ಇದು ಹುಚ್ಚನೊಬ್ಬನ ಕನಸು !

ಇದು ಹುಚ್ಚನೊಬ್ಬನ ಕನಸು !

ಬಿಲ್ಕಿಸ್ ಬಾನು, ಸುಮಾರು 22 ವರ್ಷಗಳ ಹಿಂದಿನ ಸಾಮೂಹಿಕ ಅತ್ಯಾಚಾರ ಮತ್ತು 7 ಜನರ ಹತ್ಯೆ. ಗುಜರಾತ್ ಸರ್ಕಾರದ ನಿರ್ಧಾರ ಮತ್ತು ಸುಪ್ರೀಂಕೋರ್ಟ್ ತೀರ್ಪು. ಪರ - ವಿರೋಧಗಳ ವಾದ ಪ್ರತಿವಾದ ಮೀರಿದ ಒಂದು ಹುಚ್ಚು ಕಲ್ಪನೆ. ಇಡೀ ಸಮಾಜದಲ್ಲಿ ಒಂದು ರೀತಿಯ ಧಾರ್ಮಿಕ ಅಸಹನೆ ಎದ್ದು ಕಾಣುತ್ತಿದೆ. ದ್ವೇಷ ಅಸೂಯೆ ಸೇಡು ಮನದ ಮೂಲೆಯಲ್ಲಿ ಸದಾ ಜಾಗೃತವಾಗಿರುತ್ತದೆ.‌ ಈ ಸಂದರ್ಭದಲ್ಲಿ ಆ ಘಟನೆಯಲ್ಲಿ ಯಾವುದೇ ಪಾತ್ರವಿಲ್ಲದ ಸಾಮಾನ್ಯರಾದ ನಾವು ಒಂದು ಪ್ರೀತಿ ತ್ಯಾಗ ಕರುಣೆ ಕ್ಷಮಾಗುಣದ ಕನಸು ಕಾಣಬಹುದಲ್ಲವೇ?

ಆ ಕನಸು… ಘಟನೆಯ ಸಂಕ್ಷಿಪ್ತ ವಿವರಣೆ.. 2002 ರ ಒಂದು ದಿನ ಗುಜರಾತಿನ ಗೋದ್ರಾ ಬಳಿಯ ರೈಲಿನಲ್ಲಿ ಕರ ಸೇವಕರಿದ್ದ ಭೋಗಿಗೆ ಬೆಂಕಿ ಹಚ್ಚಲಾಗುತ್ತದೆ. ಅದರಲ್ಲಿದ್ದ ಅನೇಕರು ಸಾವನ್ನಪ್ಪುತ್ತಾರೆ. ಅದು ಮುಸ್ಲಿಮ್ ಭಯೋತ್ಪಾದಕರ ಕೃತ್ಯ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಪ್ರತಿಕಾರವಾಗಿ ಅಲ್ಲಿನ ಸುತ್ತಮುತ್ತ ಮುಸ್ಲಿಮರ ಮೇಲೆ ದಾಳಿಗಳಾಗುತ್ತದೆ. ಅದರಲ್ಲಿ ಒಂದು ಘಟನೆಯಲ್ಲಿ ಬಿಲ್ಕಿಸ್ ಬಾನು ಎಂಬ 21 ವರ್ಷದ ಮುಸ್ಲಿಂ ಮಹಿಳೆಯ ಮೇಲೆ 11 ಜನರಿಂದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ 3 ವರ್ಷದ ಮಗಳು ಸೇರಿ 7 ಜನರನ್ನು ಅತ್ಯಂತ ಬರ್ಬರವಾಗಿ ಕೊಲ್ಲಲಾಗುತ್ತದೆ. ಬಿಲ್ಕಿಸ್ ಬಾನು ಹೇಗೆ ಬದುಕುಳಿದರು ನನಗೆ ಮಾಹಿತಿ ಇಲ್ಲ. ಅನಂತರ ಬಹುಶಃ 2008 ರಲ್ಲಿ ಎಲ್ಲಾ ‌11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗುತ್ತದೆ. ಮತ್ತೆ ಸುಮಾರು 11 ವರ್ಷಗಳ ನಂತರ ಗುಜರಾತ್ ಸರ್ಕಾರ 2022 ರಲ್ಲಿ ಅವರಿಗೆ ಕ್ಷಮಾದಾನ ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಆಗ ಅವರಿಗೆ ಅತ್ಯಂತ ಅಭಿಮಾನದ ಮತ್ತು ಗೌರವದ ಸ್ವಾಗತ ನೀಡಲಾಗುತ್ತದೆ. ಇದರ ವಿರುದ್ಧ ಬಿಲ್ಕಿಸ್ ಬಾನು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಸುಪ್ರೀಂ ಕೋರ್ಟ್ ಮತ್ತೆ ಕ್ಷಮಾಧಾನ ರದ್ದುಪಡಿಸಿ ಅವರನ್ನು ಜೈಲಿಗೆ ಕಳುಹಿಸುವ ತೀರ್ಪು ನೀಡಿದೆ. ಈ ಘಟನೆಯ ಬಗೆಗಿನ ಕನಸಿನಲ್ಲಿ ಹಿಂದು ಮುಸ್ಲಿಂ ಎಂಬ ಧಾರ್ಮಿಕ ನಂಬಿಕೆಗೆ ಜಾಗವಿಲ್ಲ. ಸರಿ ತಪ್ಪಿಗೆ ಅವಕಾಶವಿಲ್ಲ. ಕೇವಲ ಮನುಷ್ಯರು ಮಾಡಿದ ಅತ್ಯಂತ ಹೇಯ ಅಪರಾಧ ಎಂದು ಮಾತ್ರ ಪರಿಗಣಿಸಲಾಗುತ್ತದೆ.

