ಇದು ವಾಸ್ತವ ಜಗತ್ತಿನ ಸತ್ಯ!
" ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ , ಮಿತ್ರರಿಂದ ಸಹ . ಹೀಗಾಗಿ ನಮ್ಮ ರೊಟ್ಟಿಯ ರುಚಿ ಸ್ವಲ್ಪ ಕಹಿ ಆಗಿದೆ " -ಪಾಬ್ಲೋ ನೆರೂಡಾ ( Pablo Neruda ) ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಮತ್ತು ರಾಜಕಾರಣಿ. ಈ ಅನುಭವ ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಆಗಿರುತ್ತದೆ. ನಮ್ಮ ಶತ್ರುಗಳೊಂದಿಗಿನ ಘರ್ಷಣೆ, ಹೊಡೆದಾಟ, ನಾವು ಹೊಡೆಯುವುದು ಅಥವಾ ಅವರಿಂದ ಪೆಟ್ಟು ತಿನ್ನುವುದು ಸ್ವಾಭಾವಿಕ. ಅದು ನಿರೀಕ್ಷಿತ ಸಹ ಮತ್ತು ನಮ್ಮ ಮನಸ್ಸು ಅದಕ್ಕೆ ಸಿದ್ದರಾಗಿರುತ್ತದೆ.
ಆದರೆ ನಮ್ಮ ಪ್ರೀತಿಪಾತ್ರರಿಂದ, ಮಿತ್ರರಿಂದ, ನಾವು ಹೆಚ್ಚು ನಂಬಿದವರಿಂದ ಏನಾದರೂ ಮೋಸ ವಂಚನೆ ಹೊಡೆತ ಬಿದ್ದರೆ ಅದು ತುಂಬಾ ಆಳವಾದ ಗಾಯ ಉಂಟುಮಾಡುತ್ತದೆ. ಬದುಕಿನ ಬಹುದೊಡ್ಡ ಸವಾಲು ಅಡಗಿರುವುದೇ ಇಲ್ಲಿ. ನೀವು ಪ್ರೀತಿಸಲೇ ಬೇಕು, ಗೆಳೆತನ ಮಾಡಲೇ ಬೇಕು, ಆತ್ಮೀಯರನ್ನು ನಂಬಲೇ ಬೇಕು. ಮನುಷ್ಯ ಸಂಘ ಜೀವಿ. ನಮ್ಮ ಪಾಡಿಗೆ ನಾವು ಒಂಟಿಯಾಗಿ ಬದುಕಲು ಈ ಸಮಾಜದಲ್ಲಿ ಸಾಧ್ಯವಿಲ್ಲ. ನಾವು ಯಾರಿಗೋ ಮಗ ಅಥವಾ ಮಗಳು, ಯಾರಿಗೋ ಅಕ್ಕ ಅಣ್ಣ ತಮ್ಮ ತಂಗಿ ಚಿಕ್ಕಪ್ಪ ದೊಡ್ಡಮ್ಮ ಅಳಿಯ ಸೊಸೆ ಆಗಿರುತ್ತೇವೆ ಅಷ್ಟೇ ಅಲ್ಲದೆ ದೇಶದ ಧರ್ಮದ ಭಾಷೆಯ ಪ್ರಜೆ ಸಹ. ಜೊತೆಗೆ ಬದುಕಲು ಯಾವುದಾದರೂ ಕೆಲಸ ಅಥವಾ ವ್ಯವಹಾರ ಮಾಡಲೇ ಬೇಕು. ಆಗ ನಮ್ಮ ಮೊದಲ ಆಯ್ಕೆ ನಮ್ಮ ಹತ್ತಿರದವರೇ ಆಗಿರುತ್ತಾರೆ. ಇದು ಅನಿವಾರ್ಯ.
