ಇದು ಯಾರದ್ದೋ ಮನೆಯ ಕಥೆಯಲ್ಲ! ಇದು ಆತ್ಮಕಥೆ !

ಇದು ಯಾರದ್ದೋ ಮನೆಯ ಕಥೆಯಲ್ಲ! ಇದು ಆತ್ಮಕಥೆ !

ನಮ್ಮ ಮನೆ 'ಚಿತ್ರಕೂಟ'ದ ಗೃಹಪ್ರವೇಶದ ದಿನ 'ಶ್ರೀ ರಾಮ ನವಮಿ'. ದಿನಾಂಕ 10-04-2022. ಸಂಪ್ರದಾಯದಂತೆ ತುಳಸೀ ಕಟ್ಟೆಯಲ್ಲಿ ತುಳಸೀಗಿಡ ನೆಟ್ಟು ಪುರೋಹಿತರ ನಿರ್ದೇಶನದಂತೆ "ತುಳಸೀ ಪೂಜೆ" ಮಾಡಿದೆವು. ನಂತರದ ದಿನಗಳಲ್ಲಿ ಆ ತುಳಸೀ ಗಿಡ ಚೆನ್ನಾಗಿ - ಹುಲುಸಾಗಿ - ಸೊಂಪಾಗಿ ಬೆಳೆಯಿತು. ಚಿತ್ರಕೂಟಕ್ಕೆ ಬಂದವರೆಲ್ಲಾ ತುಳಸೀ ಗಿಡ ನೋಡಿ "ವಾವ್" ಅಂದರು! ತುಳಸಿ ಚೆನ್ನಾಗಿ ಬೆಳೆದರೆ ಅದೃಷ್ಟವೆಂತಲೂ, ಮನೆಗೂ ಮನೆಯ ಯಜಮಾನನಿಗೂ ಒಳ್ಳೆಯದೆಂತಲೂ ಮತ್ತು ಅದೆಲ್ಲಾ ಅವರವರ ನಸೀಬಿನ ದ್ಯೋತಕ ಎಂತಲೂ ಹೊಗಳಿದ್ದೇ ಹೊಗಳಿದ್ದು. ಅವರ ಮಾತು ಕೇಳಿ ನಮ್ಮ ಎದೆಯೊಳಗೂ ಸಂಭ್ರಮ. 

ದಿನಗಳು ಉರುಳಿದವು ಸರಿಯಾಗಿ ಒಂದೂವರೆ ವರ್ಷ ಕಳೆಯಿತು. ತುಳಸೀ ಗಿಡದ ಒಂದೊಂದೇ ಎಲೆಗಳು ಹಣ್ಣಾಗಿ ಉದುರಲು ತೊಡಗಿದವು. ಚಿಗುರೊಡೆಯುವುದೂ, ಹೂ ಬಿಡುವುದೂ ಕ್ರಮೇಣ ಇಲ್ಲವಾಯ್ತು. ಚಿತ್ರಕೂಟಕ್ಕೆ ಬಂದವರು ಈ ಬೋಳು ಗಿಡವನ್ನು ನೋಡಿ "ಈ ಗಿಡ ಯಾಕೆ ಹೀಗಾಯ್ತು? ಛೆ!! ಇದು ಒಳ್ಳೆಯ ಲಕ್ಷಣವಲ್ಲ. ಹೀಗಾಗಬಾರದಿತ್ತು!" ಅಂತೆಲ್ಲಾ ನಕಾರಾತ್ಮಕವಾಗಿ ಮಾತಾಡಲು ಶುರುವಿಟ್ಟರು. ಅಂದು ಅದೇ ಗಿಡ ಹುಲುಸಾಗಿ ಬೆಳೆದು ನಿಂತಾಗ ನಾನೆಷ್ಟು ಖುಷಿಪಟ್ಟಿದ್ದೆನೋ ಆ ಖುಷಿಯೆಲ್ಲಾ ಆ ಗಿಡ ಸಾವಿನ ಅಂಚಿನಲ್ಲಿರುವಾಗ ಸರ್ವ ನಾಶವಾಗಿ ತಲೆಯೊಳಗೆ ಹುಳ ಹೊಕ್ಕ ಅನುಭವವಾಗತೊಡಗಿತು. ಈ ಗಿಡವನ್ನು ಮತ್ತೆ ಚಿಗುರೊಡೆಯುವಂತೆ ಮಾಡುವುದು ಹೇಗೆ? ಇದಕ್ಕೇನಾದರೂ ಪರಿಹಾರವಾಗಲಿ ಉಪಾಯವಾಗಲಿ ಇದೆಯೇ ಅಂತ ಸಿಕ್ಕ ಸಿಕ್ಕವರಲ್ಲಿ ಕೇಳಿದೆ. ಎಲ್ಲರೂ ಹೇಳಿದ್ದು ಒಂದೇ "ಅದೆಲ್ಲಾ ಅವರವರ ಅದೃಷ್ಟ ಮಾರಾಯ್ರೆ!!" ಅಂತ. 

