅದರಲ್ಲೂ ಆಲದ ಮರದ ಜಾತಿಯ, ಅಂದ್ರೆ ಫೈಕಸ್ ಕುಟುಂಬಕ್ಕೆ ಸೇರಿದ ಮರಗಳ ಹಣ್ಣು ಅಂದ್ರೆ ಈ ಹಕ್ಕಿಗೆ ತುಂಬಾ ಇಷ್ಟ. ಹಗಲು ಹೊತ್ತಿನಲ್ಲಿ ನಿರಂತರವಾಗಿ ಕೂಗುತ್ತಾ ಇರೋದು ಅವುಗಳ ಸ್ವಭಾವ. ನೋಡಲಿಕ್ಕೆ ಒಂದೇ ರೀತಿ ಕಾಣುವ ಗಂಡು ಮತ್ತು ಹೆಣ್ಣು ಹಕ್ಕಿಗಳು ಜನವರಿಯಿಂದ ಜೂನ್ ತಿಂಗಳ ಮಧ್ಯೆ ಸಂತಾನೋತ್ಪತ್ತಿ ಮಾಡುತ್ತವೆ. ಮರಗಳ ಕಾಂಡದ ಮೇಲೆ ತೂತನ್ನು ಕೊರೆದು ಪೊಟರೆ ಮಾಡಿ ಅಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಈ ಕಾಲದಲ್ಲಿ ಇವು ಹೆಚ್ಚಾಗಿ ಕೂಗುತ್ತವೆ. ತಾಮ್ರದ ಪಾತ್ರೆಗಳನ್ನು ಮಾಡುವಾತ ಪಾತ್ರೆಗೆ ಆಕಾರ ಕೊಡಲು ನಿರಂತರವಾಗಿ ತಗಡನ್ನು ಬಡಿಯುವಂತೆ ಇದರ ಕೂಗು ಹೇಳುವುದರಿಂದ ಇದನ್ನು ಇಂಗ್ಲೀಷ್ ನಲ್ಲಿ Coppersmiths Barbet ಎಂದು ಕರೆಯುತ್ತಾರೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸ್ವಲ್ಪ ವಿರಳ, ಆದರೆ ಬಯಲು ಸೀಮೆಯಲ್ಲಿ ಈ ಹಕ್ಕಿ ಬಹಳ ಸಾಮಾನ್ಯ. ಪೇಟೆ ಪಟ್ಟಣಗಳ ಹಣ್ಣಿನ ಮರಗಳಲ್ಲಿಯೂ ಈ ಹಕ್ಕಿ ಇರುತ್ತದೆ. ಆದರೆ ಪೇಟೆಗಳ ಶಬ್ದಮಾಲಿನ್ಯದಿಂದ ಇದರ ಹಾಡು ಕೇಳದೇ ಇರಬಹುದು. ಪ್ರಶಾಂತ ವಾತಾವರಣದಲ್ಲಿ ಅರ್ಧ ಕಿಲೋಮೀಟರ್ ದೂರದ ವರೆಗೂ ಈ ಹಕ್ಕಿಯ ಕೂಗು ಕೇಳಿಸುತ್ತದೆ. ನಿಮ್ಮ ಸಮೀಪದಲ್ಲಿಯೇ ಕಂಚುಕುಟಿಗ ಕೂಗುತ್ತಿರಬಹುದು.

ಕನ್ನಡದ ಹೆಸರು: ಕಂಚುಕುಟಿಗ

ಇಂಗ್ಲೀಷ್ ಹೆಸರು: Coppersmith Barbet

ವೈಜ್ಞಾನಿಕ ಹೆಸರು: Megalaima haemacephala

ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