ಇದೇ ವ್ಯಕ್ತಿಗಳು ಕಾರಣಾಂತರಗಳಿಂದ ಶತ್ರುಗಳಾದರೆ ಅಥವಾ ಇನ್ಯಾರೋ ಅಪರಿಚಿತರು ಮೋಸ ಮಾಡಿದರೆ ಅದು ಸಹ ಆಕಸ್ಮಿಕ ಎಂದು ಪರಿಗಣಿಸಿ ಮನಸ್ಸನ್ನು ಒಪ್ಪಿಸಬಹುದು. ಆದರೆ ಜೊತೆಯಲ್ಲಿರುವಾಗಲೇ ಈ ಸಂಬಂಧಗಳು ನಮಗೆ ಮೋಸ ಮಾಡಿದರೆ ಅದು ಸಹಿಸಲಸಾಧ್ಯ. ಆಧುನಿಕ ವ್ಯಾವಹಾರಿಕ ಜಗತ್ತಿನಲ್ಲಿ ಎಚ್ಚರಿಕೆಯಿಂದ, ಲೆಕ್ಕಾಚಾರದ ಮೂಲಕ ಎಲ್ಲಾ ಸಂಬಂಧಗಳನ್ನು ಮತ್ತು ವ್ಯವಹಾರಗಳನ್ನು ಮಾಡಬೇಕು ಮತ್ತು ಎಲ್ಲಕ್ಕೂ ಸಾಧ್ಯವಾದಷ್ಟು ದಾಖಲೆಗಳನ್ನು ನಿರ್ವಹಿಸಬೇಕು ಎಂದು ಹೇಳಲಾಗುತ್ತದೆ.
ಇದೇ ಅತ್ಯಂತ ದುರಾದೃಷ್ಟಕರ ಬೆಳವಣಿಗೆ. ಪ್ರೀತಿಯನ್ನು, ರಕ್ತ ಸಂಬಂಧಗಳನ್ನು, ನಂಬಿಕೆಗಳನ್ನು ಹೇಗೆ ಲೆಕ್ಕಾಚಾರದಲ್ಲಿ ನಿರ್ವಹಿಸುವುದು. ಅದು ಕೃತಕ ಮತ್ತು ಅಸಹಜವಾದ ನಡವಳಿಕೆ ಎಂದು ಆತ್ಮಸಾಕ್ಷಿ ನುಡಿಯುವುದಿಲ್ಲವೇ. ಈ ಸಂಬಂಧಗಳು ಮೋಸ ಮಾಡಬಹುದು ಎಂದು ಮೊದಲೇ ಊಹಿಸಿ ಅದಕ್ಕೆ ಸಿದ್ದರಾಗುವುದಾದರೆ ಬದುಕಿನ ಮತ್ತು ಸಮಾಜದ ಆತ್ಮಶಕ್ತಿಯೇ ಕುಸಿದಂತೆ ಅಲ್ಲದೇ.
ಹಾಗಾದರೆ ಮೋಸ ಹೋದ ಮೇಲೆ ಪಶ್ಚಾತ್ತಾಪ - ನೋವು ಪಡುವುದಕ್ಕಿಂತ ಮೊದಲೇ ಎಚ್ಚರ ವಹಿಸುವುದು ಒಳ್ಳೆಯದಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆ ಎಚ್ಚರಿಕೆಯೇ ಅನುಮಾನವಾಗಿ ಬದುಕಿನ ಘನತೆಯೇ ಕುಸಿಯುತ್ತದೆ ಎಂದು ಅನಿಸುವುದಿಲ್ಲವೇ? ಆಧುನಿಕ ಕಾಲದಲ್ಲಿ ಮಾನವೀಯ ಮೌಲ್ಯಗಳು ಕುಸಿದಿರುವುದೇ ಇದಕ್ಕೆ ಬಹುಮುಖ್ಯ ಕಾರಣ. ಹಿಂದೆಯೂ ಈ ರೀತಿಯ ಹಿತಶತ್ರುಗಳು ಇದ್ದರು. ಆದರೆ ಪ್ರಮಾಣ ಕಡಿಮೆ ಇತ್ತು. ನಿಜ ಪ್ರೀತಿ ಪ್ರಾಮಾಣಿಕತೆಯ ಜನರು ಸಹ ಸಾಕಷ್ಟು ಇದ್ದರು. ವ್ಯಾವಹಾರಿಕತೆಯೂ ಸಹ ಈಗಿನಂತೆ ಪ್ರತಿ ವಿಷಯದಲ್ಲಿಯೂ ಇರಲಿಲ್ಲ.
