ಕವನ
ಯುದ್ಧವೇ ಕ್ಷತ್ರಿಯ
ಧರ್ಮವೆಂದರಿತ ಅಭಿಮನ್ಯು
ಕೌರವರ ಮೋಸಕ್ಕೆ ಸಿಕ್ಕಿ
ಚಕ್ರವ್ಯೂಹ ಭೇದಿಸಿ
ಹೊರಬರಲಾರದೆ ಸತ್ತು ಅಮರನಾದ..!!
ಮೌಲ್ಯಮಾಪನದೊಳಗೆ ಸಿಕ್ಕಿ
ಚರಿತ್ರ ಹೀನರಾದವರ
ಸಾವು ಅಮರವೇ...?
ಹಗಲು- ರಾತ್ರಿ
ಮಳೆ - ಬಿಸಿಲೆನ್ನದೆ
ಜೀವ ತೇದು,
ಮಣ್ಣಲ್ಲಿ ಬೆರೆತು
ಉಸಿರಾಡುವಾಗ ಸಿಕ್ಕುವುದೇನು..?
ಬೆವರು ಸುರಿಸಿ
ಕಲ್ಲಿನ ಜಲ್ಲಿಯನು ಒಡೆಯುತ್ತಾ
ಆಳೆತ್ತರಕ್ಕೆ ಕಟ್ಟಿದ ಮಹಲು
ಕೊಟ್ಟೀತೇ ನೆರಳು..?
ಸೂಕ್ಷ್ಮವಾಗಿ ನೇಯ್ದ ಬಟ್ಟೆ ಇದ್ದರೂ
ತಪ್ಪದು ಚಿಂದಿ ಬಟ್ಟೆಯ ಸಹವಾಸ...!
ಕಸುಬೇ ದೇವರೆಂದು ನಂಬಿಸಿ
ಗೋಣು ಕೊಯ್ಯುವ ಸಮಾಜದ
ದುಷ್ಟ ಶಕ್ತಿಗಳ ಮುಖವಾಡಗಳನ್ನು
ಹೊರಗೆಡವಿದಾಗಲೇ ಬದುಕುತ್ತೇವೆ ನಾವು.