ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ
ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಈ ದೇವಸ್ಥಾನವಿದೆ. ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಳಲಂಬೆ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಸಿಗುತ್ತದೆ.ಸುಬ್ರಹ್ಮಣ್ಯದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ.
ಇಂದು ನಾಡಿನೆಲ್ಲೆಡೆಯ ಜನರಿಗೆ ಮತಭೇದವಿಲ್ಲದೆ ನಾಗದೋಷದ ತೀವ್ರತೆ ಅರಿವಾಗುತ್ತಿದೆ.ಅನೇಕರು ಈ ದೋಷದ ಪ್ರಭಾವದಿಂದ ಮಾನಸಿಕ ಕುಗ್ಗಿ ಹೋಗಿದ್ದೂ ಇದೆ.ವ್ಯಾಪಾರ ವ್ಯವಹಾರದಲ್ಲಿ ಸೋಲು, ಸಂಸಾರದಲ್ಲಿ ವೇದನೆ ಅನುಭವಿಸಿದವರೂ ಅನೇಕ.ಈ ದೋಷವು ಖ್ಯಾತನಾಮರನ್ನೂ ಬಿಟ್ಟಿಲ್ಲ.ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕೂಡಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸರ್ಪ ಸೇವೆ ಮಾಡಿಸಿದ ನಂತರದ ಅವರ ಕ್ರಿಕೆಟ್ ಜೀವನ ನಿಮಗೆಲ್ಲಾ ಗೊತ್ತೇ ಇದೆ.ಈ ದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯವು ಅತ್ಯಂತ ಪ್ರಸಿದ್ಧ ಸ್ಥಳ.ಇದರ ಜೊತೆಗೆ ಇಲ್ಲಿಗೆ ಸಮೀಪದ ವಳಲಂಬೆಯ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವೂ ಇತ್ತೀಚೆಗೆ ಪ್ರಸಿದ್ದಿಯನ್ನು ಹೊಂದಿದೆ.ಈಗ ಈ ದೇವಸ್ಥಾನದಲ್ಲಿ ಜಾತ್ರೆಯ ಸಡಗರ.
ವಳಲಂಬೆಯ ಈ ದೇವಸ್ಥಾನದಲ್ಲಿ ಜೀವಂತ ದೇವರು ಎಂದು ಭಕ್ತರು ಪೂಜಿಸುತ್ತಾರೆ.ನಾಗನ ಹಲವು ಅವತಾರಗಳಲ್ಲಿ "ಶಂಖಪಾಲ"ವೂ ಒಂದು ಎಂಬುದು ಪುರಾಣಗಳಲ್ಲಿದೆ.ಇಲ್ಲಿನ ಆಸುಪಾಸಿನಲ್ಲಿ ಶಂಖಪಾಲನ ನಿಜರೂಪ ದರ್ಶನವಾಗುತ್ತಿರುವುದು ಭಕ್ತರ ನಂಬಿಕೆಗೆ ಇಂಬು ನೀಡಿದೆ.ಇದಲ್ಲದೆ ಇಲ್ಲಿನ ದೇವಸ್ಥಾನದ ಗರ್ಭಗುಡಿಯೊಳಗೆ ವಲ್ಮೀಕವು ಉದ್ಭವಿಸಿರುವುದರಿಂದ ಅದರಲ್ಲಿ ಶಂಖಪಾಲನು ವಾಸವಾಗಿರುವನೆಂಬ ನಂಬಿಕೆ ಇದೆ.ಹೀಗೆಯೇ ಇಲ್ಲಿ ಸರ್ಪ ಸೇವೆ ಮಾಡಿಸಿದರೆ ತಮ್ಮ ದೋಷಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೊಂಡು ಬಂದಿರುವ ಸತ್ಯ.ಸದ್ಯ ಬೆಂಗಳೂರು ,ಮಂಗಳೂರು ಸೇರಿದಂತೆ ಆಸುಪಾಸಿನ ಭಕ್ತರು ಆಗಮಿಸಿ ದೋಷಗಳನ್ನು ನಿವಾರಿಸಿಕೊಳ್ಳುತ್ತಾರೆ.
ಫೆ.೧ ಹಾಗೂ ೨ ರಂದು ಇಲ್ಲಿ ವಾರ್ಷಿಕ ಜಾತ್ರೆಯ ಸಡಗರ.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಆಗಮಿಸಿ ತಮ್ಮ ನೋವನ್ನು ಭಗವಂತನಲ್ಲಿ ನಿವೇದಿಸಿಕೊಳ್ಳುತ್ತಾರೆ. ಸೇವೆಗಳು ಪ್ರತಿದಿನವೂ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿಯನ್ನು ಸಂಪರ್ಕಿಸಬಹುದು. --- 08257-282600