ಇದು ಮುಗಿಯದ ಕವಿತೆ...!

ಇದು ಮುಗಿಯದ ಕವಿತೆ...!

ಕವನ

ಬೂಟು ಕೊಡಿಸಲು ಹೊರಟಿದ್ದನು 

ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ

ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ

ಬೆರಳಿಗಾದ ಗಾಯವ ಮರೆಯುತ್ತಾ...

 

ಸಮವಸ್ತ್ರ ಕೊಡಿಸಲು ಹೊರಟಿದ್ದನು

ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ

ಸಾವಿರ ತೂತಿನ ಒಳಾಂಗಿ ಮುಚ್ಚಿತ್ತು;

ತೇಪೆ ಹಾಕಿದ ಬಿಳಿ ಘಮಲಿನ ಅಂಗಿ..!

 

ಪುಸ್ತಕಗಳ ಕೊಡಿಸಲು ಹೊರಟಿದ್ದನು

ಮಸ್ತಕದಲಿ ಭವಿಷ್ಯದ ಕನಸ ಕಂಡು;

ತನ್ನ ಬದುಕಿನ ಪುಟಗಳ ಬರೆಯಲಿಲ್ಲ,

ಖಾಲಿ ಹಾಳೆಗೆ ದಿನ ದೂ(ದು)ಡಿದವನು..!

 

ಮಗನ ಕಾಣಲು ಶಾಲೆಗೆ ಹೊರಟಿದ್ದನು,

ವಿಶ್ರಾಂತಿಗೆ ಬಿಡುವವರೆಗೂ ಕಾಯ್ದವನು;

ಬಿಸಿಲು ಮೆತ್ತಿ ಚರ್ಮ ಕಾಂತಿಗೊಂಡಿತ್ತು..

ತಲೆ ಸವರಿ ಕಿಸೆಯಲ್ಲಿ ದುಡ್ಡು ಇಟ್ಟವನು.

 

ಸವಿ ಊಟ ಕೊಡಿಸಲು ಹೊರಟಿದ್ದನು

ಬಸ್ಸಿಗೆಂದು ಎತ್ತಿಟ್ಟಿದ್ದ ಕಾಸನ್ನು ಕೊಟ್ಟು!

ಅದೇಕೋ ಹೊಟ್ಟೆ ತುಂಬಿದೆ ಎನ್ನುತ್ತಲೇ

ಸ್ವಲ್ಪ ತಿಂದು ಮಗನೆಡೆಗೆ ಸರಿಸಿದವನು..!

 

ನೆಮ್ಮದಿಯ ಕೊಡಿಸಲು ಹೊರಟಿದ್ದನು

ತನ್ನನ್ನು ತಾನು ಮಾರ್ಪಡಿಸಿಕೊಂಡಿದ್ದ...

ಸಂಸಾರ ಭಾರ ಹೊತ್ತು ಬೆನ್ನು ಬಾಗಿತ್ತು;

ಕೋಲಿದ್ದರೂ ಕೈಗೆ ಆಸರೆಯು ತಾನಾದ.

-ದ್ಯಾವಪ್ಪ ಎಂ. @ಮುತ್ತತ್ತಿ 

ಚಿತ್ರ್