ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !

ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !

ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ ಇಂಥ ಕೃತ್ಯ ಎಸಗಿರುವುದು ಮತ್ತು ಆತ ವೃತ್ತಿಯಲ್ಲಿ ಶಿಕ್ಷಕನಾಗಿದ್ದರೂ, ಮಕ್ಕಳ ಕಲಿಕಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತಷ್ಟು ಶೋಚನೀಯ. ೧೨ನೇ ತರಗತಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಅಸಮಾಧಾನಗೊಂಡು ಮಗಳ ಜತೆ ಜಗಳ ಮಾಡಿದ್ದ ಧೋಂಡಿರಾಮ ಭೋಸಲೆ ಎಂಬಾತ ಹೆಂಡತಿ ಮತ್ತು ಮಗನ ಎದುರಲ್ಲೇ ಮಗಳು ಸಾಧನಾಳನ್ನು ಹಿಟ್ಟು ರುಬ್ಬುವ ಮರದ ಕಲ್ಲಿನ ಹಿಡಿಕೆಯಿಂದ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಪತ್ನಿ ನೀಡಿದ ದೂರಿನ ಮೇರೆಗೆ ಧೋಂಡಿರಾಮನನ್ನು ಪೊಲೀಸರು ಬಂಧಿಸಿದ್ದಾರೆ. ಇದು ನಿಜಕ್ಕೂ ಪೈಶಾಚಿಕ ಕೃತ್ಯ. ಮಕ್ಕಳ ಬದುಕು ರೂಪಿಸಬೇಕಾದ ತಂದೆಯೇ ಮೃಗೀಯವಾಗಿ ವರ್ತಿಸಿರುವುದು ಅಕ್ಷಮ್ಮ, ಮಕ್ಕಳ ಬಗ್ಗೆ ಅತಿಯಾದ ಅಪೇಕ್ಷೆ ಇಡುವುದರ ಪರಮಾವಧಿ ಇದು.

ಎಲ್ಲರೂ ಶೇಕಡ ೯೦-೯೫ ಅಂಕ ತೆಗೆಯಬೇಕೆಂಬ ಹುಚ್ಚು ಸ್ಪರ್ಧೆಯೇ ಇಂಥ ದುರಂತಗಳಿಗೆ ಕಾರಣವಾಗುತ್ತಿದೆ. ಕಡಿಮೆ ಅಂತ ತೆಗೆದರೇನಾಯಿತು; ಜೀವನದಲ್ಲಿ ಎಷ್ಟೊಂದು ಆಯ್ಕೆಗಳಿವೆ, ಅದನ್ನು ಮಕ್ಕಳಿಗೆ ಮನಗಾಣಿಸುವುದನ್ನು ಬಿಟ್ಟು ಅವರ ಮನೋಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಪಾಲಕರ ಒತ್ತಡ ಸಮಾಜವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದೆ. ಪಾಲಕರ ಅತಿಯಾದ ನಿರೀಕ್ಷೆಗಳು ವಿದ್ಯಾರ್ಥಿಗಳ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿದೆ. ಮೇಲಿನ ಪ್ರಕರಣದಲ್ಲಂತೂ ಪ್ರಾಣವೇ ಹೋಗಿದೆ. ಪ್ರತಿ ಕಲಿಕಾರ್ಥಿಗೂ ಭಿನ್ನವಾದಂಥ ಆಸಕ್ತಿ ಮತ್ತು ಸಾಮರ್ಥ್ಯ ಇರುತ್ತದೆ. ಅದನ್ನು ಗುರುತಿಸಿ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕೆ ಹೊರತು, ಹೂವು ಅರಳುವ ಮುನ್ನವೇ ಮೊಗ್ಗನ್ನು ಕಿವುಚಬಾರದು. ಅಷ್ಟಕ್ಕೂ, ಎಷ್ಟೋ ತರುಣ-ತರುಣಿಯರು ಪಠ್ಯದಲ್ಲಿ ಹಿಂದೆ ಇದ್ದರೂ, ಪಕ್ಷೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿ ಮಿಂಚುತ್ತಾರೆ. ಆದರೆ, ಉತ್ತಮ ಅಂಕ ಗಳಿಸುವುದೇ 'ಸಾಧನೆ' ಎಂಬ ಮಾನದಂಡವೇ ಅಪ್ರಸ್ತುತ. ಇಂಥ ಒತ್ತಡಮಯ ವಾತಾವರಣದಿಂದ ನಷ್ಟವೇ ಹೆಚ್ಚು.

ಪಾಲಕರ ಭಯದಿಂದಲೇ ಇಂದಿಗೂ ಹತ್ತನೇ, ಹನ್ನೆರಡನೇ ತರಗತಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಘಟನೆಗಳು ನಡೆಯುತ್ತಿವೆ. ಕೆಲ ವಿದ್ಯಾರ್ಥಿಗಳಂತೂ ಫಲಿತಾಂಶಕ್ಕೂ ಮುನ್ನವೇ, ಪೇಪರ್ ಚೆನ್ನಾಗಿ ಬರೆದಿಲ್ಲ. ಎಂದು ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆದಿವೆ. ಬಾಳಿ ಬದುಕಬೇಕಾದ, ಜೀವನ ರೂಪಿಸಿಕೊಳ್ಳಬೇಕಾದ ಯುವ ಮನಸ್ಸುಗಳು ಈ ರೀತಿ ಅಕಾಲದಲ್ಲೇ ಬದುಕಿನ ಯಾತ್ರೆ ಮುಗಿಸುತ್ತಿರುವುದು ದುಃಖದ ಸಂಗತಿ. ಶೈಕ್ಷಣಿಕ ಸಂಸ್ಥೆಗಳು ಕೂಡ 'ಸ್ಪರ್ಧೆ'ಯ ಹೆಸರಿನಲ್ಲಿ ಅತಿಯಾದ ಒತ್ತಡವನ್ನು ಸೃಷ್ಟಿಸಬಾರದು. ಜೀವನವನ್ನು ಎದುರಿಸುವ, ನೆಮ್ಮದಿಯಾಗಿ ಬದುಕುವ ಶಿಕ್ಷಣ ಇಂದು ಅಗತ್ಯವಾಗಿದ್ದು, ಪಠ್ಯ ಶಿಕ್ಷಣವೊಂದರಿಂದಲೇ ಅದು ಪೂರೈಸಲು ಸಾಧ್ಯವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಶಿಕ್ಷಣದಲ್ಲಿ ನೈತಿಕ ಮೌಲ್ಯಗಳು, ಜೀವನಾದರ್ಶಗಳನ್ನು ಹೆಚ್ಚು ಹೆಚ್ಚು ಅಳವಡಿಸಬೇಕಿದೆ. ಶಿಕ್ಷಣವೆಂದರೆ ಸ್ಪರ್ಧೆಯಲ್ಲ ಎಂಬ ಅರಿವು ಪಾಲಕರಿಗೆ, ಶಿಕ್ಷಕರಿಗೆ ಮೂಡುವುದು ಯಾವಾಗ? ಮಕ್ಕಳಲ್ಲಿ ಆತ್ಮ ಧೈರ್ಯ ತುಂಬಬೇಕಾದವರೆ ದಾರಿ ತಪ್ಪಿದರೆ ಸಮಾಜದ ಗತಿ ಏನು ಎಂಬುದನ್ನು ಅವಲೋಕಿಸಬೇಕಾದ ಕಾಲವಿದು.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೪-೦೬-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