ಮೋಸ ಹೋದರು ಚಿಂತೆಯಿಲ್ಲ, ವಂಚನೆಗೆ ಒಳಗಾದರು ಚಿಂತೆಯಿಲ್ಲ, ನಂಬಿಕೆ ದ್ರೋಹವಾದರೂ ಪರವಾಗಿಲ್ಲ ಪ್ರೀತಿ ವಿಶ್ವಾಸಗಳ ವಿಷಯದಲ್ಲಿ ನಾವು ಅತ್ಯಂತ ಶುದ್ಧ ಮತ್ತು ಪ್ರಾಮಾಣಿಕವಾಗಿ ಇರಬೇಕು. ಅದು ಎಷ್ಟು ತೀವ್ರವಾಗಿ ಇರಬೇಕೆಂದರೆ ನಮಗೆ ಮೋಸ ಮಾಡಿದವರೆ ಮುಂದೊಮ್ಮೆ ಪಶ್ಚಾತ್ತಾಪದಿಂದ ವಿಲವಿಲ ಒದ್ದಾಡಬೇಕು. ಮಾನಸಿಕವಾಗಿ ಕುಸಿಯಬೇಕು. ಇದೇ ಇದಕ್ಕಿರುವ ಪರಿಹಾರ...
ಈ ರೀತಿಯ ಆತ್ಮೀಯರಿಂದಲೇ ಮೋಸಕ್ಕೆ ಒಳಗಾದವರ ರೊಟ್ಟಿ ಕಹಿಯಾಗಿರುತ್ತದೆ ನಿಜ. ಆದರೆ ಮೋಸ ಹೋದವರು ಆ ಕಹಿಯನ್ನು ಸಹ ತಮ್ಮ ಆತ್ಮ ಬಲದಿಂದ ಸಿಹಿಯಾಗಿ ಮಾರ್ಪಾಡಿಸಿ ತಿನ್ನುವ ಆತ್ಮ ಶಕ್ತಿ ಹೊಂದಿರುತ್ತಾರೆ. ಏಕೆಂದರೆ ಅವರ ಪ್ರೀತಿ ಶುದ್ಧವಾಗಿರುತ್ತದೆ. ಮೋಸ ಮಾಡಿದವರ ರೊಟ್ಟಿ ಸಿಹಿಯಾಗಿದ್ದರು ಅವರ ತಿನ್ನುವಾಗ ಕಹಿ ಮತ್ತು ತಿಂದ ನಂತರ ಅಜೀರ್ಣವಾಗುವ ಸಾಧ್ಯತೆಯೇ ಹೆಚ್ಚು.
ಇದು ವಾಸ್ತವ ಜಗತ್ತಿನ ಸತ್ಯ. ಇದನ್ನು ಗ್ರಹಿಸುವ ತಾಳ್ಮೆ, ಅನುಭವಿಸುವ ಅರಿವು ಆಳವಾದ ಮತ್ತು ವಿಶಾಲವಾದ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ಇದು ನಮ್ಮ ಜ್ಞಾನದ ಮಟ್ಟವನ್ನು, ಬದುಕಿನ ಗುಣಮಟ್ಟವನ್ನು ಆಧರಿಸಿರುತ್ತದೆ. ಏಕೆಂದರೆ ಎಲ್ಲರ ರೊಟ್ಟಿಯ ರುಚಿ ತಿನ್ನವವರ ನಾಲಿಗೆಯ ಜೊತೆ ಮನಸ್ಸನ್ನು ಅವಲಂಬಿಸಿರುತ್ತದೆ. ಇದೇ ತಿಳಿವಳಿಕೆ ಮತ್ತು ನಡವಳಿಕೆ...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