ಆ ಕನಸು… " 2024 ರ ಜನವರಿ 10 ರಂದು ಈ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಬಿಲ್ಕಿಸ್ ಬಾನು ಎಂಬ 2002 ಗುಜರಾತಿನ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯಾದ ನಾನು ಮಾಡಿಕೊಳ್ಳುವ ಮನವಿ.

" ಮಹಮ್ಮದ್ ಪೈಗಂಬರ್ ಅವರ ಶಾಂತಿ - ಭಾವೈಕ್ಯತೆ ಸಂದೇಶ, ಯೇಸುಕ್ರಿಸ್ತರ ಪ್ರೀತಿ - ಕ್ಷಮೆಯ ಆದೇಶ, ಗೌತಮ ಬುದ್ಧರ ಒಟ್ಟು ಬುದ್ದ ಪ್ರಜ್ಞೆ, ಬಸವಣ್ಣನವರ ಸಮಾನತೆ, ಮಹಾತ್ಮ ಗಾಂಧಿಯವರ ನೈತಿಕತೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತಾ, ಅಂದು ನನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಿಗಳನ್ನು ಈ ಕ್ಷಣದಿಂದ ನನ್ನ ಬಂಧುಗಳೆಂದು ಪರಿಗಣಿಸಿ ಕ್ಷಮಿಸುತ್ತಿದ್ದೇನೆ. ಅಂದು ಕೊಲೆಯಾದ ಏಳು ಜನರ ಪರವಾಗಿ ನನ್ನ ಮಿತಿಯಲ್ಲಿ ಅವರಿಂದಲೂ ಮಾನಸಿಕ ಅನುಮತಿ ಪಡೆದಿದ್ದೇನೆ.

ಈ 22 ವರ್ಷಗಳಲ್ಲಿ ಆ ನನ್ನ 11 ಬಂಧುಗಳು ಬಹುಶಃ ಅಂದಿನ ಅತ್ಯಂತ ಅಮಾನವೀಯ ಮತ್ತು ನೀಚ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟಿರುತ್ತಾರೆ ಎಂದು ಭಾವಿಸುತ್ತೇನೆ. ಅವರ ಕುಟುಂಬದವರು ಸಾಕಷ್ಟು ತೊಂದರೆ ಅನುಭವಿಸಿರಬಹುದು. ಅವರ ಇನ್ನು ಮುಂದಿನ ಬದುಕಾದರೂ ಸುಖವಾಗಿ ಮತ್ತು ನಾಗರಿಕವಾಗಿರಲಿ. ಮಾನ್ಯ ನ್ಯಾಯಾಧೀಶರೇ ಒಂದು ವೇಳೆ ಬಿಡುಗಡೆಯ ನಂತರ ಅವರು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದರೆ ಅವರ ಮತ್ತು ಅವರನ್ನು ಸಂಭ್ರಮದಿಂದ ಸ್ವಾಗತಿಸಿದವರ ನಿಜವಾದ ಮುಖವಾಡವಾದರು ಬಯಲಾಗಬಹುದು.