ಮೊನ್ನೆ ಫೆಬ್ರವರಿ ತಿಂಗಳ ಹದಿನೈದನೇ ತಾರೀಕೂ ಕಳೆಯಿತು. ಗಿಡ ಸಂಪೂರ್ಣ ಬೋಳಾಯ್ತು. ಉತ್ತರ ಕಾಣದೇ ಇನ್ನೇನು ಮಾಡಲಿ ಅಂತ ಗೂಗಲ್ಲಿನ ಮೊರೆ ಹೋದೆ. "ತುಳಸೀ ಗಿಡದ ಆಯುಷ್ಯ ಎಷ್ಟು?" ಅಂತ ಗೂಗಲ್ ಗುರುವಿನಲ್ಲಿ ಧೈನ್ಯತೆಯಿಂದ ಪ್ರಶ್ನೆ ಮಾಡಿದೆ. ಅಲ್ಲಿ ತುಳಸೀ ಗಿಡದ ಗರಿಷ್ಟ ಆಯುಷ್ಯ ಒಂದೂವರೆ ವರ್ಷ ಅಂತ ಬಂತು.  ನಮ್ಮ ತುಳಸಿ ಆಗಲೇ ಒಂದು ವರ್ಷ ಹತ್ತು ತಿಂಗಳು ಪೂರೈಸಿ ಹನ್ನೊಂದನೇ ತಿಂಗಳಿಗೆ ಪಾದಾರ್ಪಣೆ ಮಾಡಿತ್ತು. ಫೆ.22ನೇ ತಾರೀಕು ಗುರುವಾರ ಸತ್ತ ಬೋಳು ಗಿಡವನ್ನು ಕಿತ್ತೆ. ಮಿಂದು ಮಡಿಯುಟ್ಟು ಹೊಸ ತುಳಸೀ ಗಿಡವನ್ನು ನೆಟ್ಟೆ. ಮರುದಿನ ಫೆ.23ನೇ ತಾರೀಕು ತಿರುಪತಿಗೆ ತೆರಳುವ ಯೋಜನೆಯಿದ್ದುದರಿಂದ ಸ್ವಲ್ಪ ಗಡಿಬಿಯಲ್ಲೂ ಇದ್ದೆ. ಮೂರು ದಿವಸ ತಿರುಪತಿ ಯಾತ್ರೆ ಮುಗಿಸಿ ಬಂದೆ. ಅಂತೂ ನಮ್ಮ ತುಳಸಿ ಒಂದು ವರ್ಷ ಹತ್ತು ತಿಂಗಳು ಹನ್ನೆರಡು ದಿವಸಗಳ ಸುಧೀರ್ಘ ಬದುಕನ್ನು ಸವೆಸಿ ನಮ್ಮನ್ನೆಲ್ಲಾ ನಿತ್ಯ ಹರಸಿ ಆಶೀರ್ವದಿಸಿ ನಮಗೆ ನೆಮ್ಮದಿ ನೀಡಿದ್ದಲ್ಲದೆ ಚಿತ್ರಕೂಟಕ್ಕೆ ಒಳ್ಳೆಯ ಹೆಸರು ತಂದುಕೊಡುವಲ್ಲಿಯೂ ಕರುಣೆ ತೋರಿದ್ದಂತೂ ನಿಜ. ಈಗ ಹೊಸ ತುಳಸಿ ಮತ್ತೆ ಹಿಂದಿನ ತುಳಸಿಯಂತೆ ತಲೆಯೆತ್ತಿಕೊಂಡು, ಚಿಗುರೊಡೆದುಕೊಂಡು ಸೊಂಪಾಗಿ ಹುಲುಸಾಗಿ ಬೆಳೆಯುತ್ತಿದೆ. ಮನಸ್ಸಿಗೆ ಸಮಾಧಾನವನ್ನೂ ಕೊಡುತ್ತಿದೆ! 

ನಾನು ಇಷ್ಟು ಬರೆದುಕೊಳ್ಳುವುದಕ್ಕೆ ಕಾರಣ ಜನ ಏನು ಬೇಕಾದರೂ ಹೇಳುತ್ತಾರೆ, ಜನ ಏನು ಬೇಕಾದರೂ ಆಡಿಕೊಳ್ಳುತ್ತಾರೆ ಎಂಬುದನ್ನು ನಿಮಗೂ ಅರ್ಥೈಸುವುದಕ್ಕೆ. ಸತ್ಯ ಏನೆಂಬುದು ತಿಳಿದಾಗಲೆ ಜನರ ಮನಸ್ಸು ಕೂಡಾ ಅರ್ಥವಾಗುವುದು. ಅವರಿವರ ಮಾತಿಗೆ ಕಿವಿಗೊಡಬೇಡಿ. ತುಳಸಿಯ ವಿಚಾರದಲ್ಲಿ ಮಾತ್ರವಲ್ಲ. ಜೀವನದ ಪ್ರತಿಯೊಂದು ವಿಷಯದಲ್ಲೂ ಕೂಡಾ ಹುಷಾರಾಗಿರಿ. ಶುಭವಾಗಲಿ. ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!

-ಮೌನಮುಖಿ-(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)