ಮಾನ್ಯ ನ್ಯಾಯಾಧೀಶರೆ,  ನನ್ನ ಈ ನಿರ್ಧಾರದ ಹಿಂದೆ ಯಾವುದೇ ಮತ್ತು ಯಾರದೇ ಒತ್ತಡವಿಲ್ಲ. ದೇಶದ ಇಂದಿನ ಕೋಮು ಸಂಘರ್ಷದ ಪರಿಸ್ಥಿತಿಯಲ್ಲಿ ಸಾಮರಸ್ಯ ಮೂಡಿಸುವುದು ಅತ್ಯಂತ ಮಹತ್ವದ ಕರ್ತವ್ಯವಾಗಿದೆ. ಬಿಲ್ಕಿಸ್ ಬಾನು ಆದ ನಾನು ನನಗಾದ ಅತ್ಯಂತ ನೋವಿನ‌ ಘಟನೆಯ ಕಾರಣದಿಂದ ದೇಶದ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಸಾಮಾನ್ಯ ಜನರ ಗಮನ ಸೆಳೆದಿದ್ದೇನೆ.‌ ಈ ಜನಪ್ರಿಯತೆಯನ್ನು ಕ್ಷಮಾಗುಣದ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಪುನರುಜ್ಜೀವನಕ್ಕಾಗಿ ಪ್ರಯತ್ನಿಸುವ ದೃಷ್ಟಿಯಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು, ಅಲ್ಲಿ ಕರುಣೆ, ತ್ಯಾಗ, ಕ್ಷಮಾಗುಣಗಳನ್ನು ಮಾರಲು ದಯವಿಟ್ಟು ಅವಕಾಶ ಕೊಡಿ. ಇದು ನನ್ನ ಅಂತರಾಳದ ಅಭಿಪ್ರಾಯ. ‌ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನ್ಯಾಯಾಲಯ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ನಾನು ಗೌರವಿಸುತ್ತೇನೆ ಮತ್ತು ಪಾಲಿಸುತ್ತೇನೆ.

ವಂದನೆಗಳೊಡನೆ,

ಬಿಲ್ಕಿಸ್ ಬಾನು.

ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ...."

ಈ ಕನಸಿನ ಪತ್ರವನ್ನು ಓದಿದ ನಂತರ ಒಮ್ಮೆ ನಕ್ಕು ಬಿಡಿ ಪ್ರೀತಿಯಿಂದ ಅಥವಾ ವ್ಯಂಗ್ಯವಾಗಿ ಅಥವಾ ವಿಷಾದದಿಂದ… ಕನಸು ಕಾಣಲು ಯಾವುದೇ ಹಣ ಕೊಡಬೇಕಾಗಿಲ್ಲ. ಸೇಡು ಪ್ರತಿ ಸೇಡು ಯಾರು ಬೇಕಾದರೂ ಮಾಡಬಹುದು. ‌ಆದರೆ ಪ್ರೀತಿ ತ್ಯಾಗ ಕರುಣೆ ಕ್ಷಮಾಗುಣ ಮಾಹಾತ್ಮರಿಂದ ಮಾತ್ರ ಸಾಧ್ಯ. ಧರ್ಮಗಳು ಮತ್ತು ಅದರ ಸಿದ್ದಾಂತಗಳು ಇರುವುದು ಕೇವಲ ತಿಳಿವಳಿಕೆಗಾಗಿ ಮಾತ್ರವಲ್ಲ ನಡವಳಿಕೆಗಳು ಅದರ ಘನತೆಯನ್ನು ಹೆಚ್ಚಿಸುತ್ತದೆ.

ಮಾಧ್ಯಮಗಳು ಮತ್ತು ನ್ಯಾಯಾಲಯಗಳು ಅತ್ಯಾಚಾರ ಮತ್ತು ಕೊಲೆಗೆ ಶಿಕ್ಷೆಯನ್ನು ಮಾತ್ರ ನ್ಯಾಯ ಎಂದು ಪರಿಗಣಿಸಲಾಗುತ್ತವೆ. ಒಂದು ಹಿಂಸೆಗೆ ಇನ್ನೊಂದು ಹಿಂಸೆ ಕೇವಲ ಅದನ್ನು ತಡೆಯುವ ಪ್ರಕ್ರಿಯೆ ಮಾತ್ರ. ಅದು ನ್ಯಾಯವಲ್ಲ. ಆದರೆ ನಾವು ನೀವು ಕನಿಷ್ಠ ಶಿಕ್ಷೆಗಿಂತ ಶಿಕ್ಷಣವನ್ನು ಹೆಚ್ಚು ಪ್ರಚಾರ ಮಾಡಬಹುದಲ್ಲ. ಪ್ರೀತಿ ಕ್ಷಮೆ ಕರುಣೆ ತ್ಯಾಗ ಈ ನೆಲದ ಭಾಷೆಯಾಗಲಿ. ಆಗ ಯಾವುದೇ ಧರ್ಮಗಳಲ್ಲಿ ಬಿಲ್ಕಿಸ್ ಬಾನು ತರಹದ ಘಟನೆಗಳು ನಡೆಯುವುದು ಕಡಿಮೆಯಾಗುತ್ತದೆ. ಇದು ಹುಚ್ಚನೊಬ್ಬನ ಕನಸು. ಮುಂದೊಂದು ದಿನ ನನಸಾಗುವ ಭರವಸೆಯೊಂದಿಗೆ...

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